BCCI: ಟಿ20 ವಿಶ್ವಕಪ್ ಅಷ್ಟೇ ಅಲ್ಲ; ಬಿಸಿಸಿಐ ಆಯ್ಕೆ ಸಮಿತಿಯ ತಲೆದಂಡಕ್ಕೆ ಪ್ರಮುಖ 5 ಕಾರಣಗಳಿವು

BCCI Selection Committee sacked: ವಿಜಯ್ ಹಜಾರೆ ಟ್ರೋಫಿ ಪಂದ್ಯಗಳಲ್ಲಿ ಆಟಗಾರರ ಪ್ರದರ್ಶನಕ್ಕಾಗಿ ನಾಲ್ವರು ಆಯ್ಕೆಗಾರರು ಪ್ರಸ್ತುತ ವಿವಿಧ ನಗರಗಳಲ್ಲಿದ್ದಾರೆ. ಅವರನ್ನು ಪದಚ್ಯುತಗೊಳಿಸುವ ಬಗ್ಗೆ ಬಿಸಿಸಿಐ ಯಾವುದೇ ಮಾಹಿತಿ ನೀಡದೆ, ಹೊಸ ಸಮಿತಿಯನ್ನು ರಚಿಸುವುದಾಗಿ ನೇರವಾಗಿ ಘೋಷಿಸಿದೆ ಎಂದು ವರದಿಯಾಗಿದೆ.

BCCI: ಟಿ20 ವಿಶ್ವಕಪ್ ಅಷ್ಟೇ ಅಲ್ಲ; ಬಿಸಿಸಿಐ ಆಯ್ಕೆ ಸಮಿತಿಯ ತಲೆದಂಡಕ್ಕೆ ಪ್ರಮುಖ 5 ಕಾರಣಗಳಿವು
Follow us
TV9 Web
| Updated By: ಪೃಥ್ವಿಶಂಕರ

Updated on:Nov 19, 2022 | 11:35 AM

ಟಿ20 ವಿಶ್ವಕಪ್ (T20 World Cup 2022) ಸೋಲಿನ ಬೆನ್ನಲ್ಲೇ ಮಂಡಳಿಯಲ್ಲಿ ಮೇಜರ್ ಸರ್ಜರಿಗೆ ಮುಂದಾಗಿರುವ ಬಿಸಿಸಿಐ (BCCI) ಅದರ ಮೊದಲ ಹೆಜ್ಜೆಯಾಗಿ ಚೇತನ್ ಶರ್ಮಾ (Chetan Sharma) ನೇತೃತ್ವದಲ್ಲಿ ಅಸ್ತಿತ್ವದಲ್ಲಿದ್ದ ಆಯ್ಕೆ ಸಮಿತಿಯನ್ನು ವಜಾಗೊಳಿಸಿದೆ. ಅಲ್ಲದೆ ಹೊಸ ಆಯ್ಕೆ ಸಮಿತಿಯ ರಚನೆಗೂ ಅರ್ಜಿ ಆಹ್ವಾನಿಸಿದೆ. ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಅಭಿಯಾನ ಆರಂಭವಾಗುವ ಮುನ್ನವೇ ಚೇತನ್ ಶರ್ಮಾ ನೇತೃತ್ವದ ಮಂಡಳಿಯ ವಿಸರ್ಜನೆಯ ಬಗ್ಗೆ ಮಾತುಗಳು ಕೇಳಿಬಂದಿದ್ದವು. ಈಗ ಟೂರ್ನಿಯಲ್ಲಿ ಮತ್ತೊಮ್ಮೆ ವಿಫಲವಾದ ಭಾರತ ತಂಡದ ಕಳಪೆ ಪ್ರದರ್ಶನದ ನಂತರ ಇಡೀ ಆಯ್ಕೆ ಸಮಿತಿಯನ್ನೇ ಬಿಸಿಸಿಐ ವಿಸರ್ಜಿಸಿದೆ. ಅಂದಹಾಗೆ ಆಯ್ಕೆ ಸಮಿತಿಯ ವಿಸರ್ಜನೆಗೆ ವಿಶ್ವಕಪ್​ನಲ್ಲಿನ ಕಳಪೆ ಪ್ರದರ್ಶನದ ಹೊರತಾಗಿ ಇನ್ನೂ ಪ್ರಮುಖ ಕಾರಣಗಳು ಕೂಡ ಸೇರಿವೆ.

ಈ ಸಮಿತಿಯಲ್ಲಿ ಚೇತನ್ ಶರ್ಮಾ ಅವರಲ್ಲದೆ, ಸುನಿಲ್ ಜೋಶಿ, ಹರ್ವಿಂದರ್ ಸಿಂಗ್ ಮತ್ತು ದೇಬಾಶಿಶ್ ಮೊಹಾಂತಿ ಕೂಡ ಇದ್ದರು. ಅವರಲ್ಲಿ ಯಾರೊಬ್ಬರಿಗೂ ತಮ್ಮ ನಾಲ್ಕು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಅವರನ್ನು ವಜಾಗೊಳಿಸಿದ ಬಗ್ಗೆ ಯಾವುದೇ ಸದಸ್ಯರಿಗೆ ಮಾಹಿತಿ ನೀಡಿಲ್ಲ. ಸುದ್ದಿ ಸಂಸ್ಥೆ ಪಿಟಿಐ ವರದಿ ಪ್ರಕಾರ, ವಿಜಯ್ ಹಜಾರೆ ಟ್ರೋಫಿ ಪಂದ್ಯಗಳಲ್ಲಿ ಆಟಗಾರರ ಪ್ರದರ್ಶನವನ್ನು ಗಮನಿಸಲು ನಾಲ್ವರು ಆಯ್ಕೆಗಾರರು ಪ್ರಸ್ತುತ ವಿವಿಧ ನಗರಗಳಲ್ಲಿದ್ದಾರೆ. ಅವರನ್ನು ಪದಚ್ಯುತಗೊಳಿಸುವ ಬಗ್ಗೆ ಬಿಸಿಸಿಐ ಯಾವುದೇ ಮಾಹಿತಿ ನೀಡದೆ, ಹೊಸ ಸಮಿತಿಯನ್ನು ರಚಿಸುವುದಾಗಿ ನೇರವಾಗಿ ಘೋಷಿಸಿದೆ ಎಂದು ವರದಿಯಾಗಿದೆ.

ಆಯ್ಕೆ ಸಮಿತಿಯ ವಿಸರ್ಜನೆಗೆ ಪ್ರಮುಖ 5 ಕಾರಣಗಳಿವು

ಮೇಲ್ನೋಟಕ್ಕೆ, ಆಯ್ಕೆ ಸಮಿತಿಯ ಬಗ್ಗೆ ಬಿಸಿಸಿಐ ಆಂತರಿಕ ವಲಯದಲ್ಲಿ ಸಾಕಷ್ಟು ಅಸಮಾಧಾನವಿದೆ, ಈ ಕಾರಣದಿಂದಾಗಿ ಮಂಡಳಿಯು ಇಂತಹ ನಿರ್ದಯ ನಿರ್ಧಾರವನ್ನು ತೆಗೆದುಕೊಂಡಿದೆ. ಟೀಂ ಇಂಡಿಯಾದ ಕಳಪೆ ಪ್ರದರ್ಶನದ ಹೊರತಾಗಿ, ಈ ಅಸಮಾಧಾನಕ್ಕೆ ಇತರ ಕೆಲವು ಕಾರಣಗಳು ಇವೆ ಎಂದು ಹೇಳಲಾಗುತ್ತಿದ್ದು, ಇದಕ್ಕಾಗಿಯೇ ಎಲ್ಲರನ್ನೂ ಒಂದೇ ಬಾರಿಗೆ ಹೊರಹಾಕುವಂತೆ ಮಾಡಿದೆ ಎಂದು ಪಿಟಿಐ ವರದಿ ಮಾಡಿದೆ.

  1. ಕಳೆದ ಒಂದು ವರ್ಷದಲ್ಲಿ ಟೀಂ ಇಂಡಿಯಾ ಆಯ್ಕೆಯಲ್ಲಿ ಸ್ಥಿರತೆ ಇರಲಿಲ್ಲ. ಈ ಒಂದು ವರ್ಷದಲ್ಲಿ, 8 ನಾಯಕರು ವಿವಿಧ ಸರಣಿಗಳಲ್ಲಿ ತಂಡದ ನಾಯಕತ್ವವನ್ನು ವಹಿಸಿಕೊಂಡರು. ಅನೇಕ ಹಿರಿಯ ಆಟಗಾರರು ಕೆಲಸದ ಹೊರೆಯ ಕಾರಣ ನೀಡಿ ಅನೇಕ ಬಾರಿ ವಿಶ್ರಾಂತಿ ಮೊರೆ ಹೋದರು. ಹೀಗಾಗಿ ಆಯ್ಕೆ ಮಂಡಳಿ ಆಟಗಾರರ ನಿರ್ವಹಣೆಯಲ್ಲಿ ಎಡವಿದೆ ಎಂಬುದು ಬಿಸಿಸಿಐನ ಈ ತೀರ್ಮಾನಕ್ಕೆ ಪ್ರಮುಖ ಕಾರಣವಾಗಿದೆ.
  2. ಗಾಯ ಮತ್ತು ಇತರ ಕಾರಣಗಳಿಂದ ಕೆಎಲ್ ರಾಹುಲ್ ಸುಮಾರು 7-8 ತಿಂಗಳ ಕಾಲ ಅಂತರಾಷ್ಟ್ರೀಯ ಟಿ20ಯಿಂದ ಹೊರಗುಳಿದಿದ್ದರು. ಆದರೆ ಆ ಬಳಿಕ ಅವರನ್ನು ನೇರವಾಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಏಷ್ಯಾಕಪ್‌ನಲ್ಲಿ ಸ್ಥಾನ ಪಡೆದ ರಾಹುಲ್, ಅದಕ್ಕೂ ಮುನ್ನ ಜಿಂಬಾಬ್ವೆಯಲ್ಲಿ ನಡೆದ ಏಕದಿನ ಸರಣಿಯಲ್ಲೂ ಫ್ಲಾಪ್ ಆದರೂ ಅವರಿಗೆ ತಂಡದಲ್ಲಿ ಅವಕಾಶ ನೀಡಲಾಯಿತು.
  3. ಟೀಮ್ ಇಂಡಿಯಾದೊಂದಿಗೆ ಪ್ರತಿ ಪ್ರವಾಸಕ್ಕೆ ಹೋಗುತ್ತಿದ್ದರೂ ತಂಡದ ನಿರ್ವಹಣೆಯ ಸಹಯೋಗದಲ್ಲಿ ಆಟಗಾರರ ಸ್ಥಿರ ಮತ್ತು ಖಾಯಂ ತಂಡವನ್ನು ಸಿದ್ಧಪಡಿಸುವಲ್ಲಿ ವಿಫಲವಾಗಿದೆ.
  4. 37ರ ಹರೆಯದ ಶಿಖರ್ ಧವನ್ ಮುಂದಿನ ವರ್ಷ 38ನೇ ವರ್ಷಕ್ಕೆ ಕಾಲಿಡಲ್ಲಿದ್ದಾರೆ. ಹೀಗಾಗಿ ಅವರನ್ನು ಏಕದಿನ ವಿಶ್ವಕಪ್ ತಂಡದಲ್ಲಿ ಇರಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಯಾವುದೇ ನಿಶ್ಚಿತ ಯೋಜನೆ ಇಲ್ಲ.
  5. ಚೇತನ್ ಶರ್ಮಾ ಮತ್ತು ಅವರ ಸಮಿತಿ ಐಪಿಎಲ್ ಮತ್ತು ದೇಶೀಯ ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಅವಕಾಶಗಳನ್ನು ನೀಡಲು ವಿಫಲವಾಗಿದ್ದು ಕೂಡ ಬಿಸಿಸಿಐನ ಈ ತೀರ್ಮಾನಕ್ಕೆ ಪ್ರಮುಖ ಕಾರಣವಾಯಿತು.

Published On - 11:32 am, Sat, 19 November 22