ಕಾಂಗರೂಗಳ ನಾಡಿನಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ 2022 ರಲ್ಲಿ (T20 World Cup 2022) ಭಾರತ ತಂಡ ಭರ್ಜರಿ ಶುಭಾರಂಭ ಮಾಡಿದೆ. ಆಡಿದ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಟೀಮ್ ಇಂಡಿಯಾ (Team India) ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನಕ್ಕೇರಿದೆ. ಪಾಕಿಸ್ತಾನ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ರೋಹಿತ್ ಪಡೆ 4 ವಿಕೆಟ್ಗಳ ರೋಚಕ ಗೆಲುವು ಸಾಧಿಸಿತು. ಕೊನೆಯ ಎಸೆತದ ವರೆಗೂ ನಡೆದ ಈ ಕಾದಾಟದಲ್ಲಿ ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ತಂಡಕ್ಕೆ ಗೆಲುವು ತಂದಿಟ್ಟರು. ಗುರುವಾರ ನಡೆದ ದ್ವಿತೀಯ ಪಂದ್ಯದಲ್ಲೂ ನೆದರ್ಲೆಂಡ್ಸ್ (India vs Netherlands) ವಿರುದ್ಧ 56 ರನ್ಗಳ ಸುಲಭ ಜಯ ಕಂಡಿತು. ಇದೀಗ ಭಾರತ ತಂಡ ಮುಂದಿನ ಸವಾಲಿಗೆ ಸಜ್ಜಾಗಬೇಕಿದೆ. ಹಾಗಾದರೆ ಟೀಮ್ ಇಂಡಿಯಾ ಮುಂದಿನ ಪಂದ್ಯ ಯಾವಾಗ?, ಯಾರ ವಿರುದ್ಧ ಎಂಬುದನ್ನು ನೋಡೋಣ.
ಗ್ರೂಪ್ 2 ರಲ್ಲಿರುವ ಭಾರತ ತಂಡ ತನ್ನ ಮುಂದಿನ ಪಂದ್ಯವನ್ನು ತೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. ಈ ಪಂದ್ಯ ಅಕ್ಟೋಬರ್ 30 ಭಾನುವಾರದಂದು ಆಯೋಜಿಸಲಾಗಿದ್ದು ಪರ್ತ್ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಸಂಜೆ 4:30 ಕ್ಕೆ ಈ ಕದನ ಶುರುವಾಗಲಿದೆ. ಆಫ್ರಿಕಾ ಆಡಿದ ಎರಡು ಪಂದ್ಯಗಳಲ್ಲಿ ಒಂದು ಪಂದ್ಯ ಮಳೆಯಿಂದ ರದ್ದಾದರೆ, ಮತ್ತೊಂದರಲ್ಲಿ ಗೆಲುವು ಸಾಧಿಸಿತ್ತು. ಹೀಗಾಗಿ +5.200 ರನ್ರೇಟ್ನೊಂದಿಗೆ 3 ಅಂಕ ಪಡೆದು ಎರಡನೇ ಸ್ಥಾನಲ್ಲಿದೆ. ಭಾರತ ಆಡಿದ ಎರಡೂ ಪಂದ್ಯದಲ್ಲಿ ಜಯಿಸಿ +1.425 ರನ್ರೇಟ್ ಹೊಂದಿ 4 ಅಂಕದೊಂದಿಗೆ ಮೊದಲ ಸ್ಥಾನದಲ್ಲಿದೆ.
ಭಾರತ-ನೆದರ್ಲೆಂಡ್ಸ್ ಪಂದ್ಯ ಹೇಗಿತ್ತು?:
ಗುರುವಾರ ನೆದರ್ಲೆಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಆರಂಭಿಕ ಆಘಾತ ಅನುಭವಿಸಿತು. ಕೆಎಲ್ ರಾಹುಲ್ 9 ರನ್ ಗಳಿಸಿ ಔಟಾದರು. ಬಳಿಕ ವಿರಾಟ್ ಕೊಹ್ಲಿ ಜೊತೆಗೂಡಿದ ರೋಹಿತ್ ಶರ್ಮಾ ತಂಡವನ್ನು ಮೇಲೆತ್ತಿ 73 ರನ್ಗಳ ಕಾಣಿಕೆ ನೀಡಿದರು. ರೋಹಿತ್ 39 ಎಸೆತಗಳಲ್ಲಿ 53 ರನ್ ಗಳಿಸಿ ಔಟಾದರು. ಈ ಸಂದರ್ಭ ಕೊಹ್ಲಿ ಜೊತೆಗೂಡಿದ ಸೂರ್ಯ ಕುಮಾರ್ ಯಾದವ್ ತಂಡಕ್ಕೆ ಆಧಾರವಾಗಿ ನಿಂತರು. ಎಚ್ಚರಿಕೆಯ ಆಟವಾಡಿದ ಈ ಜೋಡಿ ಕೊನೆಯ ವರೆಗೂ ಬ್ಯಾಟಿಂಗ್ ನಡೆಸಿತು.
ಕೊಹ್ಲಿ 44 ಎಸೆತಗಳಲ್ಲಿ 3 ಫೋರ್, 2 ಸಿಕ್ಸರ್ ಬಾರಿಸಿ ಅಜೇಯ 62 ರನ್ ಗಳಿಸಿದರೆ, ಸೂರ್ಯ ಕುಮಾರ್ ಯಾದವ್ ಕೇವಲ 25 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 7 ಬೌಂಡರಿಗಳ ಸಹಿತ 51 ರನ್ ಸಿಡಿಸಿದರು. ಅಂತಿಮವಾಗಿ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು. ನೆದರ್ಲೆಂಡ್ಸ್ ಪರ ಕ್ಲಾಸನ್ ಮತ್ತು ಮೀಕೆರನ್ ತಲಾ ಒಂದು ವಿಕೆಟ್ ಪಡೆದರು.
ಟಾರ್ಗೆಟ್ ಬೆನ್ನಟ್ಟಿದ ನೆದರ್ಲೆಂಡ್ಸ್ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಟಿಮ್ ಪ್ರಿಂಗ್ಲೆ 20 ರನ್ ಗಳಿಸಿದ್ದೇ ಅತ್ಯಧಿಕ ಮೊತ್ತವಾಗಿತ್ತು. ಮ್ಯಾಕ್ಸ್ ಡೌಡ್, ಬಸ್ ಡೆ ಲಿಡೆ, ಶಾರೀಜ್ ಅಹ್ಮದ್ ತಲಾ 16 ರನ್ ಗಳಿಸಿದರೆ, ಕೊಲಿನ್ ಅಕ್ಕರ್ಮನ್ 17 ರನ್ ಮಾಡಿದರು. ಅಂತಿಮವಾಗಿ ನೆದರ್ಲೆಂಡ್ಸ್ 20 ಓವರ್ಗಳಲ್ಲಿ 9 ವಿಕೆಟ್ಗೆ 123 ರನ್ ಗಳಿಸಿ ಸೋಲು ಕಂಡಿತು. ಭಾರತ ಪರ ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್ ತಲಾ 2 ವಿಕೆಟ್ ಹಾಗೂ ಮೊಹಮದ್ ಶಮಿ 1 ವಿಕೆಟ್ ಪಡೆದು ಮಿಂಚಿದರು.
Published On - 9:31 am, Fri, 28 October 22