ICC World Cup Qualifiers 2023: ವೆಸ್ಟ್ ಇಂಡೀಸ್​ ತಂಡವನ್ನು ಮಕಾಡೆ ಮಲಗಿಸಿದ ಸ್ಕಾಟ್​ಲ್ಯಾಂಡ್​

ICC World Cup Qualifiers 2023: ಏಕದಿನ ವಿಶ್ವಕಪ್ ಅರ್ಹತಾ ಸುತ್ತಿನ ಲೀಗ್ ಹಂತದ ಪಂದ್ಯಗಳಲ್ಲಿ ಝಿಂಬಾಬ್ವೆ ಹಾಗೂ ನೆದರ್​ಲ್ಯಾಂಡ್ಸ್​ ತಂಡಗಳು ವೆಸ್ಟ್ ಇಂಡೀಸ್ ತಂಡಕ್ಕೆ ಸೋಲುಣಿಸಿತ್ತು.

ICC World Cup Qualifiers 2023: ವೆಸ್ಟ್ ಇಂಡೀಸ್​ ತಂಡವನ್ನು ಮಕಾಡೆ ಮಲಗಿಸಿದ ಸ್ಕಾಟ್​ಲ್ಯಾಂಡ್​
WI vs SCO
Edited By:

Updated on: Jul 01, 2023 | 7:19 PM

ICC World Cup Qualifiers 2023: ಹರಾರೆಯಲ್ಲಿ ನಡೆದ ಏಕದಿನ ವಿಶ್ವಕಪ್ (ODI World Cup 2023) ಅರ್ಹತಾ ಸುತ್ತಿನ ಸೂಪರ್ ಸಿಕ್ಸ್ ಪಂದ್ಯದಲ್ಲಿ  ವೆಸ್ಟ್ ಇಂಡೀಸ್ ವಿರುದ್ಧ ಸ್ಕಾಟ್​ಲ್ಯಾಂಡ್​ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಸ್ಕಾಟ್​ಲ್ಯಾಂಡ್​ ತಂಡದ ನಾಯಕ ರಿಚಿ ಬೆರಿಂಗ್ಟನ್ ಫೀಲ್ಡಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್​ ಆರಂಭಿಸಿದ ವೆಸ್ಟ್ ಇಂಡೀಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಜಾನ್ಸನ್ ಚಾರ್ಲ್ಸ್​ (0) ಶೂನ್ಯಕ್ಕೆ ಔಟಾದರೆ, 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಮರ್ ಬ್ರೂಕ್ಸ್ (0) ಸೊನ್ನೆ ಸುತ್ತಿ ಹಿಂತಿರುಗಿದ್ದರು. ಹಾಗೆಯೇ ಮತ್ತೋರ್ವ ಆರಂಭಿಕ ಆಟಗಾರ ಬ್ರಾಂಡನ್ ಕಿಂಗ್ 22 ರನ್​ಗಳಿಸಿ ವಿಕೆಟ್ ಒಪ್ಪಿಸಿದರು.

ಇನ್ನು ನಾಯಕ ಶಾಯ್ ಹೋಪ್ (13) ಹಾಗೂ ನಿಕೋಲಸ್ ಪೂರನ್ (21) ಅವರ​ ಇನಿಂಗ್ಸ್​ ಅಲ್ಪ ಮೊತ್ತಕ್ಕೆ ಸೀಮಿತವಾಯಿತು. ಇದಾಗ್ಯೂ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಜೇಸನ್ ಹೋಲ್ಡರ್ 79 ಎಸೆತಗಳಲ್ಲಿ 45 ರನ್​ ಕಲೆಹಾಕಿದರು.
ಆದರೆ ಕ್ರಿಸ್ ಗ್ರೀವ್ಸ್ ಜೇಸನ್ ಹೋಲ್ಡರ್ ವಿಕೆಟ್ ಪಡೆಯುವ ಮೂಲಕ ಸ್ಕಾಟ್​ಲ್ಯಾಂಡ್ ಅಮೂಲ್ಯ ಯಶಸ್ಸು ತಂದುಕೊಟ್ಟರು.

ಇದರ ಬೆನ್ನಲ್ಲೇ ರೊಮಾರಿಯೋ ಶೆಫರ್ಡ್ (36) ಗೆ ಮಾರ್ಕ್​ ವ್ಯಾಟ್ ಪೆವಿಲಿಯನ್ ಹಾದಿ ತೋರಿಸಿದರು. ಅಂತಿಮವಾಗಿ ವೆಸ್ಟ್ ಇಂಡೀಸ್ ತಂಡವು 43.5 ಓವರ್​ಗಳಲ್ಲಿ 181 ರನ್​ಗಳಿಸಿ ಸರ್ವಪತನ ಕಂಡಿತು.

182 ರನ್​ಗಳ ಸುಲಭ ಗುರಿ ಪಡೆದ ಸ್ಕಾಟ್​ಲ್ಯಾಂಡ್ ತಂಡವು ಮೊದಲ ಎಸೆತದಲ್ಲೇ ಕ್ರಿಸ್ಟೋಫರ್ (0) ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಸಿಲುಕಿತು. ಈ ಹಂತದಲ್ಲಿ ಜೊತೆಯಾದ ಮ್ಯಾಥ್ಯೂ ಕ್ರಾಸ್ ಹಾಗೂ ಬ್ರಾಂಡನ್ ಮೆಕ್‌ಮುಲ್ಲೆನ್ 125 ರನ್​ಗಳ ಭರ್ಜರಿ ಜೊತೆಯಾಟವಾಡಿದರು.

ಈ ಹಂತದಲ್ಲಿ 69 ರನ್​ಗಳಿಸಿದ್ದ ಬ್ರಾಂಡನ್ ಮೆಕ್‌ಮುಲ್ಲೆನ್ ರೊಮಾರಿಯೊ ಶೆಫರ್ಡ್​ಗೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಜೊತೆಗೂಡಿದ ಮ್ಯಾಥ್ಯೂ ಕ್ರಾಸ್ ಹಾಗೂ ಜಾರ್ಜ್​ ಮುನ್ಸಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ 3ನೇ ವಿಕೆಟ್​ಗೆ 37 ಜೊತೆಯಾಟ ಮಾಡಿಬಂತು.  ಈ ಹಂತದಲ್ಲಿ ಮುನ್ಸಿ (18) ಔಟಾದರು.

ಇದಾಗ್ಯೂ ಮತ್ತೊಂದೆಡೆ ಕ್ರೀಸ್ ಕಚ್ಚಿ ನಿಂತಿದ್ದ ಮ್ಯಾಥ್ಯೂ ಕ್ರಾಸ್ ವಿಂಡೀಸ್​ ದಾಳಿಯನ್ನು ನಿರಾಯಾಸವಾಗಿ ಎದುರಿಸಿದರು. ಅಲ್ಲದೆ 107 ಎಸೆತಗಳಲ್ಲಿ ಅಜೇಯ  74 ರನ್​ ಬಾರಿಸಿ 43.3 ಓವರ್​ಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು.  ಈ ಮೂಲಕ ಸ್ಕಾಟ್​ಲ್ಯಾಂಡ್ ತಂಡವು 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ವಿಶೇಷ ಎಂದರೆ ಇದು ವೆಸ್ಟ್ ಇಂಡೀಸ್​ ವಿರುದ್ಧ ಏಕದಿನ ಕ್ರಿಕೆಟ್​ನಲ್ಲಿ ಸ್ಕಾಟ್​ಲ್ಯಾಂಡ್ ತಂಡದ ಮೊದಲ ಜಯವಾಗಿದೆ.

ಇದಕ್ಕೂ ಮುನ್ನ ನಡೆದ ಏಕದಿನ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಝಿಂಬಾಬ್ವೆ ಹಾಗೂ ನೆದರ್​ಲ್ಯಾಂಡ್ಸ್​ ತಂಡಗಳು ವೆಸ್ಟ್ ಇಂಡೀಸ್ ತಂಡಕ್ಕೆ ಸೋಲುಣಿಸಿತ್ತು. ಇದೀಗ ಸ್ಕಾಟ್​ಲ್ಯಾಂಡ್ ಕೂಡ ಕೆರಿಬಿಯನ್ನರ ವಿರುದ್ಧ ಭರ್ಜರಿ ಜಯ ಸಾಧಿಸಿರುವುದು ವಿಶೇಷ.

ವೆಸ್ಟ್ ಇಂಡೀಸ್ ಪ್ಲೇಯಿಂಗ್ 11: ಬ್ರಾಂಡನ್ ಕಿಂಗ್ , ಜಾನ್ಸನ್ ಚಾರ್ಲ್ಸ್ , ಶಮರ್ ಬ್ರೂಕ್ಸ್ , ಶಾಯ್ ಹೋಪ್ (ನಾಯಕ) , ನಿಕೋಲಸ್ ಪೂರನ್ , ಕೈಲ್ ಮೇಯರ್ಸ್ , ಕೆವಿನ್ ಸಿಂಕ್ಲೇರ್ , ಜೇಸನ್ ಹೋಲ್ಡರ್ , ರೊಮಾರಿಯೋ ಶೆಫರ್ಡ್ , ಅಕೀಲ್ ಹೋಸೇನ್ , ಅಲ್ಝಾರಿ ಜೋಸೆಫ್.

ಇದನ್ನೂ ಓದಿ: ODI World Cup 2023: ಏಕದಿನ ವಿಶ್ವಕಪ್​ಗಾಗಿ ಟೀಮ್ ಇಂಡಿಯಾದ 35 ಆಟಗಾರರ ಪಟ್ಟಿ ರೆಡಿ..!

ಸ್ಕಾಟ್​ಲ್ಯಾಂಡ್ ಪ್ಲೇಯಿಂಗ್ 11: ಮ್ಯಾಥ್ಯೂ ಕ್ರಾಸ , ಕ್ರಿಸ್ಟೋಫರ್ ಮ್ಯಾಕ್‌ಬ್ರೈಡ್ , ಬ್ರಾಂಡನ್ ಮೆಕ್‌ಮುಲ್ಲೆನ್ , ಜಾರ್ಜ್ ಮುನ್ಸಿ , ರಿಚಿ ಬೆರಿಂಗ್ಟನ್ (ನಾಯಕ) , ತೋಮಸ್ ಮ್ಯಾಕಿಂತೋಷ್ , ಮೈಕೆಲ್ ಲೀಸ್ಕ್ , ಕ್ರಿಸ್ ಗ್ರೀವ್ಸ್ , ಮಾರ್ಕ್ ವ್ಯಾಟ್ , ಸಫ್ಯಾನ್ ಷರೀಫ್ , ಕ್ರಿಸ್ ಸೋಲ್.