ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ ಫೈನಲ್ (Ranji Trophy Final 2022) ಪಂದ್ಯವು ಏಕಪಕ್ಷೀಯದತ್ತ ಮುಖ ಮಾಡುತ್ತಿದೆ. ಮುಂಬೈ-ಮಧ್ಯ ಪ್ರದೇಶ (Madhya Pradesh vs Mumbai) ನಡುವಣ ಫೈನಲ್ ಕಾದಾಟವು ಇದೀಗ 4ನೇ ದಿನದಾಟಕ್ಕೆ ಕಾಲಿಟ್ಟಿದೆ. ಇದಾಗ್ಯೂ 2ನೇ ಇನಿಂಗ್ಸ್ ಆರಂಭವಾಗಿಲ್ಲ. ಹೀಗಾಗಿ ಈ ಪಂದ್ಯವು ಡ್ರಾನಲ್ಲಿ ಕೊನೆಗೊಳ್ಳುವ ಸಾಧ್ಯತೆ ಹೆಚ್ಚು. ಏಕೆಂದರೆ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡವು ಸರ್ಫರಾಜ್ ಖಾನ್ (134) ಅವರ ಶತಕದ ನೆರವಿನಿಂದ 374 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಮಧ್ಯ ಪ್ರದೇಶ ತಂಡವು ಯಶ್ ದುಬೆ (133) ಅವರ ಭರ್ಜರಿ ಶತಕದೊಂದಿಗೆ ಉತ್ತಮ ಆರಂಭ ಪಡೆಯಿತು. ಆ ಬಳಿಕ ಬಂದ ಶುಭಂ ಶರ್ಮಾ (116) ಹಾಗೂ ರಜತ್ ಪಾಟಿದಾರ್ ಕೂಡ ಸೆಂಚುರಿ ಸಿಡಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.
4ನೇ ದಿನದಾಟದ ಊಟದ ವಿರಾಮದ ವೇಳೆಗೆ ಮಧ್ಯ ಪ್ರದೇಶ ತಂಡವು 6 ವಿಕೆಟ್ ಕಳೆದುಕೊಂಡು 475 ರನ್ ಕಲೆಹಾಕಿದೆ. ಅಂದರೆ ಮೊದಲ ಇನಿಂಗ್ಸ್ನಲ್ಲಿ ಬರೋಬ್ಬರಿ 101 ರನ್ಗಳ ಮುನ್ನಡೆ ಸಾಧಿಸಿದೆ. ಇದಾಗ್ಯೂ ಇನ್ನೂ ಕೂಡ ಡಿಕ್ಲೇರ್ ಘೋಷಿಸಿಲ್ಲ. ಕ್ರೀಸ್ನಲ್ಲಿ 195 ಎಸೆತಗಳಲ್ಲಿ 120 ರನ್ ಬಾರಿಸಿರುವ ರಜತ್ ಪಾಟಿದಾರ್ ಹಾಗೂ ಸರನ್ಶ್ ಜೈನ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಪ್ರಸ್ತುತ ಸನ್ನಿವೇಶ ಗಮಿಸಿದರೆ ಮಧ್ಯ ಪ್ರದೇಶ ತಂಡವು ಆಲೌಟ್ ಆಗದಿದ್ದರೆ, ನಾಲ್ಕನೇ ದಿನದಾಟವನ್ನು ಪೂರ್ಣಗೊಳಿಸುವ ಸಾಧ್ಯತೆ ಹೆಚ್ಚು. ಅಲ್ಲದೆ ಐದನೇ ದಿನದಾಟದ ಅರ್ಧದಲ್ಲಿ ಡಿಕ್ಲೇರ್ ಘೋಷಿಸಬಹುದು.
ಈಗಾಗಲೇ ಬೃಹತ್ ಮುನ್ನಡೆ ಪಡೆದಿರುವ ಮಧ್ಯ ಪ್ರದೇಶ ತಂಡವು ಐದನೇ ದಿನದಾಟದಲ್ಲಿ ಡಿಕ್ಲೇರ್ ಘೋಷಿಸಿದರೆ ಪಂದ್ಯವು ಡ್ರಾನಲ್ಲಿ ಅಂತ್ಯಗೊಳ್ಳಲಿದೆ. ಇದರಿಂದ ಮಧ್ಯ ಪ್ರದೇಶ ತಂಡವು ಚಾಂಪಿಯನ್ ಪಟ್ಟಕ್ಕೇರಬಹುದು. ಏಕೆಂದರೆ ರಣಜಿ ಟೂರ್ನಿಯ ನಾಕೌಟ್ ಹಾಗೂ ಫೈನಲ್ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡರೆ ಇನಿಂಗ್ಸ್ನ ಮುನ್ನಡೆಯ ಆಧಾರದ ಮೇಲೆ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ.
ಅಂದರೆ ಫೈನಲ್ ಪಂದ್ಯವು ಡ್ರಾನಲ್ಲಿ ಅಂತ್ಯವಾದರೆ, ಮೊದಲ ಇನಿಂಗ್ಸ್ನಲ್ಲಿ ಯಾವ ತಂಡವು ಮುನ್ನಡೆ ಪಡೆದಿರುತ್ತದೆಯೋ ಆ ತಂಡವನ್ನು ವಿಜಯಿ ಎಂದು ಪರಿಗಣಿಸಲಾಗುತ್ತದೆ. ಇದೀಗ ಮಧ್ಯ ಪ್ರದೇಶ ತಂಡವು ಮೊದಲ ಇನಿಂಗ್ಸ್ನಲ್ಲಿ ಭರ್ಜರಿ ಮುನ್ನಡೆ ಪಡೆದುಕೊಂಡಿದೆ. ಹೀಗಾಗಿ ಈ ಪಂದ್ಯವನ್ನು ಡ್ರಾಗೊಳಿಸಲು ಮಧ್ಯ ಪ್ರದೇಶ ತಂಡವು ಹೆಚ್ಚಿನ ಆಸಕ್ತಿ ತೋರಲಿದೆ. ಈ ಮೂಲಕ ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಳ್ಳಬಹುದು.
ಹೀಗಾಗಿ ಈ ಬಾರಿಯ ರಣಜಿ ಟೂರ್ನಿಯ ಚಾಂಪಿಯನ್ ಆಗಿ ಮಧ್ಯ ಪ್ರದೇಶ ತಂಡವು ಹೊರಹೊಮ್ಮುವ ಸಾಧ್ಯತೆ ಹೆಚ್ಚು. ಇದಾಗ್ಯೂ ನಾಟಕೀಯ ಕುಸಿತಗಳಿಗೆ ಕಾರಣವಾಗಿ ಪಂದ್ಯದ ಫಲಿತಾಂಶದಲ್ಲಿ ಬದಲಾವಣೆ ಕಂಡು ಬರಲಿದೆಯಾ ಕಾದು ನೋಡಬೇಕಿದೆ.