IND vs PAK: ಅಚ್ಚರಿಯಾದರೂ ಇದು ಸತ್ಯ; ಒಮ್ಮೆಯೂ ಭಾರತ- ಪಾಕ್ ಏಷ್ಯಾಕಪ್ ಫೈನಲ್ ಆಡಿಲ್ಲ..!
Asia Cup: ಏಷ್ಯಾಕಪ್‌ನಲ್ಲಿ ಇದುವರೆಗೆ ಭಾರತ 7 ಬಾರಿ, ಶ್ರೀಲಂಕಾ 5 ಬಾರಿ ಮತ್ತು ಪಾಕಿಸ್ತಾನ 2 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿವೆ.
ಏಷ್ಯಾಕಪ್ (Asia Cup) ಆಗಸ್ಟ್ 27 ರಿಂದ ಆರಂಭವಾಗಲಿದ್ದು, ಈ ಟೂರ್ನಿಯಲ್ಲಿ ಭಾರತ ತಂಡ ಆಗಸ್ಟ್ 28 ರಂದು ಪಾಕಿಸ್ತಾನದ ವಿರುದ್ಧ ಮೊದಲ ಪಂದ್ಯವನ್ನು ಆಡಲಿದೆ. ಈ ಟೂರ್ನಿಗಾಗಿ ಭಾರತ ತಂಡದ ತಯಾರಿ ಈಗಾಗಲೇ ಆರಂಭವಾಗಿದೆ. ಭಾರತ ತಂಡ ಆಗಸ್ಟ್ 20 ರಂದು ಏಷ್ಯಾಕಪ್‌ಗೆ ತೆರಳಲಿದ್ದು, ಈ ಪಂದ್ಯಕ್ಕೆ ಎರಡೂ ತಂಡಗಳು ಸಜ್ಜಾಗಿವೆ. ಆದರೆ ಅಚ್ಚರಿಯ ಸಂಗತಿ ಎಂದರೆ ಏಷ್ಯಾಕಪ್‌ನ ಕಳೆದ 14 ಸೀಸನ್ಗಳಲ್ಲಿ ಭಾರತ-ಪಾಕಿಸ್ತಾನ (India-Pakistan) ತಂಡಗಳ ನಡುವೆ ಒಂದೇ ಒಂದು ಫೈನಲ್ ಪಂದ್ಯ ನಡೆದಿಲ್ಲ. ಈ ಬಾರಿ ಈ ಎರಡು ತಂಡಗಳು ಫೈನಲ್ ತಲುಪುವ ನಿರೀಕ್ಷೆ ಎಲ್ಲರಲ್ಲಿದೆ. ಅಲ್ಲದೆ ಏಷ್ಯಾಕಪ್ ಇತಿಹಾಸದ ಎಲ್ಲಾ ಫೈನಲ್ ಪಂದ್ಯಗಳ ಬಗ್ಗೆಗಿನ ಮಾಹಿತಿ ಕೂಡ ಇಲ್ಲಿದೆ.
ಏಷ್ಯಾ ಕಪ್ ಫೈನಲ್ ಇತಿಹಾಸ..
- 1984ರಲ್ಲಿ ಮೊದಲ ಬಾರಿಗೆ ಏಷ್ಯಾಕಪ್ ಪಂದ್ಯಾವಳಿಯನ್ನು ಆಯೋಜಿಸಲಾಯಿತು. ಮೊದಲ ಸೀಸನ್ನಲ್ಲೇ ಭಾರತ ಟ್ರೋಫಿ ಗೆದ್ದಿತ್ತು.
- ಬಳಿಕ 1986 ರಲ್ಲಿ ನಡೆದ ಎರಡನೇ ಏಷ್ಯಾಕಪ್ ಪಂದ್ಯಾವಳಿಯಲ್ಲಿ ಶ್ರೀಲಂಕಾ ಚಾಂಪಿಯನ್ ಪಟ್ಟಕ್ಕೇರಿತ್ತು. ಹಾಲಿ ಚಾಂಪಿಯನ್ ಭಾರತ ವಿರುದ್ಧದ ಫೈನಲ್‌ನಲ್ಲಿ ಶ್ರೀಲಂಕಾ ಮೊದಲ ಬಾರಿಗೆ ಏಷ್ಯಾ ಕಪ್ ಗೆದ್ದುಕೊಂಡಿತು.
- 1988 ರಲ್ಲಿ ನಡೆದ ಏಷ್ಯಾಕಪ್‌ನ ಮೂರನೇ ಆವೃತ್ತಿಯಲ್ಲಿ ಭಾರತ ಪುನರಾಗಮನ ಮಾಡಿ, ದಿಲೀಪ್ ವೆಂಗ್‌ಸರ್ಕರ್ ನಾಯಕತ್ವದಲ್ಲಿ ಶ್ರೀಲಂಕಾವನ್ನು ಸೋಲಿಸಿ 2ನೇ ಬಾರಿಗೆ ಪ್ರಶಸ್ತಿ ಗೆದ್ದಿತ್ತು.
- 1991ರ ನಾಲ್ಕನೇ ಏಷ್ಯಾಕಪ್ ಆವೃತ್ತಿಯಲ್ಲಿ ಭಾರತ ತನ್ನ ಪ್ರಾಬಲ್ಯ ಮುಂದುವರಿಸಿತ್ತು. ಮೊಹಮ್ಮದ್ ಅಜರುದ್ದೀನ್ ನಾಯಕತ್ವದಲ್ಲಿ ಭಾರತ ತಂಡ ಫೈನಲ್‌ನಲ್ಲಿ ಶ್ರೀಲಂಕಾವನ್ನು ಸೋಲಿಸಿ ಮೂರನೇ ಬಾರಿಗೆ ಏಷ್ಯಾಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.
- ಐದನೇ ಆವೃತ್ತಿಯ ಏಷ್ಯಾಕಪ್ 1995ರಲ್ಲಿ ನಡೆದಿತ್ತು.ಈ ಆವೃತ್ತಿಯಲ್ಲೂ ಮೊಹಮ್ಮದ್ ಅಜರುದ್ದೀನ್ ನಾಯಕತ್ವದಲ್ಲಿ ಟೀಂ ಇಂಡಿಯಾ ಶ್ರೀಲಂಕಾವನ್ನು ಸೋಲಿಸಿ ಸತತ ಎರಡನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿತ್ತು.
- 1997 ರ ಏಷ್ಯಾ ಕಪ್‌ನ ಆರನೇ ಆವೃತ್ತಿಯಲ್ಲಿ, ದಿಗ್ಗಜ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಭಾರತ ತಂಡದ ನಾಯಕತ್ವ ವಹಿಸಿದ್ದರು. ಈ ಆವೃತ್ತಿಯಲ್ಲಿ ಭಾರತ ಸೋಲು ಅನುಭವಿಸಿದರೆ, ಶ್ರೀಲಂಕಾ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿತು.
- ಏಷ್ಯಾ ಕಪ್ 2000 ರ 7 ನೇ ಆವೃತ್ತಿಯಲ್ಲಿ ಪಾಕಿಸ್ತಾನ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಫೈನಲ್‌ನಲ್ಲಿ ಪಾಕಿಸ್ತಾನ ಶ್ರೀಲಂಕಾವನ್ನು ಸೋಲಿಸಿ ಕಪ್ ಗೆದ್ದಿತ್ತು.
- 2004ರಲ್ಲಿ ನಡೆದ 8ನೇ ಏಷ್ಯಾಕಪ್ ಸೀಸನ್ನಲ್ಲಿ ಶ್ರೀಲಂಕಾ ಮತ್ತೊಮ್ಮೆ ಅಮೋಘ ಪ್ರದರ್ಶನ ತೋರಿ ಮೂರನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿತು. ಫೈನಲ್‌ನಲ್ಲಿ ಶ್ರೀಲಂಕಾ ಭಾರತ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾಗಿತ್ತು.
- 9ನೇ ಆವೃತ್ತಿಯ ಏಷ್ಯಾಕಪ್‌ನಲ್ಲಿ ಶ್ರೀಲಂಕಾ ತನ್ನ ಪ್ರಾಬಲ್ಯವನ್ನು ಮುಂದುವರಿಸಿ, ಭಾರತ ತಂಡವನ್ನು ಸತತ ಎರಡನೇ ಬಾರಿಗೆ ಫೈನಲ್‌ನಲ್ಲಿ ಸೋಲಿಸಿ ಒಟ್ಟಾರೆ ನಾಲ್ಕನೇ ಬಾರಿಗೆ ಟ್ರೋಫಿಯನ್ನು ಗೆದ್ದುಕೊಂಡಿತು.
- 2010 ರಲ್ಲಿ ನಡೆದ ಏಷ್ಯಾ ಕಪ್‌ನ 10 ನೇ ಸೀಸನ್ನಲ್ಲಿ ನಾಯಕ ಧೋನಿ ನೇತೃತ್ವದ ಭಾರತ ತಂಡ ಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಗೆದ್ದಿತು.
- ಏತನ್ಮಧ್ಯೆ, ಪಾಕಿಸ್ತಾನವು 2012 ರಲ್ಲಿ ಏಷ್ಯಾಕಪ್ 11 ನೇ ಆವೃತ್ತಿಯಲ್ಲಿ ಎರಡನೇ ಬಾರಿಗೆ ಏಷ್ಯಾ ಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಪಾಕಿಸ್ತಾನ ಫೈನಲ್‌ನಲ್ಲಿ ಬಾಂಗ್ಲಾದೇಶವನ್ನು ಸೋಲಿಸಿತು.
- 2014ರಲ್ಲಿ ನಡೆದ ಏಷ್ಯಾಕಪ್‌ನ 12ನೇ ಆವೃತ್ತಿಯಲ್ಲಿ ಶ್ರೀಲಂಕಾ ಪುನರಾಗಮನ ಮಾಡಿ. ಐದನೇ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಶ್ರೀಲಂಕಾ ಈ ಬಾರಿಯ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿತು.
- 2016ರಲ್ಲಿ ನಡೆದ 13ನೇ ಆವೃತ್ತಿಯ ಏಷ್ಯಾಕಪ್‌ನಲ್ಲಿ ನಾಯಕ ಧೋನಿ ನಾಯಕತ್ವದಲ್ಲಿ ಭಾರತ ತಂಡ ಮತ್ತೊಮ್ಮೆ ಪ್ರಶಸ್ತಿ ಜಯಿಸಿತ್ತು. ಈ ಬಾರಿ ಭಾರತ ಫೈನಲ್‌ನಲ್ಲಿ ಬಾಂಗ್ಲಾದೇಶವನ್ನು ಸೋಲಿಸಿತು.
- ಏತನ್ಮಧ್ಯೆ, ಏಷ್ಯಾ ಕಪ್ 2018 ರ 14 ನೇ ಆವೃತ್ತಿಯಲ್ಲಿ, ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಬಾಂಗ್ಲಾದೇಶವನ್ನು ಸೋಲಿಸಿ ಚಾಂಪಿಯನ್ ಆಗಿತ್ತು.
ಇದನ್ನೂ ಓದಿ
– ಏಷ್ಯಾಕಪ್‌ನಲ್ಲಿ ಇದುವರೆಗೆ ಭಾರತ 7 ಬಾರಿ, ಶ್ರೀಲಂಕಾ 5 ಬಾರಿ ಮತ್ತು ಪಾಕಿಸ್ತಾನ 2 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿವೆ.
Published On - 3:05 pm, Wed, 17 August 22