
ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಮೆಂಟ್ ಇದೇ ಅಕ್ಟೋಬರ್ 30 ರಿಂದ ನವೆಂಬರ್ 1 ರವರೆಗೆ ನಡೆಯಲಿದೆ. ಈ ಟೂರ್ನಿಗಾಗಿ ಭುವನೇಶ್ವರ್ ಕುಮಾರ್ ನಾಯಕತ್ವದ ಟೀಂ ಇಂಡಿಯಾವನ್ನು ಸಹ ಬಿಸಿಸಿಐ ಪ್ರಕಟಿಸಿತ್ತು. ಆದರೆ ಈ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ಟೀಂ ಇಂಡಿಯಾದ ನಾಯಕನ ಬದಲಾವಣೆಯಾಗಿದೆ. ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ನ್ಯೂಜಿಲೆಂಡ್ ಪ್ರವಾಸಕ್ಕಾಗಿ ರಾಷ್ಟ್ರೀಯ ತಂಡಕ್ಕೆ ಸೇರ್ಪಡೆಯಾದ ಕಾರಣದಿಂದಾಗಿ ಅವರನ್ನು ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಮೆಂಟ್ನಿಂದ ಕೈಬಿಡಲಾಗಿದೆ. ಹೀಗಾಗಿ ಭುವನೇಶ್ವರ್ ಕುಮಾರ್ ಬದಲಿಗೆ ಸ್ಟಾರ್ ಆಲ್ರೌಂಡರ್ ಕೃನಾಲ್ ಪಾಂಡ್ಯ ಅವರನ್ನು ಟೀಂ ಇಂಡಿಯಾದ ಹೊಸ ನಾಯಕನನ್ನಾಗಿ ನೇಮಿಸಲಾಗಿದೆ.
ಭಾರತದ ನ್ಯೂಜಿಲೆಂಡ್ ಪ್ರವಾಸವು ಅಕ್ಟೋಬರ್ 22 ರಂದು ಆರಂಭವಾಗಲಿದೆ. ಇತ್ತ ಅಕ್ಟೋಬರ್ 30 ರಿಂದ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿ ಕೂಡ ಶುರುವಾಗಲಿದೆ. ಇದರಿಂದಾಗಿ ಭುವಿ ಈ ಪಂದ್ಯಾವಳಿಯಿಂದ ಹಿಂದೆ ಸರಿಯಬೇಕಾಯಿತು. ಭುವನೇಶ್ವರ್ ಕುಮಾರ್ ಬದಲಿಗೆ ಗುಜರಾತ್ ಟೈಟಾನ್ಸ್ ತಂಡದ ವೇಗಿ ಕುಲ್ವಂತ್ ಖೇಜ್ರೋಲಿಯಾ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.
ನಾಯಕತ್ವ ವಹಿಸಿಕೊಂಡ ನಂತರ ಕೃನಾಲ್ ಪಾಂಡ್ಯ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದು, ‘ಹಾಂಗ್ ಕಾಂಗ್ ಸಿಕ್ಸಸ್ನಲ್ಲಿ ಟೀಮ್ ಇಂಡಿಯಾವನ್ನು ಹುರಿದುಂಬಿಸುವಂತೆ ಅಭಿಮಾನಿಗಳನ್ನು ಕೇಳಿಕೊಂಡಿದ್ದಾರೆ. ಇನ್ನು ಕೃನಾಲ್ ಪಾಂಡ್ಯಗೆ ನಾಯಕತ್ವದ ಅನುಭವವೂ ಇದ್ದು, ಐಪಿಎಲ್ನಲ್ಲಿ 6 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ ಅನುಭವವನ್ನು ಹೊಂದಿದ್ದಾರೆ. ಅವರ ನಾಯಕತ್ವದಲ್ಲಿ ತಂಡವು ಮೂರು ಪಂದ್ಯಗಳನ್ನು ಗೆದ್ದಿದ್ದರೆ, ಎರಡು ಪಂದ್ಯಗಳಲ್ಲಿ ಸೋತಿದೆ.
2025 ರ ಹಾಂಗ್ ಕಾಂಗ್ ಸಿಕ್ಸಸ್ ಸೀಸನ್ ಭಾರತಕ್ಕೆ ನಿರಾಶಾದಾಯಕವಾಗಿತ್ತು. ರಾಬಿನ್ ಉತ್ತಪ್ಪ ಮತ್ತು ದಿನೇಶ್ ಕಾರ್ತಿಕ್ ಅವರಂತಹ ಆಟಗಾರರನ್ನು ಒಳಗೊಂಡ ಭಾರತೀಯ ತಂಡವು ಗುಂಪು ಹಂತದಲ್ಲಿ ದುರ್ಬಲ ಕುವೈತ್ ವಿರುದ್ಧ ಸೋತಿತು. ನಂತರ ತಂಡವು ಬೌಲ್ ಫೈನಲ್ನಲ್ಲಿ ನೇಪಾಳ, ಯುಎಇ ಮತ್ತು ಶ್ರೀಲಂಕಾ ವಿರುದ್ಧ ಸೋತು ಕೊನೆಯ ಸ್ಥಾನ ಗಳಿಸಿತು. ಇತ್ತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.
ಭಾರತ ತಂಡ: ಕೃನಾಲ್ ಪಾಂಡ್ಯ, ನಿತೀಶ್ ರಾಣಾ, ರಾಹುಲ್ ತ್ರಿಪಾಠಿ, ಶಶಾಂಕ್ ಸಿಂಗ್, ರಾಹುಲ್ ತೆವಾಟಿಯಾ, ಟಿ.ನಟರಾಜನ್ ಮತ್ತು ಕುಲ್ವಂತ್ ಖೆಜ್ರೋಲಿಯಾ.