ಮೆಲ್ಬೋರ್ನ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಹಾಗೂ ಟೀಂ ಇಂಡಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಟೀಂ ಇಂಡಿಯಾ ದಿಟ್ಟ ಪ್ರದರ್ಶನ ನೀಡಿದೆ. ಆಸೀಸ್ ನೀಡಿದ 474 ರನ್‌ಗಳ ಬೃಹತ್ ಮೊತ್ತ ಬೆನ್ನಟ್ಟಿರುವ ಭಾರತ ಮೂರನೇ ದಿನದಾಟದಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 358 ರನ್ ಕಲೆಹಾಕಿದೆ.
ತಂಡ ಇಷ್ಟು ಸ್ಪರ್ಧಾತ್ಮಕ ಮೊತ್ತ ಕಲೆಹಾಕುವಲ್ಲಿ ತಂಡದ ಇಬ್ಬರು ಯುವ ಆಲ್ರೌಂಡರ್ಗಳ ಪಾತ್ರ ಪ್ರಮುಖವಾಗಿತ್ತು. ಒಂದೆಡೆ ತಂಡದ ಅನುಭವಿ ಬ್ಯಾಟರ್ಗಳು ಆಸೀಸ್ ಬೌಲರ್ಗಳ ಮುಂದೆ ಶರಣಾಗಿ ಪೆವಿಲಿಯನ್ ಪರೇಡ್ ನಡೆಸಿದರೆ, ಇನ್ನೊಂದೆಡೆ ಆಸೀಸ್ ನೆಲದಲ್ಲಿ ಹೆಚ್ಚು ಆಡಿರುವ ಅನುಭವವಿರದ ಹಾಗೂ ಇದೇ ಮೊದಲ ಬಾರಿಗೆ ಆಡುತ್ತಿರುವ ಆ ಇಬ್ಬರು ಆಲ್ರೌಂಡರ್ಗಳು ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿದ್ದಾರೆ.
ತಂಡದ ಟಾಪ್ ಆರ್ಡರ್ ಕೈಕೊಟ್ಟಾಗ 8ನೇ ಹಾಗೂ 9ನೇ ಕ್ರಮಾಂಕದಲ್ಲಿ ಜೊತೆಯಾದ ಇಬ್ಬರು ಆಲ್ರೌಂಡರ್ಗಳಾದ ನಿತೀಶ್ ಕುಮಾರ್ ರೆಡ್ಡಿ ಹಾಗೂ ವಾಷಿಂಗ್ಟನ್ ಸುಂದರ್ ಟೀಂ ಇಂಡಿಯದ ಮಾನ ಉಳಿಸಿದ್ದಾರೆ ಎಂದರೆ ತಪ್ಪಾಗಲಾರದು. ಒಂದು ಹಂತದಲ್ಲಿ 221 ರನ್ಗಳಿಗೆ 7 ವಿಕೆಟ್ ಪತನಗೊಂಡಿದ್ದಾಗ ಜೊತೆಯಾದ ಈ ಇಬ್ಬರು ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದರು.
8ನೇ ವಿಕೆಟ್‌ಗೆ ಈ ಇಬ್ಬರು ಆಟಗಾರರು ಬರೋಬ್ಬರಿ 127 ರನ್‌ಗಳ ಜೊತೆಯಾಟವನ್ನು ಮಾಡಿದರು. ಈ ಮೂಲಕ ಆಸೀಸ್ ನೆಲದಲ್ಲಿ ಅಪರೂಪದ ದಾಖಲೆಗಳನ್ನು ಮಾಡಿದ ಈ ಜೋಡಿ ಆಸ್ಟ್ರೇಲಿಯಾ ವಿರುದ್ಧ ಎಂಟನೇ ಅಥವಾ ಅದಕ್ಕಿಂತ ಕೆಳಗಿನ ವಿಕೆಟ್‌ಗೆ ಟೀಂ ಇಂಡಿಯಾ ಕಲೆಹಾಕಿದ ಎರಡನೇ ಗರಿಷ್ಠ ಜೊತೆಯಾಟ ಎಂಬ ದಾಖಲೆ ಬರೆಯಿತು.
ಇದಕ್ಕೂ ಮೊದಲು 2008ರಲ್ಲಿ ಹರ್ಭಜನ್ ಸಿಂಗ್ ಜೊತೆ ಸಚಿನ್ ತೆಂಡೂಲ್ಕರ್ 129 ರನ್ ಜೊತೆಯಾಟವಾಡಿದ್ದರು. ಇದರ ಜೊತೆಗೆ 2009ರ ನಂತರ ಆಸ್ಟ್ರೇಲಿಯಾದಲ್ಲಿ ಎಂಟನೇ ಅಥವಾ ಅದಕ್ಕಿಂತ ಕಡಿಮೆ ವಿಕೆಟ್‌ಗೆ ಟೀಂ ಇಂಡಿಯಾ ಪರ ದಾಖಲಾದ ಅತಿದೊಡ್ಡ ಜೊತೆಯಾಟ ಎಂಬ ದಾಖಲೆಯನ್ನೂ ಬರೆದಿದೆ.
ಇದಲ್ಲದೆ ಆಸ್ಟ್ರೇಲಿಯಾದಲ್ಲಿ ಟೆಸ್ಟ್‌ನ ಒಂದೇ ಇನ್ನಿಂಗ್ಸ್‌ನಲ್ಲಿ ಭಾರತದ ಎಂಟನೇ ಕ್ರಮಾಂಕ ಮತ್ತು ಒಂಬತ್ತನೇ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು 50+ ರನ್ ಗಳಿಸಿದ ಎರಡನೇ ನಿದರ್ಶನ ಇದಾಗಿದೆ. ಇದಕ್ಕೂ ಮೊದಲು 2008 ರಲ್ಲಿ ಅಡಿಲೇಡ್‌ನಲ್ಲಿ ನಡೆದ ಟೆಸ್ಟ್ನಲ್ಲಿ ಅನಿಲ್ ಕುಂಬ್ಳೆ (87) ಮತ್ತು ಹರ್ಭಜನ್ (63) ಈ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ 50+ ರನ್ ಕಲೆಹಾಕಿದ್ದರು.
ಇದಲ್ಲದೆ ಸುಂದರ್ ಮತ್ತು ನಿತೀಶ್ ಕುಮಾರ್ ಇಬ್ಬರೂ ಸೇರಿ ತಮ್ಮ ಇನ್ನಿಂಗ್ಸ್‌ನಲ್ಲಿ ತಲಾ 150 ಎಸೆತಗಳನ್ನು ಆಡಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ತಂಡದ ಎಂಟು ಮತ್ತು ಒಂಬತ್ತನೇ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಅಧಿಕ ಎಸೆತಗಳನ್ನು ಅಂದರೆ 150+ ಎಸೆತಗಳನ್ನು ಆಡಿದ ದಾಖಲೆ ಈ ಜೋಡಿಯ ಪಾಲಾಗಿದೆ. ಒಟ್ಟಾರೆ ಈ ಇಬ್ಬರೂ ಜಂಟಿಯಾಗಿ 285 ಎಸೆತಗಳನ್ನು ಅಂದರೆ ಸುಮಾರು 48 ಓವರ್‌ಗಳನ್ನು ಬ್ಯಾಟ್ ಮಾಡಿದರು.
ಸುಂದರ್ 162 ಎಸೆತಗಳಲ್ಲಿ ಒಂದು ಬೌಂಡರಿ ನೆರವಿನಿಂದ 50 ರನ್ ಗಳಿಸಿ ಔಟಾದರೆ, ಇತ್ತ ಅಜೇಯರಾಗಿ ಉಳಿದಿರುವ ನಿತೀಶ್ ಕುಮಾರ್ ರೆಡ್ಡಿ ಇದುವರೆಗೆ 176 ಎಸೆತಗಳನ್ನು ಎದುರಿಸಿದ್ದು ತಮ್ಮ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಮತ್ತು ಒಂದು ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
Published On - 3:44 pm, Sat, 28 December 24