ಪಾಕ್ ವಿರುದ್ಧ ಗೆದ್ದರೂ ಟೀಮ್ ಇಂಡಿಯಾದ ಸೆಮಿ ಫೈನಲ್ ಹಾದಿ ಕಠಿಣ

|

Updated on: Oct 07, 2024 | 11:51 AM

Womens T20 World Cup 2024: ಮಹಿಳಾ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡವು ತನ್ನ ಮುಂದಿನ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಆಡಲಿದೆ. ಅಕ್ಟೋಬರ್ 9 ರಂದು ನಡೆಯಲಿರುವ ಈ ಮ್ಯಾಚ್ ಕೂಡ ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ. ಏಕೆಂದರೆ ಅಕ್ಟೋಬರ್ 13 ರಂದು ನಡೆಯಲಿರುವ ತನ್ನ ಕೊನೆಯ ಪಂದ್ಯದಲ್ಲಿ ಭಾರತ ಎದುರಾಳಿ ಬಲಿಷ್ಠ ಆಸ್ಟ್ರೇಲಿಯಾ. ಅದಕ್ಕೂ ಮುನ್ನ ಲಂಕಾ ವಿರುದ್ಧ ಟೀಮ್ ಇಂಡಿಯಾ ಭರ್ಜರಿ ಗೆಲುವು ದಾಖಲಿಸಬೇಕು.

ಪಾಕ್ ವಿರುದ್ಧ ಗೆದ್ದರೂ ಟೀಮ್ ಇಂಡಿಯಾದ ಸೆಮಿ ಫೈನಲ್ ಹಾದಿ ಕಠಿಣ
Team India
Follow us on

ಮಹಿಳಾ ಟಿ20 ವಿಶ್ವಕಪ್​ನ 7ನೇ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ಭರ್ಜರಿ ಜಯ ಸಾಧಿಸಿ ಭಾರತ ತಂಡ ಗೆಲುವಿನ ಖಾತೆ ತೆರೆದಿದೆ. ಇದಾಗ್ಯೂ ಟೀಮ್ ಇಂಡಿಯಾ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲೇ ಉಳಿದುಕೊಂಡಿದೆ. ಇದಕ್ಕೆ ಮುಖ್ಯ ಕಾರಣ ಮೈನಸ್ ನೆಟ್​ ರನ್ ರೇಟ್. ನ್ಯೂಝಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ 58 ರನ್​ಗಳಿಂದ ಹೀನಾಯ ಸೋಲನುಭವಿಸಿದ್ದ ಟೀಮ್ ಇಂಡಿಯಾ -2.90 ನೆಟ್ ರನ್​ ರೇಟ್​ನೊಂದಿಗೆ ಕೊನೆಯ ಸ್ಥಾನಕ್ಕೆ ಕುಸಿದಿತ್ತು.

ಇತ್ತ ಪಾಕ್ ವಿರುದ್ಧ 6 ವಿಕೆಟ್​ಗಳ ಗೆಲುವು ದಾಖಲಿಸಿದರೂ ನೆಟ್ ರನ್ ರೇಟ್ ಉತ್ತಪಡಿಸಿಕೊಳ್ಳುವಲ್ಲಿ ಟೀಮ್ ಇಂಡಿಯಾ ಆಟಗಾರ್ತಿಯರು ವಿಫಲರಾಗಿದ್ದಾರೆ.
ಇದೇ ಕಾರಣದಿಂದಾಗಿ ಇದೀಗ ಭಾರತ ತಂಡವು -1.217 ನೆಟ್​ ರನ್ ರೇಟ್​ನೊಂದಿಗೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಒಂದು ವೇಳೆ ಪಾಕಿಸ್ತಾನ್ ತಂಡ ನೀಡಿದ 106 ರನ್​ಗಳ ಗುರಿಯನ್ನು ಟೀಮ್ ಇಂಡಿಯಾ 11 ಓವರ್​ಗಳಲ್ಲಿ ಚೇಸ್ ಮಾಡಿದ್ದರೆ +0.084 ನೆಟ್ ರನ್ ಪಡೆಯುತ್ತಿತ್ತು. ಆದರೆ ನಿಧಾನಗತಿಯ ಬ್ಯಾಟಿಂಗ್​ ಭಾರತದ ಪಾಲಿಗೆ ಮುಳುವಾಗಿದೆ.

ಏಕೆಂದರೆ ಟೀಮ್ ಇಂಡಿಯಾಗೆ ಇನ್ನುಳಿದಿರುವುದು ಕೇವಲ ಎರಡು ಪಂದ್ಯಗಳು ಮಾತ್ರ. ಈ 2 ಮ್ಯಾಚ್​ಗಳಲ್ಲೂ ಭಾರತ ತಂಡವು ಉತ್ತಮ ನೆಟ್ ರನ್ ರೇಟ್​ನೊಂದಿಗೆ ಗೆಲ್ಲಬೇಕು. ಒಂದು ವೇಳೆ ಪ್ರಯಾಸದ ಗೆಲುವು ದಾಖಲಿಸಿದರೆ ಸೆಮಿಫೈನಲ್ ಹಂತಕ್ಕೇರುವುದು ಅನುಮಾನ. ಏಕೆಂದರೆ ಗ್ರೂಪ್-ಎ ನಲ್ಲಿರುವ ಇತರೆ ತಂಡಗಳು ಉತ್ತಮ ನೆಟ್ ರನ್ ರೇಟ್ ಹೊಂದಿದೆ.

ಇಲ್ಲಿ ನ್ಯೂಝಿಲೆಂಡ್ (+2.900), ಆಸ್ಟ್ರೇಲಿಯಾ (+1.908) ಮತ್ತು ಪಾಕಿಸ್ತಾನ್ (+0.555) ತಂಡಗಳು ಪ್ಲಸ್ ನೆಟ್ ನೆಟ್ ರನ್ ರೇಟ್ ಹೊಂದಿದ್ದು, ಈ ತಂಡಗಳಲ್ಲಿ ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾ ಮುಂದಿನ ಮೂರು ಪಂದ್ಯಗಳಲ್ಲಿ ಎರಡು ಮ್ಯಾಚ್​ಗಳಲ್ಲಿ ಜಯ ಸಾಧಿಸಿದರೆ 6 ಅಂಕಗಳನ್ನು ಪಡೆಯಲಿದೆ. ಈ ಮೂಲಕ ಉತ್ತಮ ನೆಟ್ ರನ್​ ರೇಟ್​ನೊಂದಿಗೆ ಸೆಮಿಫೈನಲ್​ಗೆ ಎಂಟ್ರಿ ಕೊಡಬಹುದು.

ಅದೇ ಟೀಮ್ ಇಂಡಿಯಾ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳಲ್ಲಿ ಜಯ ಸಾಧಿಸಿದರೂ, ನೆಟ್ ರನ್ ರೇಟ್ ಅನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಒಂದು ವೇಳೆ ಮುಂದಿನ ಎರಡು ಪಂದ್ಯಗಳಲ್ಲೂ ಟೀಮ್ ಇಂಡಿಯಾ ಜಯ ಸಾಧಿಸಿ ನೆಟ್ ರನ್ ರೇಟ್​ನಲ್ಲಿ ಹಿಂದೆ ಉಳಿದರೆ, ಸೆಮಿಫೈನಲ್ ರೇಸ್​ನಿಂದ ಹೊರಬೀಳಬಹುದು.

ಇದನ್ನೂ ಓದಿ: ಕೊನೆಗೂ ಕಪ್ ಗೆದ್ದ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ..!

ಹೀಗಾಗಿ ಅಕ್ಟೋಬರ್ 9 ರಂದು ನಡೆಯಲಿರುವ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ಉತ್ತಮ ನೆಟ್ ರನ್ ರೇಟ್ ಪಡೆದುಕೊಳ್ಳಬೇಕಾದ ಅನಿವಾರ್ಯತೆ ಟೀಮ್ ಇಂಡಿಯಾ ಮುಂದಿದೆ. ಏಕೆಂದರೆ ಭಾರತ ತಂಡವು ತನ್ನ ಕೊನೆಯ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದ್ದು, ಈ ಪಂದ್ಯವು ಸೆಮಿಫೈನಲ್​ಗೆ ಅರ್ಹತೆ ಪಡೆಯಲು ಉಭಯ ತಂಡಗಳ ಪಾಲಿಗೆ ನಿರ್ಣಾಯಕವಾಗುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಬುಧವಾರ ನಡೆಯಲಿರುವ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಪಾಲಿಗೆ ಅಮೋಘ ಗೆಲುವು ಅನಿವಾರ್ಯ.