
ಭಾರತದ ಸ್ಮೃತಿ ಮಂಧಾನ (Smriti Mandhana) ಮತ್ತು ಯಾಸ್ತಿಕಾ ಭಾಟಿಯಾ (Yastika Bhatia) ಅವರು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಮಹಿಳಾ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಕ್ರಮವಾಗಿ 10 ಮತ್ತು 39 ನೇ ಸ್ಥಾನಕ್ಕೆ ಏರಿದ್ದಾರೆ. ಆದರೆ ನಾಯಕಿ ಮಿಥಾಲಿ ರಾಜ್ ಎಂಟನೇ ಸ್ಥಾನಕ್ಕೆ ಕುಸಿದಿದ್ದಾರೆ. ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ವಿಶ್ವಕಪ್ (ICC Women’s ODI rankings)ನಲ್ಲಿ ಭಾರತದ ಕೊನೆಯ ಮೂರು ಪಂದ್ಯಗಳಲ್ಲಿ 35, 10 ಮತ್ತು 30 ರನ್ ಗಳಿಸಿರುವ ಸ್ಟಾರ್ ಆರಂಭಿಕ ಆಟಗಾರ್ತಿ ಮಂಧಾನ, 663 ರೇಟಿಂಗ್‌ನೊಂದಿಗೆ ಅಗ್ರ 10 ರ ಸ್ಥಾನವನ್ನು ತಲುಪಿದ್ದಾರೆ. ಈ ಮಧ್ಯೆ ಭಾಟಿಯಾ ಆಕರ್ಷಕ ಪ್ರದರ್ಶನ ನೀಡಿ, ಮಾರ್ಚ್ 23 ರಂದು ಬಿಡುಗಡೆಯಾದ ಶ್ರೇಯಾಂಕದಲ್ಲಿ ಅವರು ಎಂಟು ಸ್ಥಾನಗಳನ್ನು ಮೇಲಕ್ಕೆರಿ 39 ನೇ ಸ್ಥಾನ ತಲುಪಿದ್ದಾರೆ. ಈ ಎಡಗೈ ಬ್ಯಾಟರ್ ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ ವಿರುದ್ಧ ಭಾರತದ ಕೊನೆಯ ಎರಡು ಪಂದ್ಯಗಳಲ್ಲಿ ಅರ್ಧ ಶತಕಗಳನ್ನು ಗಳಿಸಿದ್ದರು.
ಕಳೆದ ಎರಡು ವಾರಗಳಲ್ಲಿ ಐದು ಸ್ಥಾನ ಕುಸಿತ ಕಂಡಿದ್ದ ಮಿಥಾಲಿ ಮತ್ತೊಂದು ಸ್ಥಾನ ಕುಸಿದಿದ್ದು, ಇದೀಗ ನ್ಯೂಜಿಲೆಂಡ್ನ ಆಮಿ ಸುಥರ್ ವೈಟ್ ಜತೆ ಜಂಟಿ ಎಂಟನೇ ಸ್ಥಾನದಲ್ಲಿದ್ದಾರೆ. ಭಾರತದ ನಾಯಕಿ ಆಸ್ಟ್ರೇಲಿಯಾ ವಿರುದ್ಧ 68 ರನ್ ಗಳಿಸಿದ ನಂತರ ಫಾರ್ಮ್‌ಗೆ ಮರಳುವುದನ್ನು ಸೂಚಿಸಿದರು. ಆದರೆ ಬಾಂಗ್ಲಾದೇಶದ ವಿರುದ್ಧ ಭಾರತವು 110 ರನ್‌ಗಳ ವಿಜಯದ ಸಮಯದಲ್ಲಿ ಅವರಿಗೆ ಖಾತೆಯನ್ನು ತೆರೆಯಲು ಸಹ ಸಾಧ್ಯವಾಗಲಿಲ್ಲ. ಆಸ್ಟ್ರೇಲಿಯಾದ ಅಲಿಸ್ಸಾ ಹೀಲಿ (730 ಅಂಕ) ಇನ್ನೂ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಟಾಪ್-5ರಲ್ಲಿ ಆಸ್ಟ್ರೇಲಿಯಾ ಮೇಲುಗೈ
ಬೆತ್ ಮೂನಿ 725 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಎರಡು ಸ್ಥಾನ ಮೇಲೇರಿ ಎರಡನೇ ಸ್ಥಾನಕ್ಕೆ ತಲುಪಿದ್ದಾರೆ. ಇವರಲ್ಲದೆ ಮೆಗ್ ಲ್ಯಾನಿಂಗ್ (715) ಮತ್ತು ರಾಚೆಲ್ ಹೇನ್ಸ್ (712) ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನಕ್ಕೆ ತಲುಪಿದ್ದಾರೆ. ದಕ್ಷಿಣ ಆಫ್ರಿಕಾದ ಲಾರಾ ವೂಲ್ವಾರ್ಟ್ ಎರಡು ಸ್ಥಾನ ಮೇಲೇರಿ ಮೂರನೇ ಸ್ಥಾನಕ್ಕೆ ತಲುಪಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ ಭಾರತದ ವೇಗಿ ಪೂಜಾ ವಸ್ತ್ರಾಕರ್ 13 ಸ್ಥಾನ ಮೇಲೇರಿ 56ನೇ ಸ್ಥಾನದಲ್ಲಿದ್ದರೆ, ಅನುಭವಿ ಆಟಗಾರ್ತಿ ಜೂಲನ್ ಗೋಸ್ವಾಮಿ ಒಂದು ಸ್ಥಾನ ಕುಸಿದು ಏಳನೇ ಸ್ಥಾನದಲ್ಲಿದ್ದಾರೆ. ಆದರೆ ಗೋಸ್ವಾಮಿ ತಮ್ಮ ಬ್ಯಾಟಿಂಗ್ ಬಲದಿಂದ ಆಲ್ ರೌಂಡರ್ಗಳ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನಕ್ಕೆ ಏರಿದ್ದು, ಕಳೆದ ಎರಡು ಪಂದ್ಯಗಳಲ್ಲಿ ಆಡದ ದೀಪ್ತಿ ಶರ್ಮಾ ಎರಡು ಸ್ಥಾನ ಕುಸಿದು ಏಳನೇ ಸ್ಥಾನಕ್ಕೆ ತಲುಪಿದ್ದಾರೆ.
ಬೌಲಿಂಗ್ ಶ್ರೇಯಾಂಕದ ಸ್ಥಿತಿ ಹೀಗಿದೆ
ಬೌಲರ್‌ಗಳ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಸ್ಪಿನ್ನರ್ ಸೋಫಿ ಎಕ್ಲೆಸ್ಟೋನ್ (773 ಅಂಕ) ಅಗ್ರಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಜೆಸ್ ಜಾನ್ಸನ್ (726) ಎರಡನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ವೇಗದ ಬೌಲರ್‌ಗಳಾದ ಶಬ್ನಿಮ್ ಇಸ್ಮಾಯಿಲ್, ಮರಿಜನ್ ಕ್ಯಾಪ್ ಮತ್ತು ಅಯಾಬೊಂಗಾ ಖಾಕಾ ಕ್ರಮವಾಗಿ ನಾಲ್ಕು, ಐದು ಮತ್ತು ಆರನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ:WWC 2022: ದಕ್ಷಿಣ ಆಫ್ರಿಕಾ ವಿರುದ್ಧ ಸೋತರೂ ಭಾರತಕ್ಕಿದೆ ಸೆಮಿಫೈನಲ್ಗೇರುವ ಅವಕಾಶ! ಆದರೆ..?
Published On - 1:10 pm, Wed, 23 March 22