ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಅಜೇಯ ಅರ್ಧಶತಕದ ನಂತರ ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಇತ್ತೀಚಿನ ಐಸಿಸಿ ಏಕದಿನ ಶ್ರೇಯಾಂಕದಲ್ಲಿ 16 ನೇ ಸ್ಥಾನಕ್ಕೇರಿದ್ದಾರೆ. ವಿರಾಟ್ ಕೊಹ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಕೊಲಂಬೊದಲ್ಲಿ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಧವನ್ ಅಜೇಯ 86 ರನ್ ಸಹಾಯದಿಂದ 712 ರೇಟಿಂಗ್ ಪಾಯಿಂಟ್‌ಗಳನ್ನು ಪಡೆದಿದ್ದರೆ, ಕೊಹ್ಲಿ 848 ಅಂಕಗಳನ್ನು ಪಡೆದಿದ್ದಾರೆ. ಭಾರತದ ಹಿರಿಯ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ 817 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನದ ಬಾಬರ್ ಅಜಮ್ (873) ಅಗ್ರಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಐರ್ಲೆಂಡ್ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಶತಕ ಗಳಿಸಿ 10 ನೇ ಸ್ಥಾನಕ್ಕೆ ಏರಿದ್ದಾರೆ.
ಶ್ರೇಯಾಂಕಗಳು ಜಿಂಬಾಬ್ವೆ ಮತ್ತು ಬಾಂಗ್ಲಾದೇಶ ನಡುವಿನ ಮೂರು ಪಂದ್ಯಗಳ ಸರಣಿ, ದಕ್ಷಿಣ ಆಫ್ರಿಕಾ ಮತ್ತು ಐರ್ಲೆಂಡ್ ನಡುವಿನ ಮೂರನೇ ಪಂದ್ಯ ಮತ್ತು ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಎರಡು ಏಕದಿನ ಪಂದ್ಯಗಳ ಫಲಿತಾಂಶಗಳನ್ನು ಒಳಗೊಂಡಿದೆ. ಬೌಲರ್‌ಗಳಲ್ಲಿ ಭಾರತದ ಯುಜ್ವೇಂದ್ರ ಚಹಲ್ ( 20 ನೇ ಸ್ಥಾನಕ್ಕೆ), ಶ್ರೀಲಂಕಾದ ವನಿಂದು ಹಸರಂಗ (22 ಸ್ಥಾನಗಳಿಂದ 36 ನೇ ಸ್ಥಾನಕ್ಕೆ), ದಕ್ಷಿಣ ಆಫ್ರಿಕಾದ ತಬ್ರೆಜ್ ಶಮ್ಸಿ (ಎಂಟು ಸ್ಥಾನಗಳಿಂದ 39 ನೇ ಸ್ಥಾನಕ್ಕೆ), ಐರ್ಲೆಂಡ್‌ನ ಸಿಮಿ ಸಿಂಗ್ (51 ನೇ ಸ್ಥಾನಕ್ಕೆ). ಮತ್ತು ಜಿಂಬಾಬ್ವೆಯ ಮುಜಾರ್ಬಾನಿ (70 ನೇ ಸ್ಥಾನ) ಮೇಲಕ್ಕೆ ಏರುವಲ್ಲಿ ಯಶಸ್ವಿಯಾಗಿದ್ದಾರೆ. ಬೌಲಿಂಗ್ ಶ್ರೇಯಾಂಕದಲ್ಲಿ ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಸಾಕಷ್ಟು ಸಾಧನೆ ಮಾಡಿದ್ದಾರೆ. ಈಗ ಅವರು ಒಂಬತ್ತು ಸ್ಥಾನಗಳನ್ನು ಜಿಗಿಯುವ ಮೂಲಕ ಟಾಪ್ -10ರಲ್ಲಿ ಸ್ಥಾನ ಪಡೆದಿದ್ದಾರೆ.
ಟಿ 20 ಶ್ರೇಯಾಂಕದಲ್ಲಿ ರಿಜ್ವಾನ್ ಮತ್ತು ಲಿವಿಂಗ್ಸ್ಟನ್ ಏರಿಕೆ
ಐಸಿಸಿ ಟಿ 20 ಶ್ರೇಯಾಂಕದಲ್ಲಿ, ಪಾಕಿಸ್ತಾನದ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ ಮತ್ತು ಇಂಗ್ಲೆಂಡ್ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಲಿಯಾಮ್ ಲಿವಿಂಗ್‌ಸ್ಟನ್ ಮುಂಬಡ್ತಿ ಗಳಿಸಿದ್ದಾರೆ. ಇದರಲ್ಲಿ ಇಂಗ್ಲೆಂಡ್ ಸರಣಿಯನ್ನು 2-1ರಿಂದ ಗೆದ್ದುಕೊಂಡಿತು. ಸರಣಿಯ ಅಂತಿಮ ಪಂದ್ಯದಲ್ಲಿ ಅಜೇಯ 76 ರನ್‌ಗಳೊಂದಿಗೆ ಸರಣಿಯಲ್ಲಿ 176 ರನ್‌ಗಳಿಸಿದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಜ್ವಾನ್ ತಮ್ಮ ವೃತ್ತಿಜೀವನದ ಅತ್ಯುತ್ತಮ ಏಳನೇ ಶ್ರೇಯಾಂಕವನ್ನು ತಲುಪಿದರು.
ಲಿವಿಂಗ್ಸ್ಟನ್ 144 ಸ್ಥಾನಗಳನ್ನು ಜಿಗಿದು 27 ನೇ ಸ್ಥಾನವನ್ನು ತಲುಪಿದ್ದಾರೆ. ನಾಲ್ಕು ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧದ ಚೊಚ್ಚಲ ಪಂದ್ಯದ ನಂತರ ಅವರು ಕೇವಲ ಎಂಟು ಟಿ 20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. 27 ರ ಹರೆಯದ ಲಿವಿಂಗ್ಸ್ಟನ್ ತಮ್ಮ ಮೊದಲ ಅಂತಾರಾಷ್ಟ್ರೀಯ ಶತಕದ ಜೊತೆಗೆ (43 ಎಸೆತಗಳಲ್ಲಿ 103) ಪಾಕಿಸ್ತಾನ ವಿರುದ್ಧ ಒಟ್ಟು 147 ರನ್ ಗಳಿಸಿದರು. ವೆಸ್ಟ್ ಇಂಡೀಸ್‌ನ ಎವಿನ್ ಲೂಯಿಸ್ ಟಿ 20 ಶ್ರೇಯಾಂಕದಲ್ಲಿ 10 ರಿಂದ ಎಂಟನೇ ಸ್ಥಾನಕ್ಕೆ ಏರಿದ್ದಾರೆ. ಡೇವಿಡ್ ಮಲನ್, ಬಾಬರ್ ಅಜಮ್ ಮತ್ತು ಆರನ್ ಫಿಂಚ್ ಮೊದಲ ಮೂರು ಸ್ಥಾನಗಳಲ್ಲಿದ್ದಾರೆ.