ICC World Cup 2023: ನೆದರ್​ಲ್ಯಾಂಡ್ಸ್ ‘ಬಾಸ್’: ವಿಶ್ವಕಪ್​ಗೆ ಎಂಟ್ರಿಕೊಟ್ಟ ಡಚ್ಚರು

| Updated By: ಝಾಹಿರ್ ಯೂಸುಫ್

Updated on: Jul 06, 2023 | 8:06 PM

Netherlands vs Scotland: ಅಂಕಪಟ್ಟಿಯಲ್ಲಿ 6 ಅಂಕಗಳೊಂದಿಗೆ ಸ್ಕಾಟ್​ಲ್ಯಾಂಡ್​ ತಂಡವು ಏಕದಿನ ವಿಶ್ವಕಪ್​ಗೆ ಅರ್ಹತೆ ಪಡೆಯುವ ನಿರೀಕ್ಷೆಯಲ್ಲಿದ್ದರು. ಇಲ್ಲಿ ನಿಗದಿತ ಓವರ್​ಗಳಲ್ಲಿ ನೆದರ್​ಲ್ಯಾಂಡ್ಸ್​ಗೆ ಚೇಸ್ ಮಾಡಲು ಸಾಧ್ಯವಾಗದಿದ್ದರೆ, ಗೆದ್ದರೂ ಸೋತರೂ ಸ್ಕಾಟ್​ಲ್ಯಾಂಡ್​ ವಿಶ್ವಕಪ್​ಗೆ ಅರ್ಹತೆ ಪಡೆಯುತ್ತಿತ್ತು.

ICC World Cup 2023: ನೆದರ್​ಲ್ಯಾಂಡ್ಸ್ ಬಾಸ್: ವಿಶ್ವಕಪ್​ಗೆ ಎಂಟ್ರಿಕೊಟ್ಟ ಡಚ್ಚರು
Netherlands
Follow us on

ICC World Cup Qualifiers 2023: ಝಿಂಬಾಬ್ವೆಯ ಬುಲವಾಯೊದಲ್ಲಿ ನಡೆದ ಏಕದಿನ ವಿಶ್ವಕಪ್​ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಸ್ಕಾಟ್​ಲ್ಯಾಂಡ್ (Scotland)​​​ ವಿರುದ್ಧ ನೆದರ್​ಲ್ಯಾಂಡ್ಸ್ (Netherlands)ತಂಡವು  ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ನೆದರ್​​ಲ್ಯಾಂಡ್ಸ್​ವು​ ತಂಡವು ಏಕದಿನ ವಿಶ್ವಕಪ್​ಗೆ ಅರ್ಹತೆ ಪಡೆದುಕೊಂಡಿದೆ. ಅದರಂತೆ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ನಲ್ಲಿ ನೆದರ್​ಲ್ಯಾಂಡ್ಸ್​ ತಂಡ ಕೂಡ ಕಾಣಿಸಿಕೊಳ್ಳಲಿದೆ.

ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ನೆದರ್​​ಲ್ಯಾಂಡ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್​ ಆರಂಭಿಸಿದ ಸ್ಕಾಟ್​ಲ್ಯಾಂಡ್ ಪರ ಬ್ರಾಂಡನ್ ಮೆಕ್​ಮುಲ್ಲೆನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮೆಕ್​ಮುಲ್ಲೆನ್ ಆಕರ್ಷಕ ಬ್ಯಾಟಿಂಗ್ ಮೂಲಕ ಮೈದಾನದ ಮೂಲೆ ಮೂಲೆಗೂ ಸಿಕ್ಸ್​-ಫೋರ್​ಗಳನ್ನು ಬಾರಿಸಿದರು.

ಪರಿಣಾಮ ಮುಲ್ಲೆನ್ ಬ್ಯಾಟ್​ನಿಂದ 106 ಎಸೆತಗಳಲ್ಲಿ ಶತಕ ಮೂಡಿಬಂತು. ಆದರೆ ಸೆಂಚುರಿ ಬೆನ್ನಲ್ಲೇ 110 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 11 ಫೋರ್​ನೊಂದಿಗೆ 106 ರನ್​ಗಳಿಸಿ ಮೆಕ್​ಮುಲ್ಲೆನ್ ಔಟಾದರು.

ಆ ಬಳಿಕ ಕ್ರೀಸ್​ಗೆ ಆಗಮಿಸಿದ ನಾಯಕ ರಿಚಿ ಬೆರಿಂಗ್ಟನ್ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. 84 ಎಸೆತಗಳಲ್ಲಿ 64 ರನ್ ಬಾರಿಸುವ ಮೂಲಕ ಬೆರಿಂಗ್ಟನ್ ತಂಡದ ಮೊತ್ತವನ್ನು 200 ರ ಗಡಿದಾಟಿಸಿದರು. ಇನ್ನು ಕೆಳ ಕ್ರಮಾಂಕದಲ್ಲಿ ಥಾಮಸ್ ಮ್ಯಾಕಿಂತೋಷ್ 28 ಎಸೆತಗಳಲ್ಲಿ 38 ರನ್ ಬಾರಿಸುವ ಮೂಲಕ ಸ್ಕಾಟ್​ಲ್ಯಾಂಡ್ ತಂಡದ ಸ್ಕೋರ್ ಅನ್ನು 9 ವಿಕೆಟ್ ನಷ್ಟಕ್ಕೆ 277 ಕ್ಕೆ ತಂದು ನಿಲ್ಲಿಸಿದರು.

ಆದರೆ ಸ್ಕಾಟ್​ಲ್ಯಾಂಡ್​ಗಿಂತ ಹೆಚ್ಚಿನ ರನ್​ ರೇಟ್ ಪಡೆದು ವಿಶ್ವಕಪ್​ಗೆ ಅರ್ಹತೆ ಪಡೆಯಲು ನೆದರ್​ಲ್ಯಾಂಡ್ಸ್​ ತಂಡವು ಕೇವಲ 44 ಓವರ್​ಗಳಲ್ಲಿ ಈ ಗುರಿಯನ್ನು ಚೇಸ್ ಮಾಡಬೇಕಿತ್ತು. ಅದರಂತೆ 278 ರನ್​ಗಳ ಟಾರ್ಗೆಟ್​ನೊಂದಿಗೆ ಇನಿಂಗ್ಸ್ ಆರಂಭಿಸಿದ ನೆದರ್​ಲ್ಯಾಂಡ್ಸ್ ತಂಡಕ್ಕೆ  ವಿಕ್ರಮ್​ಜಿತ್ ಸಿಂಗ್ (40) ಬಿರುಸಿನ ಆರಂಭ ಒದಗಿಸಿದ್ದರು. ಆದರೆ ಮತ್ತೊಂದು ಬದಿಯಲ್ಲಿ ಉತ್ತಮ ಸಾಥ್ ದೊರೆತಿರಲಿಲ್ಲ. ಪರಿಣಾಮ 23 ಓವರ್​ಗಳಲ್ಲಿ ನೆದರ್​ಲ್ಯಾಂಡ್ಸ್ ತಂಡವು 108 ರನ್​ಗಳಿಸಿದರೂ 4 ವಿಕೆಟ್ ಕಳೆದುಕೊಂಡಿತು.

ನೆದರ್​ಲ್ಯಾಂಡ್ಸ್​ ಪರ ಬಾಸ್ ಈಸ್ ಬಾಸ್:

ಈ ಹಂತದಲ್ಲಿ ಕಣಕ್ಕಿಳಿದ ಬಾಸ್ ಡಿ ಲೀಡೆ ಇಡೀ ಪಂದ್ಯದ ಚಿತ್ರಣ ಬದಲಿಸಿದರು. ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಬಾಸ್ ಡಿ ಸ್ಕಾಟ್​ಲ್ಯಾಂಡ್ ಬೌಲರ್​ಗಳ ಬೆಂಡೆತ್ತಿದರು. ಈ ಮೂಲಕ ಕೇವಲ 83 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಹಂತದಲ್ಲಿ ಉತ್ತಮ ನೆಟ್​ ರನ್​ ರೇಟ್​ನೊಂದಿಗೆ ವಿಶ್ವಕಪ್​ಗೆ ಅರ್ಹತೆ ಪಡೆಯಲು ನೆದರ್​ಲ್ಯಾಂಡ್ಸ್ ತಂಡವು 4 ಓವರ್​ಗಳಲ್ಲಿ 45 ರನ್​ಗಳಿಸಬೇಕಿತ್ತು.

41ನೇ ಓವರ್​ನಲ್ಲಿ ಸಾಖಿಬ್ ಝುಲ್ಫಿಕರ್ ಹಾಗೂ ಬಾಸ್ ಡಿ ಲೀಡೆ ಜೊತೆಗೂಡಿ ಮಾರ್ಕ್​ ವ್ಯಾಟ್​ ಓವರ್​ನಲ್ಲಿ 22 ರನ್​ ಚಚ್ಚಿದರು. ಇನ್ನು 42ನೇ ಓವರ್​ನಲ್ಲಿ ಬಾಸ್ ಡಿ 20 ರನ್​ ಬಾರಿಸಿದರು. ಅಲ್ಲದೆ 42.5 ಓವರ್​ಗಳಲ್ಲಿ ನೆದರ್​ಲ್ಯಾಂಡ್ಸ್​ ತಂಡವು 6 ವಿಕೆಟ್ ನಷ್ಟಕ್ಕೆ 278 ರನ್​ಗಳ ಗುರಿ ತಲುಪಿತು. ಈ ಮೂಲಕ ಸ್ಕಾಟ್​ಲ್ಯಾಂಡ್​ ಅನ್ನು ನೆಟ್​ ರನ್​ ರೇಟ್​ನಲ್ಲಿ ಹಿಂದಿಕ್ಕಿ ನೆದರ್​ಲ್ಯಾಂಡ್ಸ್ ತಂಡವು ವಿಶ್ವಕಪ್​ಗೆ ಅರ್ಹತೆಗಿಟ್ಟಿಸಿಕೊಂಡಿತು.

ನೆದರ್​ಲ್ಯಾಂಡ್ಸ್​ ಪರ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ 92 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 7 ಫೋರ್​ನೊಂದಿಗೆ 123 ರನ್ ಬಾರಿಸಿದ ಬಾಸ್ ಡಿ ಲೀಡೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಇದನ್ನೂ ಓದಿ: IND vs AUS: ಏಕದಿನ ವಿಶ್ವಕಪ್​ಗೂ ಮುನ್ನ ಟೀಮ್ ಇಂಡಿಯಾದ ಮಾಸ್ಟರ್​ ಪ್ಲ್ಯಾನ್..!

ಸ್ಕಾಟ್​ಲ್ಯಾಂಡ್​ಗೆ ಬಿಗ್ ಶಾಕ್:

ಇದಕ್ಕೂ ಮುನ್ನ ಅಂಕಪಟ್ಟಿಯಲ್ಲಿ 6 ಅಂಕಗಳೊಂದಿಗೆ ಸ್ಕಾಟ್​ಲ್ಯಾಂಡ್​ ತಂಡವು ಏಕದಿನ ವಿಶ್ವಕಪ್​ಗೆ ಅರ್ಹತೆ ಪಡೆಯುವ ನಿರೀಕ್ಷೆಯಲ್ಲಿದ್ದರು. ಇಲ್ಲಿ ನಿಗದಿತ ಓವರ್​ಗಳಲ್ಲಿ ನೆದರ್​ಲ್ಯಾಂಡ್ಸ್​ಗೆ ಚೇಸ್ ಮಾಡಲು ಸಾಧ್ಯವಾಗದಿದ್ದರೆ, ಗೆದ್ದರೂ ಸೋತರೂ ಸ್ಕಾಟ್​ಲ್ಯಾಂಡ್​ ವಿಶ್ವಕಪ್​ಗೆ ಅರ್ಹತೆ ಪಡೆಯುತ್ತಿತ್ತು. ಆದರೆ ಕೇವಲ 44 ಓವರ್​ಗಳಲ್ಲಿ ಬೃಹತ್ ಗುರಿ ಬೆನ್ನತ್ತಿ ನೆದರ್​ಲ್ಯಾಂಡ್ಸ್ ತಂಡ ಸ್ಕಾಟ್​ಲ್ಯಾಂಡ್​ಗೆ ಶಾಕ್ ನೀಡಿರುವುದು ವಿಶೇಷ. ಈ ಮೂಲಕ 10ನೇ ತಂಡವಾಗಿ ಏಕದಿನ ವಿಶ್ವಕಪ್​ಗೆ ಎಂಟ್ರಿ ಕೊಟ್ಟಿದೆ.

 

 

Published On - 7:45 pm, Thu, 6 July 23