INDW vs ENGW: ಪ್ರತಿಕಾ ರಾವಲ್‌ಗೆ ದಂಡದ ಜೊತೆಗೆ ಡಿಮೆರಿಟ್ ಪಾಯಿಂಟ್ ನೀಡಿದ ಐಸಿಸಿ
ICC Fines Pratika Rawal: ಭಾರತ ಮಹಿಳಾ ಕ್ರಿಕೆಟ್ ತಂಡ ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್ ಅವರು ಐಸಿಸಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ದಂಡಕ್ಕೆ ಒಳಗಾಗಿದ್ದಾರೆ. ರನ್ ತೆಗೆದುಕೊಳ್ಳುವಾಗ ಮತ್ತು ಔಟಾದ ಬಳಿಕ ಬೌಲರ್‌ಗಳಿಗೆ ಡಿಕ್ಕಿ ಹೊಡೆದಿದ್ದಕ್ಕಾಗಿ ಅವರಿಗೆ ಪಂದ್ಯ ಶುಲ್ಕದ 10% ದಂಡ ವಿಧಿಸಲಾಗಿದೆ. ಇಂಗ್ಲೆಂಡ್ ತಂಡಕ್ಕೂ ನಿಧಾನಗತಿಯ ಓವರ್ ದರಕ್ಕಾಗಿ ದಂಡ ವಿಧಿಸಲಾಗಿದೆ. ಭಾರತವು ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಭಾರತ ಮಹಿಳಾ ಕ್ರಿಕೆಟ್ ತಂಡ (India Women’s Cricket Team) ಪ್ರಸ್ತುತ ಇಂಗ್ಲೆಂಡ್ ಪ್ರವಾಸದಲ್ಲಿದೆ. ಉಭಯ ತಂಡಗಳ ನಡುವಿನ ಟಿ20 ಸರಣಿ ಮುಗಿದಿದ್ದು, ಏಕದಿನ ಸರಣಿ ನಡೆಯುತ್ತಿದೆ. ಇತ್ತಂಡಗಳ ನಡುವಿನ ಮೊದಲ ಏಕದಿನ ಪಂದ್ಯವನ್ನು ಟೀಂ ಇಂಡಿಯಾ ನಾಲ್ಕು ವಿಕೆಟ್‌ಗಳಿಂದ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ಆದಾಗ್ಯೂ ಈ ಪಂದ್ಯದಲ್ಲಿ ತಂಡದ ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್ (Pratika Rawal) ಒಮ್ಮೆ ಅಲ್ಲ, ಎರಡು ಬಾರಿ ಐಸಿಸಿ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಅವರಿಗೆ ದಂಡ ವಿಧಿಸಲಾಗಿದೆ. ಐಸಿಸಿಯ (ICC) ನೀತಿ ಸಂಹಿತೆಯ ಅಡಿಯಲ್ಲಿ ಲೆವೆಲ್ 1 ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರತೀಕಾ ರಾವಲ್‌ಗೆ ದಂಡದ ಜೊತೆಗೆ ಡಿಮೆರಿಂಟ್ ಅಂಕವನ್ನು ಸಹ ನೀಡಲಾಗಿದೆ.
ಪ್ರತೀಕಾ ರಾವಲ್‌ಗೆ ದಂಡ
ವಾಸ್ತವವಾಗಿ, ಭಾರತದ ಇನ್ನಿಂಗ್ಸ್‌ನ 18 ನೇ ಓವರ್‌ನಲ್ಲಿ, ಪ್ರತಿಕಾ ರಾವಲ್ ರನ್ ತೆಗೆದುಕೊಳ್ಳುವಾಗ ಇಂಗ್ಲೆಂಡ್ ಬೌಲರ್ ಲಾರೆನ್ ಫಿಲ್ಲರ್‌ಗೆ ಉದ್ದೇಶ ಪೂರ್ವಕವಾಗಿ ಡಿಕ್ಕಿ ಹೊಡೆದರು. ಇದಲ್ಲದೆ, ಮುಂದಿನ ಓವರ್‌ನಲ್ಲಿ ಅವರು ಔಟಾದ ಬಳಿಕ ಪೆವಿಲಿಯನ್‌ಗೆ ಹಿಂತಿರುಗುವಾಗ ಬೌಲರ್ ಸೋಫಿ ಎಕ್ಲೆಸ್ಟೋನ್‌ಗೆ ಡಿಕ್ಕಿ ಹೊಡೆದರು. ಈ ಕಾರಣದಿಂದಾಗಿ, ಪ್ರತಿಕಾ ರಾವಲ್‌ಗೆ ಪಂದ್ಯ ಶುಲ್ಕದ 10 ಪ್ರತಿಶತ ದಂಡ ವಿಧಿಸಲಾಗಿದ್ದು, ಡಿಮೆರಿಟ್ ಪಾಯಿಂಟ್ ಕೂಡ ನೀಡಲಾಗಿದೆ.
ಪ್ರತಿಕಾ ರಾವಲ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು ಅದಕ್ಕಾಗಿ ಕ್ಷಮೆಯಾಚಿಸಿದ್ದಾರೆ. ಈ ಕಾರಣದಿಂದಾಗಿ ಈಗ ಈ ಬಗ್ಗೆ ಯಾವುದೇ ಅಧಿಕೃತ ವಿಚಾರಣೆಯ ಅಗತ್ಯವಿಲ್ಲ ಎಂದು ಐಸಿಸಿ ತಿಳಿಸಿದೆ. ಇತ್ತ ಇಂಗ್ಲೆಂಡ್ ಮಹಿಳಾ ತಂಡಕ್ಕೂ ಕೂಡ ನಿಧಾನಗತಿಯ ಓವರ್ ದರದಿಂದಾಗಿ ಮೊದಲ ಏಕದಿನ ಪಂದ್ಯದಲ್ಲಿ ಪಂದ್ಯ ಶುಲ್ಕದ ಶೇಕಡಾ 5 ರಷ್ಟು ದಂಡ ವಿಧಿಸಲಾಗಿದೆ. ಇಂಗ್ಲೆಂಡ್ ನಾಯಕಿ ನ್ಯಾಟ್ ಸಿವರ್ ಬ್ರಂಟ್ ಕೂಡ ತನ್ನ ತಪ್ಪನ್ನು ಒಪ್ಪಿಕೊಂಡಿರುವ ಕಾರಣ ಯಾವುದೇ ವಿಚಾರಣೆ ಇರುವುದಿಲ್ಲ ಎಂದು ಐಸಿಸಿ ತಿಳಿಸಿದೆ.
Womens Asia Cup 2024: ಹರ್ಮನ್- ರಿಚಾ ಸಿಡಿಲಬ್ಬರ; ಇತಿಹಾಸ ಸೃಷ್ಟಿಸಿದ ಭಾರತ ವನಿತಾ ಪಡೆ
ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಗೆಲುವು
ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವನ್ನು ಟೀಂ ಇಂಡಿಯಾ ನಾಲ್ಕು ವಿಕೆಟ್‌ಗಳಿಂದ ಗೆದ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಮಹಿಳಾ ತಂಡ 50 ಓವರ್‌ಗಳಲ್ಲಿ ಆರು ವಿಕೆಟ್‌ಗಳ ನಷ್ಟಕ್ಕೆ 258 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಭಾರತೀಯ ಮಹಿಳಾ ತಂಡ ಇನ್ನೂ 10 ಎಸೆತಗಳು ಬಾಕಿ ಇರುವಾಗಲೇ ಪಂದ್ಯವನ್ನು ಗೆದ್ದುಕೊಂಡಿತು. ಮೊದಲ ಏಕದಿನ ಪಂದ್ಯದಲ್ಲಿ ದೀಪ್ತಿ ಶರ್ಮಾ ಔಟಾಗದೆ 62 ರನ್ ಗಳಿಸಿದರೆ, ಸ್ಮೃತಿ ಮಂಧಾನ 28 ರನ್ ಮತ್ತು ಜೆಮಿಮಾ ರೊಡ್ರಿಗಸ್ 48 ರನ್‌ಗಳ ಕಾಣಿಕೆ ನೀಡಿದರು. ಇನ್ನು ದಂಡಕ್ಕೆ ಗುರಿಯಾಗಿರುವ ಪ್ರತೀಕಾ ರಾವಲ್ ಕೂಡ 36 ರನ್‌ಗಳ ಕೊಡುಗೆ ನೀಡಿದರು. ಈ ಗೆಲುವಿನೊಂದಿಗೆ, ಟೀಂ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ಎರಡೂ ತಂಡಗಳ ನಡುವಿನ ಎರಡನೇ ಏಕದಿನ ಪಂದ್ಯ ಜುಲೈ 19 ರಂದು ಲಂಡನ್‌ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
