Women’s Asia Cup: ಇಂದು ಭಾರತ-ಶ್ರೀಲಂಕಾ ಮಹಿಳಾ ಏಷ್ಯಾಕಪ್: ನೂತನ ದಾಖಲೆಯ ಹೊಸ್ತಿಲಲ್ಲಿ ಸ್ಮೃತಿ ಮಂದಾನ, ಹರ್ಮನ್ಪ್ರೀತ್
Harmanpreet Kaur, Smriti Mandhana: ಈ ಬಾರಿಯ ಏಷ್ಯಾಕಪ್ ಟೂರ್ನಿ ಟಿ20 ಮಾದರಿಯಲ್ಲಿ ನಡೆಯುತ್ತಿದೆ. ಹೀಗಾಗಿ ಕೌರ್-ಮಂದಾನ ಚುಟುಕು ಮಾದರಿಯ ಕ್ರಿಕೆಟ್ನಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ.
ಎಂಟನೇ ಆವೃತ್ತಿಯ ಮಹಿಳಾ ಏಷ್ಯಾಕಪ್ ಟೂರ್ನಿಗೆ (Women’s Asia Cup) ಚಾಲನೆ ಸಿಕ್ಕಿದೆ. ಇಂದು ನಡೆಯಲಿರುವ ಎರಡನೇ ಪಂದ್ಯದಲ್ಲಿ ಆರು ಬಾರಿಯ ಚಾಂಪಿಯನ್ ಭಾರತ ಮಹಿಳಾ ತಂಡ ಶ್ರೀಲಂಕಾ ತಂಡವನ್ನು (India Women vs Sri Lanka Women) ಎದುರಿಸಲಿದೆ. ಸದ್ಯ ಭರ್ಜರಿ ಫಾರ್ಮ್ನಲ್ಲಿರುವ ಹರ್ಮನ್ಪ್ರೀತ್ ಪಡೆ ಈ ಬಾರಿ ಪ್ರಶಸ್ತಿ ಗೆಲ್ಲುವ ಫೆವರಿಟ್ ಎನಿಸಿದೆ. ಅಲ್ಲದೆ ಕಳೆದ ಸೀಸನ್ನ ಫೈನಲ್ನಲ್ಲಿ ಬಾಂಗ್ಲಾದೇಶ ವಿರುದ್ಧ ಸೋತಿದ್ದ ಭಾರತಕ್ಕೆ ಇದು ಪ್ರತಿಷ್ಠೆಯ ಟೂರ್ನಿ ಕೂಡ ಹೌದು. ಈ ಪಂದ್ಯದಲ್ಲಿ ನಾಯಕಿ ಹರ್ಮನ್ಪ್ರೀತ್ ಕೌರ್ (Harmanpreet Kaur) ಹಾಗೂ ಸ್ಮೃತಿ ಮಂದಾನ ನೂತನ ದಾಖಲೆಯ ಹೊಸ್ತಿಲಲ್ಲಿದ್ದಾರೆ.
ಈ ಬಾರಿಯ ಏಷ್ಯಾಕಪ್ ಟೂರ್ನಿ ಟಿ20 ಮಾದರಿಯಲ್ಲಿ ನಡೆಯುತ್ತಿದೆ. ಹೀಗಾಗಿ ಕೌರ್-ಮಂದಾನ ಚುಟುಕು ಮಾದರಿಯ ಕ್ರಿಕೆಟ್ನಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಹರ್ಮನ್ಪ್ರೀತ್ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 2602 ರನ್ ಕಲೆಹಾಕಿದ್ದು, ಇನ್ನು 4 ರನ್ ಬಾರಿಸಿದರೆ ಇಂಗ್ಲೆಂಡ್ ತಂಡದ ಮಾಜಿ ನಾಯಕಿ ಚಾರ್ಲಿ ಎಡ್ವರ್ಡ್ಸ್ ದಾಖಲೆಯನ್ನು ಹಿಂದಿಕ್ಕಲಿದ್ದಾರೆ. ಈ ಮೂಲಕ ಮಹಿಳಾ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಆರನೇ ಬ್ಯಾಟರ್ ಆಗಲಿದ್ದಾರೆ. ಕೌರ್ ಈಗಾಗಲೇ ಭಾರತ ಪರ ಗರಿಷ್ಠ ರನ್ ಗಳಿಸಿದ ಬ್ಯಾಟರ್ ಆಗಿದ್ದಾರೆ.
ಇನ್ನು ಸ್ಮೃತಿ ಮಂದಾನ 2303 ರನ್ ಗಳಿಸಿದ್ದು 62 ರನ್ ಕಲೆಹಾಕಿದರೆ ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್ ದಾಖಲೆ ಹಿಂದಿಕ್ಕಲಿದ್ದಾರೆ. ಮಿಥಾಲಿ ಒಟ್ಟು 2364 ರನ್ ಗಳಿಸಿದ್ದಾರೆ. ಜೊತೆಗೆ ಭಾರತ ಮಹಿಳಾ ತಂಡದ ಪರ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಗರಿಷ್ಠ ರನ್ ಸಿಡಿಸಿದ ಎರಡನೇ ಬ್ಯಾಟರ್ ಹಾಗೂ ಒಟ್ಟಾರೆಯಾಗಿ ಒಂಬತ್ತನೇ ಬ್ಯಾಟರ್ ಆಗಲಿದ್ದಾರೆ. ಮಹಿಳಾ ಟಿ20 ಕ್ರಿಕೆಟ್ನಲ್ಲಿ ಗರಿಷ್ಠ ರನ್ ಗಳಿಸಿದ ಸಾಲಿನಲ್ಲಿ ಮೊದಲಿಗರಾಗಿ ನ್ಯೂಜಿಲೆಂಡ್ನ ಸೂಜಿ ಬೇಟ್ಸ್ (3536) ಇದ್ದಾರೆ. ಎರಡನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಮೆಗ್ ಲ್ಯಾನಿಂಗ್ ಇದ್ದು 3211 ರನ್ ಗಳಿಸಿದ್ದಾರೆ.
ಇಂದು ನಡೆಯಲಿರುವ ಪಂದ್ಯದಲ್ಲಿ ಹರ್ಮನ್ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ತಂಡ ಹಾಗೂ ಶ್ರೀಲಂಕಾ ಸೆಣೆಸಾಟ ನಡೆಸಲಿದೆ. ಬಾಂಗ್ಲಾದೇಶದ ಸೈಲೆಟ್ ಔಟರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಇತ್ತೀಚೆಗಷ್ಟೆ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಏಕದಿನ ಸರಣಿಯಲ್ಲಿ ವೈಟ್ವಾಷ್ ಮಾಡಿದ ಭರವಸೆಯಲ್ಲಿ ಕೌರ್ ಬಳಗವಿದೆ. ಆದರೆ, ಟಿ20 ವಿಚಾರಕ್ಕೆ ಬಂದರೆ ಭಾರತ ಇನ್ನಷ್ಟು ಶ್ರಮವಹಿಸಬೇಕಿದೆ. ಸ್ಮೃತಿ ಮಂದಾನ, ಹರ್ಮನ್ಪ್ರೀತ್ ಕೌರ್ ಹಾಗೂ ದೀಪ್ತಿ ಶರ್ಮಾ ಭರ್ಜರಿ ಫಾರ್ಮ್ನಲ್ಲಿರುವುದು ತಂಡದ ಪ್ಲಸ್ ಪಾಯಿಂಟ್.
ಶ್ರೀಲಂಕಾ ಮಹಿಳಾ ತಂಡ ಕೊನೆಯ ಬಾರಿಗೆ ಮೈದಾನಕ್ಕೆ ಇಳಿದಿದ್ದು ಕಾಮನ್ವೆಲ್ತ್ ಗೇಮ್ಸ್ 2022ರಲ್ಲಿ. ಚಮಿರಾ ಅಟಪಟ್ಟು ನಾಯಕಿಯಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಹಸಿನಿ ಪೆರೇರಾ, ಹರ್ಷಿತಾ ಮಾದವಿ, ಅನುಷ್ಕಾ ಸಂಜೀವನಿ ಪ್ರಮುಖ ಬ್ಯಾಟರ್ಗಳಾದರೆ, ಇನೋಕಾ ರಣವೀರಾ, ಅಚಿನಿ ಕುಲಸೂರ್ಯ, ರಶ್ಮಿ ಸಿಲ್ವಾ ಬೌಲರ್ಗಳಾಗಿದ್ದಾರೆ. ಈ ಬಾರಿ ಪುರುಷರ ಏಷ್ಯಾಕಪ್ನಲ್ಲಿ ಶ್ರೀಲಂಕಾ ಪ್ರಶಸ್ತಿ ಗೆದ್ದಿತ್ತು. ಹೀಗಾಗಿ ಮಹಿಳಾ ತಂಡ ಯಾವರೀತಿ ಆಟ ಆಡುತ್ತೆ ಎಂಬುದು ಕುತೂಹಲ ಕೆರಳಿಸಿದೆ.
Published On - 11:32 am, Sat, 1 October 22