ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. 44 ಎಸೆತಗಳನ್ನು ಎದುರಿಸಿದ್ದ ಕೊಹ್ಲಿ 62 ರನ್ ಬಾರಿಸುವ ಮೂಲಕ ಮಿಂಚಿದ್ದರು.
ವಿಶೇಷ ಎಂದರೆ 62 ರನ್ಗಳ ನೆರವಿನಿಂದ ಕಿಂಗ್ ಕೊಹ್ಲಿ ಹೊಸ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದು ಕೂಡ ಯುನಿವರ್ಸ್ ಬಾಸ್ ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.
ಹೌದು, ಟಿ20 ವಿಶ್ವಕಪ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲಿ ಇದೀಗ ವಿರಾಟ್ ಕೊಹ್ಲಿ 2ನೇ ಸ್ಥಾನ ಅಲಂಕರಿಸಿದ್ದಾರೆ. ಇದಕ್ಕೂ ಮುನ್ನ ಈ ಸ್ಥಾನದಲ್ಲಿ ವೆಸ್ಟ್ ಇಂಡೀಸ್ನ ಕ್ರೀಸ್ ಇದ್ದರು.
ಕ್ರಿಸ್ ಗೇಲ್ ಟಿ20 ವಿಶ್ವಕಪ್ನಲ್ಲಿ 31 ಇನಿಂಗ್ಸ್ ಮೂಲಕ 965 ರನ್ ಬಾರಿಸಿ ಅತ್ಯಧಿಕ ರನ್ ಬಾರಿಸಿದ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ್ದರು.
ಆದರೀಗ ಕೇವಲ 21 ಟಿ20 ವಿಶ್ವಕಪ್ ಇನಿಂಗ್ಸ್ ಮೂಲಕ ಕಿಂಗ್ ಕೊಹ್ಲಿ 989 ರನ್ ಕಲೆಹಾಕಿದ್ದಾರೆ. ಈ ಮೂಲಕ ಕ್ರಿಸ್ ಗೇಲ್ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ. ಅಲ್ಲದೆ ಟಿ20 ವಿಶ್ವಕಪ್ನ ರನ್ ಸರದಾರರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ್ದಾರೆ.
ಸದ್ಯ ಈ ಪಟ್ಟಿಯಲ್ಲಿ ಶ್ರೀಲಂಕಾದ ಮಾಜಿ ನಾಯಕ ಮಹೇಲ ಜಯವರ್ಧನೆ ಅಗ್ರಸ್ಥಾನದಲ್ಲಿದ್ದಾರೆ. ಟಿ20 ವಿಶ್ವಕಪ್ನಲ್ಲಿ 31 ಇನಿಂಗ್ಸ್ ಆಡಿರುವ ಜಯವರ್ಧನೆ 1016 ರನ್ ಕಲೆಹಾಕಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಸದ್ಯ ಟಿ20 ವಿಶ್ವಕಪ್ನಲ್ಲಿ 989 ರನ್ ಕಲೆಹಾಕಿರುವ ವಿರಾಟ್ ಕೊಹ್ಲಿಗೆ ಮಹೇಲ ಜಯವರ್ಧನೆ ಹೆಸರಿನಲ್ಲಿರುವ ವಿಶ್ವ ದಾಖಲೆ ಮುರಿಯಲು ಕೇವಲ 27 ರನ್ಗಳ ಅವಶ್ಯಕತೆಯಿದೆ. ಹೀಗಾಗಿ ಮುಂದಿನ ಪಂದ್ಯಗಳ ಮೂಲಕ ಟಿ20 ವಿಶ್ವಕಪ್ನ ಟಾಪ್ ರನ್ ಸರದಾರನಾಗಿ ಕಿಂಗ್ ಕೊಹ್ಲಿ ನಂಬರ್-1 ಸ್ಥಾನಕ್ಕೇರಬಹುದು.
Published On - 3:54 pm, Thu, 27 October 22