ಬೇಕಿದ್ರೆ ಆಡಿ, ಇಲ್ಲಾಂದ್ರೆ ಹೊರ ನಡೀರಿ… ಬಾಂಗ್ಲಾಗೆ ಖಡಕ್ ಸೂಚನೆ!
ಬಾಂಗ್ಲಾದೇಶ್ ತಂಡದ ವೇಗದ ಬೌಲರ್ ಮುಸ್ತಫಿಝುರ್ ರೆಹಮಾನ್ ಅವರನ್ನು ಐಪಿಎಲ್ನಿಂದ ಕೈ ಬಿಡಲಾಗಿದೆ. ಕೆಕೆಆರ್ ತಂಡಕ್ಕೆ ಆಯ್ಕೆಯಾಗಿದ್ದ ಆಟಗಾರನನ್ನು ಬಿಸಿಸಿಐ ಸೂಚನೆ ಮೇರೆಗೆ ತಂಡದಿಂದ ರಿಲೀಸ್ ಮಾಡಲಾಗಿದೆ. ಇದಕ್ಕೆ ಮುಖ್ಯ ಕಾರಣ ಬಾಂಗ್ಲಾದೇಶ್ನಲ್ಲಿ ಹಿಂದೂಗಳ ಮೇಲಿನ ನಡೆಯುತ್ತಿರುವ ದೌರ್ಜನ್ಯ. ಅತ್ತ ಬಾಂಗ್ಲಾದಲ್ಲಿ ಹಿಂದೂಗಳ ಹತ್ಯೆ ನಡೆಯುತ್ತಿದೆ. ಹೀಗಾಗಿ ಕೆಕೆಆರ್ ಪರ ಮುಸ್ತಫಿಝುರ್ ರೆಹಮಾನ್ ಅವರನ್ನು ಕಣಕ್ಕಿಳಿಯಲು ಬಿಡುವುದಿಲ್ಲ ಎಂದು ಕೆಲ ಸಂಘಟನೆಗಳು ಘೋಷಿಸಿದ್ದವು. ಹೀಗಾಗಿ ಐಪಿಎಲ್ನಿಂದ ಬಾಂಗ್ಲಾ ವೇಗಿಯನ್ನು ಕೈ ಬಿಡುವಂತೆ ಬಿಸಿಸಿಐ ಸೂಚಿಸಿತ್ತು.

ಟಿ20 ವಿಶ್ವಕಪ್ನ ತಮ್ಮ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸಬೇಕೆಂಬ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (ಬಿಸಿಬಿ) ಮನವಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತಿರಸ್ಕರಿಸಿದೆ. ಟಿ20 ವಿಶ್ವಕಪ್ ಟೂರ್ನಿ ಆಡುವುದಾದರೆ ಭಾರತದಲ್ಲೇ ಆಡಿ, ಇಲ್ಲದಿದ್ದರೆ ವಾಕ್ ಓವರ್ ನೀಡಿ ಎಂದು ಐಸಿಸಿ ಬಿಸಿಬಿಗೆ ಸೂಚಿಸಿದೆ ಎಂದು ವರದಿಯಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ಬಾಂಗ್ಲಾ ಆಟಗಾರ ಮುಸ್ತಫಿಝುರ್ ರೆಹಮಾನ್ ಅವರನ್ನು ಹೊರಗಿಟ್ಟ ಬೆನ್ನಲ್ಲೇ ಬಾಂಗ್ಲಾದೇಶ್ ತಂಡದ ಟಿ20 ವಿಶ್ವಕಪ್ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರಿಸುವಂತೆ ಬಾಂಗ್ಲಾ ಕ್ರಿಕೆಟ್ ಬೋರ್ಡ್ ಐಸಿಸಿಗೆ ಮನವಿ ಮಾಡಿತ್ತು.
ಬಾಂಗ್ಲಾದೇಶ್, ಬಾಂಗ್ಲಾದೇಶ್ ಕ್ರಿಕೆಟ್ ಅಥವಾ ಬಾಂಗ್ಲಾದೇಶ ಕ್ರಿಕೆಟಿಗರ ಅವಮಾನವನ್ನು ನಾವು ಸಹಿಸುವುದಿಲ್ಲ. ಗುಲಾಮಗಿರಿಯ ದಿನಗಳು ಮುಗಿದಿವೆ. ಬಾಂಗ್ಲಾದೇಶದ ಕ್ರಿಕೆಟಿಗನೊಬ್ಬನಿಗೆ ಭಾರತದಲ್ಲಿ ಆಡಲು ಸಾಧ್ಯವಾಗದಿದ್ದರೆ, ಬಾಂಗ್ಲಾದೇಶ್ ತನ್ನ ಇಡೀ ಕ್ರಿಕೆಟ್ ತಂಡವು ವಿಶ್ವಕಪ್ ಆಡಲು ಭಾರತಕ್ಕೆ ಪ್ರಯಾಣಿಸುವುದು ಸುರಕ್ಷಿತವೆಂದು ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿ ಟಿ20 ವಿಶ್ವಕಪ್ನ ಪಂದ್ಯಗಳನ್ನು ಸ್ಥಳಾಂತರಿಸುವಂತೆ ಬಿಸಿಬಿ ಐಸಿಸಿಗೆ ಪತ್ರ ಬರೆದಿದೆ ಬಾಂಗ್ಲಾದೇಶ್ನ ಕ್ರೀಡಾ ಸಚಿವಾಲಯದ ಉಸ್ತುವಾರಿ ಸಚಿವ ಆಸಿಫ್ ನಜ್ರುಲ್ ತಿಳಿಸಿದ್ದರು.
ಇದೀಗ ಈ ಮನವಿಯನ್ನು ಐಸಿಸಿಗೆ ತಿರಸ್ಕರಿಸಿದೆ. ಟಿ20 ವಿಶ್ವಕಪ್ಗಾಗಿ ಬಾಂಗ್ಲಾದೇಶ್ ತಂಡವು ಭಾರತಕ್ಕೆ ಪ್ರಯಾಣಿಸಬೇಕಾಗುತ್ತದೆ. ಇಲ್ಲದಿದ್ದರೆ ಅಂಕಗಳನ್ನು ಕಳೆದುಕೊಳ್ಳಬೇಕು.ಅಂದರೆ ಪಂದ್ಯದಿಂದ ಹಿಂದೆ ಸರಿಯೊಂದೇ ಆಯ್ಕೆ. ಇದರ ಹೊರತಾಗಿ ಬೇರೆ ಯಾವುದೇ ಆಯ್ಕೆಗಳಿಲ್ಲ ಎಂದು ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ಗೆ ಐಸಿಸಿ ತಿಳಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇತ್ತ ಐಸಿಸಿಯ ಈ ಸೂಚನೆಯಿಂದಾಗಿ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ಇಕ್ಕಟ್ಟಿಗೆ ಸಿಲುಕಿದೆ. ಏಕೆಂದರೆ ಈಗಾಗಲೇ ಭಾರತದಲ್ಲಿ ಟಿ20 ವಿಶ್ವಕಪ್ ಆಡಲ್ಲ ಎಂದು ಸೂಚಿಸಿರುವ ಬಿಸಿಬಿಗೆ ಐಸಿಸಿ ಕಡೆಯಿಂದ ಖಡಕ್ ಸೂಚನೆ ದೊರೆತಿದೆ. ಹೀಗಾಗಿ ಭಾರತದಲ್ಲಿ ಟಿ20 ವಿಶ್ವಕಪ್ ಆಡಬೇಕು ಇಲ್ಲ ಟೂರ್ನಿಯಿಂದ ಹೊರ ನಡೆಯಬೇಕು.
ಒಂದು ವೇಳೆ ಟೂರ್ನಿಯಿಂದ ಹಿಂದೆ ಸರಿದರೆ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ವಿರುದ್ಧ ಐಸಿಸಿ ಕ್ರಮ ಕೈ ಗೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಅದರಲ್ಲೂ ಬಿಸಿಬಿ ಮೇಲೆ ನಿಷೇಧ ಹೇರಿದರೆ ಮುಂಬರುವ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಕಣಕ್ಕಿಳಿಯಲು ಸಾಧ್ಯವಾಗುವುದಿಲ್ಲ. ಇದರಿಂದ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ನ ಆದಾಯಕ್ಕೆ ಹೊಡೆತ ಬೀಳಲಿದೆ.
ಇದನ್ನೂ ಓದಿ: ಐಪಿಎಲ್ನಿಂದ ಹೊರಬಿದ್ದ ಬೆನ್ನಲ್ಲೇ ಮುಸ್ತಫಿಝುರ್ ರೆಹಮಾನ್ಗೆ ಬಿಗ್ ಆಫರ್..!
ಹೀಗಾಗಿ ಸದ್ಯ ಬಾಂಗ್ಲಾದೇಶ್ ಮುಂದಿರುವುದು ಭಾರತದಲ್ಲಿ ಟೂರ್ನಿ ಆಡುವುದೊಂದೇ ಆಯ್ಕೆ. ಹಾಗಾಗಿ ಜನವರಿ 10 ರಂದು ನಡೆಯಲಿರುವ ಐಸಿಸಿ ಸಭೆಯಲ್ಲಿ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ತನ್ನ ನಿಲುವನ್ನು ಸ್ಪಷ್ಟಪಡಿಸಲಿದೆ ಎಂದು ತಿಳಿದು ಬಂದಿದೆ.
