ಐಸಿಸಿ ವರ್ಷದ ಟೆಸ್ಟ್ ತಂಡ ಪ್ರಕಟ; ಭಾರತದ ಮೂವರಿಗೆ ಸ್ಥಾನ
ICC Test Team of the Year 2024: ಐಸಿಸಿ 2024ನೇ ಸಾಲಿನ ಅತ್ಯುತ್ತಮ ಟೆಸ್ಟ್ ಕ್ರಿಕೆಟ್ ಆಟಗಾರರ ತಂಡವನ್ನು ಪ್ರಕಟಿಸಿದೆ. ಭಾರತದ ಯಶಸ್ವಿ ಜೈಸ್ವಾಲ್, ರವೀಂದ್ರ ಜಡೇಜಾ ಮತ್ತು ಜಸ್ಪ್ರೀತ್ ಬುಮ್ರಾ ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್ ತಂಡದ ನಾಯಕ. ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಇತರ ದೇಶಗಳ ಆಟಗಾರರು ಸಹ ಈ ತಂಡದಲ್ಲಿದ್ದಾರೆ.
2024 ರ ಅತ್ಯುತ್ತಮ ಟೆಸ್ಟ್ ತಂಡವನ್ನು ಇದೀಗ ಐಸಿಸಿ ಆಯ್ಕೆ ಮಾಡಿದೆ. ಐಸಿಸಿ ಜನವರಿ 24 ಶುಕ್ರವಾರದಂದು ಈ ತಂಡವನ್ನು ಪ್ರಕಟಿಸಿದ್ದು, ಇದರಲ್ಲಿ ಟೀಂ ಇಂಡಿಯಾದ 3 ಆಟಗಾರರು ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾ ತಂಡದಿಂದ ಏಕೈಕ ಆಟಗಾರನಾಗಿ ಆಯ್ಕೆಯಾಗಿರುವ ವೇಗಿ ಪ್ಯಾಟ್ ಕಮ್ಮಿನ್ಸ್ಗೆ ತಂಡದ ನಾಯಕತ್ವದ ಜವಬ್ದಾರಿ ನೀಡಲಾಗಿದೆ. ಭಾರತದಿಂದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಈ ತಂಡದಲ್ಲಿ ಸ್ಥಾನ ಪಡೆದಿದ್ದರೆ, ಇಂಗ್ಲೆಂಡ್‌ನ ಬೆನ್ ಡಕೆಟ್ ಅವರೊಂದಿಗೆ ಎರಡನೇ ಆರಂಭಿಕ ಆಟಗಾರರಾಗಿದ್ದಾರೆ. ಕಳೆದ ವರ್ಷ ಜೈಸ್ವಾಲ್ ಅವರಿಗೆ ಉತ್ತಮ ವರ್ಷವಾಗಿತ್ತು. 2024 ರಲ್ಲಿ ಅವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ 2 ದ್ವಿಶತಕಗಳನ್ನು ಸಿಡಿಸಿದ್ದರೆ, ಪರ್ತ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧವೂ ಶತಕ ಸಿಡಿಸಿದ್ದರು.
ಜೈಸ್ವಾಲ್, ಜಡೇಜಾ, ಬುಮ್ರಾಗೆ ಸ್ಥಾನ
ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತದ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್ ಎಂದು ಸಾಬೀತುಪಡಿಸಿದ್ದ ಜೈಸ್ವಾಲ್ 2024 ರಲ್ಲಿ 29 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 54.74 ಸರಾಸರಿಯಲ್ಲಿ 1478 ರನ್ ಬಾರಿಸಿದ್ದರು. ಇದರಲ್ಲಿ 2 ಶತಕ ಮತ್ತು 9 ಅರ್ಧ ಶತಕಗಳು ಸೇರಿವೆ. ಜೈಸ್ವಾಲ್ ಅಲ್ಲದೆ, ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಕೂಡ ಈ ತಂಡದ ಭಾಗವಾಗಿದ್ದಾರೆ. ಕಳೆದ ವರ್ಷ, ಜಡೇಜಾ 18 ಇನ್ನಿಂಗ್ಸ್‌ಗಳಲ್ಲಿ 1 ಶತಕ ಮತ್ತು 3 ಅರ್ಧ ಶತಕ ಸೇರಿದಂತೆ 527 ರನ್ ಗಳಿಸಿದ್ದು, ಇತ್ತ ಬೌಲಿಂಗ್‌ನಲ್ಲಿ ಆಡಿರುವ 21 ಇನ್ನಿಂಗ್ಸ್‌ಗಳಲ್ಲಿ 48 ವಿಕೆಟ್‌ಗಳನ್ನು ಪಡೆದಿದ್ದರು.
ಈ ಇಬ್ಬರ ಜೊತೆಗೆ ಕಳೆದ ವರ್ಷ ಭಾರತದ ಅತ್ಯುತ್ತಮ ಆಟಗಾರ ಎಂದು ಸಾಬೀತುಪಡಿಸಿದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಕೂಡ ಈ ತಂಡದ ಭಾಗವಾಗಿದ್ದಾರೆ. ಬುಮ್ರಾ 2024 ರಲ್ಲಿ 26 ಇನ್ನಿಂಗ್ಸ್‌ಗಳಲ್ಲಿ ಗರಿಷ್ಠ 71 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರಲ್ಲಿ ಅವರು ಇನ್ನಿಂಗ್ಸ್‌ನಲ್ಲಿ 5 ಬಾರಿ 5 ವಿಕೆಟ್ ಮತ್ತು ಇನ್ನಿಂಗ್ಸ್‌ನಲ್ಲಿ 4 ವಿಕೆಟ್‌ಗಳನ್ನು ಪಡೆದ ಸಾಧನೆಯನ್ನು ಮಾಡಿದ್ದಾರೆ.
Australia's Pat Cummins captains a star-studded ICC Men's Test Team of the Year for 2024 🙌
Details ➡️ https://t.co/49kUxxGqzZ pic.twitter.com/oemo8EKLgI
— ICC (@ICC) January 24, 2025
WTC ಫೈನಲಿಸ್ಟ್‌ನಿಂದ ಕೇವಲ ಒಬ್ಬ ಆಟಗಾರ
ಐಸಿಸಿ ಬಿಡುಗಡೆ ಮಾಡಿರುವ ಈ ಟೆಸ್ಟ್ ತಂಡದಲ್ಲಿ ಅತ್ಯಂತ ಅಚ್ಚರಿಯ ಸಂಗತಿಯೆಂದರೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ತಲುಪಿದ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳಲ್ಲಿ ಪ್ಯಾಟ್ ಕಮಿನ್ಸ್ ಒಬ್ಬರೇ ಒಬ್ಬರು ಸ್ಥಾನ ಪಡೆದಿದ್ದಾರೆ. ಈ ಆಡುವ ಹನ್ನೊಂದರ ಬಳಗದಲ್ಲಿ ಗರಿಷ್ಠ 4 ಆಟಗಾರರು ಇಂಗ್ಲೆಂಡ್‌ನವರಾಗಿದ್ದರೆ, 3 ಆಟಗಾರರು ಭಾರತದಿಂದ, 2 ಆಟಗಾರರು ನ್ಯೂಜಿಲೆಂಡ್‌ನಿಂದ, ಆಸ್ಟ್ರೇಲಿಯಾ ಮತ್ತು ಶ್ರೀಲಂಕಾದಿಂದ ತಲಾ 1 ಆಟಗಾರರು ಸೇರಿದ್ದಾರೆ.
ಐಸಿಸಿ ವರ್ಷದ ಟೆಸ್ಟ್ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಯಶಸ್ವಿ ಜೈಸ್ವಾಲ್, ಬೆನ್ ಡಕೆಟ್, ಕೇನ್ ವಿಲಿಯಮ್ಸನ್, ಜೋ ರೂಟ್, ಹ್ಯಾರಿ ಬ್ರೂಕ್, ಕಮಿಂದು ಮೆಂಡಿಸ್, ಜೇಮಿ ಸ್ಮಿತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಮ್ಯಾಟ್ ಹೆನ್ರಿ ಮತ್ತು ಜಸ್ಪ್ರೀತ್ ಬುಮ್ರಾ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:53 pm, Fri, 24 January 25