Rohit Sharma: ನೆದರ್ಲೆಂಡ್ಸ್ ವಿರುದ್ಧ ಗೆದ್ದ ಬಳಿಕ ರೋಹಿತ್ ಶರ್ಮಾ ಆಡಿದ ಮಾತುಗಳೇನು ಕೇಳಿ
India vs Netherlands: ಟಿ20 ವಿಶ್ವಕಪ್ನಲ್ಲಿ ನಡೆದ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಭಾರತ 56 ರನ್ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಪಾಯಿಂಟ್ ಟೇಬಲ್ನಲ್ಲಿ ಕೂಡ ಅಗ್ರಸ್ಥಾನಕ್ಕೇರಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ ಕೆಲವೊಂದು ವಿಚಾರಗಳಲ್ಲಿ ಹಂಚಿಕೊಂಡಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ (T20 World Cup) ಮಹಾ ಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡ ತನ್ನ ಗೆಲುವಿನ ಓಟವನ್ನು ಮುಂದುವರೆಸಿದೆ. ಗುರುವಾರ ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆದ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ (India vs Netherlands) 56 ರನ್ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಪಾಯಿಂಟ್ ಟೇಬಲ್ನಲ್ಲಿ ಕೂಡ ಅಗ್ರಸ್ಥಾನಕ್ಕೇರಿದೆ. ಭಾರತದ ಬೌಲರ್ಗಳು ಸಂಘಟಿತ ಪ್ರದರ್ಶನ ತೋರಿದರೆ ಬ್ಯಾಟಿಂಗ್ನಲ್ಲಿ ವಿರಾಟ್ ಕೊಹ್ಲಿ, ನಾಯಕ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಅರ್ಧಶತಕ ಸಿಡಿಸಿ ಮಿಂಚಿದರು. ನೆದರ್ಲೆಂಡ್ಸ್ ಕೂಡ ಬೌಲಿಂಗ್ ವಿಭಾಗದಲ್ಲಿ ಭಾರತೀಯ ಬ್ಯಾಟರ್ಗಳನ್ನು ಕಾಡಿದ್ದು ಸುಳ್ಳಲ್ಲ. ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ (Rohit Sharma) ಕೆಲವೊಂದು ವಿಚಾರಗಳಲ್ಲಿ ಹಂಚಿಕೊಂಡಿದ್ದಾರೆ.
”ಈ ಗೆಲುವು ತುಂಬಾನೆ ಮುಖ್ಯವಾಗಿತ್ತು. ಈ ವಿಶೇಷವಾದ ಗೆಲುವು ಪಡೆಯಲು ನಮಗೆ ಕಾಲವಕಾಶವಿತ್ತು. ಇದು ನಮ್ಮ ಅದೃಷ್ಟ. ಪಾಕಿಸ್ತಾನ ವಿರುದ್ಧದ ಪಂದ್ಯ ಮುಗಿದ ಕೂಡಲೇ ಸಿಡ್ನಿಗೆ ಬಂದು ಇಲ್ಲಿ ಒಂದಾದೆವು. ಗೆಲುವಿನ ಎರಡು ಅಂಕ ತುಂಬಾನೆ ಮುಖ್ಯವಾಗುತ್ತದೆ. ಇದೊಂದು ಅದ್ಭುತ ಜಯ. ನೆದರ್ಲೆಂಡ್ಸ್ ತಂಡ ಅರ್ಹತಾ ಸುತ್ತಿನ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಸೂಪರ್ 12ಗೆ ಬಂದಿದೆ. ಅವರು ಕ್ವಾಲಿಫೈ ಆಗಿದ್ದು ಉತ್ತಮವಾಗಿತ್ತು. ಕ್ರೆಡಿಟ್ ಅವರಿಗೆ ಸಲ್ಲಬೇಕು,” ಎಂದು ಹೇಳಿದ್ದಾರೆ.
”ನಾವು ಎದುರಾಳಿಯ ಬಗ್ಗೆ ತಲೆಕೆಡಿಸಿಕೊಳ್ಳದೆ ನಮ್ಮ ತಂಡದಲ್ಲಿ ಏನನ್ನು ಬದಲಾವಣೆ ತರಬೇಕು, ಹೇಗೆ ಬಲಿಷ್ಠವಾಗಬೇಕು ಎಂಬ ಬಗ್ಗೆ ಯೋಚಿಸುತ್ತೇವೆ. ನಿಜ ನಾವು ನಿಧಾನವಾಗಿ ಆಡಿದೆವು. ನಾನು ಮತ್ತು ವಿರಾಟ್ ಕೊಹ್ಲಿ ಮಾತನಾಡಿ ಸರಿಯಾದ ಸಮಯಕ್ಕೆ ಕಾದು ದೊಡ್ಡ ಹೊಡೆತ ಹೊಡೆಯೋಣ ಎಂಬ ತೀರ್ಮಾನಕ್ಕೆ ಬಂದೆವು. ನನ್ನ ಅರ್ಧಶತಕದಿಂದ ನಾನು ತುಂಬಾ ಸಂತಸಗೊಂಡಿಲ್ಲ. ಅಲ್ಲಿ ರನ್ ಗಳಿಸುವುದು ಮುಖ್ಯವಾಗಿತ್ತಷ್ಟೆ. ಅದು ಕಡಿಮೆ ರನ್ ಆಗಿರಬಹುದು ಅಥವಾ ದೊಡ್ಡ ಮೊತ್ತ ಆಗಿರಬಹುದು. ದಿನದ ಕೊನೆಯಲ್ಲಿ ಅದು ನಮ್ಮಲ್ಲಿ ಆತ್ಮವಿಶ್ವಾಸ ಮೂಡಿಸಬೇಕಷ್ಟೆ,” ಎಂಬುದು ರೋಹಿತ್ ಮಾತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಆರಂಭಿಕ ಆಘಾತ ಅನುಭವಿಸಿತು. 9ರನ್ ಗಳಿಸಿ ಕೆಎಲ್ ರಾಹುಲ್ ಔಟಾದರು. ಬಳಿಕ ವಿರಾಟ್ ಕೊಹ್ಲಿ ಜೊತೆಗೂಡಿದ ರೋಹಿತ್ ಶರ್ಮಾ ತಂಡವನ್ನು ಮೇಲೆತ್ತಿ 39 ಎಸೆತಗಳಲ್ಲಿ 53ರನ್ ಸಿಡಿಸಿ ಕ್ಲಾಸನ್ ಬೌಲಿಂಗ್ ನಲ್ಲಿ ಔಟಾದರು. ಈ ಸಂದರ್ಭ ಕೊಹ್ಲಿ ಜೊತೆಗೂಡಿದ ಸೂರ್ಯ ಕುಮಾರ್ ಯಾದವ್ ತಂಡಕ್ಕೆ ಯಾವುದೇ ರೀತಿಯ ಅಪಾಯ ಎದುರಾಗದಂತೆ ಸ್ಫೋಟಕ ಆಟವಾಡಿದರು.
ಕೊಹ್ಲಿ 44 ಎಸೆತಗಳಲ್ಲಿ 3 ಫೋರ್, 2 ಸಿಕ್ಸರ್ ಬಾರಿಸಿ ಅಜೇಯ 62ರನ್ ಗಳಿಸಿದರೆ, ಸೂರ್ಯ ಕುಮಾರ್ ಯಾದವ್ ಕೇವಲ 25 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 7 ಬೌಂಡರಿಗಳ ಸಹಿತ 51ರನ್ ಸಿಡಿಸಿದರು. ಅಂತಿಮವಾಗಿ ಭಾರತ ತಂಡ ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು. ನೆದರ್ಲೆಂಡ್ಸ್ ಪರ ಕ್ಲಾಸನ್ ಮತ್ತು ಮೀಕೆರನ್ ತಲಾ ಒಂದು ವಿಕೆಟ್ ಪಡೆದರು.
ಟಾರ್ಗೆಟ್ ಬೆನ್ನಟ್ಟಿದ ನೆದರ್ಲೆಂಡ್ಸ್ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಟಿಮ್ ಪ್ರಿಂಗ್ಲೆ 20 ರನ್ ಗಳಿಸಿದ್ದೇ ಅತ್ಯಧಿಕ ಮೊತ್ತವಾಗಿತ್ತು. ಮ್ಯಾಕ್ಸ್ ಡೌಡ್, ಬಸ್ ಡೆ ಲಿಡೆ, ಶಾರೀಜ್ ಅಹ್ಮದ್ ತಲಾ 16 ರನ್ ಗಳಿಸಿದರೆ, ಕೊಲಿನ್ ಅಕ್ಕರ್ಮನ್ 17 ರನ್ ಮಾಡಿದರು. ಭಾರತೀಯ ಬೌಲಿಂಗ್ ದಾಳಿಗೆ ತತ್ತರಿಸಿದ ನೆದರ್ಲೆಂಡ್ಸ್ 20 ಓವರ್ಗಳಲ್ಲಿ 9 ವಿಕೆಟ್ಗೆ 123 ರನ್ ಮಾತ್ರ ಗಳಿಸಲು ಶಕ್ತವಾಯಿತು. 3 ಓವರ್ ಎಸೆದ ಭುವನೇಶ್ವರ್ ಕುಮಾರ್ 2 ಓವರ್ ಮೇಡನ್ ಮಾಡಿ 9 ರನ್ಗೆ 2 ವಿಕೆಟ್ ಕಿತ್ತರು. ಅರ್ಷದೀಪ್ ಸಿಂಗ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್ ತಲಾ 2 ವಿಕೆಟ್ ಹಾಗೂ ಮೊಹಮದ್ ಶಮಿ 1 ವಿಕೆಟ್ ಪಡೆದರು. ಸೂರ್ಯಕುಮಾರ್ ಯಾದವ್ ಪಂದ್ಯಶ್ರೇಷ್ಠ ಬಾಚಿಕೊಂಡರು.