Ranji Trophy: ಚೊಚ್ಚಲ ಪಂದ್ಯವನ್ನಾಡುತ್ತಿರುವ ಬೌಲರ್ ಎದುರು ಶೂನ್ಯಕ್ಕೆ ಔಟಾದ ಪೂಜಾರ! ವೃತ್ತಿ ಬದುಕು ಅಂತ್ಯ?
Cheteshwar Pujara: ತಮ್ಮ ಟೆಸ್ಟ್ ವೃತ್ತಿಜೀವನವನ್ನು ಉಳಿಸಲು ಆಡುತ್ತಿರುವ ಪೂಜಾರ, ಮುಂಬೈ ವಿರುದ್ಧದ 4 ಎಸೆತಗಳ ಇನ್ನಿಂಗ್ಸ್‌ನಲ್ಲಿ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಅವರು ಶೂನ್ಯಕ್ಕೆ ಔಟಾಗಬೇಕಾಯಿತು.
ಪ್ರಸಕ್ತ ಋತುವಿನ ರಣಜಿ ಟ್ರೋಫಿ (Ranji Trophy)ಯಲ್ಲಿ ಆಡುವ ಎಲ್ಲಾ ಆಟಗಾರರಿಗೆ ವಿಶೇಷವಾಗಿದೆ. ಆದರೆ, ಚೇತೇಶ್ವರ ಪೂಜಾರ (Cheteshwar Pujara) ಮತ್ತು ಅಜಿಂಕ್ಯ ರಹಾನೆ (Ajinkya Rahane)ಗೆ ಇದರ ಪ್ರಾಮುಖ್ಯತೆ ಸ್ವಲ್ಪ ಹೆಚ್ಚು. ಈ ಇಬ್ಬರೂ ಆಟಗಾರರು ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನವನ್ನು ಉಳಿಸಿಕೊಳ್ಳಲು ಈ ರಣಜಿ ಟ್ರೋಫಿಯಲ್ಲಿ ಆಡುತ್ತಿದ್ದಾರೆ. ವಿಶೇಷವೆಂದರೆ ಮೊದಲ ಪಂದ್ಯದಲ್ಲಿಯೇ ಇಬ್ಬರೂ ಆಟಗಾರರು ಪರಸ್ಪರ ವಿರುದ್ಧವಾಗಿ ಆಡುತ್ತಿದ್ದಾರೆ. ಪೂಜಾರ ಸೌರಾಷ್ಟ್ರ ಪರ ಆಡುತ್ತಿದ್ದರೆ ಅಜಿಂಕ್ಯ ರಹಾನೆ ಮುಂಬೈ ತಂಡದ ಭಾಗವಾಗಿದ್ದಾರೆ. ಇದೀಗ ಅಜಿಂಕ್ಯ ರಹಾನೆ ಸೌರಾಷ್ಟ್ರ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸುವ ಮೂಲಕ ಫಾರ್ಮ್‌ಗೆ ಮರಳುವ ಸೂಚನೆ ನೀಡಿದ್ದಾರೆ. ಆದರೆ, ಪೂಜಾರ ಫಾರ್ಮ್‌ನ ನಿಗೂಢ ಇನ್ನೂ ಬಗೆಹರಿಯುವಂತೆ ಕಾಣುತ್ತಿಲ್ಲ. ಮುಂಬೈ ವಿರುದ್ಧ ಪೂಜಾರ ಅವರ ಮೊದಲ ಇನ್ನಿಂಗ್ಸ್ 4 ಎಸೆತಗಳಲ್ಲಿ ಅಂತ್ಯಗೊಂಡಿತು.
ತಮ್ಮ ಟೆಸ್ಟ್ ವೃತ್ತಿಜೀವನವನ್ನು ಉಳಿಸಲು ಆಡುತ್ತಿರುವ ಪೂಜಾರ, ಮುಂಬೈ ವಿರುದ್ಧದ 4 ಎಸೆತಗಳ ಇನ್ನಿಂಗ್ಸ್‌ನಲ್ಲಿ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಅವರು ಶೂನ್ಯಕ್ಕೆ ಔಟಾಗಬೇಕಾಯಿತು. ಈ ವೈಫಲ್ಯ ಪೂಜಾರ ಮೇಲೆ ಇನ್ನಷ್ಟು ಒತ್ತಡ ಹೇರಲಿದೆ. ಏಕೆಂದರೆ, ಅವರ ವೃತ್ತಿಬದುಕಿನ ಮೇಲೆ ಕವಿದಿರುವ ಕರಾಳ ಮೋಡಗಳು ದಟ್ಟವಾಗತೊಡಗಿವೆ.
ಪೂಜಾರ ಶೂನ್ಯಕ್ಕೆ ಔಟ್
ಸೌರಾಷ್ಟ್ರ ವಿರುದ್ಧ ಮುಂಬೈ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 7 ವಿಕೆಟ್‌ಗೆ 544 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಇದಕ್ಕೆ ಪ್ರತಿಯಾಗಿ ಸೌರಾಷ್ಟ್ರದ ಮೊದಲ ಇನ್ನಿಂಗ್ಸ್ ಅತ್ಯಂತ ಕಳಪೆಯಾಗಿ ಆರಂಭಗೊಂಡಿದ್ದು, ಇದರಲ್ಲಿ ಚೇತೇಶ್ವರ ಪೂಜಾರ ಕೂಡ ಭಾಗಿಯಾದರು. ಉಳಿದ ಬ್ಯಾಟ್ಸ್ ಮನ್ ಗಳು ಹೇಗೋ ಖಾತೆ ತೆರೆದರು. ಆದರೆ ಪೂಜಾರಗೆ ಅದೂ ಆಗಲಿಲ್ಲ. ಸೌರಾಷ್ಟ್ರ ಕೇವಲ 75 ರನ್‌ಗಳಿಗೆ ತನ್ನ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡಿತು.
ಮುಂಬೈ ಬೌಲರ್ ಮೋಹಿತ್ ಅವಸ್ಥಿ ಎಸೆತದಲ್ಲಿ ಚೇತೇಶ್ವರ ಪೂಜಾರ ಎಲ್ ಬಿಡಬ್ಲ್ಯೂ ಆಗಿದ್ದರು. ಮುಂಬೈ ಬೌಲರ್ ಸೌರಾಷ್ಟ್ರದ ಅಗ್ರ ಕ್ರಮಾಂಕದಲ್ಲಿ ಬಿದ್ದ 5 ವಿಕೆಟ್‌ಗಳಲ್ಲಿ 3 ವಿಕೆಟ್ ಪಡೆದರು, ಇದರಲ್ಲಿ ಪೂಜಾರ ಅವರ ಎರಡನೇ ಬಲಿಯಾದರು. 30ರ ಹರೆಯದ ಬೌಲರ್ ಮೋಹಿತ್ ಅವಸ್ತಿಗೆ ಇದು ಮೊದಲ ಪ್ರಥಮ ದರ್ಜೆ ಪಂದ್ಯವಾಗಿತ್ತು. ತನ್ನ ಮೊದಲ ಪಂದ್ಯದಲ್ಲಿ, ಅವರು ಪೂಜಾರ ಅವರ ವೃತ್ತಿಜೀವನದ ಪ್ರಶ್ನಾರ್ಥಕ ಚಿಹ್ನೆಯನ್ನು ಆಳಗೊಳಿಸಿದರು.