ನಿನ್ನೆಯ ವಿಶ್ವಕಪ್ (ICC World Cup 2023) ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾದ (India vs South Africa) ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ (Virat Kohli) ಶತಕ ಸಿಡಿಸಿದ್ದು ಗೊತ್ತೇ ಇದೆ. ಈ ಪಂದ್ಯದಲ್ಲಿ 67 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಕೊಹ್ಲಿ 119 ಎಸೆತಗಳಲ್ಲಿ ಶತಕ ಪೂರೈಸಿದರು. ವಿರಾಟ್ ಅವರ ಈ ಶತಕವನ್ನು ಕೆಲವರು ಟೀಕಿಸುತ್ತಿದ್ದು, ಸಚಿನ್ ಅವರ ದಾಖಲೆಯನ್ನು ಸರಿಗಟ್ಟುವ ಸಲುವಾಗಿ ವಿರಾಟ್ ಕೊಹ್ಲಿ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದರು ಎಂಬುದು ಕೆಲವರ ಅಭಿಪ್ರಾಯ. ಇದೀಗ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ- ವಿರೋದದ ಭಾರಿ ಚರ್ಚೆ ಹುಟ್ಟಿಕೊಂಡಿದೆ. ಈ ನಡುವೆ ವಿರಾಟ್ ಮೇಲೆ ಬರುತ್ತಿರುವ ಟೀಕೆಗಳಿಗೆ ಭಾರತದ ಮಾಜಿ ಬೌಲರ್ ವೆಂಕಟೇಶ್ ಪ್ರಸಾದ್ (Venkatesh Prasad) ಸ್ವಲ್ಪ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ವೆಂಕಟೇಶ್ ಪ್ರಸಾದ್, ಟೀಕಾಕಾರರಿಗೆ ವ್ಯಂಗ್ಯವಾಗಿ ಉತ್ತರಿಸಿ ಎಲ್ಲರ ಬಾಯಿ ಮುಚ್ಚಿಸಿದ್ದಾರೆ. ತಮ್ಮ ಟ್ವೀಟ್ನಲ್ಲಿ ವೆಂಕಟೇಶ್ ಪ್ರಸಾದ್, ‘ಹೌದು.. ಕೊಹ್ಲಿ ಸ್ವಾರ್ಥಿ. ಕೋಟಿಗಟ್ಟಲೆ ಕನಸುಗಳನ್ನು ನನಸು ಮಾಡುವಲ್ಲಿ ಸಂಪೂರ್ಣ ಸ್ವಾರ್ಥಿಯಾಗಿ ವರ್ತಿಸುತ್ತಿದ್ದಾರೆ. ಅವರ ಸ್ವಾರ್ಥದ ಬಗ್ಗೆ ಎಲ್ಲಾ ತಮಾಷೆಯ ಕಥೆಗಳನ್ನು ನಾನು ಕೇಳಿದ್ದೇನೆ. ಕೊಹ್ಲಿ ತಮ್ಮ ವೈಯಕ್ತಿಕ ಮೈಲಿಗಲ್ಲುಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ ಎಂದು ನಾನು ಕೇಳಿದೆ. ಹೌದು, ವಿರಾಟ್ ಕೊಹ್ಲಿ ಸ್ವಾರ್ಥಿ. ಕೋಟ್ಯಂತರ ಜನರ ಕನಸುಗಳನ್ನು ನನಸಾಗಿಸುವುದಕ್ಕೆ ಸ್ವಾರ್ಥಿಯಾಗಿದ್ದಾರೆ. ಸಾಕಷ್ಟು ಸಾಧನೆ ಮಾಡಿದರೂ, ಉತ್ಕೃಷ್ಟತೆಗಾಗಿ, ಮತ್ತಷ್ಟು ಸುಧಾರಣೆಗಾಗಿ ಶ್ರಮಿಸುತ್ತಿದ್ದಾರೆ, ಅದಕ್ಕಾಗಿಯೇ ಕೊಹ್ಲಿ ಸ್ವಾರ್ಥಿಯಾಗಿದ್ದಾರೆ. ಯಶಸ್ಸಿಗೆ ನಿರಂತರವಾಗಿ ಹೊಸ ಮಾನದಂಡಗಳನ್ನು ಹೊಂದಿಸುವ ಕೊಹ್ಲಿ ಸ್ವಾರ್ಥಿ. ತಂಡದ ಗೆಲುವನ್ನು ಖಾತ್ರಿಪಡಿಸಿಕೊಳ್ಳುವುದು, ಕೊಹ್ಲಿ ಸ್ವಾರ್ಥಿಯಾಗಲು ಕಾರಣ. ಹೌದು, ಕೊಹ್ಲಿ ಸ್ವಾರ್ಥಿ. ಎಂದು ತಮ್ಮ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
Hearing funny arguments about Virat Kohli being Selfish and obsessed with personal milestone.
Yes Kohli is selfish, selfish enough to follow the dream of a billion people, selfish enough to strive for excellence even after achieving so much, selfish enough to set new benchmarks,… pic.twitter.com/l5RZRf7dNx— Venkatesh Prasad (@venkateshprasad) November 6, 2023
Virat Kohli: 49ನೇ ಏಕದಿನ ಶತಕ ಸಿಡಿಸಿದ ಕೊಹ್ಲಿಗೆ ‘ಸ್ವಾರ್ಥಿ’ ಎಂಬ ಹಣೆಪಟ್ಟಿ ಕಟ್ಟಿದ ನೆಟ್ಟಿಗರು..!
ಈ ಬಾರಿಯ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಶತಕ ಸಿಡಿಸಿದ್ದ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ 85, ನ್ಯೂಜಿಲೆಂಡ್ ವಿರುದ್ಧ 95 ಮತ್ತು ಶ್ರೀಲಂಕಾ ವಿರುದ್ಧ 88 ರನ್ ಗಳಿಸಿದ್ದರು. ಈ ಮೂರು ಸಂದರ್ಭಗಳಲ್ಲಿ, ಕೊಹ್ಲಿ ತಮ್ಮ ಶತಕಕ್ಕಾಗಿ ನಿಧಾನವಾಗಿ ಬ್ಯಾಟಿಂಗ್ ಮಾಡಿದ್ದಕ್ಕಾಗಿ ಹಲವು ಟೀಕಾಕಾರರ ಬಾಯಿಗೆ ಆಹಾರವಾಗಿದ್ದರು. ಅವರು ತಂಡದ ಹಿತಾಸಕ್ತಿಗಳಿಗಿಂತ ವೈಯಕ್ತಿಕ ದಾಖಲೆಗಳಿಗಾಗಿ ಆಡುತ್ತಿದ್ದಾರೆ ಎಂದು ಕೆಲವರು ವಾದಿಸಿದ್ದರು. ನಿನ್ನೆ ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಅವರು 119 ಎಸೆತಗಳಲ್ಲಿ ಶತಕ ಬಾರಿಸಿದಾಗ ಈ ಟೀಕೆ ತೀವ್ರಗೊಂಡಿತು. ಕೊಹ್ಲಿ ಇನ್ನಿಂಗ್ಸ್‌ನಲ್ಲಿ ಒಂದೇ ಒಂದು ಸಿಕ್ಸರ್ ಬಾರಿಸಲಿಲ್ಲ ಎಂಬುದು ಕೂಡ ಕೆಲವರ ವಾದವಾಗಿದೆ.
ವಾಸ್ತವವಾಗಿ ಕೊಹ್ಲಿ ಈ ರೀತಿ ನಿದಾನವಾಗಿ ಬ್ಯಾಟ್ ಮಾಡಲು ಈಡನ್ ಗಾರ್ಡನ್ ಪಿಚ್ ಕೂಡ ಪ್ರಮುಖ ಕಾರಣವಾಗಿತ್ತು. ಏಕೆಂದರೆ ಈಡನ್ ಗಾರ್ಡನ್ ಪಿಚ್ ಬೌಲರ್ಗಳಿಗೆ ಹೆಚ್ಚು ಸಹಕಾರಿ. ಚೆಂಡು ಹಳೆಯದಾದಂತೆ ಪಿಚ್‌ನಲ್ಲಿ ನಿಂತು ಬರುತ್ತದೆ. ಇದರಿಂದ ಬ್ಯಾಟರ್ಗಳು ರನ್ ಗಳಿಸುವುದಕ್ಕೆ ಸ್ವಲ್ಪ ಕಷ್ಟಕರವಾಗುತ್ತದೆ. ಇದಕ್ಕೆ ತಾಜಾ ಉದಾಹರಣೆಯಾಗಿ, ಭಾರತದ ಬ್ಯಾಟಿಂಗ್ ನಂತರ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾದ ಇನ್ನಿಂಗ್ಸ್ ಇದೆ. ಫಾರ್ಮ್‌ನಲ್ಲಿರುವ ಆಫ್ರಿಕಾದ ಎಲ್ಲಾ ಬ್ಯಾಟರ್ಗಳು ಕೇವಲ ಒಂದಂಕಿಗೆ ಸುಸ್ತಾದರು. ಇದರಿಂದ ಇಡೀ ತಂಡ ಕೇವಲ 83 ರನ್‌ಗಳಿಗೆ ಆಲೌಟ್ ಆಯಿತು. ನಾಯಕ ರೋಹಿತ್ ಶರ್ಮಾ ಕೂಡ ಪಂದ್ಯದ ನಂತರ ಈ ಪಿಚ್‌ನಲ್ಲಿ ರನ್ ಗಳಿಸುವುದು ತುಂಬಾ ಕಷ್ಟ ಎಂದು ಹೇಳಿದ್ದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ