2022ರ ಅತ್ಯುತ್ತಮ ಟಿ20 ತಂಡವನ್ನು ಪ್ರಕಟಿಸಿರುವ ಐಸಿಸಿ (ICC Mens T20I Team of the Year 2022), ತನ್ನ ತಂಡದಲ್ಲಿ ಮೂವರು ಭಾರತೀಯ ಆಟಗಾರರಿಗೆ ಸ್ಥಾನ ನೀಡಿದೆ. ಐಸಿಸಿ ವರ್ಷದ ಟಿ20 ತಂಡದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ (Virat Kohli , Suryakumar Yadav and Hardik Pandya) ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನುಳಿದಂತೆ ತಂಡದ ನಾಯಕತ್ವವನ್ನು ಹಾಲಿ ಟಿ20 ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್‌ಗೆ (Jos Buttler) ವಹಿಸಲಾಗಿದೆ. ಕಳೆದ ವರ್ಷ, ಅಂದರೆ 2022ರಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ, ಬ್ಯಾಟಿಂಗ್, ಬೌಲಿಂಗ್ ಮತ್ತು ಆಲ್‌ರೌಂಡರ್ ಕೋಟಾದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಆಟಗಾರರನ್ನು ಐಸಿಸಿ ತನ್ನ ವಾರ್ಷಿಕ ತಂಡದಲ್ಲಿ ಆಯ್ಕೆ ಮಾಡಿದೆ.
ಇನ್ನು ಐಸಿಸಿ ಆಯ್ಕೆ ಮಾಡಿರುವ ತಂಡದಲ್ಲಿ ಯಾವ ದೇಶದ ಎಷ್ಟು ಆಟಗಾರರು ಸ್ಥಾನ ಪಡೆದಿದ್ದಾರೆ ಎಂಬುದನ್ನು ಗಮನಿಸುವುದಾದರೆ, ಇಂಗ್ಲೆಂಡ್ ತಂಡದಿಂದ ಐಸಿಸಿ ತಂಡದ ನಾಯಕತ್ವ ವಹಿಸಿರುವ ಜೋಸ್ ಬಟ್ಲರ್ ಸೇರಿದಂತೆ, ವಿಶ್ವಕಪ್‌ನಲ್ಲಿ ಮ್ಯಾನ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಪಡೆದ ಸ್ಯಾಮ್ ಕರನ್ ಕೂಡ ಸ್ಥಾನ ಪಡೆದಿದ್ದಾರೆ. ಪಾಕಿಸ್ತಾನ ತಂಡದಿಂದ ಮೊಹಮ್ಮದ್ ರಿಜ್ವಾನ್ ಹಾಗೂ ಹ್ಯಾರಿಸ್ ರೌಫ್ ಸ್ಥಾನ ಪಡೆದಿದ್ದಾರೆ. ಹಾಗೆಯೇ ಟೀಂ ಇಂಡಿಯಾದಿಂದ ಮೂವರು ಆಟಗಾರರು ಆಯ್ಕೆಯಾಗಿದ್ದು, ಒಂದು ದೇಶದಿಂದ ಆಯ್ಕೆಯಾದ ಗರಿಷ್ಠ ಆಟಗಾರರ ಪಟ್ಟಿಯಲ್ಲಿ ಭಾರತ ಮೊದಲನೇ ಸ್ಥಾನ ಪಡೆದುಕೊಂಡಿದೆ.
Ranji Trophy: ರವೀಂದ್ರ ಜಡೇಜಾಗೆ ತಂಡದ ನಾಯಕತ್ವ; ಖಾಯಂ ನಾಯಕನಿಗೆ ವಿಶ್ರಾಂತಿ
ನ್ಯೂಜಿಲೆಂಡ್ ತಂಡದಿಂದ ಗ್ಲೆನ್ ಫಿಲಿಪ್ಸ್ ರೂಪದಲ್ಲಿ ಒಬ್ಬ ಆಟಗಾರ ಆಯ್ಕೆಯಾಗಿದ್ದರೆ, ಜಿಂಬಾಬ್ವೆ ತಂಡದಿಂದ ಸಿಕಂದರ್ ರಜಾ ಆಯ್ಕೆಯಾಗಿದ್ದಾರೆ. ಹಾಗೆಯೇ ಶ್ರೀಲಂಕಾ ತಂಡದಿಂದ ವನಿಂದು ಹಸರಂಗಾ ಐಸಿಸಿ ತಂಡದಲ್ಲಿ ಸ್ಥಾನ ಪಡೆದ ಏಕೈಕ ಲಂಕಾ ಆಟಗಾರನಾಗಿದ್ದು, ಕ್ರಿಕೆಟ್ ಶಿಶು ಐರ್ಲೆಂಡ್ ತಂಡದಿಂದ ಜೋಶ್ ಲಿಟಲ್ ಐಸಿಸಿ ವಾರ್ಷಿಕ ತಂಡಕ್ಕೆ ಆಯ್ಕೆಯಾಗಿದ್ದಾರೆ.
The ICC Men’s T20I Team of the Year 2022 is here ?
Is your favourite player in the XI? #ICCAwards
— ICC (@ICC) January 23, 2023
ವಿರಾಟ್ ಕೊಹ್ಲಿ: ಕಳೆದ ವರ್ಷ ಚುಟುಕು ಮಾದರಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ, ಐಸಿಸಿ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಏಷ್ಯಾಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರಲ್ಲಿ ಎರಡನೇ ಸ್ಥಾನದಲ್ಲಿದ್ದ ಕೊಹ್ಲಿ, ಇಡೀ ಟೂರ್ನಿಯಲ್ಲಿ ಆಡಿದ 5 ಪಂದ್ಯಗಳಲ್ಲಿ 276 ರನ್ ಗಳಿಸಿದರು. ಅಲ್ಲದೆ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿದ್ದ ಕೊಹ್ಲಿ, ತಮ್ಮ ಟಿ20 ವೃತ್ತಿ ಜೀವನದ ಮೊದಲ ಶತಕದ ಬರವನ್ನು ನೀಗಿಸಿಕೊಂಡಿದ್ದರು. ಅಲ್ಲದೆ ಈ ಶತಕದೊಂದಿಗೆ ಕೊಹ್ಲಿ, ತಮ್ಮ 3 ವರ್ಷಗಳ ಶತಕದ ಬರವನ್ನು ನೀಗಿಸಿಕೊಂಡಿದ್ದರು.
ಸೂರ್ಯಕುಮಾರ್ ಯಾದವ್: 2022ರಲ್ಲಿ ಟಿ20 ಕ್ರಿಕೆಟ್ನಲ್ಲಿ ಅದ್ಭುತ ಆಟ ಪ್ರದರ್ಶಿಸಿದ ವಿಶ್ವದ ಅತ್ಯುತ್ತಮ ಬ್ಯಾಟ್ಸ್ಮನ್ಗಳಲ್ಲಿ ಭಾರತದ ಸ್ಫೋಟಕ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಮೊದಲ ಸ್ಥಾನ ಪಡೆಯುತ್ತಾರೆ. ಕ್ಯಾಲೆಂಡರ್ ವರ್ಷದಲ್ಲಿ ಈ ಸ್ವರೂಪದಲ್ಲಿ ಸಾವಿರಕ್ಕೂ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡ ಸೂರ್ಯ, ಒಟ್ಟು1164 ರನ್ ಗಳಿಸಿದರು. ಇದರಲ್ಲಿ 187.43 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಸೂರ್ಯ 2 ಶತಕ ಮತ್ತು 9 ಅರ್ಧ ಶತಕಗಳನ್ನು ಬಾರಿಸಿದ್ದರು. ಅಲ್ಲದೆ ಟಿ20 ವಿಶ್ವಕಪ್‌ನಲ್ಲಿ 189.68 ಸ್ಟ್ರೈಕ್ ರೇಟ್‌ನಲ್ಲಿ ರನ್ ಕಲೆ ಹಾಕಿದ್ದ ಸೂರ್ಯ ಬರೋಬ್ಬರಿ 239 ರನ್ ಗಳಿಸಿದ್ದರು. ಹೀಗೆ ಇಡೀ ವರ್ಷ ಅದ್ಭುತ ಫಾರ್ಮ್ನಲ್ಲಿದ್ದ ಸೂರ್ಯ 2022 ರಲ್ಲಿ ವಿಶ್ವದ ನಂಬರ್ ಒನ್ ಟಿ20 ಬ್ಯಾಟ್ಸ್‌ಮನ್ ಸ್ಥಾನವನ್ನು ಗಿಟ್ಟಿಸಿಕೊಂಡರು.
ಹಾರ್ದಿಕ್ ಪಾಂಡ್ಯ: ಕಳೆದ ವರ್ಷ ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೂ ಉತ್ತಮವಾಗಿತ್ತು. ಪಾಂಡ್ಯ ಬ್ಯಾಟ್ ಮತ್ತು ಬಾಲ್ ಎರಡರಿಂದಲೂ ಅದ್ಭುತ ಪ್ರದರ್ಶನ ನೀಡಿದ್ದರು. ಕಳೆದ ವರ್ಷ ಈ ಮಾದರಿಯಲ್ಲಿ ಬ್ಯಾಟಿಂಗ್ನಲ್ಲಿ 607 ರನ್ ಬಾರಿಸಿದ ಪಾಂಡ್ಯ, ಬೌಲಿಂಗ್ನಲ್ಲಿ 20 ವಿಕೆಟ್ ಕೂಡ ಪಡೆದಿದ್ದರು.
ಜೋಸ್ ಬಟ್ಲರ್ (ನಾಯಕ- ಇಂಗ್ಲೆಂಡ್), ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ), ವಿರಾಟ್ ಕೊಹ್ಲಿ (ಭಾರತ), ಸೂರ್ಯಕುಮಾರ್ ಯಾದವ್ (ಭಾರತ),ಗ್ಲೆನ್ ಫಿಲಿಪ್ಸ್ (ನ್ಯೂಜಿಲೆಂಡ್), ಸಿಕಂದರ್ ರಜಾ (ಜಿಂಬಾಬ್ವೆ), ಹಾರ್ದಿಕ್ ಪಾಂಡ್ಯ (ಭಾರತ), ಸ್ಯಾಮ್ ಕರನ್ (ಇಂಗ್ಲೆಂಡ್), ವನಿಂದು ಹಸರಂಗಾ (ಶ್ರೀಲಂಕಾ), ಹ್ಯಾರಿಸ್ ರೌಫ್ (ಪಾಕಿಸ್ತಾನ), ಜೋಶ್ ಲಿಟಲ್ (ಐರ್ಲೆಂಡ್).
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:20 pm, Mon, 23 January 23