150 ವರ್ಷಗಳಲ್ಲೇ ಮೊದಲು: ಸೌತ್ ಆಫ್ರಿಕಾದ ವಿಶ್ವ ದಾಖಲೆಯ ‘ಡಿಕ್ಲರೇಷನ್’

ಟೆಸ್ಟ್ ಕ್ರಿಕೆಟ್​ ಕೇವಲ ಒಂದು ದಿನದ ಆಟವಲ್ಲ ಎಂಬುದಕ್ಕೆ ತಾಜಾ ಉದಾಹರಣೆ ಕೆಬರ್ಹಾ ಟೆಸ್ಟ್. ಆಸ್ಟ್ರೇಲಿಯಾದ ಮಾರಕ ಬೌಲಿಂಗ್ ದಾಳಿಗೆ ಸಿಲುಕಿ ಕೇವಲ 110 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಪೂರ್ಣವಾಗಿ ಶರಣಾಗುವ ಹಂತದಲ್ಲಿದ್ದ ಸೌತ್ ಆಫ್ರಿಕಾ, ಆ ಬಳಿಕ ಭರ್ಜರಿಯಾಗಿ ಕಂಬ್ಯಾಕ್ ಮಾಡಿದೆ. ಈ ಕಂಬ್ಯಾಕ್​ನೊಂದಿಗೆ ಹೊಸ ಇತಿಹಾಸ ನಿರ್ಮಿಸುವಲ್ಲಿ ಯಶಸ್ವಿಯಾಗಿದೆ.

150 ವರ್ಷಗಳಲ್ಲೇ ಮೊದಲು: ಸೌತ್ ಆಫ್ರಿಕಾದ ವಿಶ್ವ ದಾಖಲೆಯ ಡಿಕ್ಲರೇಷನ್
South Africa
Image Credit source: GettyImages

Updated on: Oct 21, 2026 | 8:04 AM

ಟೆಸ್ಟ್ ಕ್ರಿಕೆಟ್‌ನ 150 ವರ್ಷಗಳ ಇತಿಹಾಸದಲ್ಲೇ ಹಿಂದೆಂದೂ ಕಾಣದ ಅಪರೂಪದ ದಾಖಲೆಯೊಂದಕ್ಕೆ ಕ್ರಿಕೆಟ್ ಲೋಕ ಸಾಕ್ಷಿಯಾಗಿದೆ. ಅದು ಸಹ ಒಂದು ಐತಿಹಾಸಿಕ ಡಿಕ್ಲರೇಷನ್‌ನೊಂದಿಗೆ! ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವು ಬರೋಬ್ಬರಿ 425 ರನ್ ಪೇರಿಸಿ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸುವ ಮೂಲಕ ಹೊಸ ವಿಶ್ವ ದಾಖಲೆ ಬರೆದಿದೆ. ಇದರಲ್ಲೇನು ದಾಖಲೆ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆ ಉತ್ತರ ಇಲ್ಲಿದೆ…

ಕೆಬರ್ಹಾದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬೌಲಿಂಗ್ ಆಯ್ದುಕೊಂಡಿದ್ದರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ದಾಳಿ ಸಂಘಟಿಸಿದ ಆಸೀಸ್ ಬೌಲರ್‌ಗಳು, ಸೌತ್ ಆಫ್ರಿಕಾ ತಂಡವು 110 ರನ್ ಗಳಿಸುವಷ್ಟರಲ್ಲಿ ಪ್ರಮುಖ 6 ವಿಕೆಟ್‌ಗಳನ್ನು ಉರುಳಿಸಿದ್ದರು.

ಸೌತ್ ಆಫ್ರಿಕಾ ತಂಡವು ಅತ್ಯಂತ ಕಡಿಮೆ ಮೊತ್ತಕ್ಕೆ ಆಲೌಟ್ ಆಗುವ ಭೀತಿಯಲ್ಲಿದ್ದಾಗ ಕ್ರೀಸ್‌ಗಿಳಿದ ನಾಯಕ ಟೆಂಬಾ ಬವುಮಾ, ಆಸ್ಟ್ರೇಲಿಯಾ ಬೌಲರ್‌ಗಳ ಎದುರು ಕೋಟೆಯಂತೆ ಗಟ್ಟಿಯಾಗಿ ನಿಂತರು. ಜವಾಬ್ದಾರಿಯುತ ಆಟವಾಡಿದ ಬವುಮಾ ಬರೋಬ್ಬರಿ 179 ರನ್‌ಗಳ ಅದ್ಭುತ ಶತಕ ಸಿಡಿಸಿದರು. ಇದು ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಸೌತ್ ಆಫ್ರಿಕಾದ ನಾಯಕನೊಬ್ಬ ಗಳಿಸಿದ ಅತ್ಯಧಿಕ ವೈಯಕ್ತಿಕ ಸ್ಕೋರ್ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು.

ಬವುಮಾ ಅವರ ಭರ್ಜರಿ ಬ್ಯಾಟಿಂಗ್‌ಗೆ ಕೆಳ ಕ್ರಮಾಂಕದ ಬ್ಯಾಟರ್‌ಗಳಿಂದ ಅದ್ಭುತ ಬೆಂಬಲ ವ್ಯಕ್ತವಾಯಿತು. ಅದರಲ್ಲೂ ವಿಶೇಷವಾಗಿ, 8ನೇ ವಿಕೆಟ್‌ಗೆ ಜೊತೆಯಾದ ಬವುಮಾ ಮತ್ತು ಸೈಮನ್ ಹಾರ್ಮರ್ (82 ರನ್) ಜೋಡಿಯು ಆಸ್ಟ್ರೇಲಿಯಾ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿತು. ಈ ಜೋಡಿ ಬರೋಬ್ಬರಿ 183 ರನ್‌ಗಳ ಮಹತ್ತರ ಜೊತೆಯಾಟವಾಡುವ ಮೂಲಕ ಸೌತ್ ಆಫ್ರಿಕಾದ ಪರ ಹೊಸ ದಾಖಲೆ ಬರೆಯಿತು. ಇನ್ನು ಆಲ್‌ರೌಂಡರ್ ಮಾರ್ಕೊ ಯಾನ್ಸೆನ್ 85 ರನ್​ಗಳ ಉಪಯುಕ್ತ ರನ್ ಕಾಣಿಕೆ ನೀಡಿದರು. ಈ ಮೂಲಕ 9 ವಿಕೆಟ್ ನಷ್ಟಕ್ಕೆ 425 ರನ್​ ಪೇರಿಸಿದ ಸೌತ್ ಆಫ್ರಿಕಾ ತಂಡವು ಮೂರನೇ ದಿನದಾಟದ ಅಂತ್ಯದ ವೇಳೆ ಡಿಕ್ಲೇರ್ ಘೋಷಿಸಿದರು.

ಇತಿಹಾಸದ ಪುಟ ಸೇರಿದ ಡಿಕ್ಲರೇಷನ್!

ಸೌತ್ ಆಫ್ರಿಕಾ ತಂಡದ ಈ ಡಿಕ್ಲರೇಷನ್ ಹೊಸ ವಿಶ್ವ ದಾಖಲೆಗೆ ಕಾರಣವಾಗಿದೆ. ಅಂದರೆ ಪಂದ್ಯದ ಆರಂಭದಲ್ಲೇ ಕೇವಲ 110 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ತಂಡವೊಂದು ಬೃಹತ್ ಮೊತ್ತ ಪೇರಿಸಿ ಡಿಕ್ಲೇರ್ ಮಾಡಿಕೊಂಡಿದ್ದು ಇದೇ ಮೊದಲು.

150 ವರ್ಷಗಳ ಟೆಸ್ಟ್ ಕ್ರಿಕೆಟ್​ನಲ್ಲಿ ಕೇವಲ 110 ರನ್​ಗಳಿಗೆ 6 ವಿಕೆಟ್ ಕಳೆದುಕೊಂಡ ತಂಡವೊಂದು 400+ ರನ್​ಗಳಿಸಿ ಡಿಕ್ಲೇರ್​ನೊಂದಿಗೆ ಮೊದಲ ಇನಿಂಗ್ಸ್ ಅಂತ್ಯಗೊಳಿಸಿದ ಇತಿಹಾಸವೇ ಇಲ್ಲ.

ಈ ಹಿಂದೆ 2010ರಲ್ಲಿ ಇಂಗ್ಲೆಂಡ್ ತಂಡವು ಪಾಕಿಸ್ತಾನ್ ವಿರುದ್ಧ ಲಾರ್ಡ್ಸ್‌ನಲ್ಲಿ 102 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿದ್ದಾಗಲೂ 446 ರನ್ ಗಳಿಸಿ ಚೇತರಿಸಿಕೊಂಡಿತ್ತು. ಆದರೆ, ಆ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಆಲೌಟ್ ಆಗಿತ್ತು.

ಆದರೆ, ಸೌತ್ ಆಫ್ರಿಕಾ ತಂಡವು 9 ವಿಕೆಟ್ ನಷ್ಟಕ್ಕೆ 425 ರನ್ ಕಲೆಹಾಕಿದ್ದಾಗ ದಿಢೀರ್ ‘ಇನ್ನಿಂಗ್ಸ್ ಡಿಕ್ಲೇರ್’ ಘೋಷಿಸಿತು. ಈ ಮೂಲಕ ಸೌತ್ ಆಫ್ರಿಕಾ ತಂಡವು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ‘ಮಹಾ ಕುಸಿತದ ಬಳಿಕ ಮಹಾ ಡಿಕ್ಲರೇಶನ್’ ಎಂಬ ಅಪರೂಪದ ಹೊಸ ದಾಖಲೆಯನ್ನು ಬರೆದಿದೆ.

ಇದನ್ನೂ ಓದಿ: ಟೀಮ್ ಇಂಡಿಯಾಗೆ ದಾಖಲೆಯ ವಿಜಯ

ಒಟ್ಟಾರೆಯಾಗಿ ಹೇಳುವುದಾದರೆ, ಕೆಬರ್ಹಾ ಟೆಸ್ಟ್ ಪಂದ್ಯವು ಕೇವಲ ರನ್‌ಗಳ ಹೋರಾಟವಾಗಿ ಉಳಿಯದೆ, ಟೆಸ್ಟ್ ಕ್ರಿಕೆಟ್‌ನ ಅಸಲಿ ರೋಮಾಂಚನವನ್ನು ಜಗತ್ತಿಗೆ ಪರಿಚಯಿಸಿದೆ. ಆರಂಭಿಕ ಆಘಾತದಿಂದ ನಲುಗಿದ್ದ ಸೌತ್ ಆಫ್ರಿಕಾ ತಂಡವನ್ನು ನಾಯಕ ಟೆಂಬಾ ಬವುಮಾ ಪ್ರದರ್ಶಿಸಿದ ಅಪ್ರತಿಮ ಹೋರಾಟ ಮತ್ತು ಕೆಳ ಕ್ರಮಾಂಕದ ಬ್ಯಾಟರ್‌ಗಳ ದಿಟ್ಟ ಬೆಂಬಲವು ಐತಿಹಾಸಿಕ ಮೈಲಿಗಲ್ಲು ತಲುಪಿಸಿದೆ. ಪಂದ್ಯದ ಈ ‘ಮಹಾ ಕುಸಿತ ಮತ್ತು ಮಹಾ ಡಿಕ್ಲರೇಶನ್’ ಸಾಹಸವು ಮುಂದಿನ ಹಲವು ದಶಕಗಳ ಕಾಲ ಕ್ರಿಕೆಟ್ ಪ್ರೇಮಿಗಳ ನೆನಪಿನಲ್ಲಿ ಹಸಿರಾಗಿ ಉಳಿಯುವುದರಲ್ಲಿ ಯಾವುದೇ ಸಂಶಯವಿಲ್ಲ.

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us