WTC Final: ಮುಂದಿನ 3 ಆವೃತ್ತಿಗಳ ಡಬ್ಲ್ಯುಟಿಸಿ ಫೈನಲ್ ಈ ದೇಶದಲ್ಲಿ ನಡೆಯಲಿದೆ; ಐಸಿಸಿ ಅಧಿಕೃತ ಹೇಳಿಕೆ

WTC Finals 2027, 2029, 2031: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ 2027, 2029 ಮತ್ತು 2031ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಗಳನ್ನು ಇಂಗ್ಲೆಂಡ್‌ನಲ್ಲಿ ಆಯೋಜಿಸುವುದಾಗಿ ಘೋಷಿಸಿದೆ. ಇಂಗ್ಲೆಂಡ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಇರುವ ಜನಪ್ರಿಯತೆ ಮತ್ತು ಹಿಂದಿನ ಯಶಸ್ವಿ ಆತಿಥ್ಯವನ್ನು ಗಮನಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ನಿರ್ಧಾರವು ಟೆಸ್ಟ್ ಕ್ರಿಕೆಟ್‌ನ ಭವಿಷ್ಯಕ್ಕೆ ಒಂದು ಪ್ರಮುಖ ಹೆಜ್ಜೆಯಾಗಿದೆ.

WTC Final: ಮುಂದಿನ 3 ಆವೃತ್ತಿಗಳ ಡಬ್ಲ್ಯುಟಿಸಿ ಫೈನಲ್ ಈ ದೇಶದಲ್ಲಿ ನಡೆಯಲಿದೆ; ಐಸಿಸಿ ಅಧಿಕೃತ ಹೇಳಿಕೆ
Wtc Finals

Updated on: Jul 20, 2025 | 7:43 PM

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಭವಿಷ್ಯದ ಬಗ್ಗೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಟೂರ್ನಮೆಂಟ್‌ನ ಮುಂದಿನ ಮೂರು ಆವೃತ್ತಿಗಳ ಫೈನಲ್ ಪಂದ್ಯಗಳನ್ನು ಯಾವ ದೇಶದಲ್ಲಿ ಆಡಲಾಗುವುದು ಎಂಬುದನ್ನು ಘೋಷಿಸಲಾಗಿದೆ. ಸಿಂಗಾಪುರದಲ್ಲಿ ನಡೆದ ಐಸಿಸಿ ಸಭೆಯ ನಂತರ, ಐಸಿಸಿ ಪತ್ರಿಕಾ ಪ್ರಕಟಣೆಯ ಮೂಲಕ ಈ ಮಾಹಿತಿಯನ್ನು ನೀಡಿದೆ. ವಿಶೇಷವೆಂದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಮುಂದಿನ ಮೂರು ಆವೃತ್ತಿಗಳ ಫೈನಲ್‌ಗಳನ್ನು ಕಳೆದ ಮೂರು ಆವೃತ್ತಿಗಳು ನಡೆದ ದೇಶವಾದ ಇಂಗ್ಲೆಂಡ್​ನಲ್ಲೇ ನಡೆಸಲು ತೀರ್ಮಾನಿಸಲಾಗಿದೆ.

WTC ಫೈನಲ್ ಬಗ್ಗೆ ICC ಪ್ರಕಟಣೆ

2027, 2029 ಮತ್ತು 2031 ರಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗಳ ಆತಿಥ್ಯದ ಹಕ್ಕುಗಳನ್ನು ಇಂಗ್ಲೆಂಡ್‌ಗೆ ನೀಡಲಾಗಿದೆ. ಟೆಸ್ಟ್ ಕ್ರಿಕೆಟ್ ಅನ್ನು ಹೆಚ್ಚು ರೋಮಾಂಚನಗೊಳಿಸುವತ್ತ ಈ ನಿರ್ಧಾರವು ಒಂದು ಪ್ರಮುಖ ಹೆಜ್ಜೆ ಎಂದು ಪರಿಗಣಿಸಲಾಗುತ್ತಿದೆ. ಮುಂದಿನ ಮೂರು ಆವೃತ್ತಿಗಳ ಫೈನಲ್ ಪಂದ್ಯವನ್ನು ಆಯೋಜಿಸಲು ಇಂಗ್ಲೆಂಡ್ ಅನ್ನು ಆಯ್ಕೆ ಮಾಡಿದ್ದಕ್ಕೆ ಹಲವು ಕಾರಣಗಳಿವೆ. ಅದರಲ್ಲಿ ಪ್ರಮುಖವಾದದ್ದು, ಇಂಗ್ಲೆಂಡ್ ಪ್ರಜೆಗಳು ಟೆಸ್ಟ್​ ಕ್ರಿಕೆಟ್​ಗೆ ನೀಡುವ ಪ್ರಾಮುಖ್ಯತೆ. ಇಲ್ಲಿಯವರೆಗೆ ಇದೇ ಇಂಗ್ಲೆಂಡ್​ನಲ್ಲಿ ಮೂರು ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್‌ಗಳನ್ನು ಆಡಲಾಗಿದೆ.

2021 ರಲ್ಲಿ ನಡೆದ ಮೊದಲ ಡಬ್ಲ್ಯುಟಿಸಿ ಫೈನಲ್ ಪಂದ್ಯನ್ಯೂಜಿಲೆಂಡ್ ಮತ್ತು ಭಾರತ ನಡುವೆ ಸೌತಾಂಪ್ಟನ್‌ನಲ್ಲಿ ನಡೆದರೆ, 2023 ರಲ್ಲಿ ನಡೆದ ಎರಡನೇ ಆವೃತ್ತಿಯ ಡಬ್ಲ್ಯುಟಿಸಿ ಫೈನಲ್ ಪಂದ್ಯ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಓವಲ್‌ನಲ್ಲಿ ನಡೆಯಿತು. ಮೂರನೇ ಆವೃತ್ತಿಯ ಫೈನಲ್ ಪಂದ್ಯವನ್ನು ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಲಾರ್ಡ್ಸ್‌ನಲ್ಲಿ ನಡೆಸಲಾಯಿತು.

‘ಇತ್ತೀಚಿನ ಫೈನಲ್‌ಗಳನ್ನು ಆಯೋಜಿಸುವಲ್ಲಿನ ಯಶಸ್ವಿ ದಾಖಲೆಯ ಆಧಾರದ ಮೇಲೆ, 2027, 2029 ಮತ್ತು 2031 ಆವೃತ್ತಿಗಳ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಅನ್ನು ಆಯೋಜಿಸುವ ಹಕ್ಕನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಗೆ ನೀಡಿದೆ’ ಎಂದು ಐಸಿಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

2 ವರ್ಷಗಳ ಬಳಿಕ ತವರು ತಂಡದ ಪರ ಬ್ಯಾಟ್ ಬೀಸಲಿರುವ ಕರುಣ್ ನಾಯರ್

2019 ರಲ್ಲಿ ಪ್ರಾರಂಭ

ಟೆಸ್ಟ್ ಕ್ರಿಕೆಟ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು 2019 ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅನ್ನು ಪ್ರಾರಂಭಿಸಲಾಯಿತು. ಈ ಪಂದ್ಯಾವಳಿಯು ಟೆಸ್ಟ್ ಸ್ವರೂಪವನ್ನು ಉತ್ತೇಜಿಸಲು ಮತ್ತು ಟಿ20 ಹಾಗೂ ಏಕದಿನ ಮಾದರಿಯ ಅಬ್ಬರದ ನಡುವೆ ಟೆಸ್ಟ್ ಕ್ರಿಕೆಟ್ ಅನ್ನು ಜೀವಂತವಾಗಿಡಲು ಒಂದು ಪ್ರಯತ್ನವಾಗಿದೆ. ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಫೈನಲ್, ವಿಶ್ವದ ಎರಡು ಅತ್ಯುತ್ತಮ ಟೆಸ್ಟ್ ತಂಡಗಳ ನಡುವೆ ನಡೆಯುತ್ತದೆ. ಇಲ್ಲಿಯವರೆಗೆ, ನ್ಯೂಜಿಲೆಂಡ್ (2021), ಆಸ್ಟ್ರೇಲಿಯಾ (2023) ಮತ್ತು ದಕ್ಷಿಣ ಆಫ್ರಿಕಾ (2025) ಈ ಪ್ರಶಸ್ತಿಯನ್ನು ಗೆದ್ದಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ