ICC World Cup 2023: ಝಿಂಬಾಬ್ವೆಗೆ ಸೋಲುಣಿಸಿದ ಸ್ಕಾಟ್ಲ್ಯಾಂಡ್
ICC World Cup Qualifiers 2023: ನಿರ್ಣಾಯಕ ಪಂದ್ಯದಲ್ಲಿ ಸೋತಿರುವ ಝಿಂಬಾಬ್ವೆ ಇನ್ನು ಸ್ಕಾಟ್ಲ್ಯಾಂಡ್ ತಂಡದ ಮುಂದಿನ ಫಲಿತಾಂಶವನ್ನು ಎದುರು ನೋಡಬೇಕಿದೆ.
ICC World Cup Qualifiers 2023: ಬುಲವಾಯೊದಲ್ಲಿ ನಡೆದ ಏಕದಿನ ವಿಶ್ವಕಪ್ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಝಿಂಬಾಬ್ವೆ ವಿರುದ್ಧ ಸ್ಕಾಟ್ಲ್ಯಾಂಡ್ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಏಕದಿನ ವಿಶ್ವಕಪ್ ಆಸೆಯನ್ನು ಸ್ಕಾಟ್ಲ್ಯಾಂಟ್ ತಂಡವು ಜೀವಂತವಿರಿಸಿಕೊಂಡಿದೆ. ಇತ್ತ ನಿರ್ಣಾಯಕ ಪಂದ್ಯದಲ್ಲಿ ಸೋತಿರುವ ಝಿಂಬಾಬ್ವೆ ಇನ್ನು ಸ್ಕಾಟ್ಲ್ಯಾಂಡ್ ತಂಡದ ಮುಂದಿನ ಫಲಿತಾಂಶವನ್ನು ಎದುರು ನೋಡಬೇಕಿದೆ. ಒಂದು ವೇಳೆ ನೆದರ್ಲ್ಯಾಂಡ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಸ್ಕಾಟ್ಲ್ಯಾಂಡ್ ಗೆದ್ದರೆ ಏಕದಿನ ವಿಶ್ವಕಪ್ಗೆ ಅರ್ಹತೆ ಪಡೆಯಲಿದೆ.
ಇನ್ನು ಪಂದ್ಯದಲ್ಲಿ ಟಾಸ್ ಗೆದ್ದ ಝಿಂಬಾಬ್ವೆ ತಂಡವು ಫೀಲ್ಡಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲ್ಯಾಂಡ್ ತಂಡಕ್ಕೆ ಆರಂಭಿಕರಾದ ಕ್ರಿಸ್ಟೋಫರ್ (28) ಹಾಗೂ ಮ್ಯಾಥ್ಯೂ ಕ್ರಾಸ್ (38) ಉತ್ತಮ ಆರಂಭ ಒದಗಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮೆಕ್‌ಮುಲ್ಲೆನ್ 34 ರನ್ ಬಾರಿಸಿದರೆ, ಮುನ್ಸಿ 31 ರನ್ಗಳ ಕೊಡುಗೆ ನೀಡಿದರು. ಪರಿಣಾಮ 25 ಓವರ್ಗಳಲ್ಲಿ ಸ್ಕಾಟ್ಲ್ಯಾಂಡ್ ತಂಡದ ಮೊತ್ತ 100ರ ಗಡಿದಾಟಿತು.
ಈ ಹಂತದಲ್ಲಿ ಉತ್ತಮ ದಾಳಿ ಸಂಘಟಿಸಿದ ಶಾನ್ ವಿಲಿಯಮ್ಸ್ ಬ್ಯಾಕ್ ಟು ಬ್ಯಾಕ್ 2 ವಿಕೆಟ್ ಕಬಳಿಸಿದರು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಮೈಕಲ್ ಲೀಸ್ಕ್ 34 ಎಸೆತಗಳಲ್ಲಿ 48 ರನ್ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು. ಇದರೊಂದಿಗೆ ಸ್ಕಾಟ್ಲ್ಯಾಂಡ್ ತಂಡವು ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 234 ರನ್ ಪೇರಿಸಿತು.
235 ರನ್ಗಳ ಗುರಿ ಪಡೆದ ಝಿಂಬಾಬ್ವೆ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಇನಿಂಗ್ಸ್ನ ಮೊದಲ ಎಸೆತದಲ್ಲೇ ಜಾಯ್ಲಾರ್ಡ್ ಗುಂಬಿ (0) ಕ್ರಿಸ್ ಸೋಲ್ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ನಾಯಕ ಕ್ರೇಗ್ ಇರ್ವಿನ್ (2) ಕೂಡ ಸೋಲ್ ಎಸೆತದಲ್ಲಿ ಬೌಲ್ಡ್ ಆದರು.
ಇನ್ನು ಇನ್ನೊಸೆಂಟ್ ಕೈಯ (12) ಬಂದ ವೇಗದಲ್ಲೇ ಹಿಂತಿರುಗಿದರೆ, ಶಾನ್ ವಿಲಿಯಮ್ಸ್ 12 ರನ್ಗಳಿಸಿ ಇನಿಂಗ್ಸ್ ಅಂತ್ಯಗೊಳಿಸಿದರು. ಕೇವಲ 37 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಸಿಕಂದರ್ ರಾಝ ಹಾಗೂ ರಯಾನ್ ಬರ್ಲ್ ಆಸರೆಯಾದರು.
ಉತ್ತಮ ಜೊತೆಯಾಟ ಪ್ರದರ್ಶಿಸಿದ ಈ ಜೋಡಿ 5ನೇ ವಿಕೆಟ್ಗೆ 54 ರನ್ ಪೇರಿಸಿದರು. ಆದರೆ ಈ ಹಂತದಲ್ಲಿ 34 ರನ್ಗಳಿಸಿದ್ದ ಸಿಕಂದರ್ ರಾಝ ಕ್ರಿಸ್ ಗ್ರೀವ್ಸ್ಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ರಯಾನ್ ಬರ್ಲ್ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದರು. ಅಲ್ಲದೆ ವೆಸ್ಲಿ ಮಾಧೆವೆರೆ (40) ಜೊತೆಗೂಡಿ 73 ರನ್ಗಳ ಜೊತೆಯಾಟವಾಡಿದರು.
ಈ ಹಂತದಲ್ಲಿ ದಾಳಿಗಿಳಿದ ಮಾರ್ಕ್ ವ್ಯಾಟ್ ಎಸೆತದಲ್ಲಿ ಮಾಧೆವೆರೆ ಎಲ್ಬಿಡಬ್ಲ್ಯೂ ಆದರು. ಇದರ ಬೆನ್ನಲ್ಲೇ ವೆಲ್ಲಿಂಗ್ಟನ್ ಮಸಕಡ್ಝ (5) ಕೂಡ ವಿಕೆಟ್ ಒಪ್ಪಿಸಿದರು. ಆದರೆ ಮತ್ತೊಂದೆಡೆ ಗಟ್ಟಿಯಾಗಿ ನೆಲೆಯೂರಿದ್ದ ರಯಾನ್ ಬರ್ಲ್ ಅರ್ಧಶತಕ ಪೂರೈಸಿದರು.
ಕೊನೆಯ 15 ಓವರ್ಗಳಲ್ಲಿ ಝಿಂಬಾಬ್ವೆಗೆ ಗೆಲ್ಲಲು 58 ರನ್ಗಳ ಅವಶ್ಯಕತೆಯಿತ್ತು. ಅತ್ತ ಸ್ಕಾಟ್ಲ್ಯಾಂಡ್ ತಂಡಕ್ಕೆ 3 ವಿಕೆಟ್ಗಳ ಅಗತ್ಯತೆಯಿತ್ತು. ಈ ಹಂತದಲ್ಲಿ ರಿಚರ್ಡ್ (2) ಔಟಾದರು. ಇದರ ಬೆನ್ನಲ್ಲೇ ಬಿರುಸಿನ ಬ್ಯಾಟಿಂಗ್ ಮೂಲಕ 83 ರನ್ಗಳಿಸಿದ್ದ ರಯಾನ್ ಬರ್ಲ್ ಕೂಡ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಝಿಂಬಾಬ್ವೆ ತಂಡವು 203 ರನ್ಗಳಿಗೆ ಆಲೌಟ್ ಆಯಿತು. ಈ ಮೂಲಕ ಸ್ಕಾಟ್ಲ್ಯಾಂಡ್ ತಂಡವು 31 ರನ್ಗಳ ಜಯ ಸಾಧಿಸಿತು.
ಝಿಂಬಾಬ್ವೆ ಪ್ಲೇಯಿಂಗ್ 11: ಜಾಯ್ಲಾರ್ಡ್ ಗುಂಬಿ (ವಿಕೆಟ್ ಕೀಪರ್) , ಕ್ರೇಗ್ ಇರ್ವಿನ್ (ನಾಯಕ) , ಇನೋಸೆಂಟ್ ಕೈಯಾ , ಶಾನ್ ವಿಲಿಯಮ್ಸ್ , ಸಿಕಂದರ್ ರಾಝ , ರಯಾನ್ ಬರ್ಲ್ , ವೆಸ್ಲಿ ಮಾಧೆವೆರೆ , ವೆಲ್ಲಿಂಗ್ಟನ್ ಮಸಕಡ್ಝ , ರಿಚರ್ಡ್ ನಾಗರವಾ , ಟೆಂಡೈ ಚಟಾರಾ , ಬ್ಲೆಸ್ಸಿಂಗ್ ಮುಜರಬಾನಿ.
ಇದನ್ನೂ ಓದಿ: IND vs AUS: ಏಕದಿನ ವಿಶ್ವಕಪ್ಗೂ ಮುನ್ನ ಟೀಮ್ ಇಂಡಿಯಾದ ಮಾಸ್ಟರ್ ಪ್ಲ್ಯಾನ್..!
ಸ್ಕಾಟ್ಲ್ಯಾಂಡ್ ಪ್ಲೇಯಿಂಗ್ 11: ಕ್ರಿಸ್ಟೋಫರ್ ಮೆಕ್‌ಬ್ರೈಡ್ , ಮ್ಯಾಥ್ಯೂ ಕ್ರಾಸ್ (ವಿಕೆಟ್ ಕೀಪರ್) , ಬ್ರಾಂಡನ್ ಮೆಕ್‌ಮುಲ್ಲೆನ್ , ಜಾರ್ಜ್ ಮುನ್ಸಿ , ರಿಚಿ ಬೆರಿಂಗ್ಟನ್ (ನಾಯಕ) , ತೋಮಸ್ ಮ್ಯಾಕಿಂತೋಷ್ , ಮೈಕೆಲ್ ಲೀಸ್ಕ್ , ಕ್ರಿಸ್ ಗ್ರೀವ್ಸ್ , ಮಾರ್ಕ್ ವ್ಯಾಟ್ , ಸಫ್ಯಾನ್ ಷರೀಫ್ , ಕ್ರಿಸ್ ಸೋಲ್.