‘ಟೀಂ ಇಂಡಿಯಾಗೆ ಬೇರೆ ಬಾಲ್ ನೀಡಲಾಗುತ್ತಿದೆ’; ಪಾಕ್ ಮಾಜಿ ಆಟಗಾರನ ಆರೋಪಕ್ಕೆ ವಾಸಿಂ ಅಕ್ರಂ ಸ್ಪಷ್ಟನೆ
ICC World Cup 2023: ಈ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾಗೆ ಇತರ ತಂಡಗಳಿಗೆ ಹೊಲಿಸಿದರೆ ಹೆಚ್ಚು ಸೀಮ್ ಮತ್ತು ಸ್ವಿಂಗ್ ಪಡೆಯುವ ಚೆಂಡುಗಳನ್ನು ಪಡೆಯುತ್ತಿದೆ. ಹೀಗಾಗಿಯೇ ಟೀಂ ಇಂಡಿಯಾ ವೇಗಿಗಳು ಪರಿಣಾಮಕಾರಿಯಾಗುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದೀಗ ರಝಾ ಅವರ ಹೇಳಿಕೆಗೆ ಅವರದ್ದೇ ದೇಶದ ಲೆಜೆಂಡರಿ ನಾಯಕ ವಾಸಿಂ ಅಕ್ರಮ್ ಸರಿಯಾದ ಪ್ರತಿಕ್ರಿಯೆ ನೀಡಿದ್ದಾರೆ.
2023ರ ವಿಶ್ವಕಪ್‌ನಲ್ಲಿ (ICC World Cup 2023) ಭಾರತೀಯ ಬೌಲರ್‌ಗಳ ಅದ್ಭುತ ಪ್ರದರ್ಶನವನ್ನು ಪಾಕಿಸ್ತಾನದ ಕೆಲವು ಮಾಜಿ ಆಟಗಾರರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ತೋರುತ್ತದೆ. ಶ್ರೀಲಂಕಾ ವಿರುದ್ಧ ಶಮಿ ಮತ್ತು ಸಿರಾಜ್ ಮಾಡಿದ ಮಾರಕ ಬೌಲಿಂಗ್ ನೋಡಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಸನ್ ರಝಾ (Hasan Raza ) ಬಾಲಿಶ ಆರೋಪವನ್ನು ಬಿಸಿಸಿಐ ಹಾಗೂ ಐಸಿಸಿ ವಿರುದ್ಧ ಹೊರಿಸಿದ್ದರು. ರಝಾ ಪ್ರಕಾರ, ಈ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾಗೆ ಇತರ ತಂಡಗಳಿಗೆ ಹೊಲಿಸಿದರೆ ಹೆಚ್ಚು ಸೀಮ್ ಮತ್ತು ಸ್ವಿಂಗ್ ಪಡೆಯುವ ಚೆಂಡುಗಳನ್ನು ನೀಡಲಾಗುತ್ತಿದೆ. ಹೀಗಾಗಿಯೇ ಟೀಂ ಇಂಡಿಯಾ ವೇಗಿಗಳು ಹೆಚ್ಚು ಪರಿಣಾಮಕಾರಿಯಾಗುತ್ತಿದ್ದಾರೆ ಎಂದು ಆರೋಪಿಸಿದ್ದರು. ರಝಾ ಅವರ ಈ ಹೇಳಿಕೆ ನಂತರ ಈ ಬಗ್ಗೆ ಎಲ್ಲೆಡೆ ಚರ್ಚೆ ಶುರುವಾಗಿತ್ತು. ಇದೀಗ ರಝಾ ಅವರ ಹೇಳಿಕೆಗೆ ಅವರದ್ದೇ ದೇಶದ ಲೆಜೆಂಡರಿ ನಾಯಕ ವಾಸಿಂ ಅಕ್ರಮ್ (Wasim Akram) ಪ್ರತಿಕ್ರಿಯೆ ನೀಡಿದ್ದಾರೆ.
ರಝಾ ವಿವಾದಾತ್ಮಕ ಹೇಳಿಕೆ
ಸಿರಾಜ್ ಮತ್ತು ಶಮಿ ಬಳಸುತ್ತಿರುವ ಚೆಂಡುಗಳ ಬಗ್ಗೆ ಐಸಿಸಿ ತನಿಖೆ ನಡೆಸಬೇಕು ಎಂದು ಹಸನ್ ರಝಾ ಪಾಕಿಸ್ತಾನದ ಸುದ್ದಿವಾಹಿನಿಯೊಂದರಲ್ಲಿ ಮಾತನಾಡುವಾಗ ಹೇಳಿದ್ದರು. ಈ ಇಬ್ಬರು ಬೌಲರ್‌ಗಳು ಅಲನ್ ಡೊನಾಲ್ಡ್ ಮತ್ತು ಎನ್‌ಟಿನಿಯಂತೆ ಅಪಾಯಕಾರಿಯಾಗಿದ್ದಾರೆ. ಟೀಂ ಇಂಡಿಯಾ ಬ್ಯಾಟಿಂಗ್ ಮಾಡುವಾಗ ಆ ಪಿಚ್, ಬ್ಯಾಟಿಂಗ್ ಪಿಚ್ ಅನಿಸುತ್ತದೆ. ಆದರೆ ಶಮಿ ಹಾಗೂ ಸಿರಾಜ್ ಬೌಲಿಂಗ್ಗೆ ಇಳಿದಾಗ ಆ ಪಿಚ್, ಬೌಲಿಂಗ್ ಪಿಚ್ ಆಗುತ್ತದೆ. ಹೀಗಾಗಿ ಟೀಂ ಇಂಡಿಯಾ ಬೇರೆಯದ್ದೆ ಚೆಂಡನ್ನು ಉಪಯೋಗಿಸುತ್ತಿದೆ ಎಂದು ರಾಝಾ ಆರೋಪ ಮಾಡಿದ್ದರು.
ICC Might Give Different Ball to Indian Bowlers thats why they are Getting Seam and Swing More Than Others.Ex Test Cricketer Hasan Raza.#CWC23 #INDvSL pic.twitter.com/7KCQoaz0Qs
— Hasnain Liaquat (@iHasnainLiaquat) November 2, 2023
ವಾಸಿಂ ಅಕ್ರಮ್ ನೀಡಿದ ಉತ್ತರವೇನು?
ರಝಾ ಅವರ ಈ ಭಾಲಿಶ ಹೇಳಿಕೆಯ ನಂತರ, ಪಾಕಿಸ್ತಾನದ ಹಿರಿಯ ಕ್ರಿಕೆಟಿಗರು ರಾಝಾ ಅವರನ್ನು ಟೀಕಿಸಿದ್ದರು. ಇದೀಗ ರಝಾ ಅವರ ಹೇಳಿಕೆಗೆ ಮಾಜಿ ಕ್ರಿಕೆಟಿಗರಾದ ವಾಸಿಂ ಅಕ್ರಮ್ ಪ್ರತಿಕ್ರಿಯಿಸಿದ್ದು, ನೀವು ನಿಮ್ಮಗೆ ಮಾತ್ರವಲ್ಲದೆ ನಮಗೂ ಮುಜುಗರವನ್ನುಂಟು ಮಾಡುತ್ತಿದ್ದೀರಿ. ನೋಡಿ, ಇದು ಸರಳ ವಿಚಾರ. ಪಂದ್ಯ ಆರಂಭಕ್ಕೂ ಮೊದಲು ಅಂಪೈರ್ಗಳು 12 ಚೆಂಡುಗಳಿರುವ ಬಾಕ್ಸ್‌ನೊಂದಿಗೆ ಮೊದಲು ಬೌಲಿಂಗ್ ಮಾಡುವ ತಂಡದ ಬಳಿಗೆ ಹೋಗುತ್ತಾರೆ. ಈ ವೇಳೆ ಬೌಲಿಂಗ್ ಮಾಡುವ ತಂಡದ ಬೌಲರ್‌ಗಳು ತಮ್ಮ ಆದ್ಯತೆಗೆ ಅನುಗುಣವಾಗಿ ಎರಡು ಚೆಂಡುಗಳನ್ನು ಆಯ್ಕೆ ಮಾಡುತ್ತಾರೆ. ನಂತರ ಉಳಿದ ಎಂಟು ಚೆಂಡುಗಳನ್ನು ಅಂಪೈರ್ಗಳು ಡ್ರೆಸ್ಸಿಂಗ್ ಕೋಣೆಗೆ ಕೊಂಡೊಯ್ಯುತ್ತಾರೆ. ಆ ಬಳಿಕ ಮೊದಲು ಬ್ಯಾಟಿಂಗ್ ಮಾಡಿದ ತಂಡ ಬೌಲಿಂಗ್ಗೆ ಇಳಿದಾಗ ಅವರಿಗೂ ಇದೇ ಕ್ರಮವನ್ನು ಅನುಸರಿಸಲಾಗುತ್ತದೆ. ಇಲ್ಲಿಯೂ ಸಹ ಬೌಲಿಂಗ್ ಮಾಡುವ ತಂಡದ ಬೌಲರ್‌ಗಳು ತಮ್ಮ ಆದ್ಯತೆಗೆ ಅನುಗುಣವಾಗಿ ಎರಡು ಚೆಂಡುಗಳನ್ನು ಆಯ್ಕೆ ಮಾಡುತ್ತಾರೆ. ನಂತರ ಬಾಕ್ಸ್ನಲ್ಲಿ ಉಳಿದ ಚೆಂಡುಗಳನ್ನು ನಾಲ್ಕನೇ ಅಂಪೈರ್‌ಗೆ ಹಸ್ತಾಂತರಿಸುತ್ತಾರೆ, ಇತರ ಪಂದ್ಯದ ಅಧಿಕಾರಿಗಳ ಮುಂದೆ ಇದೆಲ್ಲವೂ ನಡೆಯುತ್ತದೆ. ಹೀಗಾಗಿ ಟೀಂ ಇಂಡಿಯಾ ಬೌಲರ್ಗಳಿಗೆ ಬೇರೆಯದ್ದೆ ಚೆಂಡುಗಳನ್ನು ನೀಡಲಾಗುತ್ತಿದೆ ಎಂಬ ಆರೋಪದಲ್ಲಿ ಹುರುಳಿಲ್ಲ ಎಂದ ಅಕ್ರಮ್ ಹೇಳಿದ್ದಾರೆ.
ಭಾರತದ ಬೌಲರ್‌ಗಳನ್ನು ಹೊಗಳಲೇಬೇಕು
ಆರೋಪಕ್ಕೆ ಸ್ಪಷ್ಟನೆ ನೀಡಿದ ಬಳಿಕ ಟೀಂ ಇಂಡಿಯಾ ವೇಗಿಗಳನ್ನು ಹೊಗಳಿರುವ ಅಕ್ರಮ್, ಭಾರತೀಯ ಬೌಲರ್‌ಗಳನ್ನು ಮೆಚ್ಚಲೇಬೇಕು. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್, ಈ ಮೂವರು ವೇಗಿಗಳು ನಮ್ಮ ತಂಡದ ಬೌಲರ್ಗಳಿಗಿಂತ ಮುಂದಿದ್ದಾರೆ. ನಮ್ಮ ದೇಶ ಸೇರಿದಂತೆ ಇತರ ದೇಶಗಳ ಬೌಲರ್ಗಳಿಗಿಂತ ಭಾರತದ ವೇಗಿಗಳು ಚೆಂಡಿನ ರಫ್ ಸೈಡ್ ಹಾಗೂ ಶೈನಿ ಸೈಡಿನ ಬಗ್ಗೆ ಹೆಚ್ಚುವರಿಯಾಗಿ ಏನನ್ನಾದರೂ ಕಲಿತಿರಬಹುದು ಎಂದು ನಾನು ಭಾವಿಸುತ್ತೇನೆ. ಹಾಗಾಗಿಯೇ ಭಾರತದ ವೇಗಿಗಳು ಇತರ ತಂಡದ ವೇಗಿಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿರಬಹುದು ಎಂದು ಅಕ್ರಮ್ ಹೇಳಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:26 pm, Sat, 4 November 23