Asia Cup 2022: ಏಷ್ಯಾಕಪ್ನ ನಾಲ್ಕನೇ ಪಂದ್ಯದಲ್ಲಿ ಹಾಂಗ್ ಕಾಂಗ್ ವಿರುದ್ದ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿತು. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಅರ್ಧಶತಕ ಬಾರಿಸಿದರು. ಕಿಂಗ್ ಕೊಹ್ಲಿ 44 ಎಸೆತಗಳಲ್ಲಿ 59 ರನ್ ಬಾರಿಸಿದರೆ, ಸೂರ್ಯಕುಮಾರ್ ಯಾದವ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಅಂತಿಮವಾಗಿ ಕೇವಲ 26 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 6 ಬೌಂಡರಿಯೊಂದಿಗೆ 68 ರನ್ ಚಚ್ಚಿದರು. ಪರಿಣಾಮ ನಿಗದಿತ 20 ಓವರ್ಗಳಲ್ಲಿ ಟೀಮ್ ಇಂಡಿಯಾ ಸ್ಕೋರ್ 2 ವಿಕೆಟ್ ನಷ್ಟಕ್ಕೆ 192 ಕ್ಕೆ ಬಂದು ನಿಂತಿತು.
ಈ ಬೃಹತ್ ಮೊತ್ತವನ್ನು ಚೇಸ್ ಮಾಡಿದ ಹಾಂಗ್ ಕಾಂಗ್ ತಂಡವು ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 152 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಇದರೊಂದಿಗೆ ಟೀಮ್ ಇಂಡಿಯಾ 40 ರನ್ಗಳ ಅಮೋಘ ಗೆಲುವು ದಾಖಲಿಸಿತು. ಅತ್ತ ಹಾಂಗ್ ಕಾಂಗ್ ತಂಡವು ಸೋತರೂ ಟೀಮ್ ಇಂಡಿಯಾ ವಿರುದ್ದ 150 ಕ್ಕೂ ಹೆಚ್ಚು ರನ್ ಕಲೆಹಾಕಿದ ಖುಷಿಯಲ್ಲಿದ್ದರು. ಅದರಲ್ಲೂ ತಂಡದ ಆಟಗಾರ ಇದೇ ಸಂದರ್ಭವನ್ನು ತನ್ನ ಪ್ರೀತಿಯನ್ನು ವ್ಯಕ್ತಪಡಿಸಲು ಬಳಸಿಕೊಂಡಿದ್ದು ವಿಶೇಷ.
ಹಾಂಗ್ ಕಾಂಗ್ ತಂಡ ಕಿಂಚಿತ್ ಶಾ ಪಂದ್ಯ ಮುಗಿಯುತ್ತಿದ್ದಂತೆ ಸ್ಟೇಡಿಯಂ ಗ್ಯಾಲರಿಯಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ ಈ ವೇಳೆ ಪಂದ್ಯ ವೀಕ್ಷಿಸಲು ಬಂದಿದ್ದ ತನ್ನ ಗೆಳತಿಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ಕಿಂಚಿತ್ ಶಾ ಗೆಳೆತಿಯ ಮುಂದೆ ಮೊಣಕಾಲೂರುವ ಮೂಲಕ ರಿಂಗ್ ತೋರಿಸಿ ಪ್ರಪೋಸ್ ಮಾಡಿದರು. ಇದಕ್ಕೆ ಗೆಳತಿ ಕೂಡ ಎಸ್ ಅನ್ನುತ್ತಿದ್ದಂತೆ ಬೆರಳಿಗೆ ರಿಂಗ್ ಹಾಕಿ ಇಬ್ಬರೂ ಅಪ್ಪಿಕೊಂಡರು. ಇತ್ತ ಕ್ರಿಕೆಟಿಗನ ಪ್ರಪೋಸ್ ನೋಡಿದ ಸ್ಟೇಡಿಯಂನಲ್ಲಿದ್ದ ಕ್ರಿಕೆಟ್ ಪ್ರೇಮಿಗಳು ಚಪ್ಪಾಳೆಯೊಂದಿಗೆ ಸಂಭ್ರಮಿಸಿದರು.
ಇದೀಗ ಹಾಂಗ್ ಕಾಂಗ್ ಆಟಗಾರನ ಈ ಪ್ರೊಪೋಸ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.