Team India: ಗೆದ್ದರೆ ನಂಬರ್ 1, ಸೋತರೆ ನಂ. 2: ಟೀಮ್ ಇಂಡಿಯಾ ಮುಂದಿದೆ ಅಗ್ರ ಟಾರ್ಗೆಟ್

| Updated By: ಝಾಹಿರ್ ಯೂಸುಫ್

Updated on: Feb 19, 2022 | 2:38 PM

India vs West Indies 3rd T20: ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಟಿ20 ಸರಣಿಯನ್ನು ವಶಪಡಿಸಿಕೊಂಡಿದೆ. ಇನ್ನು ಈ ಸರಣಿಯ ಕೊನೆಯ ಪಂದ್ಯವು ಭಾನುವಾರ ನಡೆಯಲಿದೆ.

Team India: ಗೆದ್ದರೆ ನಂಬರ್ 1, ಸೋತರೆ ನಂ. 2: ಟೀಮ್ ಇಂಡಿಯಾ ಮುಂದಿದೆ ಅಗ್ರ ಟಾರ್ಗೆಟ್
Team India
Follow us on

ವೆಸ್ಟ್ ಇಂಡೀಸ್ ವಿರುದ್ದದ 2ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ಇಶಾನ್ ಕಿಶನ್ 2 ರನ್​ಗಳಿಸಿ ಔಟಾದರೆ, ರೋಹಿತ್ ಶರ್ಮಾ 19 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ವಿರಾಟ್ ಕೊಹ್ಲಿ 52 ರನ್​ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು. ಅಂತಿಮ ಹಂತದಲ್ಲಿ ರಿಷಭ್ ಪಂತ್ 28 ಎಸೆತಗಳಲ್ಲಿ 52 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 5 ವಿಕೆಟ್ ನಷ್ಟಕ್ಕೆ 186 ಕ್ಕೆ ತಂದು ನಿಲ್ಲಿಸಿದರು.

ಈ ಸವಾಲಿನ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ಉತ್ತಮ ಆರಂಭ ಪಡೆದಿತ್ತು. 59 ರನ್​ಗೆ 2 ವಿಕೆಟ್ ಕಳೆದುಕೊಂಡ ವೆಸ್ಟ್ ಇಂಡೀಸ್​ಗೆ ಆ ಬಳಿಕ ಆಸೆಯಾಗಿದ್ದು ನಿಕೋಲಸ್ ಪೂರನ್ ಹಾಗೂ ರೊವ್ಮನ್ ಪೊವೆಲ್. 3ನೇ ವಿಕೆಟ್​ಗೆ ಶತಕದ ಜೊತೆಯಾಟವಾಡುವ ಮೂಲಕ ಈ ಜೋಡಿ ಬಿರುಸಿನ ಅರ್ಧಶತಕ ಬಾರಿಸಿದರು. ಅದರಂತೆ ಕೊನೆಯ ಎರಡು ಓವರ್​ಗಳಲ್ಲಿ ವೆಸ್ಟ್ ಇಂಡೀಸ್​ಗೆ 28 ರನ್​ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಭುವನೇಶ್ವರ್ ಕುಮಾರ್ ಎಸೆತದಲ್ಲಿ ಪೂರನ್ ಔಟಾದರು. ಅದರಂತೆ ವೆಸ್ಟ್ ಇಂಡೀಸ್​ಗೆ ಕೊನೆಯ ಓವರ್​ನಲ್ಲಿ 25 ರನ್​ಗಳ ಅವಶ್ಯಕತೆಯಿತ್ತು.

ಕೊನೆಯ ಓವರ್​ನಲ್ಲಿ ಹರ್ಷಲ್ ಪಟೇಲ್ 16 ರನ್​ ನೀಡಿದರೂ ಟೀಮ್ ಇಂಡಿಯಾ 8 ರನ್​ಗಳಿಂದ ರೋಚಕ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಟಿ20 ಸರಣಿಯನ್ನು ವಶಪಡಿಸಿಕೊಂಡಿದೆ. ಇನ್ನು ಈ ಸರಣಿಯ ಕೊನೆಯ ಪಂದ್ಯವು ಭಾನುವಾರ ನಡೆಯಲಿದೆ. ಈ ಪಂದ್ಯದಲ್ಲೂ ಭಾರತ ಗೆದ್ದು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡರೆ ಟೀಮ್ ಇಂಡಿಯಾ ವಿಶ್ವದ ನಂಬರ್ 1 ಟಿ20 ತಂಡ ಎನಿಸಿಕೊಳ್ಳಲಿದೆ.

ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದ ಟಿ20 ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಲಿದೆ. ಸದ್ಯ ಇಂಗ್ಲೆಂಡ್ ತಂಡವು ಅಗ್ರಸ್ಥಾನದಲ್ಲಿದ್ದು, ಆದರೆ ಇದೀಗ ಸತತ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ ತಂಡವು ನಂಬರ್ ಸ್ಥಾನಕ್ಕೆ ಮುನ್ನುಗ್ಗಿದೆ. ಏಕೆಂದರೆ ನಂಬರ್ 1 ಸ್ಥಾನದಲ್ಲಿರುವ ಇಂಗ್ಲೆಂಡ್​ ತಂಡದ ರೇಟಿಂಗ್ 269 ಆಗಿದ್ದರೆ, ಭಾರತದ ರೇಟಿಂಗ್ 268 ಆಗಿದೆ. ಅಂದರೆ ಮುಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದರೆ ರೇಟಿಂಗ್​ನಲ್ಲಿ ಇಂಗ್ಲೆಂಡ್​ ಅನ್ನು ಹಿಂದಿಕ್ಕಿ ಅಗ್ರಪಟ್ಟ ಅಲಂಕರಿಸಲಿದೆ.

ಸದ್ಯ ಟಿ20 ಶ್ರೇಯಾಂಕದಲ್ಲಿ ಇಂಗ್ಲೆಂಡ್ (1) ಮತ್ತು ಭಾರತ (2) ಮೊದಲೆರಡು ಸ್ಥಾನದಲ್ಲಿದ್ದು, ಮೂರನೇ ಸ್ಥಾನದಲ್ಲಿ ಪಾಕಿಸ್ತಾನ (ರೇಟಿಂಗ್ 266) ತಂಡವಿದೆ. ಹೀಗಾಗಿ ಮುಂಬರುವ ಸರಣಿ ಮೂಲಕ ಈ ಮೂರು ತಂಡಗಳ ನಡುವೆ ಅಗ್ರಸ್ಥಾನಕ್ಕಾಗಿ ಭರ್ಜರಿ ಪೈಪೋಟಿ ಏರ್ಪಡಲಿದೆ. ಒಟ್ಟಿನಲ್ಲಿ ಭಾನುವಾರ ನಡೆಯಲಿರುವ ಕೊನೆಯ ಟಿ20 ಪಂದ್ಯದಲ್ಲಿ ಗೆಲ್ಲುವ ಮೂಲಕ ಟೀಮ್ ಇಂಡಿಯಾ ಅಗ್ರಸ್ಥಾನಕ್ಕೇರಲಿದೆಯಾ ಕಾದು ನೋಡಬೇಕಿದೆ.

ಇದನ್ನೂ ಓದಿ: AB de Villiers: ಸಿಡಿಲಬ್ಬರದ ಸಿಡಿಲಮರಿ ABDಯ ಈ 3 ದಾಖಲೆ ಮುರಿಯುವವರು ಯಾರು?

ಇದನ್ನೂ ಓದಿ: Rohit Sharma: ಬಾಬರ್ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸಿದ ರೋಹಿತ್ ಶರ್ಮಾ

ಇದನ್ನೂ ಓದಿ: Sunil narine: ಸಿಡಿಲಬ್ಬರದ ಅರ್ಧಶತಕ ಸಿಡಿಸಿ ದಾಖಲೆ ಬರೆದ ಸುನಿಲ್ ನರೈನ್

(How India Can Become No. 1 T20I Team By End Of West Indies Series)