T20 ಲೀಗ್‌ಗಳಿಗೆ ICC ಹೊಸ ನಿಯಮ..!
ಐಪಿಎಲ್, ಪಿಎಸ್ಎಲ್, ಬಿಗ್ ಬ್ಯಾಷ್ ಲೀಗ್, ಬಿಪಿಎಲ್, ಎಲ್ಪಿಎಲ್, ಐಎಲ್‌ಟಿ20, ಎಸ್ಎಟಿ20, ಟಿ20 ಬ್ಲಾಸ್ಟ್, ದಿ ಹಂಡ್ರೆಡ್ ಲೀಗ್, ಸೂಪರ್ ಸ್ಮ್ಯಾಶ್ ಸೇರಿದಂತೆ 10 ಕ್ಕೂ ಹೆಚ್ಚು ಕ್ರಿಕೆಟ್ ಲೀಗ್ಗಳು ನಡೆಯುತ್ತಿದೆ.
ಒಂದೆಡೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡದ ಸೋಲಿಗೆ ಐಪಿಎಲ್ (IPL) ಕಾರಣ ಎಂದು ದೂರಲಾಗುತ್ತಿದ್ದರೆ, ಮತ್ತೊಂದೆಡೆ ಹೊಸ ಟಿ20 ಟೂರ್ನಿ ಮೇಜರ್ ಕ್ರಿಕೆಟ್ ಲೀಗ್ ಆಯೋಜನೆಗೆ ವೇದಿಕೆ ಸಿದ್ಧವಾಗಿದೆ. ಇದರ ನಡುವೆ ಇಂತಹ ಲೀಗ್‌ಗಳಿಗೆ ಕಡಿವಾಣ ಹಾಕಲು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಕೂಡ ಮುಂದಾಗಿದೆ. ಪ್ರಪಂಚದಾದ್ಯಂತ ವೇಗವಾಗಿ ಬೆಳೆಯುತ್ತಿರುವ ಫ್ರಾಂಚೈಸಿ ಕ್ರಿಕೆಟ್ ಲೀಗ್ ಮೇಲೆ ನಿಯಂತ್ರಣ ಸಾಧಿಸಲು ಮತ್ತು ಅಂತರಾಷ್ಟ್ರೀಯ ಕ್ರಿಕೆಟ್‌ನ ಮೇಲೆ ಅದರ ಪ್ರಭಾವವನ್ನು ತಗ್ಗಿಸಲು ಐಸಿಸಿ ಕೆಲ ನಿಯಮಗಳನ್ನು ರೂಪಿಸಲು ನಿರ್ಧರಿಸಿದೆ ಎಂದು ಬ್ರಿಟಿಷ್ ಪತ್ರಿಕೆ ದಿ ಟೆಲಿಗ್ರಾಫ್ ವರದಿ ಮಾಡಿದೆ.
ಇಂತಹದೊಂದು ನಿರ್ಧಾರಕ್ಕೆ ಮುಖ್ಯ ಕಾರಣ ರಾಷ್ಟ್ರೀಯ ತಂಡಗಳಲ್ಲಿರುವ ಅಟಗಾರರು ಫ್ರಾಂಚೈಸಿ ಲೀಗ್ ಕ್ರಿಕೆಟ್‌ಗೆ ಹೆಚ್ಚಿನ ಮೇಜರ್ ಲೀಗ್ ಕ್ರಿಕೆಟ್‌ಗೆ ಒತ್ತು ನೀಡುತ್ತಿರುವುದು. ಇದಕ್ಕೆ ತಾಜಾ ಉದಾಹರಣೆ ಇಂಗ್ಲೆಂಡ್ ಆಟಗಾರ ಜೇಸನ್ ರಾಯ್ ರಾಷ್ಟ್ರೀಯ ಒಪ್ಪಂದವನ್ನು ಕೊನೆಗೊಳಿಸಿ ಮೇಜರ್ ಲೀಗ್ ಕ್ರಿಕೆಟ್ನತ್ತ ಮುಖ ಮಾಡಿದ್ದಾರೆ. ಹಾಗೆಯೇ ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೌಲ್ಟ್ ಕೂಡ ರಾಷ್ಟ್ರೀಯ ಒಪ್ಪಂದವನ್ನು ಅಂತ್ಯಗೊಳಿಸಿದ್ದಾರೆ.
ಇದರಿಂದ ಈ ಆಟಗಾರರು ಯಾವುದೇ ಲೀಗ್ನಲ್ಲೂ ಕಾಣಿಸಿಕೊಳ್ಳಬಹುದು. ಅಂದರೆ ದೇಶದ ಪರ ಆಡಬೇಕಾ ಬೇಡ್ವಾ ಎಂಬುದು ಅವರೇ ನಿರ್ಧರಿಸಲಿದ್ದಾರೆ. ಇಲ್ಲಿ ಟ್ರೆಂಟ್ ಬೌಲ್ಟ್ನಂತಹ ಬೌಲರ್ಗಳು ನ್ಯೂಜಿಲೆಂಡ್ ತಂಡಕ್ಕೆ ಅತ್ಯವಶ್ಯಕ. ಹೀಗಾಗಿ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡುತ್ತಾರೆ. ಇದೇ ಮಾದರಿಯಲ್ಲಿ ಕೆಲ ವಿದೇಶಿ ಆಟಗಾರರು ಇದೀಗ ರಾಷ್ಟ್ರೀಯ ತಂಡಗಳ ಜೊತೆಗಿನ ಒಪ್ಪಂದ ಕೊನೆಗೊಳಿಸಿ ಲೀಗ್ ಕ್ರಿಕೆಟ್ನತ್ತ ಮುಖ ಮಾಡುತ್ತಿರುವುದನ್ನು ತಡೆಯಲು ಐಸಿಸಿ ಹೊಸ ನಿಯಮಗಳನ್ನು ರೂಪಿಸಲು ಮುಂದಾಗಿದೆ.
ವಿದೇಶಿ ಆಟಗಾರರ ಆಯ್ಕೆಗೆ ಕಡಿವಾಣ:
ದಿ ಟೆಲಿಗ್ರಾಫ್ ವರದಿಯ ಪ್ರಕಾರ, ಐಸಿಸಿ ಫ್ರಾಂಚೈಸ್ ಲೀಗ್‌ಗಾಗಿ ಎರಡು ನಿಯಮಗಳನ್ನು ಪರಿಚಯಿಸಲಿದೆ. ಈ ನಿಯಮಗಳು ಐಎಲ್‌ಟಿ 20 ಮತ್ತು ಅಮೆರಿಕದ ಮೇಜರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಏಕೆಂದರೆ ಇದರಲ್ಲಿನ ಮೊದಲ ನಿಯಮವೆಂದರೆ ಆಡುವ ಬಳಗದಲ್ಲಿ ವಿದೇಶಿ ಆಟಗಾರರ ಸಂಖ್ಯೆಗೆ ಮಿತಿ.
ಅಂದರೆ ಐಸಿಸಿ ಪ್ರತಿ ಲೀಗ್ ಕ್ರಿಕೆಟ್ನಲ್ಲೂ ಪ್ಲೇಯಿಂಗ್ ಇಲೆವೆನ್ನಲ್ಲಿ ಕೇವಲ 4 ವಿದೇಶಿ ಆಟಗಾರರ ಆಯ್ಕೆಯನ್ನು ಸೀಮಿತಗೊಳಿಸಲಿದೆ. ಪ್ರಸ್ತುತ ILT20 ಲೀಗ್ನಲ್ಲಿ 9 ವಿದೇಶಿ ಆಟಗಾರರು ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳಬಹುದು. ಹಾಗೆಯೇ ಮೇಜರ್ ಲೀಗ್ನಲ್ಲೂ 6 ಆಟಗಾರರಿಗೆ ಅವಕಾಶ ಕಲ್ಪಿಸಲು ಫ್ರಾಂಚೈಸಿಗಳು ನಿರ್ಧರಿಸಿದೆ. ಇದಕ್ಕೆ ಕಡಿವಾಣ ಹಾಕಲು ಐಸಿಸಿ ಕೇವಲ 4 ವಿದೇಶಿ ಆಟಗಾರರಿಗೆ ಮಾತ್ರ ಅವಕಾಶ ಎಂಬ ನಿಯಮ ರೂಪಿಸಲಿದೆ. ಇದರಿಂದ ಹೆಚ್ಚಿನ ವಿದೇಶಿ ಆಟಗಾರರು ರಾಷ್ಟ್ರೀಯ ತಂಡ ತೊರೆದು ಲೀಗ್ ಕ್ರಿಕೆಟ್ನತ್ತ ಮುಖ ಮಾಡುವುದು ತಪ್ಪಲಿದೆ.
ಇನ್ನು ಎರಡನೇ ನಿಯಮದಲ್ಲಿ ಆಟಗಾರರ ಆಯ್ಕೆ ಬಳಿಕ ರಾಷ್ಟ್ರೀಯ ಮಂಡಳಿಗೆ ಪರಿಹಾರ ನೀಡಬೇಕಾಗುತ್ತದೆ. ಇದರ ಅಡಿಯಲ್ಲಿ, ಯಾವುದೇ ಲೀಗ್ನಲ್ಲೂ ಯಾವ ವಿದೇಶಿ ಆಟಗಾರನನ್ನು ಸಹಿ ಮಾಡಿದರೂ, ಆ ಆಟಗಾರನ ಮಂಡಳಿಗೂ ಸ್ವಲ್ಪ ಮೊತ್ತವನ್ನು ಪಾವತಿಸಬೇಕು. ಅಂದರೆ, ವಿದೇಶಿ ಆಟಗಾರನು ಸಹಿ ಮಾಡುವ ಮೊತ್ತದ 10% ಅನ್ನು ಆ ಆಟಗಾರನ ಮಂಡಳಿಗೂ ಪಾವತಿಸಬೇಕಾಗುತ್ತದೆ.
ಇದು ಐಪಿಎಲ್ ನಿಯಮ:
ಕುತೂಹಲಕಾರಿ ವಿಷಯ ಎಂದರೆ ಈ ಎರಡೂ ನಿಯಮಗಳು ಈಗಾಗಲೇ ಐಪಿಎಲ್‌ನಲ್ಲಿ ಜಾರಿಯಲ್ಲಿದೆ. ಐಪಿಎಲ್‌ನಲ್ಲಿ ಆಡುವ ಬಳಗದಲ್ಲಿ 4 ಕ್ಕಿಂತ ಹೆಚ್ಚು ವಿದೇಶಿ ಆಟಗಾರರನ್ನು ಹೊಂದಲು ಅವಕಾಶವಿಲ್ಲ. ಹಾಗೆಯೇ ಐಪಿಎಲ್‌ನಲ್ಲಿ ಆಯ್ಕೆಯಾಗುವ ವಿದೇಶಿ ಆಟಗಾರರ ಸಂಭಾವನೆ ಮೊತ್ತದಿಂದ ಬಿಸಿಸಿಐ ಶೇ.10 ರಷ್ಟು ಪಾಲನ್ನು ಅವರ ಕ್ರಿಕೆಟ್ ಮಂಡಳಿಗೆ ನೀಡುತ್ತಿದೆ. ಇದೀಗ ಈ ಎರಡು ನಿಯಮಗಳನ್ನು ಐಸಿಸಿ ಎಲ್ಲಾ ಲೀಗ್ ಕ್ರಿಕೆಟ್ನಲ್ಲೂ ಪರಿಚಯಿಸಲು ಮುಂದಾಗಿದೆ.
ಐಸಿಸಿ ಸಭೆಯಲ್ಲಿ ಅನುಮೋದನೆ:
ಮುಂದಿನ ತಿಂಗಳ ಐಸಿಸಿ ಸಭೆಯಲ್ಲಿ ಈ ಎರಡೂ ನಿಯಮಗಳಿಗೆ ಅನುಮೋದನೆ ಸಿಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಈ ನಿಯಮಗಳನ್ನು ತರಲು ಪ್ರಮುಖ ಕಾರಣವೆಂದರೆ, ಐಪಿಎಲ್ ಫ್ರಾಂಚೈಸಿಗಳು ಈಗಾಗಲೇ ಹಲವು ಲೀಗ್ಗಳಲ್ಲಿ ತಂಡಗಳನ್ನು ಹೊಂದಿದ್ದು, ಆಟಗಾರರ ಜೊತೆ ವಾರ್ಷಿಕ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ. ಉದಾಹರಣೆಗೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗೆ ಸೌತ್ ಆಫ್ರಿಕಾ ಲೀಗ್, ಯುಎಇ ಟಿ20 ಹಾಗೂ ಅಮೆರಿಕನ್ ಟಿ20 ಲೀಗ್ನಲ್ಲಿ ತಂಡಗಳಿವೆ. ಈ 4 ತಂಡಗಳ ಪರ ಆಡಲು ಆಟಗಾರರೊಂದಿಗೆ ವಾರ್ಷಿಕ ಒಪ್ಪಂದ ಮಾಡಿಕೊಳ್ಳುವುದು.
ಈ ಬೆಳವಣಿಗೆಯು ಅಂತಾರಾಷ್ಟ್ರೀಯ ಕ್ರಿಕೆಟ್ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು. ಹೀಗಾಗಿ ಐಸಿಸಿ ಎರಡು ನಿಯಮಗಳ ಮೂಲಕ ಲೀಗ್ ಕ್ರಿಕೆಟ್ ಮೇಲೆ ಹಿಡಿತ ಸಾಧಿಸಲು ಮುಂದಾಗಿದೆ. ಅಲ್ಲದೆ ಪ್ಲೇಯಿಂಗ್ ಇಲೆವೆನ್ನಲ್ಲಿ 4 ವಿದೇಶಿ ಆಟಗಾರರನ್ನು ಸೀಮಿತಗೊಳಿಸಿ, ಲೀಗ್ ಕ್ರಿಕೆಟ್ನಲ್ಲಿ ದೇಶೀಯ ಪ್ರತಿಭೆಗಳನ್ನು ಉತ್ತೇಜಿಸಲು ಪ್ಲ್ಯಾನ್ ರೂಪಿಸಿದೆ.
ಈಗಾಗಲೇ ವಿಶ್ವದಾದ್ಯಂತ ಐಪಿಎಲ್, ಪಿಎಸ್ಎಲ್, ಬಿಗ್ ಬ್ಯಾಷ್ ಲೀಗ್, ಬಿಪಿಎಲ್, ಎಲ್ಪಿಎಲ್, ಐಎಲ್‌ಟಿ20, ಎಸ್ಎಟಿ20, ಟಿ20 ಬ್ಲಾಸ್ಟ್, ದಿ ಹಂಡ್ರೆಡ್ ಲೀಗ್, ಸೂಪರ್ ಸ್ಮ್ಯಾಶ್ ಸೇರಿದಂತೆ 10 ಕ್ಕೂ ಹೆಚ್ಚಿನ ಕ್ರಿಕೆಟ್ ಲೀಗ್ಗಳು ನಡೆಯುತ್ತಿದೆ. ಇದರ ನಡುವೆ ಇದೀಗ ಅಮೆರಿಕದಲ್ಲಿ ಮೇಜರ್ ಲೀಗ್ ಕ್ರಿಕೆಟ್ ಕೂಡ ಶುರುವಾಗುತ್ತಿದ್ದು, ಇದಕ್ಕೂ ಮುನ್ನ ಲೀಗ್ ಕ್ರಿಕೆಟ್ ಮೇಲೆ ನಿಯಂತ್ರಣ ಸಾಧಿಸಲು ಐಸಿಸಿ ಮುಂದಾಗಿರುವುದು ವಿಶೇಷ.
Published On - 9:33 pm, Tue, 13 June 23