ಶ್ರೀಲಂಕಾದ ಅನುಭವಿ ಆಟಗಾರ ಏಂಜೆಲೊ ಮ್ಯಾಥ್ಯೂಸ್ ಮತ್ತು ಪಾಕಿಸ್ತಾನದ ಮಹಿಳಾ ಸ್ಪಿನ್ನರ್ ತುಬಾ ಹಸನ್ (Angelo Mathews and Pakistan’s spinner Tuba Hasan) ಅವರನ್ನು ಮೇ ತಿಂಗಳ ಐಸಿಸಿ ಅತ್ಯುತ್ತಮ ಕ್ರಿಕೆಟರ್ ಪ್ರಶಸ್ತಿ (ICC’s best cricketer for the month of May)ಗೆ ಆಯ್ಕೆ ಮಾಡಲಾಗಿದೆ. ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ICC World Test Championship) ಸರಣಿಯಲ್ಲಿ, ಬಾಂಗ್ಲಾದೇಶದ ವಿರುದ್ಧ ಮ್ಯಾಥ್ಯೂಸ್ 172 ಸರಾಸರಿಯಲ್ಲಿ 344 ರನ್ ಗಳಿಸಿದರು. ಚಿತ್ತಗಾಂಗ್‌ನಲ್ಲಿ ಮ್ಯಾಥ್ಯೂಸ್ 199 ರನ್ ಗಳಿಸಿದರೆ, ಮಿರ್‌ಪುರದಲ್ಲಿ ಅಜೇಯ 145 ರನ್ ಗಳಿಸಿದರು. ಮ್ಯಾಥ್ಯೂಸ್ ಅವರ 145 ರನ್‌ಗಳ ಆಧಾರದ ಮೇಲೆ ಶ್ರೀಲಂಕಾ 506 ರನ್ ಗಳಿಸಿ 10 ವಿಕೆಟ್‌ಗಳ ವ್ಯತ್ಯಾಸದೊಂದಿಗೆ ಪಂದ್ಯವನ್ನು ಗೆದ್ದುಕೊಂಡಿತು. ಈ ದೊಡ್ಡ ಗೆಲುವಿನ ಆಧಾರದ ಮೇಲೆ, ಶ್ರೀಲಂಕಾ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್‌ಗಳ ಪಟ್ಟಿಯಲ್ಲಿ ಪ್ರಮುಖ ಅಂಕಗಳನ್ನು ಗಳಿಸಿತು.
ಮ್ಯಾಥ್ಯೂಸ್ ಶ್ರೀಲಂಕಾದ ಮೊದಲ ಆಟಗಾರ
ಈ ಪ್ರಶಸ್ತಿ ಕೊಡುವುದನ್ನು ಐಸಿಸಿ ಕಳೆದ ವರ್ಷ ಜನವರಿಯಿಂದ ಆರಂಭಿಸಿದೆ. ಹೀಗಾಗಿ ಮ್ಯಾಥ್ಯೂಸ್ ಈ ಪ್ರಶಸ್ತಿಯನ್ನು ಸ್ವೀಕರಿಸಿದ ಮೊದಲ ಶ್ರೀಲಂಕಾ ಆಟಗಾರರಾಗಿದ್ದಾರೆ. ಈ ಪ್ರಶಸ್ತಿಯ ರೇಸ್‌ನಲ್ಲಿ, ಅವರು ತಮ್ಮದೇ ದೇಶದ ಅಸಿತ್ ಫೆರ್ನಾಂಡೋ ಮತ್ತು ಬಾಂಗ್ಲಾದೇಶದ ಮುಶ್ಫಿಕರ್ ರಹೀಮ್ ಅವರನ್ನು ಹಿಂದಿಕ್ಕಿದ್ದಾರೆ. ಗೆಲುವಿನ ನಂತರ ಮಾತನಾಡಿದ ಶ್ರೀಲಂಕಾದ ಮ್ಯಾಥ್ಯೂಸ್, ಈ ಪ್ರಶಸ್ತಿ ಪಡೆದಿದ್ದಕ್ಕೆ ನನಗೆ ತುಂಬಾ ಹೆಮ್ಮೆಯಾಗುತ್ತಿದೆ ಎಂದು ಹೇಳಿದ್ದಾರೆ. ಜೊತೆಗೆ ಈ ಪ್ರಶಸ್ತಿಗಾಗಿ ನಾಮನಿರ್ದೇಶನಗೊಂಡಿದ್ದ ಅಸಿತ್ ಫೆರ್ನಾಂಡೊ ಮತ್ತು ಮುಶ್ಫಿಕರ್ ರಹೀಮ್ ಅವರನ್ನು ಅಭಿನಂದಿಸಿದರು.
ಇದನ್ನೂ ಓದಿ:ICC New Chairman: ವಿಶ್ವ ಕ್ರಿಕೆಟ್ ಆಳಲು ಭಾರತ ರೆಡಿ! ಐಸಿಸಿ ನೂತನ ಅಧ್ಯಕ್ಷರಾಗಿ ಜೈ ಶಾ ಆಯ್ಕೆ?
ಚೊಚ್ಚಲ ಪಂದ್ಯದಲ್ಲೇ ಹಸನ್ ಆರ್ಭಟ
ಅದೇ ಸಮಯದಲ್ಲಿ, ಮಹಿಳಾ ವಿಭಾಗದಲ್ಲಿ ಈ ಪ್ರಶಸ್ತಿಯನ್ನು ಗೆದ್ದ 21 ವರ್ಷದ ಹಸನ್, ತಮ್ಮ ಮೊದಲ ಅಂತರರಾಷ್ಟ್ರೀಯ ಸರಣಿಯಲ್ಲಿ ಅದ್ಭುತ ಬೌಲಿಂಗ್ ಮಾಡಿದರು. ಶ್ರೀಲಂಕಾ ವಿರುದ್ಧದ 3 ಪಂದ್ಯಗಳ T20 ಸರಣಿಯಲ್ಲಿ ಅವರು ತಮ್ಮ ಉತ್ತಮ ಪ್ರದರ್ಶನಕ್ಕಾಗಿ ಸರಣಿ ಶ್ರೇಪ್ಠ ಪ್ರಶಸ್ತಿಗೂ ಭಾಜನರಾಗಿದ್ದರು. ಕರಾಚಿಯಲ್ಲಿ ತಮ್ಮ ಮೊದಲ ಪಂದ್ಯವನ್ನು ಆಡಿದ ಹಸನ್ರವರು 8 ರನ್ಗಳಿಗೆ 3 ವಿಕೆಟ್ಗಳನ್ನು ಪಡೆದರು. ಈ ಪ್ರಶಸ್ತಿಯ ರೇಸ್‌ನಲ್ಲಿ ಹಸನ್ ಅವರು ತಮ್ಮ ದೇಶದ ಅನುಭವಿ ಆಟಗಾರ್ತಿ ಬಿಸ್ಮಾ ಮರೂಫ್ ಮತ್ತು ಜೆರ್ಸಿಯ ಟ್ರಿನಿಟಿ ಸ್ಮಿತ್ ಅವರನ್ನು ಹಿಂದಿಕ್ಕಿದ್ದಾರೆ. ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ, ಹಸನ್ 3.66 ರ ಎಕಾನಮಿ ರೇಟ್ನಲ್ಲಿ ಒಟ್ಟು 5 ವಿಕೆಟ್ ಪಡೆದರು. ಪ್ರಶಸ್ತಿ ಪ್ರಕಟವಾದ ನಂತರ ಮಾತನಾಡಿದ ಮತದಾನ ಸಮಿತಿಯ ಸದಸ್ಯೆ ಮತ್ತು ಪಾಕಿಸ್ತಾನದ ಮಾಜಿ ಆಟಗಾರ್ತಿ ಸನಾ ಮಿರ್ ಅವರು ಪಾಕಿಸ್ತಾನ ಪರ ತಮ್ಮ ಚೊಚ್ಚಲ ಸರಣಿಯಲ್ಲಿ ಹಸನ್ ಹೆಚ್ಚಿನ ವಿಶ್ವಾಸವನ್ನು ತೋರಿಸಿದ್ದಾರೆ. ಹಸನ್ ಕೆಲವು ಸಮಯದಿಂದ ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಪಾಕಿಸ್ತಾನ ಪರ ತನ್ನ ಮೊದಲ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿರುವುದು ನಿಜವಾಗಿಯೂ ಹೃದಯಸ್ಪರ್ಶಿಯಾಗಿದೆ ಎಂದಿದ್ದಾರೆ. ಇದಲ್ಲದೆ ಈ ಪ್ರಶಸ್ತಿ ಗೆದ್ದ ಪಾಕಿಸ್ತಾನದ ಮೊದಲ ಮಹಿಳಾ ಕ್ರಿಕೆಟರ್ ಎಂಬ ಹೆಗ್ಗಳಿಕೆಗೂ ಹಸನ್ ಪಾತ್ರರಾಗಿದ್ದಾರೆ.