
ಮಹಿಳಾ ಏಕದಿನ ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಐಸಿಸಿ ಟೀಮ್ ಆಫ್ ದಿ ಟೂರ್ನಮೆಂಟ್ ಅನ್ನು ಪ್ರಕಟಿಸಿದೆ. 12 ಆಟಗಾರ್ತಿಯರನ್ನು ಒಳಗೊಂಡಿರುವ ಈ ತಂಡದಲ್ಲಿ ಭಾರತವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ನಾಯಕಿ ಹರ್ಮನ್ಪ್ರೀತ್ ಕೌರ್ಗೆ ಸ್ಥಾನ ನೀಡಿಲ್ಲ ಎಂಬುದು ವಿಶೇಷ. ಇನ್ನು ಈ ತಂಡದ ನಾಯಕಿಯಾಗಿ ಆಯ್ಕೆಯಾಗಿರುವುದು ಸೌತ್ ಆಫ್ರಿಕಾ ತಂಡದ ಕ್ಯಾಪ್ಟನ್ ಲಾರಾ ವೋಲ್ವಾರ್ಡ್. ಹಾಗೆಯೇ ಹನ್ನೆರಡು ಸದಸ್ಯರುಗಳಲ್ಲಿ ಟೀಮ್ ಇಂಡಿಯಾದ ಮೂವರು ಆಟಗಾರ್ತಿಯರು ಕಾಣಿಸಿಕೊಂಡಿದ್ದಾರೆ.
ಭಾರತದ ಗೆಲುವಿನ ಅಭಿಯಾನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಸ್ಮೃತಿ ಮಂಧಾನ, ಜೆಮಿಮಾ ರೊಡ್ರಿಗಸ್ ಮತ್ತು ದೀಪ್ತಿ ಶರ್ಮಾ ಐಸಿಸಿ ಮಹಿಳಾ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಮತ್ತೊಂದೆಡೆ ಇಡೀ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯ ಗೆಲ್ಲದ ಪಾಕಿಸ್ತಾನ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಸಿದ್ರಾ ನವಾಝ್ ಐಸಿಸಿ ತಂಡದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಇನ್ನು ಇಂಗ್ಲೆಂಡ್ ತಂಡದ ನಾಟ್ ಸೀವರ್ ಬ್ರಂಟ್ 12ನೇ ಆಟಗಾರ್ತಿಯಾಗಿ ಆಯ್ಕೆಯಾಗಿದ್ದಾರೆ.
ಐಸಿಸಿ ವಿಶ್ವಕಪ್ ತಂಡದಲ್ಲಿ ಆರಂಭಿಕರಾಗಿ ಆಯ್ಕೆಯಾಗಿರುವುದು ಟೀಮ್ ಇಂಡಿಯಾದ ಓಪನರ್ ಸ್ಮೃತಿ ಮಂಧಾನ ಹಾಗೂ ಸೌತ್ ಆಫ್ರಿಕಾದ ಆರಂಭಿಕ ಬ್ಯಾಟರ್ ಲಾರಾ ವೋಲ್ವಾರ್ಡ್. ಇನ್ನು ಮೂರನೇ ಕ್ರಮಾಂಕ್ಕೆ ಟೀಮ್ ಇಂಡಿಯಾದ ಜೆಮಿಮಾ ರೊಡ್ರಿಗಸ್ ಆಯ್ಕೆಯಾಗಿದ್ದಾರೆ.
ನಾಲ್ಕನೇ ಕ್ರಮಾಂಕದಲ್ಲಿ ಸೌತ್ ಆಫ್ರಿಕಾದ ಆಲ್ರೌಂಡರ್ ಮರಿಝನ್ನೆ ಕಪ್ ಕಾಣಿಸಿಕೊಂಡರೆ, ಐದನೇ ಕ್ರಮಾಂಕದಲ್ಲಿ ಆಸ್ಟ್ರೇಲಿಯಾ ಆಲ್ರೌಂಡರ್ ಆಶ್ಲೀ ಗಾರ್ಡ್ನರ್ ಇದ್ದಾರೆ. ಇನ್ನು ಟೀಮ್ ಇಂಡಿಯಾ ಆಲ್ರೌಂಡರ್ ದೀಪ್ತಿ ಶರ್ಮಾ ಆರನೇ ಕ್ರಮಾಂಕಕ್ಕೆ ಆಯ್ಕೆಯಾಗಿದ್ದಾರೆ.
ಇನ್ನುಳಿದಂತೆ ಇಂಗ್ಲೆಂಡ್ನ ಸೋಫಿ ಎಕ್ಲೆಸ್ಟೋನ್, ಆಸ್ಟ್ರೇಲಿಯಾದ ಅನ್ನಾಬೆಲ್ ಸದರ್ಲ್ಯಾಂಡ್, ಸೌತ್ ಆಫ್ರಿಕಾದ ನಾಡಿನ್ ಡಿ ಕ್ಲರ್ಕ್, ಪಾಕಿಸ್ತಾನದ ಸಿದ್ರಾ ನವಾಝ್ ಹಾಗೂ ಆಸ್ಟ್ರೇಲಿಯಾ ಸ್ಪಿನ್ನರ್ ಅಲನಾ ಕಿಂಗ್ ಐಸಿಸಿ ವಿಶ್ವಕಪ್ ಇಲೆವೆನ್ನಲ್ಲಿ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ: IPL 2026: ಹೆಚ್ಚುವರಿ 10 ಪಂದ್ಯಗಳು… ಐಪಿಎಲ್ನಲ್ಲಿ ಮಹತ್ವದ ಬದಲಾವಣೆ