ಏಕದಿನ ವಿಶ್ವಕಪ್‌ನ ಹೊಸ ನಿಯಮಕ್ಕೆ ತೀವ್ರ ವಿರೋಧ!
ODI World Cup 2027: ಕ್ರಿಕೆಟ್ ಜಗತ್ತಿನಲ್ಲಿ ಸಮಾನತೆ ತರುತ್ತೇವೆ, ಜಾಗತಿಕವಾಗಿ ಕ್ರೀಡೆಯನ್ನು ವಿಸ್ತರಿಸುತ್ತೇವೆ ಎಂದು ಭರವಸೆ ನೀಡಿದ್ದ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC), ಈಗ ತನ್ನ ಮಾತಿಗೆ ತಾನೇ ದ್ರೋಹ ಬಗೆದಿದೆಯೇ? ಇಂತಹದೊಂದು ಗಂಭೀರ ಪ್ರಶ್ನೆ ಈಗ ಕ್ರಿಕೆಟ್ ವಲಯದಲ್ಲಿ ಸೃಷ್ಟಿಯಾಗಿದೆ. 2027ರ ಏಕದಿನ ವಿಶ್ವಕಪ್‌ಗೆ ಇನ್ನು ಕೇವಲ 18 ತಿಂಗಳು ಬಾಕಿ ಇರುವಾಗ ಐಸಿಸಿ ತಂದಿರುವ ಹೊಸ ನಿಯಮಗಳು ಉದಯೋನ್ಮುಖ ತಂಡಗಳ ಪಾಲಿಗೆ ಮರಣಶಾಸನವಾಗಿ ಪರಿಣಮಿಸಿವೆ.

2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್‌ಗೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಕೊನೆಕ್ಷಣದಲ್ಲಿ ತಂದಿರುವ ಹೊಸ ನಿಯಮಗಳ ವಿರುದ್ಧ ಅಸೋಸಿಯೇಟ್ ರಾಷ್ಟ್ರಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಈ ಹೊಸ ಸ್ವರೂಪದ ವಿರುದ್ಧ ನೆದರ್ಲೆಂಡ್ಸ್ ಮತ್ತು ಸ್ಕಾಟ್ಲೆಂಡ್ ಕ್ರಿಕೆಟ್ ಮಂಡಳಿಗಳು ಈಗಾಗಲೇ ಜಂಟಿಯಾಗಿ ತೀವ್ರ ಅಪಸ್ವರ ಎತ್ತಿವೆ. ಐಸಿಸಿಯ ಈ ಏಕಪಕ್ಷೀಯ ನಡೆ ಉದಯೋನ್ಮುಖ ದೇಶಗಳ ಕ್ರಿಕೆಟ್ ಭವಿಷ್ಯವನ್ನು ಕತ್ತಲಿಗೆ ತಳ್ಳುತ್ತಿದೆ ಎಂದು ಆಯಾ ದೇಶಗಳು ತೀವ್ರ ಆಕ್ರೋಶ ಹೊರಹಾಕಿವೆ.
ಏನಿದು ಹೊಸ ನಿಯಮ?
2027ರ ವಿಶ್ವಕಪ್‌ನಲ್ಲಿ ಒಟ್ಟು 14 ತಂಡಗಳು ಭಾಗವಹಿಸಲಿವೆ ಎಂದು ಈ ಹಿಂದೆ ಘೋಷಿಸಲಾಗಿತ್ತು. ಆದರೆ ಈಗ ಐಸಿಸಿ ಜಾರಿಗೆ ತಂದಿರುವ ‘ಸೂಪರ್ ಸೀರೀಸ್’ ಮತ್ತು ‘ಸೂಪರ್ 7’ ನಿಯಮಗಳು ಸಣ್ಣ ತಂಡಗಳ ಪಾಲಿಗೆ ಮರಣಶಾಸನವಾಗಿ ಪರಿಣಮಿಸಿವೆ. ಹೊಸ ನಿಯಮಗಳೇನು? ಇದಕ್ಕೆ ಯಾಕೆ ವಿರೋಧ?
‘ಸೂಪರ್ ಸೀರೀಸ್’ ತಾರತಮ್ಯ: ಅರ್ಹತಾ ಸುತ್ತಿನಲ್ಲಿ ಕೊನೆಯ ಮೂರು ಸ್ಥಾನಗಳನ್ನು (12, 13 ಮತ್ತು 14ನೇ ರ‍್ಯಾಂಕಿಂಗ್) ಪಡೆಯುವ ತಂಡಗಳು ನೇರವಾಗಿ ಮುಖ್ಯ ಟೂರ್ನಿಯಲ್ಲಿ ಆಡುವಂತಿಲ್ಲ. ಬದಲಾಗಿ, ಅವು ‘ಸೂಪರ್ ಸೀರೀಸ್’ ಎಂಬ ಪ್ರಾಥಮಿಕ ತ್ರಿಕೋನ ಸರಣಿಯಲ್ಲಿ ಆಡಬೇಕು. ಇದರಲ್ಲಿ ಕೇವಲ ಒಂದು ತಂಡ ಮಾತ್ರ ಮುಂದಿನ ಹಂತಕ್ಕೆ ಅರ್ಹತೆ ಪಡೆಯುತ್ತದೆ. ಅಂದರೆ, ವಿಶ್ವಕಪ್‌ಗೆ ಅರ್ಹತೆ ಪಡೆದರೂ ಕೇವಲ 2 ಪಂದ್ಯಗಳನ್ನಾಡಿ 2 ತಂಡಗಳು ಟೂರ್ನಿಯಿಂದ ಹೊರಬೀಳಬೇಕಾಗುತ್ತದೆ.
ದೊಡ್ಡ ತಂಡಗಳಿಗೆ ಮಣೆ: ಈ ನಿಯಮದ ಮುಖ್ಯ ಉದ್ದೇಶ ಪ್ರಮುಖ ಟೆಸ್ಟ್ ಆಡುವ ರಾಷ್ಟ್ರಗಳು (ದೊಡ್ಡ ತಂಡಗಳು) ಆರಂಭದಲ್ಲೇ ಟೂರ್ನಿಯಿಂದ ಹೊರಬೀಳದಂತೆ ತಡೆಯುವುದಾಗಿದೆ. ಇದು ಸಣ್ಣ ದೇಶಗಳ ಕಠಿಣ ಪರಿಶ್ರಮವನ್ನು ಕಡೆಗಣಿಸಿ, ಕೇವಲ ವಾಣಿಜ್ಯ ಲಾಭಕ್ಕಾಗಿ ಮಾಡಿರುವ ತಂತ್ರ ಎಂದು ಸದಸ್ಯ ರಾಷ್ಟ್ರಗಳು ದೂರಿದ್ದಾರೆ.
ಇದರರ್ಥ, ಏಕದಿನ ವಿಶ್ವಕಪ್‌ಗೆ ಒಟ್ಟು 14 ತಂಡಗಳು ಅರ್ಹತೆ ಪಡೆದರೂ, ಪ್ರಮುಖ ಟೂರ್ನಿಯಲ್ಲಿ ಆಡುವ ಅವಕಾಶ ಸಿಗುವುದು ಕೇವಲ 12 ತಂಡಗಳಿಗೆ ಮಾತ್ರ! ಏಕೆಂದರೆ, ವಿಶ್ವಕಪ್‌ನ ಮುಖ್ಯ ಲೀಗ್ ಹಂತ ಆರಂಭವಾಗುವ ಮುನ್ನವೇ ಅತ್ಯಂತ ಕಡಿಮೆ ರ‍್ಯಾಂಕಿಂಗ್ ಹೊಂದಿರುವ ಕೊನೆಯ 3 ತಂಡಗಳ ನಡುವೆ ‘ಸೂಪರ್ ಸೀರೀಸ್’ ಪಂದ್ಯಗಳನ್ನು ಆಡಿಸಲಾಗುತ್ತದೆ. ಈ ಸರಣಿಯಲ್ಲಿ ಕೇವಲ ಒಂದು ತಂಡ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಉಳಿದ 2 ತಂಡಗಳನ್ನು ಟೂರ್ನಿ ಆರಂಭಕ್ಕೂ ಮುನ್ನವೇ ಹೊರದಬ್ಬಲಾಗುತ್ತದೆ.
ಐಸಿಸಿ ವಿರುದ್ಧ ಆಕ್ರೋಶ:
ಐಸಿಸಿಯ ಈ ಏಕಪಕ್ಷೀಯ ನಿರ್ಧಾರದ ವಿರುದ್ಧ ನೆದರ್ಲೆಂಡ್ಸ್ ಮತ್ತು ಸ್ಕಾಟ್ಲೆಂಡ್ ಕ್ರಿಕೆಟ್ ಮಂಡಳಿಗಳು ಜಂಟಿ ಪ್ರಕಟಣೆ ಹೊರಡಿಸಿವೆ. “ವಿಶ್ವಕಪ್ ಆರಂಭಕ್ಕೆ ಇಷ್ಟು ಕಡಿಮೆ ಸಮಯವಿರುವಾಗ, ಯಾವುದೇ ಮುನ್ಸೂಚನೆ ಅಥವಾ ಸಮಾಲೋಚನೆ ನಡೆಸದೆ ಈ ನಿರ್ಧಾರ ತಂದಿರುವುದು ಅತ್ಯಂತ ನಿರಾಶಾದಾಯಕ ಮತ್ತು ಗೌರವವಿಲ್ಲದ ನಡೆ” ಎಂದು ಅವು ಜರಿದಿವೆ.
ಒಂದೆಡೆ ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆ ಮಾಡುವುದು ಮತ್ತು ಅಮೆರಿಕದಂತಹ ದೇಶಗಳಲ್ಲಿ ಕ್ರಿಕೆಟ್ ವಿಸ್ತರಿಸುವ ಬಗ್ಗೆ ಐಸಿಸಿ ಮಾತನಾಡುತ್ತದೆ. ಆದರೆ ಮತ್ತೊಂದೆಡೆ, ವಿಶ್ವಕಪ್‌ನಂತಹ ಅತ್ಯುನ್ನತ ವೇದಿಕೆಯಲ್ಲಿ ಉದಯೋನ್ಮುಖ ದೇಶಗಳಿಗೆ ಸಿಗುವ ಪ್ರಮುಖ ಅವಕಾಶಗಳನ್ನು ಕಡಿತಗೊಳಿಸುತ್ತಿದೆ. ವರ್ಷಗಟ್ಟಲೆ ‘ಕ್ರಿಕೆಟ್ ವಿಶ್ವಕಪ್ ಲೀಗ್ 2’ ನಂತಹ ಕಠಿಣ ಸರಣಿಗಳಲ್ಲಿ ಆಡಿ, ಸೀಮಿತ ಸಂಪನ್ಮೂಲಗಳ ನಡುವೆ ವಿಶ್ವಕಪ್ ಕನಸು ಕಾಣುವ ಆಟಗಾರರ ದೀರ್ಘಕಾಲದ ಸಿದ್ಧತೆ ಮತ್ತು ಹಣಕಾಸಿನ ಯೋಜನೆಗಳಿಗೆ ಈ ಹೊಸ ನಿಯಮಗಳು ಧಕ್ಕೆ ತಂದಿವೆ ಎಂದು ನೆದರ್ಲೆಂಡ್ಸ್ ಮತ್ತು ಸ್ಕಾಟ್ಲೆಂಡ್ ಕ್ರಿಕೆಟ್ ಬೋರ್ಡ್ ಅಸಮಾಧಾನ ಹೊರಹಾಕಿವೆ.
ಇನ್ನು ಒಮಾನ್, ಯುಎಇ, ಯುಎಸ್ಎ ಮತ್ತು ನೇಪಾಳ ಕ್ರಿಕೆಟ್ ಮಂಡಳಿಗಳು ಕೂಡ ಐಸಿಸಿಯ ಹೊಸ ನಿಯಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ. ಇದರ ಜೊತೆಗೆ ಜಾಗತಿಕ ಕ್ರಿಕೆಟಿಗರ ಒಕ್ಕೂಟವಾದ ‘ವಿಶ್ವ ಕ್ರಿಕೆಟಿಗರ ಸಂಘಟನೆ’ (WCA) ಕೂಡ ಅಸೋಸಿಯೇಟ್ ದೇಶಗಳ ಪರವಾಗಿ ನಿಂತಿದೆ. ಐಸಿಸಿಯ ಈ ಹೊಸ ‘ಸೂಪರ್ ಸೀರೀಸ್’ ಮಾದರಿಯು ಸಣ್ಣ ದೇಶಗಳಿಗೆ ಸಿಕ್ಕಿದ್ದ ಅತ್ಯುತ್ತಮ ಅವಕಾಶವನ್ನು ಕಿತ್ತುಕೊಂಡಿದೆ ಮತ್ತು ಈ ನಿರ್ಧಾರದಲ್ಲಿ ಯಾವುದೇ ಪಾರದರ್ಶಕತೆ ಇಲ್ಲ ಎಂದು WCA ಟೀಕಿಸಿದೆ.
ಇದನ್ನೂ ಓದಿ: 11+3 ತಂಡಗಳು, ಸೂಪರ್-7: ಏಕದಿನ ವಿಶ್ವಕಪ್ ಸ್ವರೂಪ ಬದಲು
ಒಟ್ಟಾರೆಯಾಗಿ ಹೇಳುವುದಾದರೆ, ಐಸಿಸಿಯ ಈ ಹೊಸ ನಿಯಮಗಳು ಕ್ರಿಕೆಟ್‌ನ ಜಾಗತಿಕ ವಿಸ್ತರಣೆಯ ಆಶಯಕ್ಕೆ ದೊಡ್ಡ ಪೆಟ್ಟು ನೀಡಿವೆ. ವಿಶ್ವಕಪ್‌ನಂತಹ ಜಾಗತಿಕ ವೇದಿಕೆಯಲ್ಲಿ ಸಣ್ಣ ಮತ್ತು ದೊಡ್ಡ ತಂಡಗಳ ನಡುವೆ ಸಮಾನ ಅವಕಾಶ ಇರಬೇಕಾದದ್ದು ಅತ್ಯಗತ್ಯ. ಆದರೆ, ಕೇವಲ ವಾಣಿಜ್ಯ ಲಾಭ ಮತ್ತು ಶ್ರೀಮಂತ ಮಂಡಳಿಗಳ ಹಿತಾಸಕ್ತಿಗಾಗಿ ಉದಯೋನ್ಮುಖ ರಾಷ್ಟ್ರಗಳ ಕಠಿಣ ಪರಿಶ್ರಮವನ್ನು ಬಲಿಕೊಡುವುದು ಕ್ರಿಕೆಟ್‌ನ ಆರೋಗ್ಯಕರ ಬೆಳವಣಿಗೆಗೆ ಪೂರಕವಲ್ಲ. ಕ್ರಿಕೆಟ್ ಜಗತ್ತಿನಲ್ಲಿ ನಿಜವಾದ ‘ಸಮಾನತೆ’ ಬರಬೇಕಾದರೆ, ಐಸಿಸಿ ಸಣ್ಣ ದೇಶಗಳ ಈ ಆಕ್ರೋಶಕ್ಕೆ ಕಿವಿಗೊಟ್ಟು, ನಿಯಮಗಳನ್ನು ಮರುಪರಿಶೀಲಿಸಬೇಕಾದ ಅನಿವಾರ್ಯತೆ ಇದೆ.




