T20 World Cup: ಭಾರತ ಟಿ20 ವಿಶ್ವಕಪ್ ತಂಡದಲ್ಲಿ ದೊಡ್ಡ ಬದಲಾವಣೆ?: ಇಬ್ಬರು ಸ್ಟಾರ್ ಪ್ಲೇಯರ್ಸ್ ಆಯ್ಕೆ
Indian Cricket Team: ಇಂಜುರಿಗೆ ತುತ್ತಾಗಿರುವ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿಯ ಅಗತ್ಯವಿರುವ ಕಾರಣ ಟಿ20 ವಿಶ್ವಕಪ್ ಟೂರ್ನಿಯಿಂದ ಬಹುತೇಕ ಹೊರಬಿದ್ದಿದ್ದಾರೆ. ಇದರ ನಡುವೆ ಮ್ಯಾನೇಜ್ಮೆಂಟ್ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲು ಮುಂದಾಗಿದೆ.
ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ (T20 World Cup) ಮಹಾಟೂರ್ನಿಗೆ ದಿನಗಣನೆ ಶುರುವಾಗಿದೆ. ಅಕ್ಟೋಬರ್ 16 ಕ್ಕೆ ಈ ಚುಟುಕು ಟೂರ್ನಿಗೆ ಚಾಲನೆ ಸಿಗಲಿದ್ದು ಈಗಾಗಲೇ ಎಲ್ಲ ತಂಡಗಳ ಪ್ರಕಟ ಕೂಡ ಆಗಿದೆ. ಬಿಸಿಸಿಐ (BCCI) ಕೂಡ 15 ಮಂದಿ ಸದಸ್ಯರ ಟೀಮ್ ಇಂಡಿಯಾವನ್ನು ಹೆಸರಿಸಿದೆ. ಅ. 23 ರಂದು ಭಾರತ ತಂಡ ಪಾಕಿಸ್ತಾನ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಆದರೀಗ ರೋಹಿತ್ ಪಡೆಯಲ್ಲಿ ದೊಡ್ಡ ಬದಲಾವಣೆ ನಿರೀಕ್ಷಿಸಲಾಗಿದೆ. ಇಂಜುರಿಗೆ ತುತ್ತಾಗಿರುವ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿಯ ಅಗತ್ಯವಿರುವ ಕಾರಣ ಟಿ20 ವಿಶ್ವಕಪ್ ಟೂರ್ನಿಯಿಂದ ಬಹುತೇಕ ಹೊರಬಿದ್ದಿದ್ದಾರೆ. ಇದರ ನಡುವೆ ಮ್ಯಾನೇಜ್ಮೆಂಟ್ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲು ಮುಂದಾಗಿದೆ. ಇಬ್ಬರು ಸ್ಟಾರ್ ಬೌಲರ್ಗಳನ್ನು ಟೀಮ್ ಇಂಡಿಯಾ (Team India) ಜೊತೆ ಆಸ್ಟ್ರೇಲಿಯಾಕ್ಕೆ ಕಳುಹಿಸಲು ಬಿಸಿಸಿಐ ಚಿಂತನೆ ನಡೆಸಿದೆಯಂತೆ.
ಸ್ಪೋರ್ಟ್ಸ್ ಸ್ಟಾರ್ ಮಾಡಿರುವ ವರದಿಯ ಪ್ರಕಾರ, ಮೊಹಮ್ಮದ್ ಸಿರಾಜ್ ಹಾಗೂ ಉಮ್ರಾನ್ ಮಲಿಕ್ ಭಾರತ ತಂಡದ ಜೊತೆ ಅಕ್ಟೋಬರ್ 6 ರಂದು ಪರ್ತ್ಗೆ ಪ್ರಯಾಣ ಬೆಳೆಸಲಿದ್ದಾರಂತೆ. ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಭಾರತ ಬ್ರಿಸ್ಬೇನ್ನಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲಿದೆ. ಇದರಲ್ಲಿ ಸಿರಾಜ್ ಅಥವಾ ಮಲಿಕ್ ಕಣಕ್ಕಿಳಿಯಬಹುದು. ಇಲ್ಲಿ ಉತ್ತಮ ಪ್ರದರ್ಶನ ತೋರಿದರೆ ಪ್ಲೇಯಿಂಗ್ ಇಲೆವೆನ್ನಲ್ಲೂ ಆಡುವ ಸಂಭವವಿದೆ.
ಬುಮ್ರಾ ಬದಲು ಸಿರಾಜ್ ಆಯ್ಕೆ:
ಬೆನ್ನು ನೋವಿನ ಸಮಸ್ಯೆ ಹೆಚ್ಚಾಗಿರುವ ಕಾರಣ ಬುಮ್ರಾಗೆ ಶಸ್ತ್ರ ಚಿಕಿತ್ಸೆಯ ಅಗತ್ಯವಿಲ್ಲದಿದ್ದರೂ 4 ರಿಂದ 6 ತಿಂಗಳುಗಳ ಕಾಲ ವಿಶ್ರಾಂತಿ ಬೇಕಾಗಿದೆ ಎಂದು ಬಿಸಿಸಿಐ ವೈದ್ಯಕೀಯ ತಂಡ ಹೇಳಿದೆ. ಹೀಗಾಗಿ ದ. ಆಫ್ರಿಕಾ ವಿರುದ್ಧ ಬಾಕಿ ಇರುವ ಎರಡು ಟಿ20 ಪಂದ್ಯಕ್ಕೆ ಬುಮ್ರಾ ಬದಲು ಮೊಹಮ್ಮದ್ ಸಿರಾಜ್ಗೆ ಸ್ಥಾನ ನೀಡಲಾಗಿದೆ. ಭಾರತ ಕ್ರಿಕೆಟ್ ತಂಡ ಹಿರಿಯ ಆಯ್ಕೆ ಸಮಿತಿಯು ಮೊಹಮ್ಮದ್ ಸಿರಾಜ್ ಅವರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಉಳಿದ ಟಿ20 ಸರಣಿಗೆ ಗಾಯಾಳು ಜಸ್ಪ್ರೀತ್ ಬುಮ್ರಾಗೆ ಬದಲಿಯಾಗಿ ನೇಮಿಸಿದೆ ಎಂದು ಬಿಸಿಸಿಐ ತನ್ನ ಹೇಳಿಕಯಲ್ಲಿ ತಿಳಿಸಿದೆ. ಸಿರಾಜ್ ಭಾರತ ಪರ ಐದು ಟಿ ಪಂದ್ಯಗಳನ್ನು ಆಡಿದ್ದಾರೆ, ಕೊನೆಯ T20I ಈ ವರ್ಷದ ಆರಂಭದಲ್ಲಿ ಶ್ರೀಲಂಕಾ ವಿರುದ್ಧ ಆಡಿದ್ದರು. ಉಳಿದ 2 ಪಂದ್ಯಗಳಲ್ಲಿ ಸಿರಾಜ್ ಅವಕಾಶ ಪಡೆದು ಮಿಂಚಿದರೆ ಟಿ20 ವಿಶ್ವಕಪ್ ಬಳಗದಲ್ಲಿ ಸ್ಥಾನ ಪಡೆಯುವುದು ಖಚಿತ ಎಂದೇ ಹೇಳಬಹುದು.
ಐಸಿಸಿ ಟಿ20 ವಿಶ್ವಕಪ್‌ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಆರ್.ಅಶ್ವಿನ್, ಯುಜ್ವೇಂದ್ರ ಚಹಾಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
Published On - 9:11 am, Sat, 1 October 22