ಏಕದಿನ ವಿಶ್ವಕಪ್ 2023 ರಲ್ಲಿ ಬಲಿಷ್ಠ ಪಡೆಯೊಂದಿಗೆ ಕಣಕ್ಕಿಳಿದಿದ್ದ ಹಾಲಿ ಚಾಂಪಿಯನ್ ಇಂಗ್ಲೆಂಡ್ ಸತತ ಸೋಲುಗಳಿಂದ ಕಂಗೆಟ್ಟಿದೆ. ಆಡಿರುವ 6 ಪಂದ್ಯಗಳಲ್ಲಿ 5 ಮ್ಯಾಚ್ಗಳಲ್ಲಿ ಸೋಲುವ ಮೂಲಕ ಪ್ರಸ್ತುತ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ನ್ಯೂಝಿಲೆಂಡ್ ವಿರುದ್ಧದ ಸೋಲಿನೊಂದಿಗೆ ವಿಶ್ವಕಪ್ ಅಭಿಯಾನ ಆರಂಭಿಸಿದ್ದ ಇಂಗ್ಲೆಂಡ್ ಗೆದ್ದಿರುವುದು ಬಾಂಗ್ಲಾದೇಶ್ ವಿರುದ್ಧ ಮಾತ್ರ. ಇನ್ನುಳಿದಂತೆ ಅಫ್ಘಾನಿಸ್ತಾನ್, ಸೌತ್ ಆಫ್ರಿಕಾ, ಶ್ರೀಲಂಕಾ ಮತ್ತು ಭಾರತದ ವಿರುದ್ಧ ಸೋಲನುಭವಿಸಿದೆ.
ಇನ್ನು ಇಂಗ್ಲೆಂಡ್ ಉಳಿದಿರುವುದು ಕೇವಲ 3 ಮ್ಯಾಚ್ಗಳು ಮಾತ್ರ. ಇಲ್ಲಿ ಆಂಗ್ಲರ ಎದುರಾಳಿ ಆಸ್ಟ್ರೇಲಿಯಾ, ನೆದರ್ಲೆಂಡ್ಸ್ ಹಾಗೂ ಪಾಕಿಸ್ತಾನ್. ಈ ಪಂದ್ಯಗಳಲ್ಲಿ ಇಂಗ್ಲೆಂಡ್ ಗೆದ್ದರೆ ಸೆಮಿಫೈನಲ್ಗೇರುತ್ತಾ ಎಂದು ಕೇಳಿದ್ರೆ, ಅವಕಾಶವಂತು ಇದೆ ಎನ್ನಬಹುದು.
ಏಕೆಂದರೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಟೀಮ್ ಇಂಡಿಯಾ 12 ಅಂಕಗಳೊಂದಿಗೆ ಸೆಮಿಫೈನಲ್ ಹಾದಿಯನ್ನು ಸುಗಮಗೊಳಿಸಿದೆ. ಇನ್ನು ಸೌತ್ ಆಫ್ರಿಕಾ 10 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಇಲ್ಲಿ ಮೂರನೇ ಹಾಗೂ ನಾಲ್ಕನೇ ಸ್ಥಾನಗಳಲ್ಲಿರುವ ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು 8 ಅಂಕಗಳನ್ನು ಹೊಂದಿದೆ.
ಒಂದು ವೇಳೆ ಇಂಗ್ಲೆಂಡ್ ತಂಡವು ಮುಂದಿನ ಎಲ್ಲಾ ಮ್ಯಾಚ್ಗಳನ್ನು ಗೆದ್ದರೆ 8 ಅಂಕಗಳನ್ನು ಪಡೆಯಲಿದೆ. ಇತ್ತ ಅಂಕ ಪಟ್ಟಿಯಲ್ಲಿ 3ನೇ ಮತ್ತು 4ನೇ ಸ್ಥಾನದಲ್ಲಿಗಳಲ್ಲಿ ನ್ಯೂಝಿಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡವು ಮುಂದಿನ ಎಲ್ಲಾ ಪಂದ್ಯಗಳಲ್ಲಿ ಸೋತರೆ ಇಂಗ್ಲೆಂಡ್ ತಂಡ ನೆಟ್ ರನ್ ರೇಟ್ ಮೂಲಕ ನಾಲ್ಕನೇ ಸ್ಥಾನಕ್ಕೇರಬಹುದು.
ಹೀಗೆ ಆಗಬೇಕಿದ್ದರೆ ಇಂಗ್ಲೆಂಡ್ ತಂಡವು ಇತರೆ ತಂಡಗಳ ಫಲಿತಾಂಶವನ್ನು ಕೂಡ ಅವಲಂಭಿಸಬೇಕಾಗುತ್ತದೆ. ಅಂದರೆ ಮುಂದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್ ತಂಡಗಳು ಸೋಲಬೇಕು. ಪಾಕಿಸ್ತಾನ್ 2 ಮ್ಯಾಚ್ಗಳಲ್ಲಿ ಪರಾಜಯಗೊಳ್ಳಬೇಕು. ಹಾಗೆಯೇ ಅಫ್ಘಾನಿಸ್ತಾನ್, ನೆದರ್ಲೆಂಡ್ಸ್ ಅಥವಾ ಶ್ರೀಲಂಕಾ ತಂಡಗಳು 8 ಕ್ಕಿಂತ ಹೆಚ್ಚಿನ ಅಂಕಗಳನ್ನು ಸಂಪಾದಿಸಬಾರದು.
ಹೀಗಾದಲ್ಲಿ ನೆಟ್ ರನ್ ರೇಟ್ ಸಹಾಯದಿಂದ ಇಂಗ್ಲೆಂಡ್ ತಂಡವು ಟಾಪ್-4 ನಲ್ಲಿ ಸ್ಥಾನ ಪಡೆದು, ಸೆಮಿಫೈನಲ್ಗೇರಬಹುದು. ಆದರೆ ಹೀಗಾಗಬೇಕಿದ್ದರೆ ಆಟದೊಂದಿಗೆ ಅದೃಷ್ಟ ಕೂಡ ಕೈ ಹಿಡಿಯಬೇಕಾಗುತ್ತದೆ. ಪ್ರಸ್ತುತ ಇಂಗ್ಲೆಂಡ್ ತಂಡದ ಪ್ರದರ್ಶನ ಗಮನಿಸಿದರೆ, ಬಟ್ಲರ್ ಪಡೆ ಸೆಮಿಫೈನಲ್ಗೆ ಪ್ರವೇಶಿಸುವುದು ಅನುಮಾನ ಎಂದೇ ಹೇಳಬಹುದು.
ಇದನ್ನೂ ಓದಿ: Kuldeep Yadav 2.0: ಚೈನಾಮನ್ ಸ್ಪಿನ್ನರ್ನ ಕಮಾಲ್ ಹಿಂದಿದೆ ಕನ್ನಡಿಗನ ಕರಾಮತ್ತು..!