‘ದುರದೃಷ್ಟಕರ, ಚರ್ಚೆಗೆ ನಾನು ಸದಾ ಸಿದ್ಧ’; ಸ್ಯಾಮ್ಸನ್​ಗೆ ಅವಕಾಶ ನೀಡದಿರಲು ಕಾರಣ ತಿಳಿಸಿದ ಪಾಂಡ್ಯ

India Vs New Zealand: 2015 ರಲ್ಲಿ ಸಂಜು ಸ್ಯಾಮ್ಸನ್ ಅವರು ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದರು. ದುರದೃಷ್ಟಕರ ವಿಷಯವೆಂದರೆ ಈ ಆಟಗಾರ ಕಳೆದ ಏಳು ವರ್ಷಗಳಲ್ಲಿ ಕೇವಲ 16 ಟಿ20 ಪಂದ್ಯಗಳನ್ನು ಮಾತ್ರ ಆಡಿದ್ದಾರೆ.

‘ದುರದೃಷ್ಟಕರ, ಚರ್ಚೆಗೆ ನಾನು ಸದಾ ಸಿದ್ಧ’; ಸ್ಯಾಮ್ಸನ್​ಗೆ ಅವಕಾಶ ನೀಡದಿರಲು ಕಾರಣ ತಿಳಿಸಿದ ಪಾಂಡ್ಯ
ಹಾರ್ದಿಕ್, ಸಂಜು
Image Credit source: india tv
TV9kannada Web Team

| Edited By: pruthvi Shankar

Nov 23, 2022 | 12:05 PM

ನ್ಯೂಜಿಲೆಂಡ್‌ನಲ್ಲಿ ನಡೆದ 3 ಪಂದ್ಯಗಳ ಟಿ20 ಸರಣಿಯನ್ನು ಟೀಂ ಇಂಡಿಯಾ (Team India) 1-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಮಳೆಯಿಂದಾಗಿ ಮೊದಲ ಪಂದ್ಯ ರದ್ದಾದರೆ, 3ನೇ ಟಿ20 ಪಂದ್ಯವನ್ನು ಡ್ರಾನಲ್ಲಿ ಅಂತ್ಯಗೊಳಿಸಲಾಯಿತು. ಹೀಗಾಗಿ ಆಡಿದ 2ನೇ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದುಬೀಗಿತ್ತು. ಹೀಗಾಗಿ ಟೀಂ ಇಂಡಿಯಾ ಟ್ರೋಫಿ ಎತ್ತಿಹಿಡಿಯುವಲ್ಲಿ ಯಶಸ್ವಿಯಾಯಿತು. ಈ ಸರಣಿಯಲ್ಲಿ ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದರಿಂದ ಅನೇಕ ಯುವ ಆಟಗಾರರಿಗೆ ಅವಕಾಶ ನೀಡಲಾಗಿತ್ತು. ಆದರೆ ಇನ್ನು ಕೆಲವು ಆಟಗಾರರಿಗೆ ಈ ಸರಣಿಯಲ್ಲಿ ಆಡುವ ಅವಕಾಶ ಸಿಗಲಿಲ್ಲ. ಆ ಆಟಗಾರರ ಪಟ್ಟಿಯಲ್ಲಿ ಸಂಜು ಸ್ಯಾಮ್ಸನ್ (Sanju Samson) ಹೆಸರೂ ಕೂಡ ಸೇರಿದೆ. ಈ ಸರಣಿಯಲ್ಲಿ ಸಂಜುಗೆ ಅವಕಾಶ ಸಿಕ್ಕೆ ಸಿಗುತ್ತದೆ ಎಂಬುದು ಅನುಭವಿಗಳ ಮಾತಾಗಿತ್ತು. ಆದರೆ ಈ ಸರಣಿಯಲ್ಲಿ ಸಂಜುಗೆ ಒಂದೇ ಒಂದು ಪಂದ್ಯದಲ್ಲಿ ಆಡುವ ಅವಕಾಶ ಸಿಗಲಿಲ್ಲ. ಈ ಬಗ್ಗೆ ನಾಯಕ ಪಾಂಡ್ಯ ಬಳಿ ಪ್ರಶ್ನೆ ಮಾಡಲಾಯಿತು.

ಈ ಟಿ20 ಸರಣಿಯಲ್ಲಿ ಉಮ್ರಾನ್ ಮಲಿಕ್ ಮತ್ತು ಸಂಜು ಸ್ಯಾಮ್ಸನ್ ಅವರಂತಹ ಆಟಗಾರರಿಗೆ ಏಕೆ ಅವಕಾಶ ಸಿಗಲಿಲ್ಲ ಎಂಬುದು ಹಲವರ ಪ್ರಶ್ನೆಯಾಗಿತ್ತು. ಇದಕ್ಕೆ ಉತ್ತರ ನೀಡಿದ ಹಾರ್ದಿಕ್ ಪಾಂಡ್ಯ, ಆಯಕಟ್ಟಿನ ಕಾರಣಗಳಿಂದ ಸ್ಯಾಮ್ಸನ್ ಆಡುವ ಹನ್ನೊಂದರಲ್ಲಿ ಆಯ್ಕೆಯಾಗಲಿಲ್ಲ. ಇದರೊಂದಿಗೆ, ಯಾರಾದರೂ ಅತೃಪ್ತರಾಗಿದ್ದರೆ ಮಾತುಕತೆಗೆ ಯಾವಾಗಲೂ ಬಾಗಿಲು ತೆರೆದಿರುತ್ತದೆ ಎಂದು ಪಾಂಡ್ಯ ಹೇಳಿದ್ದಾರೆ.

ಇನ್ನೂ ಸಾಕಷ್ಟು ಸಮಯ ಇದೆ. ಹೀಗಾಗಿ ಪ್ರತಿಯೊಬ್ಬ ಆಟಗಾರರಿಗೂ ಪೂರ್ಣ ಅವಕಾಶಗಳು ಸಿಗಲಿದೆ. ಮೂರು ಪಂದ್ಯಗಳ ಬದಲಿಗೆ ಇದು ದೊಡ್ಡ ಸರಣಿಯಾಗಿದ್ದರೆ ಖಂಡಿತಾ ಅವರಿಗೆ ಅವಕಾಶ ನೀಡುತ್ತಿದ್ದೆವು. ಕಡಿಮೆ ಪಂದ್ಯಗಳ ಸರಣಿಯಲ್ಲಿ ಆಗಾಗ್ಗೆ ಬದಲಾವಣೆಗಳನ್ನು ಮಾಡುವುದು ಕಷ್ಟ ಎಂದು ಪಾಂಡ್ಯ ಹೇಳಿದ್ದಾರೆ.

ತಂಡದ ಸಂಯೋಜನೆಯಿಂದಾಗಿ ಅವಕಾಶ ಸಿಗಲಿಲ್ಲ- ಪಾಂಡ್ಯ

ಎಲ್ಲ ಆಟಗಾರರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಅವಕಾಶ ಸಿಗದ ಆಟಗಾರರಿಗೆ ಅದು ವೈಯಕ್ತಿಕ ವಿಚಾರ ಅಲ್ಲ ಎಂಬುದು ಗೊತ್ತಿದೆ. ತಂಡದ ಸಂಯೋಜನೆಯಿಂದಾಗಿ ಅವರಿಗೆ ಅವಕಾಶ ಸಿಗಲಿಲ್ಲ. ಯಾವುದೇ ಆಟಗಾರನಿಗೆ ಬೇರೆ ಏನಾದರೂ ಅನಿಸಿದರೆ, ಈ ಬಗ್ಗೆ ಚರ್ಚೆಸಲು ನಾನು ಸದಾ ಸಿದ್ಧನಿದ್ದೇನೆ. ಅವರು ನನ್ನೊಂದಿಗೆ ಮಾತನಾಡಬಹುದು. ನಾನು ಅವರ ಭಾವನೆಗಳನ್ನು ಅರ್ಥಮಾಡಿಕೊಂಡಿದ್ದೇನೆ. ಇನ್ನೂ ಸ್ಯಾಮ್ಸನ್ ಬಗ್ಗೆ ಮಾತನಾಡಿದ ಪಾಂಡ್ಯ, ಇದು ದುರದೃಷ್ಟಕರ. ನಾವು ಅವರಿಗೆ ಅವಕಾಶ ನೀಡಲು ಬಯಸಿದ್ದೇವು ಆದರೆ ಕಾರ್ಯತಂತ್ರದ ಕಾರಣಗಳಿಂದ ಅವರು ಆಡುವ XI ಗೆ ಬರಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.

7 ವರ್ಷಗಳಲ್ಲಿ ಕೇವಲ 16 ಟಿ20 ಪಂದ್ಯ

2015 ರಲ್ಲಿ ಸಂಜು ಸ್ಯಾಮ್ಸನ್ ಅವರು ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದರು. ದುರದೃಷ್ಟಕರ ವಿಷಯವೆಂದರೆ ಈ ಆಟಗಾರ ಕಳೆದ ಏಳು ವರ್ಷಗಳಲ್ಲಿ ಕೇವಲ 16 ಟಿ20 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಹಾಗೆಯೇ ಏಕದಿನ ಕ್ರಿಕೆಟ್‌ನಲ್ಲಿ ಕೇವಲ 10 ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದಿದ್ದಾರೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಸತತ ವಿಫಲರಾಗುತ್ತಿರುವ ಪಂತ್‌ಗೆ ಕಳೆದ ನಾಲ್ಕು ವರ್ಷಗಳಲ್ಲಿ ಹಲವು ಅವಕಾಶಗಳು ಸಿಕ್ಕಿವೆ.

ಪಂತ್​ಗೆ ಪದೇಪದೇ ಅವಕಾಶ

ಈ ಟಿ20 ಸರಣಿಯಲ್ಲಿ ರಿಷಬ್ ಪಂತ್​ಗೆ ಆರಂಭಿಕರಾಗಿ ಆಡುವ ಅವಕಾಶ ನೀಡಲಾಯಿತು. ಸಿಕ್ಕ ಎರಡು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಪಂತ್ ವಿಫಲರಾದರು. ಅಲ್ಲದೆ ಪಂತ್​ಗೆ ಏಷ್ಯಾಕಪ್, ಟಿ20 ವಿಶ್ವಕಪ್​ನಲ್ಲೂ ಅವಕಾಶ ನೀಡಲಾಯಿತು. ಅಲ್ಲೂ ಸಹ ಪಂತ್ ವಿಶೇಷವಾಗಿ ಏನನ್ನೂ ಮಾಡಲಿಲ್ಲ. ಪಂತ್ ಇದುವರೆಗೆ 66 ಟಿ20 ಪಂದ್ಯಗಳನ್ನು ಆಡಿದ್ದು, 25 ಕ್ಕಿಂತ ಕಡಿಮೆ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ ಕೂಡ 125 ಕ್ಕಿಂತ ಕಡಿಮೆ ಇದೆ. ಅಲ್ಲದೆ, ಅವರ ಬ್ಯಾಟ್‌ನಿಂದ ಕೇವಲ 3 ಅರ್ಧ ಶತಕಗಳು ಹೊರಬಂದಿವೆ. ಹೀಗಿದ್ದರೂ ಅವರಿಗೆ ಪದೇಪದೇ ಅವಕಾಶ ನೀಡಲಾಗುತ್ತಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada