Updated on:Oct 27, 2022 | 10:49 AM
ಟಿ20 ವಿಶ್ವಕಪ್‌ನಲ್ಲಿ ನೂತನ ದಾಖಲೆ ಬರೆಯುವ ಹೊಸ್ತಿಲಿನಲ್ಲಿ ಕಿಂಗ್ ಕೊಹ್ಲಿ ಇದ್ದಾರೆ. ಇಂದು ಸಿಡ್ನಿಯಲ್ಲಿ ಭಾರತ ಹಾಗೂ ನೆದರ್ಲೆಂಡ್ಸ್ ನಡುವೆ ನಡೆಯುವ ಪಂದ್ಯದಲ್ಲಿ ಕಿಂಗ್ ಕೊಹ್ಲಿ 90 ರನ್ ಗಳಿಸಿದರೆ ಸಾಕು, ಟಿ20 ವಿಶ್ವಕಪ್‌ನಲ್ಲಿ ಯಾರು ಮಾಡಿರದ ದಾಖಲೆಯೊಂದು ಕಿಂಗ್ ಕೊಹ್ಲಿ ಹೆಸರಲ್ಲಿ ದಾಖಲಾಗಲಿದೆ.
ವಾಸ್ತವವಾಗಿ ಕೊಹ್ಲಿ ಇನ್ನು 90 ರನ್ ಗಳಿಸಿದರೆ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲನೇಯ ಸ್ಥಾನಕ್ಕೇರಲಿದ್ದಾರೆ. ಇದುವರೆಗೆ ಈ ದಾಖಲೆ ಲಂಕಾದ ಜಯವರ್ಧನೆ ಹೆಸರಿನಲ್ಲಿದ್ದು, ಮಹೇಲಾ 2007 ಮತ್ತು 2014 ರ ನಡುವೆ 31 ಟಿ20 ಪಂದ್ಯಗಳ 31 ಇನ್ನಿಂಗ್ಸ್‌ಗಳಲ್ಲಿ 1016 ರನ್ ಗಳಿಸುವ ಮೂಲಕ ಈ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದಾರೆ.
2021 ರ ಟಿ20 ವಿಶ್ವಕಪ್‌ನಲ್ಲಿ, ವಿಂಡೀಸ್ ದೈತ್ಯ ಕ್ರಿಸ್ ಗೇಲ್, ಜಯವರ್ಧನೆ ಅವರ ದಾಖಲೆಯನ್ನು ಮುರಿಯುವ ಸಮೀಪಕ್ಕೆ ಬಂದಿದ್ದರು. ಆದರೆ 51 ರನ್‌ಗಳ ಅಂತರದಿಂದ ಗೇಲ್ಗೆ ಈ ದಾಖಲೆ ಮುರಿಯಲು ಸಾಧ್ಯವಾಗಲಿಲ್ಲ. ಗೇಲ್ 2007-2021ರ ನಡುವೆ 33 ಟಿ20ಪಂದ್ಯಗಳ 31 ಇನ್ನಿಂಗ್ಸ್‌ಗಳಲ್ಲಿ 965 ರನ್ ಗಳಿಸಿದ್ದಾರೆ.
ಈ ರನ್ ಮಾಸ್ಟರ್ಸ್ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಪ್ರಸ್ತುತ ಮೂರನೇ ಸ್ಥಾನದಲ್ಲಿದ್ದು, ಕೊಹ್ಲಿ ಇದುವರೆಗೆ 22 ಟಿ20 ಪಂದ್ಯಗಳ 20 ಇನ್ನಿಂಗ್ಸ್‌ಗಳಲ್ಲಿ 927 ರನ್ ಗಳಿಸಿದ್ದಾರೆ. ಅಂದರೆ, ವಿರಾಟ್ ಇನ್ನು 39 ರನ್ ಗಳಿಸಿದರೆ, ಈ ಪಟ್ಟಿಯಲ್ಲಿ ಗೇಲ್ ಅವರನ್ನು ಹಿಂದಿಕ್ಕಲಿದ್ದಾರೆ. ಹಾಗೆಯೇ 90 ರನ್ ಗಳಿಸಿದರೆ, ಕಳೆದ 8 ವರ್ಷಗಳಿಂದ ಮಹೇಲಾ ಜಯವರ್ಧನೆ ಹೆಸರಿನಲ್ಲಿರುವ ಟಿ20 ವಿಶ್ವಕಪ್‌ನ ಅತಿದೊಡ್ಡ ದಾಖಲೆಯನ್ನು ಸಹ ಮುರಿಯಲಿದ್ದಾರೆ.
ಇನ್ನು ಈ ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಗೆಲುವಿನ ಇನ್ನಿಂಗ್ಸ್ ಆಡಿದ್ದ ಚೇಸ್ ಕಿಂಗ್ ಕೊಹ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 82 ರನ್ ಸಿಡಿಸಿದ್ದರು. ಅದರೊಂದಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಕೊಹ್ಲಿ ಪಾಲಾಗಿತ್ತು.
Published On - 10:43 am, Thu, 27 October 22