Team India: ಟೀಮ್ ಇಂಡಿಯಾದ ಪ್ರಮುಖ ಪ್ರಾಯೋಜಕತ್ವ ಡ್ರೀಮ್11 ತೆಕ್ಕೆಗೆ..!
Team India: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಸರಣಿಯು ಜುಲೈ 12 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಮೊದಲಿಗೆ 2 ಟೆಸ್ಟ್ ಪಂದ್ಯಗಳನ್ನಾಡಲಾಗುತ್ತದೆ.
ಫ್ಯಾಂಟಸಿ ಸ್ಪೋರ್ಟ್ಸ್ ಗೇಮಿಂಗ್ ಪ್ಲಾಟ್‌ಫಾರ್ಮ್ ಡ್ರೀಮ್11 (Dream11) ಭಾರತ ತಂಡದ (Team India) ಹೊಸ ಪ್ರಾಯೋಜಕರಾಗಿ ಆಯ್ಕೆಯಾಗಿದೆ. ಈ ಹಿಂದೆಯಿದ್ದ ಬೈಜೂಸ್ ಕಂಪೆನಿಯ ಪ್ರಾಯೋಜಕತ್ವವು ಮಾರ್ಚ್ ತಿಂಗಳಲ್ಲಿ ಕೊನೆಗೊಂಡಿತ್ತು. ಇದೀಗ ಹೊಸ ಪ್ರಾಯೋಜಕರಾಗಿ ಡ್ರೀಮ್11 ಜೊತೆ ಒಪ್ಪಂದ ಮಾಡಿಕೊಂಡಿರುವುದಾಗಿ ಬಿಸಿಸಿಐ ತಿಳಿಸಿದೆ. ಡ್ರೀಮ್11 ಈ ಪ್ರಾಯೋಜಕತ್ವದ ಹಕ್ಕುಗಳನ್ನು ಸುಮಾರು 358 ಕೋಟಿ ರೂಪಾಯಿಗೆ ಖರೀದಿಸಿದೆ ಎಂದು ವರದಿಯಾಗಿದೆ. ಅದರಂತೆ ಮುಂದಿನ ಮೂರು ವರ್ಷಗಳ ಕಾಲ ಟೀಮ್ ಇಂಡಿಯಾ ಜೆರ್ಸಿ ಮೇಲೆ ಡ್ರೀಮ್11 ಜಾಹೀರಾತು ಕಾಣಿಸಿಕೊಳ್ಳಲಿದೆ.
ಈ ಜಾಹೀರಾತು ಒಪ್ಪಂದವು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯೊಂದಿಗೆ ಆರಂಭವಾಗಲಿದ್ದು, 2025ರವರೆಗೆ ಮುಂದುವರೆಯಲಿದೆ. ಹೀಗಾಗಿ ವಿಂಡೀಸ್ ವಿರುದ್ಧದ ಮುಂಬರುವ ಟೆಸ್ಟ್, ಏಕದಿನ ಹಾಗೂ ಟಿ20 ಸರಣಿಗಳಲ್ಲಿ ಟೀಮ್ ಇಂಡಿಯಾ ಜೆರ್ಸಿ ಮೇಲೆ ಡ್ರೀಮ್11 ಜಾಹೀರಾತು ರಾರಾಜಿಸಲಿದೆ.
ಇನ್ನು ಈ ಒಪ್ಪಂದದ ಬಗ್ಗೆ ಮಾತನಾಡಿರುವ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ನಾನು ಡ್ರೀಮ್ 11 ಅನ್ನು ಅಭಿನಂದಿಸುತ್ತೇನೆ. ಬಿಸಿಸಿಐಯ ಅಧಿಕೃತ ಪ್ರಾಯೋಜಕತ್ವದಿಂದ ಡ್ರೀಮ್11 ಈಗ ಪ್ರಮುಖ ಪ್ರಾಯೋಜಕರಾಗಿದ್ದಾರೆ. ಇದು ಭಾರತೀಯ ಕ್ರಿಕೆಟ್ ನೀಡುವ ನಂಬಿಕೆ, ಮೌಲ್ಯ, ಸಾಮರ್ಥ್ಯ ಮತ್ತು ಬೆಳವಣಿಗೆಗೆ ನೇರ ಸಾಕ್ಷಿಯಾಗಿದೆ. ಈ ವರ್ಷದ ಕೊನೆಯಲ್ಲಿ ಐಸಿಸಿ ವಿಶ್ವಕಪ್ ಅನ್ನು ಆಯೋಜಿಸಲು ನಾವು ತಯಾರಿ ನಡೆಸುತ್ತಿರುವಾಗ, ಅಭಿಮಾನಿಗಳ ಅನುಭವವನ್ನು ಹೆಚ್ಚಿಸುವುದು ನಮ್ಮ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ಈ ಪಾಲುದಾರಿಕೆಯು ಅಭಿಮಾನಿಗಳ ಅನುಭವವನ್ನು ಹೆಚ್ಚಿಸಲು ನಮಗೆ ಸಹಾಯ ಮಾಡಲಿದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಬಿಸಿಸಿಐ ಪಾಲುದಾರಿಕೆಯ ಕುರಿತು ಪ್ರತಿಕ್ರಿಯಿಸಿದ ಡ್ರೀಮ್ ಸ್ಪೋರ್ಟ್ಸ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ಶ್ರೀ ಹರ್ಷ್ ಜೈನ್, ಬಿಸಿಸಿಐ ಮತ್ತು ಟೀಮ್ ಇಂಡಿಯಾದ ದೀರ್ಘಕಾಲದ ಪಾಲುದಾರರಾಗಿ, ನಮ್ಮ ಪಾಲುದಾರಿಕೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಡ್ರೀಮ್11 ಮತ್ತೊಂದು ಹೆಜ್ಜೆಯನ್ನಿಟ್ಟಿದೆ. Dream11 ಮೂಲಕ ನಾವು ಶತಕೋಟಿ ಭಾರತೀಯ ಕ್ರಿಕೆಟ್ ಅಭಿಮಾನಿಗಳೊಂದಿಗೆ ಕ್ರಿಕೆಟ್ ಮೇಲಿನ ಪ್ರೀತಿಯನ್ನು ಹಂಚಿಕೊಳ್ಳುತ್ತೇವೆ. ಹಾಗೆಯೇ ರಾಷ್ಟ್ರೀಯ ತಂಡಕ್ಕೆ ಪ್ರಮುಖ ಪ್ರಾಯೋಜಕರಾಗಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದ್ದಾರೆ.
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಸರಣಿಯು ಜುಲೈ 12 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಮೊದಲಿಗೆ 2 ಟೆಸ್ಟ್ ಪಂದ್ಯಗಳನ್ನಾಡಲಾಗುತ್ತದೆ. ಮೊದಲ ಟೆಸ್ಟ್ ಪಂದ್ಯ ಜುಲೈ 12 ರಿಂದ 16 ರವರೆಗೆ ನಡೆದರೆ, 2ನೇ ಪಂದ್ಯ ಜುಲೈ 20 ರಿಂದ 24ರವರೆಗೆ ನಡೆಯಲಿದೆ.
ಇದಾದ ಬಳಿಕ ಜುಲೈ 27, 29 ರಂದು ಮೊದಲ ಮತ್ತು 2ನೇ ಏಕದಿನ ಪಂದ್ಯ ನಡೆಯಲಿದೆ. ಹಾಗೆಯೇ ಆಗಸ್ಟ್ 1 ರಂದು ಮೂರನೇ ಏಕದಿನ ಪಂದ್ಯ ಜರುಗಲಿದೆ.
ಇದನ್ನೂ ಓದಿ: ODI World Cup 2023: ಏಕದಿನ ವಿಶ್ವಕಪ್ಗಾಗಿ ಟೀಮ್ ಇಂಡಿಯಾದ 35 ಆಟಗಾರರ ಪಟ್ಟಿ ರೆಡಿ..!
ಆಗಸ್ಟ್ 3 ರಿಂದ ಟಿ20 ಸರಣಿ ಶುರುವಾಗಲಿದ್ದು, ಈ ಸರಣಿಯ ಪಂದ್ಯಗಳು ಆಗಸ್ಟ್ 3, 6, 8, 12 ಮತ್ತು ಆಗಸ್ಟ್ 13 ರಂದು ಕ್ರಮವಾಗಿ ನಡೆಯಲಿದೆ.
Published On - 4:52 pm, Sat, 1 July 23