India vs New zealand: ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯನ್ನು ಟೀಮ್ ಇಂಡಿಯಾ (Team India) ವಶಪಡಿಸಿಕೊಂಡಿದೆ. ಮೂರು ಪಂದ್ಯಗಳ ಈ ಸರಣಿಯ ಮೊದಲ ಪಂದ್ಯವು ಮಳೆಗೆ ಅಹುತಿಯಾದರೆ, 2ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿತ್ತು. ಇನ್ನು ಮೂರನೇ ಪಂದ್ಯದ ವೇಳೆ ಮಳೆ ಬಂದಿದ್ದರಿಂದ ಪಂದ್ಯವನ್ನು ಮುಂದುವರೆಸಲು ಸಾಧ್ಯವಾಗಿರಲಿಲ್ಲ. ಇದಾಗ್ಯೂ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಫಲಿತಾಂಶ ನಿರ್ಧರಿಸಿದಾಗ ಪಂದ್ಯವು ಟೈನಲ್ಲಿ ಅಂತ್ಯ ಕಂಡಿತ್ತು. ಇದರೊಂದಿಗೆ ನ್ಯೂಜಿಲೆಂಡ್ ವಿರುದ್ಧದ ಸರಣಿಯನ್ನು ಟೀಮ್ ಇಂಡಿಯಾ 1-0 ಅಂತರದಿಂದ ವಶಪಡಿಸಿಕೊಂಡಿತು.
ಈ ಸರಣಿಯ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಹಾರ್ದಿಕ್ ಪಾಂಡ್ಯಗೆ ತಂಡದ ಆಯ್ಕೆ ಬಗ್ಗೆ ಪ್ರಶ್ನೆಗಳನ್ನು ಕೇಳಲಾಯಿತು. ಅದರಲ್ಲೂ ಸಂಜು ಸ್ಯಾಮ್ಸನ್ ಹಾಗೂ ಉಮ್ರಾನ್ ಮಲಿಕ್ ಅವರಿಗೆ ತಂಡದಲ್ಲಿ ಅವಕಾಶ ನೀಡದಿರುವ ಬಗ್ಗೆ ಪ್ರಶ್ನಿಸಲಾಗಿದೆ.
ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಇಬ್ಬರಿಗೂ ಪಂದ್ಯ ಆಡುವ ಅವಕಾಶ ಸಿಕ್ಕಿರಲಿಲ್ಲ. ಈ ಕುರಿತು ಅಭಿಮಾನಿಗಳು ಸೇರಿದಂತೆ ಹಲವು ಮಾಜಿ ಆಟಗಾರರು ಸಾಮಾಜಿಕ ಜಾಲತಾಣಗಳಲ್ಲಿ ತಂಡದ ಆಯ್ಕೆ ಕುರಿತು ಪ್ರಶ್ನೆಗಳನ್ನು ಎತ್ತಿದ್ದರು. ಈ ಎಲ್ಲಾ ಪ್ರಶ್ನೆಗಳನ್ನು ಪಾಂಡ್ಯ ಮುಂದಿಟ್ಟಾಗ ಕೋಪಗೊಂಡರು. ಆ ಬಳಿಕ ಸಮಜಾಯಿಷಿ ನೀಡಿದ ಅವರ ಉತ್ತರಗಳು ಈಗ ಚರ್ಚೆಗೆ ಕಾರಣವಾಗಿದೆ.
ಉಮ್ರಾನ್ ಮಲಿಕ್ ಹಾಗೂ ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ನೀಡದಿರುವ ಬಗ್ಗೆ ಪ್ರತಿಕ್ರಿಯಿಸಿದ ಹಾರ್ದಿಕ್ ಪಾಂಡ್ಯ, ಇದು ನನ್ನ ತಂಡ. ತಂಡದ ಕೋಚ್ ಮತ್ತು ನನ್ನ ಸಹ ಆಟಗಾರರು ಸರಿ ಎಂದು ಭಾವಿಸಿದ್ದನ್ನು ನಾನು ಮಾಡುತ್ತೇನೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಾನು ಹೆಜ್ಜೆ ಇಡುವುದಿಲ್ಲ. ಹೊರಗಿನವರು ಹೇಳಿದರೆ ನಮ್ಮ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಉತ್ತರಿಸಿದ್ದಾರೆ.
ಇಲ್ಲಿ ಯಾರು ತಂಡದಿಂದ ಹೊರಗಿದ್ದಾರೆ ಎಂಬುದು ಮುಖ್ಯವಲ್ಲ. ನನ್ನ ತಂಡದ ಬಗ್ಗೆ ಎಲ್ಲಾ ನಿರ್ಧಾರಗಳನ್ನು ನಾವೆಲ್ಲರೂ ಒಟ್ಟಾಗಿ ತೆಗೆದುಕೊಳ್ಳುತ್ತೇವೆ. ಆಗಿನ ಅಗತ್ಯಕ್ಕೆ ತಕ್ಕಂತೆ ನಮಗೆ ಬೇಕಾದ ತಂಡದೊಂದಿಗೆ ಮೈದಾನಕ್ಕಿಳಿಯುತ್ತೇವೆ. ಇಬ್ಬರಿಗೂ ತಂಡದಲ್ಲಿ ಆಡುವ ಅವಕಾಶ ಸಿಗಲಿದೆ. ಪ್ರತಿಯೊಬ್ಬರಿಗೂ ಅವಕಾಶ ಸಿಗುತ್ತದೆ. ಅಲ್ಲಿಯವರೆಗೂ ಕಾಯಬೇಕಾಗುತ್ತದೆ. ಏಕೆಂದರೆ ದೊಡ್ಡ ಸರಣಿ ನಡೆದರೆ, ಹೆಚ್ಚು ಪಂದ್ಯಗಳು, ಹೆಚ್ಚಿನ ಅವಕಾಶಗಳು ಸಿಗುತ್ತವೆ. ಆದರೆ ಅದು ಚಿಕ್ಕ ಸರಣಿಯಾಗಿತ್ತು. ಹೀಗಾಗಿ ಎಲ್ಲರಿಗೂ ಚಾನ್ಸ್ ನೀಡಲಾಗಿಲ್ಲ ಎಂದರು.
ಇದೇ ವೇಳೆ ತಂಡದಲ್ಲಿ ನಾನು ಹೆಚ್ಚಿನ ಬದಲಾವಣೆಗಳನ್ನು ಮಾಡುವುದರಲ್ಲಿ ನಂಬಿಕೆ ಇಟ್ಟಿಲ್ಲ. ಹೀಗಾಗಿ ಮೂರು ಪಂದ್ಯಗಳ ಸರಣಿಯಲ್ಲಿ ಮಹತ್ವದ ಬದಲಾವಣೆ ಕಂಡು ಬಂದಿಲ್ಲ ಎಂದು ಹಾರ್ದಿಕ್ ಪಾಂಡ್ಯ ತಿಳಿಸಿದ್ದಾರೆ.
ಅಚ್ಚರಿ ಎಂದರೆ ಸತತ ವೈಫಲ್ಯದ ನಡುವೆಯೂ ಟೀಮ್ ಇಂಡಿಯಾ ಪರ ಆರಂಭಿಕರಾಗಿ ರಿಷಭ್ ಪಂತ್ ಅವಕಾಶ ಪಡೆದಿದ್ದರು. ಇತ್ತ ಸಂಜು ಸ್ಯಾಮ್ಸನ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿದ್ದರೂ ಅವರಿಗೆ ಅವಕಾಶ ನೀಡದಿರುವ ಬಗ್ಗೆ ಪ್ರಶ್ನೆಗಳೆದ್ದಿದ್ದವು. ಆದರೀಗ ಸರಣಿಯ ಬಳಿಕ ಟೀಮ್ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ನೀಡಿರುವ ಹೇಳಿಕೆ ಬಗ್ಗೆ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಗಳು ವ್ಯಕ್ತವಾಗುತ್ತಿದೆ.