ಟೀಂ ಇಂಡಿಯಾ 2023ರ ಐಸಿಸಿ ವಿಶ್ವಕಪ್‌ನ (ICC ODI World Cup 2023) ತನ್ನ ಮುಂದಿನ ಪಂದ್ಯವನ್ನು ನೆದರ್ಲೆಂಡ್ಸ್ (India Vs Netherlands) ವಿರುದ್ಧ ಆಡಲಿದೆ. ನವೆಂಬರ್ 12 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಅಂಕಪಟ್ಟಿಯಲ್ಲಿ ಭಾರತ ಈಗಾಗಲೇ ಅಗ್ರಸ್ಥಾನ ಕಾಯ್ದುಕೊಂಡಿದೆ. ಇಂತಹ ಪರಿಸ್ಥಿತಿಯಲ್ಲಿ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದ ಸೋಲು-ಗೆಲುವು ಭಾರತದ ಪಾಯಿಂಟ್ಸ್ ಪಟ್ಟಿಯಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ. ಟೀಂ ಇಂಡಿಯಾ ಆಡುತ್ತಿರುವ ರೀತಿಯನ್ನು ನೋಡಿದರೆ, ನೆದರ್ಲೆಂಡ್ಸ್ ತಂಡವನ್ನು ಸೋಲಿಸುವ ಮೂಲಕ ತನ್ನ ಒಂಬತ್ತನೇ ಸತತ ಗೆಲುವು ದಾಖಲಿಸುವ ಮೂಲಕ ಅಭಿಮಾನಿಗಳಿಗೆ ದೀಪಾವಳಿಯ ಉಡುಗೊರೆ ನೀಡಲು ಪ್ರಯತ್ನಿಸಲಿದೆ.
ಭಾನುವಾರದಂದು ಬೆಂಗಳೂರಿನಲ್ಲಿ ಭಾಗಶಃ ಬಿಸಿಲು ಮತ್ತು ಆಹ್ಲಾದಕರ ವಾತಾವರಣ ಇರುತ್ತದೆ ಎಂದು AccuWeather ಹೇಳಿದೆ. ಮಳೆಯ ಬೀಳುವ ಸಾಧ್ಯತೆಗಳು ಕೇವಲ ಮೂರು ಪ್ರತಿಶತ ಇರುವುದರಿಂದ ಮಳೆಯು ಆಟವನ್ನು ಹಾಳುಮಾಡುವ ಸಾಧ್ಯತೆಗಳಿಲ್ಲ. ತೇವಾಂಶವು ಶೇಕಡಾ 45 ರಷ್ಟಿದ್ದರೆ, ಮೋಡ ಕವಿದ ವಾತಾವರಣ ಶೇಕಡಾ 18 ರಷ್ಟಿರುತ್ತದೆ. ಇದಲ್ಲದೆ, ತಾಪಮಾನವು 16 ರಿಂದ 28 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ ಎಂದು ವರದಿಯಲ್ಲಿ ಹೇಳಿದೆ.
ಬೆಂಗಳೂರಿನಲ್ಲಿ ನಾಳೆ ಕೊನೆಯ ಲೀಗ್ ಪಂದ್ಯ: ಭಾರತಕ್ಕೆ ನೆದರ್ಲೆಂಡ್ಸ್ ಎದುರಾಳಿ; ಪಂದ್ಯ ಎಷ್ಟು ಗಂಟೆಗೆ ಆರಂಭ?
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಬ್ಯಾಟಿಂಗ್ ಪಿಚ್ ಎಂದೇ ಹೆಸರುವಾಸಿಯಾಗಿದೆ. ಮತ್ತು ಮೈದಾನವು ತುಲನಾತ್ಮಕವಾಗಿ ಚಿಕ್ಕದಾಗಿರುವುದರಿಂದ ಇಲ್ಲಿ ಬೌಂಡರಿ, ಸಿಕ್ಸರ್ಗಳ ಸುರಿಮಳೆಯಾಗುವುದು ಖಚಿತ. ಈ ಹಿಂದೆ ಈ ಮೈದಾನದಲ್ಲಿ ನಡೆದ ಪಂದ್ಯಗಳು ಸಹ ಇದಕ್ಕೆ ಸಾಕ್ಷಿಯಾಗಿವೆ. ಹೀಗಾಗಿ ಈ ಪಿಚ್ ಬ್ಯಾಟರ್‌ಗಳಿಗೆ ಉತ್ತಮ ಸ್ಕೋರ್ ಮಾಡಲು ಸಹಕಾರಿಯಾಗಲಿದೆ. ಸಾಮಾನ್ಯವಾಗಿ ಈ ಪಿಚ್ನಲ್ಲಿ ಟಾಸ್ ಗೆದ್ದ ನಾಯಕ ಮೊದಲು ಬೌಲಿಂಗ್ ಮಾಡುವುದಕ್ಕೆ ಹೆಚ್ಚು ಆಧ್ಯತೆ ನೀಡುವ ಸಾಧ್ಯತೆಗಳಿವೆ.
ವಾಸ್ತವವಾಗಿ ಭಾರತ ಮತ್ತು ನೆದರ್ಲೆಂಡ್ಸ್ ತಂಡಗಳು 12 ವರ್ಷಗಳ ನಂತರ ಏಕದಿನ ವಿಶ್ವಕಪ್‌ನಲ್ಲಿ ಮುಖಾಮುಖಿಯಾಗುತ್ತಿವೆ. 2011ರಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಭಾರತ ಮತ್ತು ನೆದರ್ಲೆಂಡ್ಸ್ ಕೊನೆಯ ಬಾರಿ ಮುಖಾಮುಖಿಯಾಗಿದ್ದವು. ಆ ವಿಶ್ವಕಪ್ ಕೂಡ ಭಾರತದಲ್ಲಿ ನಡೆದಿದ್ದು, ಎಂಎಸ್ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಎರಡನೇ ಬಾರಿಗೆ ಏಕದಿನ ವಿಶ್ವ ಚಾಂಪಿಯನ್ ಆಗಿತ್ತು. ಇದೀಗ 2011ರ ಏಕದಿನ ವಿಶ್ವಕಪ್ ಬಳಿಕ ಭಾರತ ತಂಡ 2023ರಲ್ಲಿ ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದೆ.
2003ರಲ್ಲಿ ಏಕದಿನ ವಿಶ್ವಕಪ್‌ನಲ್ಲಿ ಈ ಎರಡು ತಂಡಗಳ ನಡುವೆ ಮೊದಲ ಪಂದ್ಯ ನಡೆದಿತ್ತು. ಆ ಪಂದ್ಯದಲ್ಲಿ ಟೀಂ ಇಂಡಿಯಾ ನೆದರ್ಲೆಂಡ್ಸ್ ವಿರುದ್ಧ 68 ರನ್‌ಗಳ ಜಯ ಸಾಧಿಸಿತ್ತು. ಇದಾದ ಬಳಿಕ 2011ರ ವಿಶ್ವಕಪ್‌ನಲ್ಲಿ ಉಭಯ ತಂಡಗಳು ಎರಡನೇ ಬಾರಿ ಮುಖಾಮುಖಿಯಾಗಿದ್ದು, ಈ ಪಂದ್ಯದಲ್ಲೂ ಟೀಂ ಇಂಡಿಯಾ ಗೆಲುವು ಸಾಧಿಸಿತ್ತು. ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ 5 ವಿಕೆಟ್‌ಗಳಿಂದ ನೆದರ್ಲೆಂಡ್ಸ್ ತಂಡವನ್ನು ಸೋಲಿಸಿತು. ಅದೇನೆಂದರೆ ಇಲ್ಲಿಯವರೆಗೂ ಇತಿಹಾಸ ಭಾರತದ ಪರವಾಗಿದ್ದು, ಸದ್ಯ ಭಾರತ ಪ್ರದರ್ಶನ ನೀಡುತ್ತಿರುವ ರೀತಿಯಿಂದ ಟೀಂ ಇಂಡಿಯಾ ಏಕದಿನ ವಿಶ್ವಕಪ್‌ನಲ್ಲಿ ಈ ತಂಡದ ವಿರುದ್ಧ ಹ್ಯಾಟ್ರಿಕ್ ಗೆಲುವು ಸಾಧಿಸುವ ಸಾಧ್ಯತೆಗಳಿವೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ