ಚಾಂಪಿಯನ್ಸ್ ಟ್ರೋಫಿ ವೇಳೆ ಮಳೆ ಬಂದರೆ ಫಲಿತಾಂಶ ನಿರ್ಧರಿಸಿರುವುದು ಹೇಗೆ?
ICC Champions Trophy 2025: ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಒಟ್ಟು 15 ಪಂದ್ಯಗಳನ್ನಾಡಲಾಗುತ್ತದೆ. ಲೀಗ್ ಹಂತದಲ್ಲಿ 12 ಮ್ಯಾಚ್ಗಳು ನಡೆದರೆ, ನಾಕೌಟ್ ಹಂತದಲ್ಲಿ ಮೂರು ಪಂದ್ಯಗಳು ಜರುಗಲಿದೆ. ಈ ಮೂರು ಪಂದ್ಯಗಳಿಗೆ ಮಾತ್ರ ಮೀಸಲು ದಿನದಾಟವನ್ನು ನಿಗದಿ ಮಾಡಲಾಗಿದೆ. ಹೀಗಾಗಿ ಲೀಗ್ ಹಂತದ ಪಂದ್ಯಗಳು ರದ್ದಾದರೆ ಉಭಯ ತಂಡಗಳು ಅಂಕಗಳನ್ನು ಹಂಚಿಕೊಳ್ಳಲಿದ್ದಾರೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಿಗೆ ನಾಳೆ (ಫೆ.19) ಚಾಲನೆ ದೊರೆಯಲಿದೆ. ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಆಯೋಜಿಸುತ್ತಿರುವ ಈ ಟೂರ್ನಿಯು ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ. ಅಂದರೆ ಬಹುತೇಕ ಪಂದ್ಯಗಳು ಪಾಕಿಸ್ತಾನದಲ್ಲಿ ಜರುಗಿದರೆ, ಟೀಮ್ ಇಂಡಿಯಾದ ಪಂದ್ಯಗಳು ದುಬೈನಲ್ಲಿ ನಡೆಯಲಿದೆ. ಭಾರತ ತಂಡವನ್ನು ಪಾಕಿಸ್ತಾನದಲ್ಲಿ ಟೂರ್ನಿ ಆಡಲು ಹಿಂದೇಟು ಹಾಕಿದ್ದರಿಂದ ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಾಗುತ್ತಿದೆ. ಅದರಂತೆ ಭಾರತ ತಂಡವು ತನ್ನೆಲ್ಲಾ ಪಂದ್ಯಗಳನ್ನು ದುಬೈನಲ್ಲೇ ಆಡಲಿದೆ.
ಇನ್ನುಳಿದ ಮ್ಯಾಚ್ಗಳು ಪಾಕಿಸ್ತಾನದಲ್ಲಿ ನಡೆಯಲಿದೆ. ಒಂದು ವೇಳೆ ಈ ಪಂದ್ಯಗಳಿಗೆ ಮಳೆ ಅಡಚಣೆಯನ್ನು ಉಂಟು ಮಾಡಿದರೆ, ಅಥವಾ ಇನ್ನಿತರ ಕಾರಣಗಳಿಂದಾಗಿ ರದ್ದಾದರೆ ಫಲಿತಾಂಶ ನಿರ್ಧರಿಸುವುದು ಹೇಗೆ ಎಂಬ ಪ್ರಶ್ನೆ ಮೂಡುವುದು ಸಹಜ. ಈ ಎಲ್ಲಾ ಪ್ರಶ್ನೆಗೆ ಇಲ್ಲಿದೆ ಉತ್ತರ…
ಮಳೆ ಬಂದರೆ ಫಲಿತಾಂಶ ನಿರ್ಧರಿಸುವುದು ಹೇಗೆ?
- ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ವೇಳೆ ಮಳೆ ಬಂದು ಅಡಚಣೆಯನ್ನು ಉಂಟು ಮಾಡಿದರೂ ನಿಗದಿತ ಸಮಯದೊಳಗೆ ಪಂದ್ಯವನ್ನು ಮುಗಿಸಲು ಪ್ರಯತ್ನಿಸಲಾಗುತ್ತದೆ. ಒಂದು ವೇಳೆ ಪಂದ್ಯ ಸ್ಥಗಿತಗೊಂಡು, ಮತ್ತೆ ಶುರುವಾಗಲು ವಿಳಂಬವಾದರೆ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಗುರಿ ನೀಡಲಾಗುತ್ತದೆ.
- ಇನ್ನು ಪಂದ್ಯವು ಸಂಪೂರ್ಣ ಮಳೆಗೆ ಅಹುತಿಯಾದರೆ ಈ ಮ್ಯಾಚ್ ಅನ್ನು ರದ್ದುಗೊಳಿಸಲಾಗುತ್ತದೆ. ಆ ಬಳಿಕ ಉಭಯ ತಂಡಗಳಿಗೆ ತಲಾ ಒಂದೊಂದು ಅಂಕಗಳನ್ನು ನೀಡಲಾಗುತ್ತದೆ. ಇದಾಗ್ಯೂ ಲೀಗ್ ಹಂತದಲ್ಲಿ ಮೀಸಲು ದಿನದಾಟ ಇರುವುದಿಲ್ಲ.
ಮೀಸಲು ದಿನದಾಟ ಅನುಷ್ಠಾನ:
- ಒಂದು ವೇಳೆ ಸೆಮಿಫೈನಲ್ ಪಂದ್ಯಗಳ ವೇಳೆ ಮಳೆ ಬಂದು ಮ್ಯಾಚ್ ರದ್ದಾದರೆ, ಮೀಸಲು ದಿನದಾಟದಲ್ಲಿ ಪಂದ್ಯ ಮುಂದುವರೆಯಲಿದೆ. ಉದಾಹರಣೆಗೆ, ಮಾರ್ಚ್ 4 ರಂದು ನಿಗದಿಯಾಗಿರುವ ಸೆಮಿಫೈನಲ್ ಪಂದ್ಯಕ್ಕೆ ಮಳೆ ಅಡಚಣೆಯನ್ನು ಉಂಟು ಮಾಡಿದರೆ, ಮಾರ್ಚ್ 5 ರಂದು ಪಂದ್ಯವನ್ನು ಮುಂದುವರೆಸಲಾಗುತ್ತದೆ.
- ಮೀಸಲು ದಿನದಾಟದಲ್ಲೂ ಸೆಮಿಫೈನಲ್ ಪಂದ್ಯವನ್ನು ಆಯೋಜಿಸಲು ಸಾಧ್ಯವಾಗದೇ ಇದ್ದರೆ, ಲೀಗ್ ಹಂತದ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವ ತಂಡ ಫೈನಲ್ಗೆ ಅರ್ಹತೆ ಪಡೆಯಲಿದೆ.
- ಫೈನಲ್ ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡಿದರೆ, ಅಥವಾ ಹವಾಮಾನ ವೈಪರೀತ್ಯದಿಂದಾಗಿ ಪಂದ್ಯವನ್ನು ಆಯೋಜಿಸಲು ಸಾಧ್ಯವಾಗದೇ ಇದ್ದರೆ, ಪಂದ್ಯವನ್ನು ಮಾರ್ಚ್ 10 ಕ್ಕೆ ಮುಂದೂಡಲಾಗುತ್ತದೆ.
- ಮಾರ್ಚ್ 10 ರಂದು ಸಹ ಫೈನಲ್ ಪಂದ್ಯ ಆಯೋಜಿಸಲು ಸಾಧ್ಯವಾಗದಿದ್ದರೆ, ಉಭಯ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಗುತ್ತದೆ.
ಇದನ್ನೂ ಓದಿ: Champions Trophy 2025: ಚಾಂಪಿಯನ್ಸ್ ಟ್ರೋಫಿ ಟೂರ್ನಿಯಿಂದ 12 ಆಟಗಾರರು ಔಟ್
ಅಂದರೆ ಇಲ್ಲಿ ನಾಕೌಟ್ ಹಂತದ ಮೂರು ಪಂದ್ಯಗಳಿಗೆ ಮಾತ್ರ ಮೀಸಲು ದಿನದಾಟವನ್ನು ಘೋಷಿಸಲಾಗಿದೆ. ಇನ್ನುಳಿದ 12 ಪಂದ್ಯಗಳು ಕಾರಣಾಂತರಗಳಿಂದ ರದ್ದಾರೆ ಅಂಕಗಳನ್ನು ಹಂಚಲಾಗುತ್ತದೆ. ಇಲ್ಲಿ ಗೆಲ್ಲುವ ತಂಡಕ್ಕೆ 2 ಅಂಕಗಳನ್ನು ನಿಗದಿ ಮಾಡಲಾಗಿದ್ದು, ಪಂದ್ಯ ರದ್ದಾದರೆ ತಲಾ ಒಂದೊಂದು ಅಂಕಗಳನ್ನು ಹಂಚಿಕೊಳ್ಳಲಿದ್ದಾರೆ.