ಪ್ರತಿಷ್ಠಿತ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ಸೆಂಚುರಿ ಸಿಡಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಇನ್ಮುಂದೆ 21 ವರ್ಷದ ನಿತೀಶ್ ಕುಮಾರ್ ರೆಡ್ಡಿ ಅವರ ಹೆಸರು ಸಹ ರಾರಾಜಿಸಲಿದೆ. ಈ ರಾರಾಜನೆಗೆ ಕಾರಣವಾಗಿದ್ದು 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಬಾರಿಸಿದ ಅಮೋಘ ಶತಕ. ಮಗನ ಬ್ಯಾಟ್ನಿಂದ ಭರ್ಜರಿ ಸೆಂಚುರಿ ಮೂಡಿಬರುತ್ತಿದ್ದಂತೆ ಅತ್ತ ಎಂಸಿಜಿ ಮೈದಾನದಲ್ಲಿ ಪಂದ್ಯದಲ್ಲಿ ವೀಕ್ಷಿಸುತ್ತಿದ್ದ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ ಮುತ್ಯಾಲ ರೆಡ್ಡಿ ಬಿಕ್ಕಿಳಿಸಿ ಅಳುತ್ತಿದ್ದರು. ಆದರೆ ಈ ಬಾರಿ ಮುತ್ಯಾಲ ರೆಡ್ಡಿ ಕಣ್ಣಿಂದ ಮೂಡಿಬಂದಿರುವುದು ಆನಂದಭಾಷ್ಪ.
ಕುತೂಹಲಕಾರಿ ವಿಷಯ ಎಂದರೆ ನಿತೀಶ್ ಕುಮಾರ್ ರೆಡ್ಡಿ ಇಂದು ಈ ಸಾಧನೆಗೈಯ್ಯಲು ಕಾರಣವಾಗಿದ್ದು ಕೂಡ ತಂದೆಯ ಕಣ್ಣೀರೇ. ಹೌದು, ನಿತೀಶ್ ಕುಮಾರ್ ರೆಡ್ಡಿ ಅವರದ್ದು ಮಧ್ಯಮ ವರ್ಗದ ಕುಟುಂಬ. ತಂದೆ ಕಷ್ಟಪಟ್ಟು ಸರ್ಕಾರಿ ನೌಕರಿಯನ್ನು ಗಿಟ್ಟಿಸಿಕೊಂಡಿದ್ದರು. ಇದರ ನಡುವೆ ಮಗನ ಕ್ರಿಕೆಟ್ ಪ್ರೀತಿಗೆ ಮುತ್ಯಾಲ ರೆಡ್ಡಿ ಬೆಂಬಲವಾಗಿ ನಿಂತರು.
ಅದೃಷ್ಟವೊ, ದುರಾದೃಷ್ಟವೊ… ಬಾಲ್ಯದಲ್ಲಿ ಮಗ ವೃತ್ತಿಜೀವನ ಆರಂಭಿಸುತ್ತಿದ್ದಂತೆ ಮುತ್ಯಾಲ ರೆಡ್ಡಿ ಅವರು ರಾಜಸ್ಥಾನಕ್ಕೆ ವರ್ಗಾವಣೆಗೊಂಡರು. ಆದರೆ ತಾನು ದೂರದ ರಾಜ್ಯಕ್ಕೆ ಹೋದರೆ ಮಗನ ಕ್ರಿಕೆಟ್ ಕೆರಿಯರ್ ಏನಾಗಲಿದೆ ಎಂಬ ಪ್ರಶ್ನೆಯೊಂದು ಅವರಲ್ಲಿ ಮೂಡಿತ್ತು.
ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಹಿಂದೆ ಮುಂದೆ ನೋಡಲಿಲ್ಲ. ಮಗನಿಗಾಗಿ ತನ್ನ ಸರ್ಕಾರಿ ಉದ್ಯೋಗಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದರು. ಅಲ್ಲದೆ ಹೈದರಾಬಾದ್ನಲ್ಲೇ ಉಳಿದು ನಿತೀಶ್ ಕುಮಾರ್ ರೆಡ್ಡಿಯ ವೃತ್ತಿಜೀವನಕ್ಕೆ ಬೆನ್ನೆಲುಬಾಗಿ ನಿಂತರು.
ಇದಾಗ್ಯೂ ನಿತೀಶ್ ಕುಮಾರ್ ರೆಡ್ಡಿ ಕ್ರಿಕೆಟ್ ಅನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂಬುದೇ ಸತ್ಯ. ಎಲ್ಲರಂತೆ ತಾನು ಕ್ರಿಕೆಟಿಗನಾಗಬೇಕೆಂದು ಅಭ್ಯಾಸ ನಡೆಸುತ್ತಿದ್ದ. ವಯಸ್ಸಿನ ಹುಡುಗಾಟಿಕೆಯೋ, ಯಾವುದರ ಮೇಲೂ ಸ್ಥಿರತೆಯಂತು ಇರಲಿಲ್ಲ.
ಆದರೆ ಅತ್ತ ಸರ್ಕಾರಿ ನೌಕರಿ ಕೈ ಬಿಟ್ಟಿದ್ದರಿಂದ ಮುತ್ಯಾಲ ರೆಡ್ಡಿ ವರ್ಷದಿಂದ ವರ್ಷಕ್ಕೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾ ಬಂದರು. ಅದೊಂದು ದಿನ ಹಣಕಾಸಿನ ಸಮಸ್ಯೆಯ ಕಾರಣ ತಂದೆ ಅಳುತ್ತಿರುವುದು ನಿತೀಶ್ ಕುಮಾರ್ ರೆಡ್ಡಿ ಕಣ್ಣಾರೆ ಕಂಡರು..!
ಆ ಒಂದು ಸನ್ನಿವೇಶ… ಅಪ್ಪನ ಆ ಒಂದು ಕಣ್ಣೀರಿನ ಕಾರಣ… ನಿತೀಶ್ ಕುಮಾರ್ ರೆಡ್ಡಿ ದೃಢ ನಿರ್ಧಾರವನ್ನು ತೆಗೆದುಕೊಂಡರು. ತನ್ನಿಂದ ಉಂಟಾದ ಎಲ್ಲಾ ಸಮಸ್ಯೆಗಳಿಗೂ ತಾನೇ ಪರಿಹಾರ ಕಂಡುಕೊಳ್ಳಬೇಕೆಂದು ತೀರ್ಮಾನಿಸಿದ. ಇದಕ್ಕಾಗಿ ಕಠಿಣ ಅಭ್ಯಾಸದಲ್ಲಿ ತೊಡಗಿಸಿಕೊಂಡ. ಒಂದಲ್ಲ ಒಂದು ದಿನ ಭಾರತದ ಪರ ಕಣಕ್ಕಿಳಿದು ತಂದೆ ಆಸೆಯನ್ನು ಈಡೇರಿಸಿಯೇ ತೀರುತ್ತೇನೆಂದು ಶಪಥ ಮಾಡಿದ.
ಹದಿಹರೆಯದ ನಿತೀಶ್ ರೆಡ್ಡಿಯ ಈ ನಿರ್ಧಾರಗಳು ಆತನ ವೃತ್ತಿಜೀವನದ ಚಿತ್ರಣವನ್ನೇ ಬದಲಿಸಿತು. ತಂದೆಗಾಗಿ ಹೆಚ್ಚಿನ ಹೊತ್ತು ಅಭ್ಯಾಸ ಮಾಡಲಾರಂಭಿಸಿದ. ಬ್ಯಾಟಿಂಗ್ ಜೊತೆ ಬೌಲಿಂಗ್ ಮಾಡಿಯೂ ಬೆವರಿಳಿಸಿದ. ವರ್ಷಗಳ ಅಂತರದಲ್ಲೇ ದಕ್ಷಿಣ ವಲಯದಲ್ಲಿ ಅತ್ಯುತ್ತಮ ಆಲ್ರೌಂಡರ್ ಆಗಿ ಗುರುತಿಸಿಕೊಂಡ.
ಅಷ್ಟೇ ಸಾಕಾಯಿತು… 2023 ರಲ್ಲಿ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು 20 ವರ್ಷದ ನಿತೀಶ್ ಕುಮಾರ್ ರೆಡ್ಡಿಯನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡರು. ಯುವ ಆಟಗಾರನ ಸಾಮರ್ಥ್ಯ ಗಮನಿಸಿ ಪ್ಲೇಯಿಂಗ್ ಇಲೆವೆನ್ನಲ್ಲೂ ಸತತ ಅವಕಾಶ ನೀಡಿದರು.
ಆ ಬಳಿಕ ನಿತೀಶ್ ಕುಮಾರ್ ರೆಡ್ಡಿ ಹಿಂತಿರುಗಿ ನೋಡಿಲ್ಲ ಎನ್ನಬಹುದು. ಭಾರತ ಟಿ20 ತಂಡಕ್ಕೆ ಆಯ್ಕೆಯಾದರು. ಅಲ್ಲೂ ತನ್ನ ಸಾಮರ್ಥ್ಯವನ್ನು ತೆರೆದಿಟ್ಟ ಯುವ ಆಟಗಾರನನ್ನು ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಟೆಸ್ಟ್ ತಂಡಕ್ಕೆ ಕರೆತಂದರು. ಅದು ಕೂಡ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ.
ಇದನ್ನೂ ಓದಿ: ಚೊಚ್ಚಲ ಶತಕದೊಂದಿಗೆ ಆಸ್ಟ್ರೇಲಿಯಾದಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದ ನಿತೀಶ್ ಕುಮಾರ್ ರೆಡ್ಡಿ
ಚೊಚ್ಚಲ ಟೆಸ್ಟ್ ಸರಣಿಯಲ್ಲೇ ಅದ್ಭುತ ಪ್ರದರ್ಶನ ನೀಡಿದರು. ಅನುಭವಿ ಆಸ್ಟ್ರೇಲಿಯಾ ಬೌಲರ್ಗಳ ವಿರುದ್ಧ ಸೆಟೆದು ನಿಲ್ಲುವ ಮೂಲಕ ಎಲ್ಲರ ಗಮನ ಸೆಳೆದರು. ಇದೀಗ ಮೆಲ್ಬೋರ್ನ್ ಮೈದಾನದಲ್ಲಿ ಚೊಚ್ಚಲ ಶತಕ ಸಿಡಿಸಿದ್ದಾರೆ. ಈ ಶತಕದ ಬೆನ್ನಲ್ಲೇ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ ಕಣ್ಣೀರು ಹಾಕಿದ್ದಾರೆ. ಆದರೆ ಈ ಬಾರಿ ನಿತೀಶ್ ನೋಡಿದ್ದು ತಂದೆ ಆನಂದಭಾಷ್ಪವನ್ನು ಎಂಬುದೇ ವಿಶೇಷ.