IPL 2026: ಐಪಿಎಲ್ಗೆ ಜಿಎಸ್‌ಟಿ ಶಾಕ್: ಟಿಕೆಟ್ ದರ ಮತ್ತಷ್ಟು ದುಬಾರಿ
GST Reform: ಕೇಂದ್ರ ಸರ್ಕಾರವು ಜಿಎಸ್‌ಟಿ ದರಗಳಲ್ಲಿ ಮಹತ್ವದ ಪರಿಷ್ಕರಣೆ ಘೋಷಿಸಿದೆ. ಈ ಹಿಂದಿನ ಶೇ 12 ಮತ್ತು 28ರ ಜಿಎಸ್‌ಟಿ ದರಗಳ ಸ್ಲ್ಯಾಬ್‌ಗಳನ್ನು ರದ್ದುಗೊಳಿಸಿ, ಶೇ 5 ಮತ್ತು 18ರ ಸ್ಲ್ಯಾಬ್‌ಗಳನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಇದರಿಂದ ಹಲವು ವಸ್ತುಗಳ ಬೆಲೆಗಳಲ್ಲಿ ಇಳಿಕೆಯಾಗಲಿದೆ. ಆದರೆ ಇದೇ ವೇಳೆ ಐಪಿಎಲ್ ಟಿಕೆಟ್‌ಗಳ ಮೇಲೆ ಜಿಎಸ್‌ಟಿ ದರಗಳನ್ನು ಹೆಚ್ಚಿಸಲಾಗಿದೆ.

ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆಯನ್ನು (GST) ಪರಿಷ್ಕರಣೆ ಮಾಡಿದೆ. ಈ ಪರಿಷ್ಕರಣೆಯಿಂದಾಗಿ ಹಲವು ವಸ್ತುಗಳ ಬೆಲೆಯಲ್ಲಿ ಭಾರೀ ಇಳಿಕೆ ಕಂಡು ಬರಲಿದೆ. ಆದರೆ ಇತ್ತ ಇದೇ ಪರಿಷ್ಕರಣೆಯಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2026) ಟಿಕೆಟ್‌ಗಳ ಬೆಲೆ ಮತ್ತಷ್ಟು ದುಬಾರಿಯಾಗಲಿದೆ.
ಹೌದು, ಕೇಂದ್ರ ಸರ್ಕಾರ ಜಿಎಸ್‌ಟಿ ಸ್ಲ್ಯಾಬ್‌ಗಳಲ್ಲಿ ಪರಿಷ್ಕರಣೆ ಮಾಡಿದ್ದು, ಶೇ 12 ಮತ್ತು ಶೇ 28ರ ಸ್ಲ್ಯಾಬ್ ಜಿಎಸ್‌ಟಿ ತೆರಿಗೆಗಳನ್ನು ರದ್ದು ಮಾಡಲಾಗಿದೆ. ಅಲ್ಲದೆ ಶೇ 5 ಮತ್ತು ಶೇ 18ರ ತೆರಿಗೆ ಸ್ಲ್ಯಾಬ್‌ಗಳನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಇದರಿಂದ ಅನೇಕ ವಸ್ತುಗಳ ಬೆಲೆಗಳು ಕಡಿಮೆಯಾಗಲಿದೆ.
ಆದರೆ ಇದೇ ವೇಳೆ ಐಪಿಎಲ್ ಟಿಕೆಟ್‌ಗಳ ಮೇಲಿನ ಜಿಎಸ್‌ಟಿ ದರವನ್ನು ಹೆಚ್ಚಿಸಲಾಗಿದೆ. ಅಂದರೆ ಕಳೆದ ಬಾರಿಗಿಂತ ಇನ್ಮುಂದೆ ಐಪಿಎಲ್ ಟಿಕೆಟ್ ಮೇಲೆ ಶೇ.12 ರಷ್ಟು ಜಿಎಸ್‌ಟಿ ದರ ಹೆಚ್ಚಾಗಲಿದೆ.
ಈ ಹಿಂದೆ, 1000 ರೂ. ಮೌಲ್ಯದ ಐಪಿಎಲ್ ಟಿಕೆಟ್‌ಗಳ ಮೇಲೆ 28% ಜಿಎಸ್‌ಟಿ ವಿಧಿಸಲಾಗುತ್ತಿತ್ತು. ಇದರಿಂದಾಗಿ ಟಿಕೆಟ್‌ನ ಒಟ್ಟು ಬೆಲೆ 1280 ರೂ.ಗಳಾಗುತ್ತಿದ್ದರು. ಇದೀಗ ಐಪಿಎಲ್ ಟಿಕೆಟ್‌ಗಳ ಮೇಲೆ ಶೇ.40 ರಷ್ಟು ಜಿಎಸ್‌ಟಿ ವಿಧಿಸಲಿದ್ದಾರೆ ಎಂದು ವರದಿಯಾಗಿದೆ.
ಅದರಂತೆ ಮುಂದಿನ ಸೀಸನ್ ಐಪಿಎಲ್ ವೇಳೆ ಟಿಕೆಟ್ ದರಗಳು ಮತ್ತಷ್ಟು ದುಬಾರಿಯಾಗಲಿದೆ. ಅಂದರೆ 1000 ರೂ. ಟಿಕೆಟ್ ಖರೀದಿಸಿದರೆ, ಅದರ ಮೇಲೆ ಶೇ.40 ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ. ಇದರಿಂದ 1000 ರೂ. ಟಿಕೆಟ್ ದರವು 1400 ರೂ. ಆಗಲಿದೆ ಎಂದು ವರದಿಯಾಗಿದೆ.
ಇದೇ ರೀತಿ ಅತೀ ಕಡಿಮೆ ಟಿಕೆಟ್ ದರವಾಗಿರುವ 500 ರೂ.ಗಳ ಟಿಕೆಟ್‌ನ ಹೊಸ ಬೆಲೆಯು 700 ರೂ. ಆಗಲಿದೆ. ಇದಕ್ಕೂ ಮುನ್ನ 500 ರೂ. ಟಿಕೆಟ್ ದರವು ಜಿಎಸ್‌ಟಿ ಸೇರಿ 640 ರೂ.ಗೆ ಮಾರಾಟ ಮಾಡಲಾಗುತ್ತಿತ್ತು. ಇನ್ನು 2000 ರೂ.ಗಳ ಟಿಕೆಟ್ಗೆ 2560 ರೂ.ಗಳ ಬದಲಿಗೆ 2800 ರೂ.ಗಳನ್ನು ಪಾವತಿಸಬೇಕಾಗುತ್ತದೆ.
ಅಂದರೆ ಹೊಸ ಜಿಎಸ್‌ಟಿ ಪರಿಷ್ಕರಣೆಯಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರ ಟಿಕೆಟ್ ದರಗಳು ಮತ್ತಷ್ಟು ಹೆಚ್ಚಾಗಲಿರುವುದು ಖಚಿತ. ಈ ದರವನ್ನು ಕಡಿಮೆ ಮಾಡಲು ಐಪಿಎಲ್ ಫ್ರಾಂಚೈಸಿಗಳು ಮುಂದಾಗಲಿದ್ದಾರಾ ಕಾದು ನೋಡಬೇಕಿದೆ.
ಅಭಿಮಾನಿಗಳ ಕೊರತೆ ಆತಂಕ:
ಐಪಿಎಲ್ ಟಿಕೆಟ್‌ಗಳ ಬೆಲೆಯು ದುಬಾರಿಯಾದರೆ ಅಭಿಮಾನಿಗಳ ಕೊರತೆ ಕಂಡು ಬರುವ ಸಾಧ್ಯತೆ ಹೆಚ್ಚು. ಇದೀಗ ಪರಿಷ್ಕೃತ ಜಿಎಸ್‌ಟಿ ದರದ ಬೆನ್ನಲ್ಲೇ ಕ್ರೀಡಾಂಗಣಕ್ಕೆ ಅಭಿಮಾನಿಗಳು ಬರುವುದು ಕಡಿಮೆಯಾಗಲಿದೆಯಾ ಎಂಬ ಆತಂಕವೊಂದು ಶುರುವಾಗಿದೆ. ಹೀಗಾಗಿಯೇ ಮುಂಬರುವ ಐಪಿಎಲ್ಗೂ ಮುನ್ನ ಟಿಕೆಟ್ ದರಗಳ ಬಗ್ಗೆ ಫ್ರಾಂಚೈಸಿಗಳ ನಡುವೆ ಚರ್ಚೆ ನಡೆಯುವ ಸಾಧ್ಯತೆ ಇದೆ.
ಇದನ್ನೂ ಓದಿ: ಸಿಕ್ಸ್ ಸಿಡಿಸದೇ ಬಾಬರ್ ಆಝಂ ವಿಶ್ವ ದಾಖಲೆ ಮುರಿದ ಬ್ರಿಯಾನ್ ಬೆನ್ನೆಟ್
ಮತ್ತೊಂದೆಡೆ ಮಾನ್ಯತೆ ಪಡೆದ ಕ್ರೀಡಾಕೂಟದ ಟಿಕೆಟ್‌ನ ಬೆಲೆ 500 ರೂ. ಆಗಿದ್ದರೆ, ಅದರ ಮೇಲೆ ಯಾವುದೇ ಜಿಎಸ್‌ಟಿ ಇರುವುದಿಲ್ಲ ಎಂದು ಸರ್ಕಾರ ತಿಳಿಸಿದೆ. ಐನೂರಕ್ಕಿಂತ ಹೆಚ್ಚಿನ ಬೆಲೆಯ ಟಿಕೆಟ್‌ಗಳಿಗೆ ಶೇ. 18 ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ. ಇದಲ್ಲದೆ, ಬೆಟ್ಟಿಂಗ್, ಜೂಜು, ಲಾಟರಿ, ಕುದುರೆ ರೇಸಿಂಗ್ ಮತ್ತು ಆನ್‌ಲೈನ್ ಮನಿ ಗೇಮ್ ಚಟುವಟಿಕೆಗಳ ಮೇಲೆ ಶೇ. 40 ರಷ್ಟು ಜಿಎಸ್‌ಟಿ ವಿಧಿಸಲು ಜಿಎಸ್‌ಟಿ ಕೌನ್ಸಿಲ್ ನಿರ್ಧರಿಸಿದೆ.
