England Women vs India Women Match: ಸೌತ್ ಆಫ್ರಿಕಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ನ 14ನೇ ಪಂದ್ಯದಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ ತಂಡ ರೋಚಕ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಗ್ರೂಪ್-ಬಿ ಅಂಕಪಟ್ಟಿಯಲ್ಲಿ ಇಂಗ್ಲೆಂಡ್ ತಂಡವು ಅಗ್ರಸ್ಥಾನಕ್ಕೇರಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ (Team India) ನಾಯಕಿ ಹರ್ಮನ್ಪ್ರೀತ್ ಕೌರ್ ಬೌಲಿಂಗ್ ಆಯ್ದುಕೊಂಡಿದ್ದಾರೆ. ಅದರಂತೆ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಉತ್ತಮ ಆರಂಭ ಪಡೆದಿರಲಿಲ್ಲ.
ಮೊದಲ ಓವರ್ನ ಮೂರನೇ ಎಸೆತದಲ್ಲೇ ವ್ಯಾಟ್ (0) ವಿಕೆಟ್ ಪಡೆಯುವ ಮೂಲಕ ರೇಣುಕಾ ಸಿಂಗ್ ಮೊದಲ ಯಶಸ್ಸು ತಂದುಕೊಟ್ಟರು. ಆ ಬಳಿಕ ಬಂದ ಅಲೀಸ್ ಕ್ಯಾಪ್ಸೆ (3) ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಈ ಹಂತದಲ್ಲಿ ಜೊತೆಗೂಡಿದ ನ್ಯಾಟ್ ಸ್ಕಿವರ್ ಬ್ರಂಟ್ ಹಾಗೂ ನಾಯಕಿ ಹೀದರ್ ನೈಟ್ 51 ರನ್ಗಳ ಜೊತೆಯಾಟವಾಡಿದರು. ಅಲ್ಲದೆ 42 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಬ್ರಂಟ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.
ಇನ್ನು ಅಂತಿಮ ಹಂತದಲ್ಲಿ ಆ್ಯಮಿ ಜೋನ್ಸ್ 27 ಎಸೆತಗಳಲ್ಲಿ 40 ರನ್ ಬಾರಿಸಿದರು. ಅದರಂತೆ ಇಂಗ್ಲೆಂಡ್ ತಂಡವು 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 151 ರನ್ ಪೇರಿಸಿತು. ಟೀಮ್ ಇಂಡಿಯಾ ಪರ ಅತ್ಯುತ್ತಮ ದಾಳಿ ಸಂಘಟಿಸಿದ ರೇಣುಕಾ ಸಿಂಗ್ 4 ಓವರ್ಗಳಲ್ಲಿ 15 ರನ್ ನೀಡಿ 5 ವಿಕೆಟ್ ಉರುಳಿಸಿ ಮಿಂಚಿದರು.
152 ರನ್ಗಳ ಸ್ಪರ್ಧಾತ್ಮಕ ಸವಾಲನ್ನು ಬೆನ್ನತ್ತಿದ ಟೀಮ್ ಇಂಡಿಯಾಗೆ ಉತ್ತಮ ಆರಂಭ ಸ್ಮೃತಿ ಮಂಧಾನ ಯಶಸ್ವಿಯಾದರು. 41 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 7 ಫೋರ್ನೊಂದಿಗೆ 52 ಬಾರಿಸಿದರು. ಆದರೆ ಶಫಾಲಿ ವರ್ಮಾ ಕೇವಲ 8 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಜೆಮಿಮಾ (13) ಹಾಗೂ ಹರ್ಮನ್ಪ್ರೀತ್ ಕೌರ್ (4) ಕೂಡ ವಿಫಲರಾದರು.
ಇದಾಗ್ಯೂ ಕೆಲ ಕ್ರಮಾಂಕದಲ್ಲಿ ರಿಚಾ ಘೋಷ್ ಬಿರುಸಿನ ಬ್ಯಾಟಿಂಗ್ ನಡೆಸಲು ಯತ್ನಿಸಿದರು. ಪರಿಣಾಮ ಕೊನೆಯ 2 ಓವರ್ಗಳಲ್ಲಿ ಟೀಮ್ ಇಂಡಿಯಾಗೆ ಗೆಲ್ಲಲು 34 ರನ್ಗಳ ಅವಶ್ಯಕತೆಯಿತ್ತು. ಆದರೆ 19ನೇ ಓವರ್ನಲ್ಲಿ ಕಲೆಹಾಕಿದ್ದು ಕೇವಲ 3 ರನ್ ಮಾತ್ರ. ಕೊನೆಯ ಓವರ್ನಲ್ಲಿ ಭಾರತಕ್ಕೆ ಗೆಲ್ಲಲು 31 ರನ್ಗಳ ಅವಶ್ಯಕತೆಯಿತ್ತು.
ಬ್ರಂಟ್ ಎಸೆದ ಕೊನೆಯ ಓವರ್ನ ಮೊದಲೆರಡು ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ 2 ಫೋರ್ ಬಾರಿಸಿದರು. ಅಲ್ಲದೆ 4ನೇ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿದರು. ಇದಾಗ್ಯೂ ಟೀಮ್ ಇಂಡಿಯಾ 11 ರನ್ಗಳಿಂದ ಸೋಲನುಭವಿಸಬೇಕಾಯಿತು. ಅಂತಿಮ ಹಂತದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ರಿಚಾ ಘೋಷ್ (47) ಅವರ ಏಕಾಂಗಿ ಹೋರಾಟ ವ್ಯರ್ಥವಾಯಿತು.
ಇದರೊಂದಿಗೆ ಟಿ20 ವಿಶ್ವಕಪ್ 2023 ರ ಟೂರ್ನಿಯಲ್ಲಿ ಟೀಮ್ ಇಂಡಿಯಾ ಮೊದಲ ಸೋಲನುಭವಿಸಿದೆ. ಇದಕ್ಕೂ ಮುನ್ನ ಭಾರತ ತಂಡವು ಪಾಕಿಸ್ತಾನ್ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಜಯ ಸಾಧಿಸಿತ್ತು.