T20 World Cup 2024: ಈ ವಿಶ್ವಕಪ್ ನನಗೆ ಬೇಕು: ರಾಹುಲ್ ದ್ರಾವಿಡ್
T20 World Cup 2024: ಕೋಚ್ ರಾಹುಲ್ ದ್ರಾವಿಡ್ ಅವರ ಸಾರಥ್ಯದಲ್ಲಿ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾಗೂ ಏಕದಿನ ವಿಶ್ವಕಪ್ 2023 ಫೈನಲ್ ಆಡಿದೆ. ಈ ಎರಡೂ ಫೈನಲ್ಗಳಲ್ಲೂ ಭಾರತ ತಂಡಕ್ಕೆ ಆಸ್ಟ್ರೇಲಿಯಾ ಸೋಲುಣಿಸಿತ್ತು. ಇದೀಗ ಟೀಮ್ ಇಂಡಿಯಾ ಮತ್ತೊಮ್ಮೆ ಫೈನಲ್ಗೆ ಪ್ರವೇಶಿಸಿದೆ. ಈ ಬಾರಿ ಟೀಮ್ ಇಂಡಿಯಾ ಎದುರಾಳಿ ಸೌತ್ ಆಫ್ರಿಕಾ.
T20 World Cup 2024: ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಕಣಕ್ಕಿಳಿಯಲಿದೆ. ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಇಂದು (ಜೂ.29) ನಡೆಯಲಿರುವ ಈ ಪಂದ್ಯವು ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರ ಕೊನೆಯ ಪಂದ್ಯ. ಅಂದರೆ ಈ ಪಂದ್ಯದ ಬಳಿಕ ದ್ರಾವಿಡ್ ಅವರು ಭಾರತ ತಂಡದ ಕೋಚ್ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ.
ಹೀಗಾಗಿಯೇ ಫೈನಲ್ ಪಂದ್ಯವು ರಾಹುಲ್ ದ್ರಾವಿಡ್ ಪಾಲಿಗೆ ತುಂಬಾ ಮಹತ್ವದ್ದು. ಏಕೆಂದರೆ ಆಟಗಾರನಾಗಿ ದ್ರಾವಿಡ್ ಒಮ್ಮೆಯೂ ವಿಶ್ವಕಪ್ ಅನ್ನು ಎತ್ತಿ ಹಿಡಿದಿಲ್ಲ. ಇದೀಗ ಕೋಚ್ ಆಗಿ ತಮ್ಮ ಬಹುದೊಡ್ಡ ಕನಸನ್ನು ಈಡೇರಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.
ಈ ಬಗ್ಗೆ ಮಾತನಾಡಿರುವ ರಾಹುಲ್ ದ್ರಾವಿಡ್, ನಾನು ಉತ್ತಮ ಕ್ರಿಕೆಟ್ ಆಡಲು ಬಯಸುತ್ತೇನೆ. ಆದರೆ ಒಬ್ಬ ವ್ಯಕ್ತಿಗಾಗಿ ಕಪ್ ಗೆಲ್ಲುವುದನ್ನು ನಾನು ಎದುರು ನೋಡುವುದಿಲ್ಲ. ಆಗಾಗಿ ನನಗೋಸ್ಕರ ವಿಶ್ವಕಪ್ ಗೆಲ್ಲಬೇಕು ಎಂಬುದನ್ನು ನಾನು ಇಲ್ಲಿ ಚರ್ಚಿಸಲು ಬಯಸುವುದಿಲ್ಲ ಎಂದು ತಿಳಿಸಿದ್ದಾರೆ.
ಅವರಿಗೋಸ್ಕರ ಗೆಲ್ಲಬೇಕೆಂದು ಎಂಬುದರಲ್ಲಿ ನನಗೆ ನಿಜವಾಗಿಯೂ ನಂಬಿಕೆಯಿಲ್ಲ. ಆದರೆ ಅವರಿಗೋಸ್ಕರ ಈ ಸಲ ಗೆಲ್ಲಬೇಕೆಂಬ ಉಲ್ಲೇಖವನ್ನು ನಾನು ಇಷ್ಟಪಡುತ್ತೇನೆ. ಏಕೆಂದರೆ ‘ನೀವು ಏಕೆ ಮೌಂಟ್ ಎವರೆಸ್ಟ್ ಅನ್ನು ಏರಲು ಬಯಸುತ್ತೀರಿ?’ ಎಂದು ಕೇಳಿದ್ರೆ, ನನ್ನ ಉತ್ತರ ‘ನಾನು ಮೌಂಟ್ ಎವರೆಸ್ಟ್ ಅನ್ನು ಏರಲು ಬಯಸುತ್ತೇನೆ. ಏಕೆಂದರೆ ಅದು ಅದು ಮೌಂಟ್ ಎವರೆಸ್ಟ್. ಅತ್ಯಂತ ಎತ್ತರದಲ್ಲಿದೆ’.
ಹೀಗಾಗಿ ನಾನು ಸಹ ವಿಶ್ವಕಪ್ ಗೆಲ್ಲಲು ಬಯಸುತ್ತೇನೆ. ಏಕೆಂದರೆ ಇದು ವಿಶ್ವಕಪ್. ಅತೀ ದೊಡ್ಡ ಟ್ರೋಫಿ. ಇದು ಯಾರಿಗಾಗಿಯೂ ಅಲ್ಲ, ಇಲ್ಲಿ ನಮ್ಮ ಧ್ಯೇಯ ವಿಶ್ವಕಪ್ನ ಗೆಲುವು ಎಂದು ರಾಹುಲ್ ದ್ರಾವಿಡ್ ಒತ್ತಿ ಹೇಳಿದ್ದಾರೆ.
ಇದಕ್ಕೂ ಮುನ್ನ ಸೋಷಿಯಲ್ ಮೀಡಿಯಾದಲ್ಲಿ #DoItForDravid ಎಂಬ ಹ್ಯಾಶ್ ಟ್ಯಾಗ್ ವೈರಲ್ ಆಗಿತ್ತು. ಅಲ್ಲದೆ ಟೀಮ್ ಇಂಡಿಯಾ ಕ್ರಿಕೆಟ್ ಪ್ರೇಮಿಗಳು ರಾಹುಲ್ ದ್ರಾವಿಡ್ ಅವರಿಗೋಸ್ಕರ ವಿಶ್ವಕಪ್ ಗೆಲ್ಲಬೇಕೆಂದು ಈ ಮೂಲಕ ಆಗ್ರಹಿಸಿದ್ದರು. ಆದರೀಗ ನನಗೋಸ್ಕರ ಗೆಲ್ಲಬೇಕೆಂದು ಬಯಸುವುದರಲ್ಲಿ ಅರ್ಥವಿಲ್ಲ. ಆದರೆ ನಮಗೆ ವಿಶ್ವಕಪ್ ಬೇಕೆಂದು ಗೆಲ್ಲಬೇಕು ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಇದನ್ನೂ ಓದಿ: Shafali Verma: ದಾಖಲೆಗಳ ಮೇಲೆ ದಾಖಲೆ ಬರೆದ ಶಫಾಲಿ ವರ್ಮಾ
ಫೈನಲ್ ಪಂದ್ಯ ಎಷ್ಟು ಗಂಟೆಗೆ ಶುರು?
ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಫೈನಲ್ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8 ಗಂಟೆಯಿಂದ ಶುರುವಾಗಲಿದೆ. ಬಾರ್ಬಡೋಸ್ನಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡಿದರೆ, ಮೀಸಲು ದಿದನಾಟದಲ್ಲಿ ಪಂದ್ಯ ಮುಂದುವರೆಯಲಿದೆ. ಅಂದರೆ ಫೈನಲ್ ಪಂದ್ಯಕ್ಕೆ ಜೂನ್ 30 ಅನ್ನು ಮೀಸಲು ದಿನವಾಗಿ ನಿಗದಿ ಮಾಡಲಾಗಿದೆ.