ICC World Cup 2023
ಏಕದಿನ ವಿಶ್ವಕಪ್ನ ಸೆಮಿಫೈನಲ್ ಪಂದ್ಯಗಳಿಗೆ ವೇದಿಕೆ ಸಿದ್ಧವಾಗಿದೆ. ನವೆಂಬರ್ 15 ರಂದು ಮುಂಬೈನಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ನವೆಂಬರ್ 16 ರಂದು ಕೊಲ್ಕತ್ತಾದಲ್ಲಿ ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದ್ದು, ಈ ಮ್ಯಾಚ್ನಲ್ಲಿ ಸೌತ್ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಣಸಲಿದೆ.
ಇತ್ತ ಭಾರತದ ತೀರ ಪ್ರದೇಶಗಳಲ್ಲಿ ಮಾನ್ಸೂನ್ ಕಾರಣ ಮಳೆಯಾಗುತ್ತಿದ್ದು, ಹೀಗಾಗಿ ಈ ಪಂದ್ಯಗಳಿಗೂ ಮಳೆ ಅಡಚಣೆಯನ್ನುಂಟು ಮಾಡಲಿದೆಯಾ ಎಂಬ ಭೀತಿ ಎದುರಾಗಿದೆ. ಆದರೆ ಈ ಭೀತಿಯ ನಡುವೆ ಐಸಿಸಿ ನಿಯಮದಂತೆ ಪಂದ್ಯ ನಡೆಯುವುದು ಖಚಿತ. ಏಕೆಂದರೆ ಸೆಮಿಫೈನಲ್ ಪಂದ್ಯಗಳ ಫಲಿತಾಂಶ ನಿರ್ಣಯಕ್ಕಾಗಿ ಐಸಿಸಿ ನಿಯಮಗಳನ್ನು ಪರಿಚಯಿಸಿದೆ. ಆ ನಿಯಮಗಳಂತೆ ಈ ಬಾರಿ ಕೂಡ ನಾಕೌಟ್ ಹಂತದ ಪಂದ್ಯಗಳು ನಡೆಯಲಿದೆ. ಆ ನಿಯಮಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
- 1- ಮೀಸಲು ದಿನದಾಟ: ಸೆಮಿಫೈನಲ್ ಪಂದ್ಯಗಳ ವೇಳೆ ಮಳೆ ಬಂದರೆ ಮೀಸಲು ದಿನದಾಟದಲ್ಲಿ ಮ್ಯಾಚ್ ಮುಂದುವರೆಯಲಿದೆ. ಅಂದರೆ ಬುಧವಾರ ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ ಗುರುವಾರ ಮ್ಯಾಚ್ ನಡೆಯಲಿದೆ.
- 2- ಪಂದ್ಯ ಮುಂದುವರಿಕೆ: ಒಂದು ವೇಳೆ ಮಳೆಯಿಂದಾಗಿ ಪಂದ್ಯ ಅರ್ಧದಲ್ಲೇ ಸ್ಥಗಿತಗೊಂಡರೆ, ಮರುದಿನ ಪಂದ್ಯ ಮುಂದುವರೆಯಲಿದೆ. ಇಲ್ಲಿ ಯಾವ ಹಂತದಲ್ಲಿ ಪಂದ್ಯ ಸ್ಥಗಿತವಾಗಿತ್ತೊ ಅಲ್ಲಿಂದಲೇ ಪಂದ್ಯವನ್ನು ಮುಂದುವರೆಸಲಾಗುತ್ತದೆ. ಉದಾಹರಣೆಗೆ- ಟೀಮ್ ಇಂಡಿಯಾ 25 ಓವರ್ಗಳಲ್ಲಿ 200 ರನ್ಗಳಿಸಿದ್ದಾಗ ಮಳೆ ಬಂದು ಪಂದ್ಯ ನಿಂತರೆ, ಮರುದಿನ ಟೀಮ್ ಇಂಡಿಯಾ ಇನಿಂಗ್ಸ್ 26ನೇ ಓವರ್ನಿಂದ ಶುರುವಾಗಲಿದೆ.
- 3- ಹೆಚ್ಚುವರಿ 120 ನಿಮಿಷಗಳು: ಸೆಮಿಫೈನಲ್ ಪಂದ್ಯಗಳಿಗೆ ಹೆಚ್ಚುವರಿಯಾಗಿ 2 ಗಂಟೆ ನಿಗದಿ ಮಾಡಲಾಗಿದೆ. ಉದಾಹರಣೆಗೆ, ಪಂದ್ಯವು 6 ಗಂಟೆಗೆ ನಿಂತ ಬಳಿಕ 8 ಗಂಟೆಗೆ ಮತ್ತೆ ಶುರುವಾದರೆ ಯಾವುದೇ ಓವರ್ಗಳ ಕಡಿತ ಇರುವುದಿಲ್ಲ.
- 4- ಓವರ್ಗಳ ಕಡಿತ: ಈ ಮೇಲೆ ಹೇಳಿದಂತೆ 2 ಗಂಟೆಗಳ ಹೆಚ್ಚುವರಿ ಸಮಯ ಕಳೆದ ಬಳಿಕವಷ್ಟೇ ಓವರ್ಗಳ ಕಡಿತವಾಗಲಿದೆ. ಅಂದರೆ ಮಳೆಯಿಂದಾಗಿ ಪಂದ್ಯಕ್ಕೆ ಅಡಚಣೆಯಾದರೆ ಹೆಚ್ಚುವರಿ 2 ಗಂಟೆಗಳವರೆಗೆ ಯಾವುದೇ ಓವರ್ಗಳ ಕಡಿತ ಮಾಡುವುದಿಲ್ಲ. ಆ ಬಳಿಕ ಪ್ರತಿ 5 ನಿಮಿಷಕ್ಕೆ ಒಂದು ಓವರ್ ಅನ್ನು ಕಡಿತ ಮಾಡಲಾಗುತ್ತದೆ.
- 5- 20 ಓವರ್ಗಳ ಬಳಿ ಫಲಿತಾಂಶ: ಸೆಮಿಫೈನಲ್ ಪಂದ್ಯದಲ್ಲಿ ಫಲಿತಾಂಶ ನಿರ್ಧರಿಸಲು ಉಭಯ ತಂಡಗಳು ಕನಿಷ್ಠ 20 ಓವರ್ಗಳನ್ನು ಆಡಿರಬೇಕು. ಅಂದರೆ ಮೊದಲ ಇನಿಂಗ್ಸ್ ಬಳಿಕ ಮಳೆ ಬಂದು ಪಂದ್ಯ ಸ್ಥಗಿತವಾಗಿದ್ದರೆ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಫಲಿತಾಂಶ ನಿರ್ಧರಿಸಲು ದ್ವಿತೀಯ ಇನಿಂಗ್ಸ್ನಲ್ಲಿ ಬ್ಯಾಟ್ ಮಾಡಿದ ತಂಡ ಕನಿಷ್ಠ 20 ಓವರ್ಗಳನ್ನು ಆಡಿರಬೇಕು.
- 6- ಲೀಗ್ ಹಂತದ ಪಾಯಿಂಟ್ಸ್: ಒಂದು ವೇಳೆ ಸೆಮಿಫೈನಲ್ ಪಂದ್ಯವು ಸಂಪೂರ್ಣ ಮಳೆಗೆ ಅಹುತಿಯಾಗಿ, ಮೀಸಲು ದಿನಾಟದಲ್ಲೂ ಪಂದ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ ಮಾತ್ರ ಅಂಕ ಪಟ್ಟಿಯಲ್ಲಿ ಹೆಚ್ಚಿನ ಪಾಯಿಂಟ್ಸ್ ಹೊಂದಿರುವ ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತದೆ. ಉದಾಹರಣೆಗೆ- ಭಾರತ-ನ್ಯೂಝಿಲೆಂಡ್ ನಡುವಣ ಸೆಮಿಫೈನಲ್ ಪಂದ್ಯವು ಮಳೆಯಿಂದಾಗಿ ರದ್ದಾದರೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಟೀಮ್ ಇಂಡಿಯಾ ಫೈನಲ್ಗೆ ಅರ್ಹತೆ ಪಡೆಯಲಿದೆ.