
ರಾಯ್‌ಪುರದ ಶಹೀದ್ ವೀರ್ ನಾರಾಯಣ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ತಂಡದ ಮಾಜಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಕೇವಲ 41 ಎಸೆತಗಳಲ್ಲಿ 91 ರನ್ ಗಳಿಸಿದರು. ಅವರ ಈ ಭರ್ಜರಿ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಹಾಗೂ 6 ಸಿಕ್ಸರ್‌ಗಳು ಸೇರಿದ್ದವು. ಹರ್ಮನ್‌ಪ್ರೀತ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 216 ರನ್‌ಗಳನ್ನು ಕಲೆಹಾಕಿತು. ಈ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದ ಬಳಿಕ ಮಧ್ಯಂತರ ಸಂದರ್ಶನದ ವೇಳೆ ಮಾತನಾಡಿದ ಹರ್ಮನ್‌ಪ್ರೀತ್ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.
ಈ ತಿಂಗಳ ಆರಂಭದಲ್ಲಿ ಹರ್ಮನ್‌ಪ್ರೀತ್ ಕೌರ್ ಎಲ್ಲಾ ಮಾದರಿಗಳ ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದರು. ಕಳೆದ 10 ವರ್ಷಗಳ ಕಾಲ ಟಿ20 ತಂಡದ ನಾಯಕತ್ವ ವಹಿಸಿದ್ದ ಹರ್ಮನ್ ತಂಡವನ್ನು ಹಲವು ಸ್ಮರಣೀಯ ಗೆಲುವುಗಳತ್ತ ಮುನ್ನಡೆಸಿದ್ದರು. ನಾಯಕತ್ವ ತ್ಯಜಿಸಿದ ಬಳಿಕ ಹರ್ಮನ್‌ಪ್ರೀತ್ ಕೌರ್ ಬಾರಿಸಿದ ಮೊದಲ ಅರ್ಧಶತಕ ಇದಾಗಿದೆ. ಏಷ್ಯಾಕಪ್ ಹಾಗೂ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತಂಡ ಪ್ರಶಸ್ತಿ ಗೆದ್ದಿದ್ದರೂ, ಆ ಟೂರ್ನಿಗಳಲ್ಲಿ ಹರ್ಮನ್‌ಪ್ರೀತ್ ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಇದೀಗ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಹರ್ಮನ್ ಲಯ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮಧ್ಯಂತರ ಸಂದರ್ಶನದ ವೇಳೆ ತಮ್ಮ ಪ್ರದರ್ಶನದ ಬಗ್ಗೆ ಮಾತನಾಡಿದ ಹರ್ಮನ್‌ಪ್ರೀತ್ ಕೌರ್, ‘ ತುಂಬಾ ಸಂತೋಷವಾಗುತ್ತಿದೆ. ನಾನು ನನ್ನ ಆಟವನ್ನು ಆನಂದಿಸಬೇಕು ಎಂದುಕೊಂಡಿದ್ದೆ. ಕ್ರೀಸ್‌ನಲ್ಲಿ ಹೆಚ್ಚು ಸಮಯ ಕಳೆಯಲು ಅವಕಾಶ ಸಿಕ್ಕಿದ್ದು, ಮೈದಾನದಲ್ಲಿ ನನ್ನ ಆಟವನ್ನು ತುಂಬಾ ಆನಂದಿಸಿದೆ. ಸಾಧ್ಯವಾದಷ್ಟು ಹೆಚ್ಚು ಸಮಯ ಬ್ಯಾಟಿಂಗ್ ಮಾಡಬೇಕು ಎಂಬುದೇ ತಮ್ಮ ಉದ್ದೇಶವಾಗಿತ್ತು’ ಎಂದಿದ್ದಾರೆ.
ಆ ಬಳಿಕ ತಂಡದ ಮಾಜಿ ಕೋಚ್ ಡಬ್ಲ್ಯು.ವಿ. ರಾಮನ್ ಅವರನ್ನು ಉದ್ದೇಶಿಸಿ ಮಾತನಾಡಿದ ಹರ್ಮನ್‌ಪ್ರೀತ್, ‘ನಿಮಗೂ ಧನ್ಯವಾದ ಹೇಳಬೇಕು. ನಾವು ಬಂದಾಗ ನೀವು ನನ್ನ ಬಳಿ ಬಂದು, ‘ಈಗ ನೀನು ನಿನಗೆ ಇಷ್ಟವಾದ ರೀತಿಯಲ್ಲಿ ಆಟವಾಡು’ ಎಂದು ಹೇಳಿದ್ದಿರಿ. ಅದನ್ನೇ ನಾನು ಮಾಡಲು ಬಯಸಿದ್ದೆ. ನನ್ನ ಆಟವನ್ನು ಆನಂದಿಸಲು ಬಯಸಿದ್ದೆ. ಆ ಮಾತುಗಳಿಗಾಗಿ ಧನ್ಯವಾದಗಳು’ ಎಂದಿದ್ದಾರೆ.
ಅಭ್ಯಾಸದ ವೇಳೆ ನೆರವಾದ ಕೋಚ್ ಹಿಮಾಂಶು ಅವರ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ ಹರ್ಮನ್, ‘ಎರಡು ಪಂದ್ಯಗಳ ಬಳಿಕ ನೆಟ್ಸ್‌ನಲ್ಲಿ ಅಭ್ಯಾಸ ಮಾಡಲು ಸಮಯ ಸಿಕ್ಕಿತು. ನನ್ನ ಮೇಲೆ ತುಂಬಾ ಶ್ರಮ ಹಾಕುತ್ತಿರುವ ಹಿಮಾಂಶು ಭಯ್ಯಾ ಅವರಿಗೆ ನಾನು ವಿಶೇಷವಾಗಿ ಧನ್ಯವಾದ ಹೇಳಲು ಬಯಸುತ್ತೇನೆ. ಇಂದಿನ ನನ್ನ ಬ್ಯಾಟಿಂಗ್‌ನ ಸಂಪೂರ್ಣ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ’ ಎಂದರು.
ಇನ್ನು ಇದೇ ಸಂದರ್ಶನದ ವೇಳೆ ಹರ್ಮನ್‌ಪ್ರೀತ್ ಕೌರ್ ಸ್ಪಷ್ಟವಾಗಿ ಭಾವುಕರಾಗಿದ್ದರು. ಅವರ ಕಣ್ಣುಗಳಲ್ಲಿ ನೀರು ತುಂಬಿಕೊಂಡಿದ್ದು, ತೋಳಿನಿಂದ ಕಣ್ಣೀರು ಒರೆಸಿಕೊಳ್ಳುತ್ತಿರುವುದು ಕಂಡುಬಂತು. ಸಂದರ್ಶನದ ಕೊನೆಯಲ್ಲಿ ಅವರು ಮೈಕ್ರೊಫೋನ್ ಅನ್ನು ಮತ್ತೊಬ್ಬರ ಕಡೆಗೆ ನೀಡಿದ ಬಳಿಕ ತಕ್ಷಣವೇ ಕ್ಯಾಮೆರಾಗಳಿಂದ ದೂರ ಸರಿದರು. ನಾಯಕತ್ವ ತ್ಯಜಿಸುವ ನಿರ್ಧಾರ ಪ್ರಕಟಿಸಿದ ಬಳಿಕ ಹರ್ಮನ್‌ಪ್ರೀತ್ ನೀಡಿದ ಮೊದಲ ಸಂದರ್ಶನ ಇದಾಗಿದೆ. ಅವರ ಭಾವುಕ ಕ್ಷಣವು ಅಭಿಮಾನಿಗಳ ಗಮನ ಸೆಳೆದಿದ್ದು, ನೂರಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.