PSL 2022: ಕ್ಯಾಚ್ ಬಿಟ್ಟಿದ್ದಕ್ಕೆ ತನ್ನದೇ ತಂಡದ ಪ್ಲೇಯರ್ನ ಕಪಾಳಕ್ಕೆ ಹೊಡೆದ ಪಾಕ್ ಬೌಲರ್
Haris Rauf Slaps Kamran Ghulam: ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಸ್ಟಾರ್ ಬೌಲರ್ ಹ್ಯಾರಿಸ್ ರೌಫ್ ಮೈದಾನದಲ್ಲೇ ತಮ್ಮದೇ ತಂಡದ ಆಟಗಾರ ಕಮ್ರಾನ್ ಗುಲಾಮ್ ಅವರ ಕಪಾಳಕ್ಕೆ ಹೊಡೆದಿದ್ದು ವಿಡಿಯೋ ವೈರಲ್ ಆಗುತ್ತಿದೆ.
ಭಾರತದಲ್ಲಿ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ಬಿಟ್ಟರೆ ನಮ್ಮದೇ ಅತ್ಯಂತ ಗುಣಮಟ್ಟದ ಶ್ರೇಷ್ಠ ಟಿ20 ಲೀಗ್ ಎಂದು ಹೇಳಿಕೊಳ್ಳುವ ಪಾಕಿಸ್ತಾನದ ಪಾಕಿಸ್ತಾನ ಸೂಪರ್ ಲೀಗ್ನಲ್ಲಿ (Pakistan Super League) ಮತ್ತೊಂದು ನಾಚಿಕೆ ಗೇಡಿನ ಘಟನೆ ನಡೆದಿದೆ. ಮೊನ್ನೆಯಷ್ಟೆ ಆಸ್ಟ್ರೇಲಿಯಾದ ಆಲ್ರೌಂಡರ್ ಜೇಮ್ಸ್ ಫಾಕ್ನರ್ ಅವರು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಒಪ್ಪಂದದಂತೆ ಹಣ ನೀಡದೇ ವಂಚಿಸಿದೆ ಎಂದು ಆರೋಪಿಸಿ ಲೀಗ್ ಹಂತದಲ್ಲೇ ಟೂರ್ನಿಯನ್ನು ತ್ಯಜಿಸಿ ತವರಿಗೆ ಹಿಂತಿರುಗಿದ್ದರು. ಈ ಮೂಲಕ ಪಿಎಸ್ಎಲ್ನ ಕರಾಳ ಮುಖವನ್ನು ಬಯಲು ಮಾಡಿದ್ದರು. ಇದೀಗ ಕ್ರಿಕೆಟ್ ಜಗತ್ತು ತಲೆ ತಗ್ಗಿಸುವಂತಹ ಮತ್ತೊಂದು ಘಟನೆಗೆ ಪಾಕ್ ಸೂಪರ್ ಲೀಗ್ ಸಾಕ್ಷಿಯಾಗಿದೆ. ಪಾಕ್ ಸ್ಟಾರ್ ಬೌಲರ್ ಹ್ಯಾರಿಸ್ ರೌಫ್ (Haris Rauf) ಮೈದಾನದಲ್ಲೇ ತಮ್ಮದೇ ತಂಡದ ಆಟಗಾರ ಕಮ್ರಾನ್ ಗುಲಾಮ್ ಅವರ ಕಪಾಳಕ್ಕೆ ಹೊಡೆದಿದ್ದು ವಿಡಿಯೋ ವೈರಲ್ ಆಗುತ್ತಿದೆ. ಜಂಟಲ್ ಮ್ಯಾನ್ ಗೇಮ್ ಕ್ರಿಕೆಟ್ನಲ್ಲಿ ಈರೀತಿಯ ಘಟನೆ ನಡೆದಿರುವುದು ಅನೇಕ ಕ್ರಿಕೆಟ್ ಪಂಡಿತರ ಮತ್ತು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಈ ಘಟನೆ ಪಿಎಸ್ಎಲ್ 2022ರ ಸೋಮವಾರ ರಾತ್ರಿ ನಡೆದ ಲಾಹೋರ್ ಖಲಂದರ್ಸ್ ಮತ್ತು ಪೇಶಾವರ್ ಝಲ್ಮಿ ನಡುವಣ ರೋಚಕ ಪಂದ್ಯದಲ್ಲಿ ಸಂಭವಿಸಿದೆ. ಪೇಶಾವರ್ ಝಲ್ಮಿ ಬ್ಯಾಟಿಂಗ್ಗೆ ಇಳಿದ ಸಂದರ್ಭ ಈ ಘಟನೆ ನಡೆದಿದೆ. ಲಾಹೋರ್ ಖಲಂದರ್ಸ್ ತಂಡದ ಬೌಲರ್ ಹ್ಯಾರಿಸ್ ರೌಫ್ ಓವರ್ನಲ್ಲಿ ಪೇಶಾವರ್ ತಂಡದ ಬ್ಯಾಟರ್ ಹರ್ಜತುಲ್ಲಾ ಝಝಾಯ್ ಅವರ ಕ್ಯಾಚನ್ನು ಕಮ್ರಾನ್ ಗುಲಾಮ್ ಕೈಚೆಲ್ಲಿದರು. ಇದರಿಂದ ರೌಫ್ ಕೋಪಗೊಂಡರು. ನಂತರ ಇದೇ ಓವರ್ನಲ್ಲಿ ಮತ್ತೊಬ್ಬ ಬ್ಯಾಟರ್ ಮೊಹಮ್ಮದ್ ಹ್ಯಾರಿಸ್ ವಿಕೆಟ್ ಅನ್ನು ರೌಫ್ ಪಡೆದುಕೊಂಡರು. ಫಾಹಾದ್ ಅಹ್ಮದ್ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ರೌಫ್ ಮೊದಲ ವಿಕೆಟ್ ಕಿತ್ತರು.
ವಿಕೆಟ್ ಪಡೆದ ಖುಷಿಯಲ್ಲಿ ಸಹ ಆಟಗಾರರ ಜೊತೆ ರೌಫ್ ಸಂಭ್ರಮಿಸುತ್ತಿರುವಾಗ ಅಲ್ಲಿಗೆ ಕಮ್ರಾನ್ ಗುಲಾಮ್ ಕೂಡ ಖುಷಿಯಲ್ಲಿ ಪಾಲ್ಗೊಳ್ಳಲು ಬಂದರು. ಇನ್ನೇನು ಗುಲಾಮ್ ಕೈಕೊಟ್ಟು ಶುಭಕೋರಬೇಕು ಎನ್ನುವಷ್ಟರಲ್ಲಿ ರೌಫ್ ಇವರ ಕಪಾಳಕ್ಕೆ ಹೊಡೆದಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ರೌಫ್ ತಮ್ಮ ಕಪಾಳಕ್ಕೆ ಬಾರಿಸಿದರೂ ಗುಲಾಮ್ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ನಗುತ್ತಾ ಇರುವುದು ವಿಡಿಯೋದಲ್ಲಿ ಸೆರೆಯಾಗಿದೆ.
Wreck-it-Rauf gets Haris! #HBLPSL7 l #LevelHai l #LQvPZ pic.twitter.com/wwczV5GliZ
— PakistanSuperLeague (@thePSLt20) February 21, 2022
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪೇಶಾವರ್ ಝಲ್ಮಿ ತಂಡ ಶೊಯೇಬ್ ಅಮಲಿಕ್ ಅವರ 32 ರನ್ ಮತ್ತು ಹೈದರ್ ಅಲಿ ಅವರ 25 ರನ್ಗಳ ನೆರವಿನಿಂದ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. ಟಾರ್ಗೆಟ್ ಬೆನ್ನಟ್ಟಿದ ಲಾಹೋರ್ ಖಲಂದರ್ಸ್ ತಂಡ ಕೂಡ ಮೊಹಮ್ಮದ್ ಹಫೀಜ್ ಅವರ 49 ರನ್ ಮತ್ತು ನಾಯಕ ಶಾಹೀನ್ ಅಫ್ರೀದಿ ಅವರ ಅಜೇಯ 39 ರನ್ಗಳ ನೆರವಿನಿಂದ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 158 ರನ್ಗಳನ್ನೇ ಕಲೆಹಾಕಿತು.
ಪಂದ್ಯ ಟೈ ಆದ ಕಾರಣ ಸೂಪರ್ ಓವರ್ ನಡೆಸಲಾಯಿತು. ಇದರಲ್ಲಿ ಮೊದಲ ಬ್ಯಾಟ್ ಮಾಡಿದ ಲಾಹೋರ್ ತಂಡ 6 ಎಸೆತಗಳಲ್ಲಿ ವಿಕೆಟ್ ನಷ್ಟವಿಲ್ಲದೆ 5 ರನ್ಗಳನ್ನಷ್ಟೆ ಗಳಿಸಿತು. ಪೇಶಾವರ್ ಝಲ್ಮಿ ತಂಡ ಮೊದಲ ಎರಡು ಎಸೆತಗಳಲ್ಲಿ 2 ಬೌಂಡರಿ ಬಾರಿಸಿ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ಪೇಶಾವರ್ ತಂಡ 10 ಪಂದ್ಯಗಳಲ್ಲಿ 6 ರಲ್ಲಿ ಗೆದ್ದು ನಾಲ್ಕರಲ್ಲಿ ಸೋಲು ಕಂಡು 12 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದೆ.
IND vs SL: ಟೀಮ್ ಇಂಡಿಯಾ ಮುಂದಿನ ಟಾರ್ಗೆಟ್ ಶ್ರೀಲಂಕಾ: ಲಖನೌ ತಲುಪಿದ ರೋಹಿತ್ ಶರ್ಮ ಪಡೆ
Rahul Dravid: ಸಾಹ ಶಾಕಿಂಗ್ ಹೇಳಿಕೆಗೆ ದ್ರಾವಿಡ್ ಕೂಲ್ ರಿಪ್ಲೇ: ಏನಂದ್ರು ನೋಡಿ