IND Vs NED: ನೆದರ್ಲೆಂಡ್ಸ್ ಎದುರು ಸುಲಭವಾಗಿ ಗೆದ್ದ ಭಾರತ; ಪಾಯಿಂಟ್ ಪಟ್ಟಿಯಲ್ಲಿ ನಂ.1 ಪಟ್ಟ..!
T20 World Cup Match Report, India vs Netherlands: ಟೀಂ ಇಂಡಿಯಾ ಸೂಪರ್-12 ಸುತ್ತಿನ ತನ್ನ ಎರಡನೇ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವನ್ನು 56 ರನ್‌ಗಳಿಂದ ಸೋಲಿಸುವುದರೊಂದಿಗೆ ಪಂದ್ಯಾವಳಿಯಲ್ಲಿ ತನ್ನ ಸತತ ಎರಡನೇ ಗೆಲುವನ್ನು ದಾಖಲಿಸಿದೆ.
ಟಿ20 ವಿಶ್ವಕಪ್‌ನಲ್ಲಿ (T20 World Cup) ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿದಿದ್ದ ಟೀಂ ಇಂಡಿಯಾ, ಸೂಪರ್-12 ಸುತ್ತಿನ ತನ್ನ ಎರಡನೇ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡವನ್ನು 56 ರನ್‌ಗಳಿಂದ ಸೋಲಿಸುವುದರೊಂದಿಗೆ ಪಂದ್ಯಾವಳಿಯಲ್ಲಿ ತನ್ನ ಸತತ ಎರಡನೇ ಗೆಲುವನ್ನು ದಾಖಲಿಸಿದೆ. ಸೂರ್ಯಕುಮಾರ್ ಯಾದವ್ (Suryakumar Yadav), ವಿರಾಟ್ ಕೊಹ್ಲಿ (Virat Kohli) ಮತ್ತು ರೋಹಿತ್ ಶರ್ಮಾ (Rohit Sharma) ಅವರ ಅರ್ಧಶತಕಗಳ ಆಧಾರದ ಮೇಲೆ ಮೊದಲು ಬ್ಯಾಟಿಂಗ್ ಮಾಡಿದ ರೋಹಿತ್ ಪಡೆ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು. ಗುರಿ ಬೆನ್ನಟ್ಟಿದ್ದ ನೆದರ್ಲೆಂಡ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 123 ರನ್ಗಳಿಸಲಷ್ಟೇ ಶಕ್ತವಾಯಿತು. ಈ ಟೂರ್ನಿಯಲ್ಲಿ ಸತತ ಎರಡು ಪಂದ್ಯಗಳನ್ನು ಗೆದ್ದಿರುವ ಟೀಂ ಇಂಡಿಯಾ 2ನೇ ಗುಂಪಿನ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.
ಮೆಲ್ಬೋರ್ನ್‌ನಲ್ಲಿ ಪಾಕ್ ಮಣಿಸಿದ್ದ ಭಾರತ ಸಿಡ್ನಿಯಲ್ಲಿ ನೆದರ್ಲೆಂಡ್ಸ್ ಸವಾಲನ್ನು ಎದುರಿಸಿತ್ತು. ಇತ್ತ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ರೋಚಕ ಪಂದ್ಯದಲ್ಲಿ ಸೋತಿದ್ದ ನೆದರ್ಲೆಂಡ್ಸ್ ತಂಡಕ್ಕೂ ಈ ಪಂದ್ಯ ಅಷ್ಟು ಸುಲಭವಾಗಿರಲಿಲ್ಲ. ಆದರೆ ಟಾಸ್ ಸೋತು ಮೊದಲು ಬೌಲಿಂಗ್ ಮಾಡಿದ ನೆದರ್ಲೆಂಡ್ಸ್ ತಂಡದ ಬೌಲರ್‌ಗಳು ನಿರೀಕ್ಷೆಗೂ ಮೀರಿದ ಆರಂಭ ಪಡೆದುಕೊಂಡರು. ಹೀಗಾಗಿ ಮೊದಲ 10 ಓವರ್‌ಗಳಲ್ಲಿ ಭಾರತದ ಅಗ್ರ ಕ್ರಮಾಂಕಕ್ಕೆ ಮುಕ್ತವಾಗಿ ಸ್ಕೋರ್ ಮಾಡುವ ಅವಕಾಶ ಸಿಗಲಿಲ್ಲ.
ರಾಹುಲ್ಗೆ ಕೈಕೊಟ್ಟ ಅದೃಷ್ಟ
ಮೊದಲ ಪಂದ್ಯದಂತೆ ಆರಂಭಿಕ ಆಟಗಾರ ಕೆಎಲ್ ರಾಹುಲ್ ಮತ್ತೊಮ್ಮೆ ರನ್ ಗಳಿಸಲು ವಿಫಲರಾದರು. ಆದರೆ, ಈ ಬಾರಿ ರಾಹುಲ್ ಮತ್ತು ನಾಯಕ ರೋಹಿತ್ ಶರ್ಮಾ ತೆಗೆದುಕೊಂಡ ತಪ್ಪು ನಿರ್ಧಾರವೇ ರಾಹುಲ್ ವಿಕೆಟ್ ಪತನಕ್ಕೆ ಕಾರಣವಾಯಿತು. ಮೂರನೇ ಓವರ್ ಎಸೆದ ಪಾಲ್ ವ್ಯಾನ್ ಮೀಕರೆನ್ ಅವರ ಎಸೆತದಲ್ಲಿ ರಾಹುಲ್ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು. ಅಂಪೈರ್ ಕೂಡ ಬೌಲರ್ ಮನವಿ ಪುರಸ್ಕರಿಸಿ ಔಟ್ ನೀಡಿದರು. ಆದರೆ ಟೀಂ ಇಂಡಿಯಾ ಇಲ್ಲಿ ಡಿಆರ್‌ಎಸ್ ತೆಗೆದುಕೊಂಡಿದ್ದರೆ, ರಾಹುಲ್ ಔಟಾಗುವುದರಿಂದ ಪಾರಾಗುತ್ತಿದ್ದರು. ಏಕೆಂದರೆ ವಿಕೆಟ್ ಬಳಿಕ ತೋರಿಸಿದ ರಿವ್ಯೂವ್ನಲ್ಲಿ ಚೆಂಡು ವಿಕೆಟ್ನಿಂದ ದೂರ ಹೋಗುತ್ತಿರುವುದು ಸ್ಪಷ್ಟವಾಗಿತ್ತು.
ಇದನ್ನೂ ಓದಿ: BCCI: ಮಹಿಳಾ ಕ್ರಿಕೆಟಿಗರಿಗೂ ಪುರುಷರಷ್ಟೇ ಪಂದ್ಯ ಶುಲ್ಕ ನಿಗದಿ..! ಬಿಸಿಸಿಐ ಮಹತ್ವದ ನಿರ್ಧಾರ
ರೋಹಿತ್-ಕೊಹ್ಲಿ-ಸೂರ್ಯ ಅರ್ಧಶತಕ
ಆದರೆ, ಉತ್ತಮ ಇನಿಂಗ್ಸ್ ಆಡಿದ ನಾಯಕ ರೋಹಿತ್, ಮೊದಲ ಪಂದ್ಯದ ವೈಫಲ್ಯವನ್ನು ಮರೆತು ಉತ್ತಮ ಅರ್ಧಶತಕವನ್ನು ಬಾರಿಸಿದರು. ಆದರೆ, 12ನೇ ಓವರ್ನಲ್ಲಿ ರೋಹಿತ್ ತಮ್ಮ ವಿಕೆಟ್ ಒಪ್ಪಿಸಿದರು. ಈ ವೇಳೆಗೆ ಟೀಂ ಇಂಡಿಯಾ ಕೇವಲ 84 ರನ್ ಕಲೆಹಾಕಿತ್ತು. ಇಂತಹ ಪರಿಸ್ಥಿತಿಯಲ್ಲಿ ಬ್ಯಾಟಿಂಗ್ಗಿಳಿದ ಸೂರ್ಯಕುಮಾರ್ ಯಾದವ್, ಆರಂಭದಿಂದಲೇ ಅಬ್ಬರಿಸಲು ಪ್ರಾರಂಭಿಸಿದರು.
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಉತ್ತಮ ಆರಂಭದ ಹೊರತಾಗಿಯೂ ಬಿಗ್ ಸ್ಕೋರ್ ಮಾಡುವಲ್ಲಿ ವಿಫಲರಾಗಿದ್ದ ಸೂರ್ಯಕುಮಾರ್ ಯಾದವ್ ಈ ಪಂದ್ಯದಲ್ಲಿ ಆ ತಪ್ಪನ್ನು ಮಾಡಲಿಲ್ಲ. ಬಂದ ತಕ್ಷಣ ಕೊಹ್ಲಿ ಜೊತೆ ಅಬ್ಬರದ ಇನ್ನಿಂಗ್ಸ್ ಕಟ್ಟಿದ ಸೂರ್ಯ ತಂಡದ ಸ್ಕೋರ್ ಬೋರ್ಡ್ ಅನ್ನು ಗಣನೀಯವಾಗಿ ಏರಿಸಿದರು. ಆ ಬಳಿಕ ತಮ್ಮ ಗೇರ್ ಬದಲಿಸಿದ ಕೊಹ್ಲಿ ಕೂಡ ಈ ಟೂರ್ನಿಯ ಸತತ ಎರಡನೇ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಮಿಂಚಿದರು.
ಅದೇ ಸಮಯದಲ್ಲಿ, ಸೂರ್ಯ ಕೂಡ ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ತಮ್ಮ ಅರ್ಧಶತಕವನ್ನು ಪೂರೈಸಿದರು. ಅಂತಿಮವಾಗಿ 95 ರನ್‌ಗಳ ಜೊತೆಯಾಟವಾಡಿದ ಈ ಜೋಡಿ ನಿಗದಿತ 20 ಓವರ್‌ಗಳಲ್ಲಿ ತಂಡವನ್ನು 179 ರನ್ಗಳಿಗೆ ಕೊಂಡೊಯ್ದರು.
ಭುವಿ ಮಾರಕ ದಾಳಿ
179 ರನ್‌ಗಳ ಗುರಿ ಬೆನ್ನಟ್ಟಿದ ನೆದರ್ಲೆಂಡ್ಸ್ಗೆ ಭುವಿಯ ಬೌಲಿಂಗ್ ಲೆಕ್ಕಾಚಾರ ಅರ್ಥವಾಗಲಿಲ್ಲ. ಹೀಗಾಗಿ ಮೊದಲ ಓವರ್ ಮೇಡನ್ ಆಯಿತು. ಆ ಬಳಿಕ 3ನೇ ಓವರ್ ಎಸೆದ ಭುವಿ ಮತ್ತೊಂದು ಮೇಡನ್ ಎಸೆಯುವುದರೊಂದಿಗೆ ಆರಂಭಿಕ ವಿಕೆಟ್ ಪಡೆದರು. ಆ ಬಳಿಕ ಕೊಂಚ ಪ್ರತಿರೋಧ ತೊರುತ್ತಿದ್ದ ಮ್ಯಾಕ್ಸ್ಗೆ ಪೆವಿಲಿಯನ್ ಹಾದಿ ತೋರಿಸುವಲ್ಲಿ ಅಕ್ಷರ್ ಯಶಸ್ವಿಯಾದರು. ಈ ವಿಕೆಟ್ ಬಳಿಕ ಬಂದ ಲೀಡ್ 16 ರನ್ಗಳಿಗೆ ಸುಸ್ತಾದರೆ, ಅಕರ್ಮನ್ ಕೂಡ 17 ರನ್ ಬಾರಿಸಿ ತಮ್ಮ ವಿಕೆಟ್ ಒಪ್ಪಿಸಿದರು. ಹಾಗೆಯೇ 20 ರನ್ ಬಾರಿಸಿದ ಪ್ರಿಂಗಲ್ ತಂಡದ ಪರ ಅತ್ಯಧಿಕ ರನ್ ಬಾರಿಸಿದ ಆಟಗಾರನೆನಿಸಿಕೊಂಡರು. ಅಂತಿಮವಾಗಿ ಸಂಪೂರ್ಣ 20 ಓವರ್ ಆಡಿದ ನೆದರ್ಲೆಂಡ್ಸ್ ತಂಡ 9 ವಿಕೆಟ್ ಕಳೆದುಕೊಂಡು 123 ರನ್ ಬಾರಿಸಿ, 56 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಭಾರತದ ಪರ ಭುವನೇಶ್ವರ್, ಅರ್ಷದೀಪ್ ಸಿಂಗ್, ಅಕ್ಷರ್ ಪಟೇಲ್ ಮತ್ತು ಆರ್ ಅಶ್ವಿನ್ ತಲಾ 2 ವಿಕೆಟ್ ಪಡೆದರೆ, ಶಮಿ ಒಂದು ವಿಕೆಟ್ ಪಡೆದರು.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:52 pm, Thu, 27 October 22