CPL 2022: ಕಿಂಗ್ ಸಿಡಿಲಬ್ಬರ: ಜಮೈಕಾ ಚಾಂಪಿಯನ್
CPL 2022 final: ಈ ಗೆಲುವಿನೊಂದಿಗೆ ಜಮೈಕಾ ತಲ್ಲವಾಸ್ ತಂಡವು ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಮೂರನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
CPL 2022 final: ಕೆರಿಬಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿ ಜಮೈಕಾ ತಲ್ಲವಾಸ್ (Jamaica Tallawahs) ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಗಯಾನಾದ ಪ್ರೊವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಜಮೈಕಾ ತಲ್ಲವಾಸ್ ಹಾಗೂ ಬಾರ್ಬಡೋಸ್ ರಾಯಲ್ಸ್ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾರ್ಬಡೋಸ್ ರಾಯಲ್ಸ್ (Barbados Royals) ತಂಡದ ನಾಯಕ ಕೈಲ್ ಮೇಯರ್ಸ್ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಬಿರುಸಿನ ಆರಂಭ ಪಡೆದ ಬಾರ್ಬಡೋಸ್ ರಾಯಲ್ಸ್ ಪವರ್ಪ್ಲೇನಲ್ಲಿ 63 ರನ್ ಕಲೆಹಾಕಿತು. ಆದರೆ ಆರಂಭಿಕರಾದ ಕಾರ್ನ್ವಾಲ್ (36) ಹಾಗೂ ಕೈಲ್ ಮೇಯರ್ಸ್ (29) ನಿರ್ಗಮನದೊಂದಿಗೆ ಜಮೈಕಾ ಬೌಲರ್ಗಳು ಮೇಲುಗೈ ಸಾಧಿಸಿದರು. ಇತ್ತ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಆಜಂ ಖಾನ್ ಅವರ ನಿಧಾನಗತಿಯ ಬ್ಯಾಟಿಂಗ್ ಕೂಡ ಜಮೈಕಾ ತಂಡಕ್ಕೆ ಪ್ಲಸ್ ಪಾಯಿಂಟ್ ಆಯಿತು.
40 ಎಸೆತಗಳನ್ನು ಎದುರಿಸಿದ ಆಜಂ ಖಾನ್ 51 ರನ್ಗಳಿಸಿ ಔಟಾದರೆ, ಆ ಬಳಿಕ ಬಂದ ಜೇಸನ್ ಹೋಲ್ಡರ್ 17 ರನ್ಗಳಿಸಿ ನಿರ್ಗಮಿಸಿದರು. ಇನ್ನು ಅಂತಿಮ ಹಂತದಲ್ಲಿ ಸಂಪೂರ್ಣ ಹಿಡಿತ ಸಾಧಿಸಿದ ಜಮೈಕಾ ವೇಗಿಗಳು ಬಾರ್ಬಡೋಸ್ ರಾಯಲ್ಸ್ ಮೊತ್ತವನ್ನು 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 161 ರನ್ಗೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು.
162 ರನ್ಗಳ ಸಾಧಾರಣ ಗುರಿ ಪಡೆದ ಜಮೈಕಾ ತಲ್ಲವಾಸ್ ಪರ ಆರಂಭಿಕ ಆಟಗಾರ ಬ್ರೆಂಡನ್ ಕಿಂಗ್ ಅಕ್ಷರಶಃ ಅಬ್ಬರಿಸಿದರು. ಆರಂಭದಿಂದಲೇ ಬಾರ್ಬಡೋಸ್ ಬೌಲರ್ಗಳ ಬೆಂಡೆತ್ತಿದ ಬ್ರೆಂಡನ್ ಕಿಂಗ್ 2 ಸಿಕ್ಸ್ ಹಾಗೂ 13 ಫೋರ್ನೊಂದಿಗೆ 50 ಎಸೆತಗಳಲ್ಲಿ ಅಜೇಯ 83 ರನ್ ಚಚ್ಚಿದರು. ಮತ್ತೊಂದೆಡೆ ಕಿಂಗ್ಗೆ ಉತ್ತಮ ಸಾಥ್ ನೀಡಿದ ಶಮ್ರಾ ಬ್ರೂಕ್ಸ್ 33 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 6 ಬೌಂಡರಿಯೊಂದಿಗೆ 47 ರನ್ ಸಿಡಿಸಿದರು. ಪರಿಣಾಮ 16.1 ಓವರ್ಗಳಲ್ಲಿ ಜಮೈಕಾ ತಲ್ಲವಾಸ್ ತಂಡವು 2 ವಿಕೆಟ್ ನಷ್ಟಕ್ಕೆ 162 ರನ್ಗಳಿಸಿ ಗೆಲುವಿನ ನಗೆ ಬೀರಿತು.
CHAMPIONS!!!!! ???#CPL22 #BRvJT #CricketPlayedLouder #BiggestPartyInSport #CPLFinal pic.twitter.com/DFMixoADQ0
— CPL T20 (@CPL) October 1, 2022
ಈ ಗೆಲುವಿನೊಂದಿಗೆ ಜಮೈಕಾ ತಲ್ಲವಾಸ್ ತಂಡವು ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಮೂರನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದಕ್ಕೂ ಮುನ್ನ 2013 ಮತ್ತು 2016 ರಲ್ಲಿ ಜಮೈಕಾ ತಲ್ಲವಾಸ್ ಸಿಪಿಎಲ್ನಲ್ಲಿ ಟ್ರೋಫಿ ಎತ್ತಿ ಹಿಡಿದಿತ್ತು. ಇದೀಗ ರೋವ್ಮನ್ ಪೊವೆಲ್ ನಾಯಕತ್ವದಲ್ಲಿ ಜಮೈಕಾ ಚಾಂಪಿಯನ್ ಪಟ್ಟ ಅಲಂಕರಿಸಿದೆ.