ಒಂದೇ ದಿನ 2 ತಂಡಗಳ ವಿರುದ್ಧ ಸೋತ ಟೀಮ್ ಇಂಡಿಯಾ
Hong Kong Sixes: ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯು 1993 ರಲ್ಲೇ ಪ್ರಾರಂಭವಾಗಿತ್ತು. 1997 ರವರೆಗೆ ಪ್ರತಿ ವರ್ಷ ಆಯೋಜನೆಗೊಂಡಿದ್ದ ಈ ಟೂರ್ನಿಯನ್ನು ಆ ಬಳಿಕ ಕೆಲ ಕಾಲ ಸ್ಥಗಿತಗೊಳಿಸಲಾಗಿತ್ತು. ಇದಾದ ಬಳಿಕ 2001 ರಲ್ಲಿ ಮತ್ತೆ ಶುರುವಾದ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಸತತ 13 ಸೀಸನ್ಗಳನ್ನು ಆಡಲಾಗಿದೆ.
ಹಾಂಗ್ ಕಾಂಗ್ನ ಮಿಷನ್ ರೋಡ್ ಗ್ರೌಂಡ್ನಲ್ಲಿ ನಡೆಯುತ್ತಿರುವ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಭಾರತ ತಂಡ ಬ್ಯಾಕ್ ಟು ಬ್ಯಾಕ್ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದೆ. ಇಂದು (ನ.8) ನಡೆದ ಮೊದಲ ಪಂದ್ಯದಲ್ಲಿ ಭಾರತ ಮತ್ತು ಕುವೈತ್ ತಂಡಗಳು ಮುಖಾಮುಖಿಯಾಗಿದ್ದವು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕುವೈತ್ ತಂಡವು ನಿಗದಿತ 6 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 105 ರನ್ ಕಲೆಹಾಕಿತು.
106 ರನ್ಗಳ ಗುರಿ ಬೆನ್ನತ್ತಿದ ಭಾರತದ ಪರ ಅಭಿಮನ್ಯು ಮಿಥುನ್ 29 ರನ್ಗಳಿಸಿದ್ದು ಗರಿಷ್ಠ ಸ್ಕೋರ್. ಪರಿಣಾಮ 5.4 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 79 ರನ್ಗಳಿಸಿ ಟೀಮ್ ಇಂಡಿಯಾ 27 ರನ್ಗಳಿಂದ ಸೋಲೊಪ್ಪಿಕೊಂಡಿತು.
ಇದಾದ ಬಳಿಕ ದ್ವಿತೀಯ ಪಂದ್ಯದಲ್ಲಿ ಭಾರತ ಮತ್ತು ಯುಎಇ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್ನಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಅಭಿಮನ್ಯು ಮಿಥುನ್ 16 ಎಸೆತಗಳಲ್ಲಿ 50 ರನ್ ಬಾರಿಸಿದರೆ, ದಿನೇಶ್ ಕಾರ್ತಿಕ್ 14 ಎಸೆತಗಳಲ್ಲಿ 42 ರನ್ಗಳಿಸಿದ್ದರು. ಈ ಮೂಲಕ 6 ಓವರ್ಗಳಲ್ಲಿ ಟೀಮ್ ಇಂಡಿಯಾ 107 ರನ್ ಕಲೆಹಾಕಿತು.
108 ರನ್ಗಳ ಗುರಿ ಬೆನ್ನತ್ತಿದ ಯುಎಇ ಪರ ಖಾಲಿದ್ ಶಾ 14 ಎಸೆತಗಳಲ್ಲಿ 50 ರನ್ ಸಿಡಿಸಿದ್ದಾರೆ. ಈ ಅರ್ಧಶತಕದ ನೆರವಿನೊಂದಿಗೆ ಯುಎಇ ತಂಡವು 5.5 ಓವರ್ಗಳಲ್ಲಿ 111 ರನ್ ಬಾರಿಸಿ 4 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಭಾರತ ತಂಡ: ಭರತ್ ಚಿಪ್ಲಿ , ಪ್ರಿಯಾಂಕ್ ಪಾಂಚಾಲ್ , ದಿನೇಶ್ ಕಾರ್ತಿಕ್ (ನಾಯಕ) , ಸ್ಟುವರ್ಟ್ ಬಿನ್ನಿ , ಅಭಿಮನ್ಯು ಮಿಥುನ್ , ಶಹಬಾಝ್ ನದೀಮ್, ರಾಬಿನ್ ಉತ್ತಪ್ಪ.

