Champions Trophy 2025: ಗಂಟೆಯೊಳಗೆ ಭಾರತ- ಪಾಕ್ ಪಂದ್ಯದ ಎಲ್ಲಾ ಟಿಕೆಟ್ ಸೋಲ್ಡ್ ಔಟ್
India vs Pakistan Champions Trophy Tickets: ಭಾರತ-ಪಾಕಿಸ್ತಾನ ನಡುವೆ ನಡೆಯಲ್ಲಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯದ ಟಿಕೆಟ್‌ಗಳು ಕ್ಷಣಾರ್ಧದಲ್ಲಿ ಮಾರಾಟವಾಗಿವೆ. ಫೆಬ್ರವರಿ 23ರಂದು ನಡೆಯಲ್ಲಿರುವ ಈ ಪಂದ್ಯದ ಟಿಕೆಟ್ಗೆ ಅಪಾರ ಬೇಡಿಕೆಯಿದ್ದು, ಇದಕ್ಕೆ ಪೂರಕವಾಗಿ ಐಸಿಸಿ ಕೂಡ ಟಿಕೆಟ್ ಬೆಲೆಯನ್ನು ಹೆಚ್ಚಿಸಿದೆ.ಆದಾಗ್ಯೂ ಸಾಕಷ್ಟು ಅಭಿಮಾನಿಗಳಿಗೆ ಈ ಪಂದ್ಯದ ಟಿಕೆಟ್ ಸಿಕ್ಕಿಲ್ಲ.

ಪಾಕಿಸ್ತಾನ ಹಾಗೂ ದುಬೈ ಆತಿಥ್ಯದಲ್ಲಿ ಹೈಬ್ರಿಡ್ ಮಾದರಿಯಲ್ಲಿ ನಡೆಯಲ್ಲಿರುವ ಚಾಂಪಿಯನ್ಸ್ ಟ್ರೋಫಿ ಆರಂಭವಾಕ್ಕೆ ಇನ್ನ ಕೆಲವೇ ದಿನಗಳು ಬಾಕಿ ಇವೆ. ಈ ಪಂದ್ಯಾವಳಿ ಫೆಬ್ರವರಿ 19 ರಿಂದ ಪ್ರಾರಂಭವಾಗಲಿದ್ದು, ಭಾರತ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಈ ಟೂರ್ನಿಗಾಗಿ ಈಗಾಗಲೇ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದ್ದು, ಕಳೆದ ಸೋಮವಾರದಿಂದಲೇ ಟೀಂ ಇಂಡಿಯಾದ ಪಂದ್ಯಗಳ ಟಿಕೆಟ್ ಮಾರಾಟವನ್ನು ಐಸಿಸಿ ಆರಂಭಿಸಿದೆ. ಆ ಪ್ರಕಾರ, ಇಂದು ಇಡೀ ಟೂರ್ನಿಯ ಹೈವೋಲ್ಟೇಜ್ ಕದನವಾದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಟಿಕೆಟ್ಗಳನ್ನು ಮಾರಾಟ ಮಾಡಲಾಯಿತು. ಎಂದಿನಂತೆ ಈ ಬಾರಿಯೂ ಈ ಪಂದ್ಯದ ಎಲ್ಲಾ ಟಿಕೆಟ್‌ಗಳು ಕೆಲವೇ ನಿಮಿಷಗಳಲ್ಲಿ ಮಾರಾಟವಾಗಿವೆ.
ನಿರೀಕ್ಷೆಯಂತೆ, ಫೆಬ್ರವರಿ 23 ರಂದು ನಡೆಯಲಿರುವ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಗರಿಷ್ಠ ಜನಸಂದಣಿ ಇತ್ತು. ಅದರಂತೆ ಕೇವಲ ಒಂದು ಗಂಟೆಯೊಳಗೆ ಪಂದ್ಯದ ಎಲ್ಲಾ ಟಿಕೆಟ್‌ಗಳು ಭೀಕರಿಯಾಗಿದ್ದು, ಟಿಕೆಟ್ಗಳಿಂದ ವಂಚಿತರಾದ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ.
ಮೂರು ಲಕ್ಷಕ್ಕೆ ಟಿಕೆಟ್ ಮಾರಾಟ
ಫೆಬ್ರವರಿ 23 ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಇನ್ನು 18 ದಿನಗಳು ಉಳಿದಿವೆ. ಆದಾಗ್ಯೂ ಈಗಾಗಲೇ ಈ ಪಂದ್ಯಕ್ಕೆ ಸಾಕಷ್ಟು ಹೈಪ್ ಸೃಷ್ಟಿಯಾಗಿದೆ. ಈ ಪಂದ್ಯವನ್ನು ವೀಕ್ಷಿಸಲು ಭಾರತ ಮತ್ತು ಪಾಕಿಸ್ತಾನದ ಸಾವಿರಾರು ಅಭಿಮಾನಿಗಳು ದುಬೈಗೆ ಆಗಮಿಸಲಿದ್ದಾರೆ. ಹೀಗಾಗಿ ಇದರ ಲಾಭ ಪಡೆಯುವ ಸಲುವಾಗಿ ಐಸಿಸಿ ಉಳಿದ ಪಂದ್ಯಗಳಿಗಿಂತ ಈ ಪಂದ್ಯದ ಟಿಕೆಟ್ ಬೆಲೆಯನ್ನು ದುಪ್ಪಟ್ಟಾಗಿಸಿದೆ. ಜಿಯೋ ನ್ಯೂಸ್ ವರದಿ ಮಾಡಿರುವಂತೆ ಈ ಪಂದ್ಯದ ಟಿಕೆಟ್‌ಗಳು ಹತ್ತಿರಹತ್ತಿರ ಮೂರು ಲಕ್ಷ ರೂ. ಬೆಲೆಗೆ ಮಾರಾಟವಾಗಿವೆ.
ದುಬೈನಲ್ಲಿ ಭಾರತ-ಪಾಕ್ ಮುಖಾಮುಖಿ
ವಾಸ್ತವವಾಗಿ ಟೀಂ ಇಂಡಿಯಾ ಗುಂಪು ಹಂತದಲ್ಲಿ ತನ್ನ ಎಲ್ಲಾ ಮೂರು ಪಂದ್ಯಗಳನ್ನು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಡಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಫೆಬ್ರವರಿ 20 ರಂದು ಬಾಂಗ್ಲಾದೇಶ ವಿರುದ್ಧ ಆಡಲಿದೆ. ಇದರ ನಂತರ, ಫೆಬ್ರವರಿ 23 ರಂದು ಬದ್ಧವೈರಿ ಪಾಕಿಸ್ತಾನವನ್ನು ಎದುರಿಸಲಿರುವ ಭಾರತ, ಆ ನಂತರ ಮಾರ್ಚ್ 2 ರಂದು ನ್ಯೂಜಿಲೆಂಡ್ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯವನ್ನು ಆಡಲಿದೆ. ಒಂದು ವೇಳೆ ಟೀಂ ಇಂಡಿಯಾ ಸೆಮಿಫೈನಲ್ ತಲುಪಿ ನಂತರ ಫೈನಲ್ ತಲುಪಿದರೆ, ಈ ಪಂದ್ಯವನ್ನು ಸಹ ದುಬೈನಲ್ಲಿಯೇ ಆಡಲಿದೆ.
ಫೆಬ್ರವರಿ 19 ರಿಂದ ಪಂದ್ಯಾವಳಿ ಪ್ರಾರಂಭ
ಫೆಬ್ರವರಿ 19 ರಿಂದ ಲಾಹೋರ್‌ನಲ್ಲಿ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದೆ. ಟೂರ್ನಿಯಲ್ಲಿ 8 ತಂಡಗಳು ಭಾಗವಹಿಸುತ್ತಿದ್ದು, ಭಾರತ ಹೊರತುಪಡಿಸಿ ಉಳಿದ 6 ತಂಡಗಳು ಪಾಕಿಸ್ತಾನದಲ್ಲಿ ಪಂದ್ಯಗಳನ್ನು ಆಡಲಿವೆ. ಲಾಹೋರ್ ಹೊರತುಪಡಿಸಿ, ಪಾಕಿಸ್ತಾನದ ಕರಾಚಿ ಮತ್ತು ರಾವಲ್ಪಿಂಡಿಯಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಪಂದ್ಯಾವಳಿಯಲ್ಲಿ ಗುಂಪು ಹಂತದ ಪಂದ್ಯಗಳ ನಂತರ 2 ಸೆಮಿಫೈನಲ್ ಪಂದ್ಯಗಳು ನಡೆಯಲ್ಲಿದ್ದು, ನಂತರ ಫೈನಲ್ ಪಂದ್ಯ ಮಾರ್ಚ್ 9 ರಂದು ನಡೆಯಲ್ಲಿದೆ. ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ಒಂದು ಗುಂಪಿನಲ್ಲಿದ್ದರೆ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ಇನ್ನೊಂದು ಗುಂಪಿನಲ್ಲಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ