Champions Trophy 2025: ಪಾಕಿಸ್ತಾನಕ್ಕೆ ಹೋಗಲು ಒಪ್ಪದ ಅಂಪೈರ್ ನಿತಿನ್ ಮೆನನ್, ರೆಫರಿ ಜಾವಗಲ್ ಶ್ರೀನಾಥ್
Champions Trophy 2025: ಐಸಿಸಿ ಫೆಬ್ರವರಿ 19 ರಿಂದ ಆರಂಭವಾಗುವ ಚಾಂಪಿಯನ್ಸ್ ಟ್ರೋಫಿಗೆ ಅಂಪೈರ್ ಮತ್ತು ಮ್ಯಾಚ್ ರೆಫರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಆಶ್ಚರ್ಯಕರವಾಗಿ ಭಾರತದ ಪ್ರಸಿದ್ಧ ಅಂಪೈರ್ ನಿತಿನ್ ಮೆನನ್ ಮತ್ತು ಮಾಜಿ ಕ್ರಿಕೆಟರ್ ಜಾವಗಲ್ ಶ್ರೀನಾಥ್ ಅವರ ಹೆಸರುಗಳು ಪಟ್ಟಿಯಲ್ಲಿಲ್ಲ. ಪಾಕಿಸ್ತಾನಕ್ಕೆ ಹೋಗಲು ನಿರಾಕರಿಸಿದ್ದರಿಂದ ಅವರನ್ನು ಹೊರಗಿಟ್ಟಿರಬಹುದು ಎಂದು ವರದಿಯಾಗಿದೆ. ಪಟ್ಟಿಯಲ್ಲಿ 12 ಅಂಪೈರ್‌ಗಳು ಮತ್ತು 3 ಮ್ಯಾಚ್ ರೆಫರಿಗಳು ಸೇರಿದ್ದಾರೆ.

ಫೆಬ್ರವರಿ 19 ರಿಂದ ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿಗೆ ಐಸಿಸಿ, ಅಂಪೈರ್‌ಗಳ ಹಾಗೂ ಮ್ಯಾಚ್ ರೆಫರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ 12 ಅಂಪೈರ್‌ಗಳು ಹಾಗೂ ಮೂವರು ಮ್ಯಾಚ್ ರೆಫರಿಗಳು ಸೇರಿದ್ದಾರೆ. ಅಚ್ಚರಿಯಿಂದರೆ ಈ ಎರಡೂ ಪಟ್ಟಿಗಳಲ್ಲಿ ಭಾರತದ ಇಬ್ಬರು ಖ್ಯಾತ ಪಂದ್ಯದ ಅಧಿಕಾರಿಗಳ ಹೆಸರು ಕಾಣೆಯಾಗಿದೆ. ಅವರೆಂದರೆ ಐಸಿಸಿ ಅಂಪೈರ್‌ಗಳ ಪ್ಯಾನೆಲ್‌ನಲ್ಲಿ ಸ್ಥಾನ ಪಡೆದಿರುವ ನಿತಿನ್ ಮೆನನ್ ಹಾಗೂ ಅನುಭವಿ ಮ್ಯಾಚ್ ರೆಫರಿ ಕನ್ನಡಿಗ ಜಾವಗಲ್ ಶ್ರೀನಾಥ್. ವಾಸ್ತವವಾಗಿ ಈ ಇಬ್ಬರು ಐಸಿಸಿ ಆಯೋಜನೆ ಮಾಡುವ ಪ್ರತಿಯೊಂದು ಪಂದ್ಯಾವಳಿಯಲ್ಲೂ ಕಾಣಿಸಿಕೊಳ್ಳುತ್ತಿದ್ದರು. ಆದರೆ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಈ ಇಬ್ಬರು ಇರುವುದಿಲ್ಲ. ವರದಿಯ ಪ್ರಕಾರ, ಈ ಇಬ್ಬರು ಪಾಕಿಸ್ತಾನಕ್ಕೆ ಹೋಗಲು ನಿರಾಕರಿಸಿದ್ದು, ಹೀಗಾಗಿ ಐಸಿಸಿ ಈ ಇಬ್ಬರ ಹೆಸರನ್ನು ಪಟ್ಟಿಯಿಂದ ಕೈಬಿಟ್ಟಿದೆ ಎಂದು ಹೇಳಲಾಗುತ್ತಿದೆ.
ಚಾಂಪಿಯನ್ಸ್ ಟ್ರೋಫಿಗೆ ಅಂಪೈರ್‌ಗಳ ಪಟ್ಟಿ
ಕುಮಾರ್ ಧರ್ಮಸೇನ, ಕ್ರಿಸ್ ಗ್ಯಾಫ್ನಿ, ಮೈಕೆಲ್ ಗೌಫ್, ಆಡ್ರಿಯನ್ ಹೋಲ್ಡ್‌ಸ್ಟಾಕ್, ರಿಚರ್ಡ್ ಇಲ್ಲಿಂಗ್‌ವರ್ತ್, ರಿಚರ್ಡ್ ಕೆಟಲ್‌ಬರೋ, ಎಹ್ಸಾನ್ ರಜಾ, ಪಾಲ್ ರೈಫಲ್, ಶರಫುದ್ದೌಲಾ ಇಬ್ನೆ ಶಾಹಿದ್, ರಾಡ್ನಿ ಟಕರ್, ಅಲೆಕ್ಸ್ ವಾರ್ಫ್, ಜೋಯಲ್ ವಿಲ್ಸನ್.
ಮ್ಯಾಚ್ ರೆಫರಿಗಳ ಪಟ್ಟಿ
ಮೇಲೆ ಹೇಳಿದಂತೆ ಭಾರತದ ಮಾಜಿ ವೇಗದ ಬೌಲರ್ ಮತ್ತು ಬಹಳ ಅನುಭವಿ ಐಸಿಸಿ ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ಕೂಡ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದಾರೆ. ಅವರಿಗೂ ಪಂದ್ಯದ ರೆಫರಿಗಳ ಸಮಿತಿಯಲ್ಲಿ ಅವಕಾಶ ಸಿಕ್ಕಿಲ್ಲ. ಚಾಂಪಿಯನ್ಸ್ ಟ್ರೋಫಿಯಲ್ಲಿ ಡೇವಿಡ್ ಬೂನ್, ಆಂಡ್ರ್ಯೂ ಪೈಕ್ರಾಫ್ಟ್ ಮತ್ತು ರಂಜನ್ ಮದುಗಲ್ಲೆ ಪಂದ್ಯದ ರೆಫರಿಗಳಾಗಿರುತ್ತಾರೆ.
A world-class officiating team featuring 12 umpires and 3 match referees is set for the 2025 #ChampionsTrophy 🏏
Details 👇 https://t.co/z3tQ8vVQiS
— ICC (@ICC) February 5, 2025
ನಿತಿನ್ ಮೆನನ್ ಮತ್ತು ಜಾವಗಲ್ ಶ್ರೀನಾಥ್ ಅವರ ಅನುಭವ
ನಿತಿನ್ ಮೆನನ್ 40 ಟೆಸ್ಟ್ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಇದರಲ್ಲಿ ಅವರು 30 ಬಾರಿ ಫೀಲ್ಡ್ ಅಂಪೈರ್ ಮತ್ತು 10 ಬಾರಿ ಟಿವಿ ಅಂಪೈರ್ ಆಗಿದ್ದರು. ಇದಲ್ಲದೆ ಅವರು 75 ಏಕದಿನ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದು, 75 ಟಿ20 ಪಂದ್ಯಗಳಲ್ಲಿ ಅಂಪೈರ್ ಆಗಿದ್ದಾರೆ. ಇದರ ಜೊತೆಗೆ 13 ಮಹಿಳಾ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್ ಆಗಿದ್ದಾರೆ.
ಇತ್ತ ಜಾವಗಲ್ ಶ್ರೀನಾಥ್ ಅವರು ಪಂದ್ಯದ ರೆಫರಿಯಾಗಿ ಸುದೀರ್ಘ ವೃತ್ತಿಜೀವನವನ್ನು ಹೊಂದಿದ್ದಾರೆ. ಈ ದಂತಕಥೆ 79 ಟೆಸ್ಟ್ ಮತ್ತು 272 ಏಕದಿನ ಪಂದ್ಯಗಳಲ್ಲಿ ಮ್ಯಾಚ್ ರೆಫರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇದಲ್ಲದೆ, ಅವರು 136 ಟಿ20 ಪಂದ್ಯಗಳಲ್ಲಿಯೂ ಮ್ಯಾಚ್ ರೆಫರಿಯಾಗಿ ಕಾಣಿಸಿಕೊಂಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:34 pm, Wed, 5 February 25